ಸಿಎಎ ವಿವಾದ ಕೆಂಡದುಂಡೆಯಾಗಿ ದೇಶಾದ್ಯಂತ ಉರುಳುತ್ತಿರುವಾಗಲೇ ರಾಜಕೀಯ ಧ್ರುವೀಕರಣ ನಡೆಸಿ, ಜನತಾ ಪರಿವಾರ ಒಂದುಗೂಡಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿದ್ದು, ಆ ಮೂಲಕ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕುವ ಚಿಂತನೆ ನಡೆಸಲಾಗಿದೆ.
ಮಾಜಿ ಶಾಸಕ ಮಹಿಮಾ ಪಟೇಲ್ ನೇತೃತ್ವದಲ್ಲಿ ಸದ್ದುಗದ್ದಲವಿಲ್ಲದೆ ಸಭೆಯೊಂದು ನಡೆದು ಕೆಲವು ಠರಾವು ಪಾಸು ಮಾಡಿದೆ. ನಾಲ್ಕು ತಿಂಗಳ ಹಿಂದೆಯೇ ಇಂತಹ ಪ್ರಕ್ರಿಯೆಗೆ ಬೀಜ ಬಿತ್ತಲಾಗಿತ್ತು. ಬಸವರಾಜ ಹೊರಟ್ಟಿ ಕೂಡ ಇದಕ್ಕೆ ನೀರು ಹರಿಸಿ ಚಿಗುರೊಡೆಯಲು ಕಾರಣರಾಗಿದ್ದರು. ಜನತಾ ಪರಿವಾರದ ನಾಯಕರು ಯಾವ ಯಾವ ಪಕ್ಷಗಳಲ್ಲಿ ಇದ್ದಾರೆಯೋ ಅಲ್ಲಿಯೇ ಇದ್ದು ಸಮಾಜವಾದಿ ಚಿಂತನೆ ಬೆಳೆಸಬಹುದೆ? ಆ ಮೂಲಕ ಜನತಾ ಪರಿವಾರದ ಮೂಲ ಆಶಯಗಳನ್ನು ರಾಜ್ಯದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದೆ? ಎಂಬ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಬಿಹಾರ, ಒಡಿಶಾ, ಉತ್ತರ ಪ್ರದೇಶಗಳಲ್ಲಿ ಜನತಾ ಪರಿವಾರಕ್ಕೆ ದೊಡ್ಡ ಶಕ್ತಿಯಿದೆ. ರಾಜ್ಯದಲ್ಲೂ ಅದಕ್ಕೊಂದು ಶಕ್ತಿ ತುಂಬಬೇಕು. ಎಲ್ಲ ಸಮುದಾಯಗಳನ್ನು ಒಂದು ವೇದಿಕೆಯಡಿ ತಂದರೆ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಜನತಾ ಪರಿವಾರ ಬೆಳೆಯುತ್ತದೆ ಎಂಬ ಆಶಯವನ್ನು ಜನತಾ ಪರಿವಾರದ ಮುಖಂಡರು ಹೊಂದಿದ್ದಾರೆ. ಇನ್ನಷ್ಟು ಸಭೆ ನಡೆಸಿ ಚಿಂತನ-ಮಂಥನ ಮಾಡಲು, ಅಲ್ಲಲ್ಲಿ ವಿಚಾರ ಗೋಷ್ಠಿಗಳನ್ನು ಆಯೋಜಿಸಿ ಜನರಿಗೆ ಮನವರಿಕೆ ಮಾಡಿಕೊಡಲು ನಾಯಕರು ಆಲೋಚಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಜನತಾ ಪರಿವಾರಕ್ಕೊಂದು ಸ್ಪಷ್ಟ ರೂಪ ಕೊಡಲು ಸಿದ್ಧತೆ ನಡೆದಿದೆ.
ಮಹತ್ವಾಕಾಂಕ್ಷೆ ಮೂರಾಬಟ್ಟೆ: 2018ರ ರಾಜ್ಯ ವಿಧಾನಸಭೆ ಚುನಾವಣೆ ರಾಷ್ಟ್ರ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುತ್ತಿದೆ ಎಂದು ನಿರೀಕ್ಷಿಸಲಾಗಿತ್ತು. ಕಾಂಗ್ರೆಸ್ ಬೆಂಬಲ ಪಡೆದು ಜೆಡಿಎಸ್​ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ವೇಳೆ ವೇದಿಕೆ ಹಂಚಿಕೊಂಡ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರು ಬಿಜೆಪಿಗೆ ಚಳಿ ಜ್ವರ ಬರುವಂತೆ ಮಾಡಿದ್ದರು. ಆದರೆ, ಬೆರಳೆಣಿಕೆ ತಿಂಗಳಲ್ಲಿ ಈ ನಾಯಕರಿಗೆ ಭ್ರಮನಿರಸನವಾಯಿತು. ದೇವೇಗೌಡರ ಸಾರಥ್ಯದಲ್ಲಿ
ಮತ್ತೊಮ್ಮೆ ರಾಷ್ಟ್ರ ರಾಜಕಾರಣಕ್ಕೆ ಹೊಸ ತಿರುವು ಸಿಗಬಹುದೆಂದು ಕೈಜೋಡಿಸಿದ್ದ ನೇತಾರರ ಮಹತ್ವಾಕಾಂಕ್ಷೆ ಮೂರಾಬಟ್ಟೆಯಾಗಿದೆ. ಜೆಡಿಎಸ್ ಫೀನಿಕ್ಸ್​ನಂತೆ ಮತ್ತೆ ಮೇಲೇಳುವ ಅನುಮಾನ ಕಾಡುತ್ತಿರುವುದರಿಂದ ಜನತಾ ಪರಿವಾರದ ನಾಯಕರು ಹೊಸ ಮನ್ವಂತರಕ್ಕೆ ದಾರಿ ಹುಡುಕುತ್ತಿದ್ದಾರೆ.
ಜ.30 ರಂದು ಬೆಂಗಳೂರಿನಲ್ಲಿ ಸಭೆಯೊಂದು ನಡೆಯಲಿದೆ. ಪ್ರಮುಖ ಪಳೆಯುಳಿಕೆಗಳು ಒಂದುಗೂಡಲು ಭೂಮಿಕೆ ಸಿದ್ಧಗೊಳ್ಳುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಜೆಡಿಎಸ್​ನ ಸಂತತಿ ಆಡಳಿತದ ವಿರುದ್ಧ ಸಡ್ಡು ಹೊಡೆಯಲು ಈ ಪ್ರಕ್ರಿಯೆ ನಡೆಯುತ್ತಿದೆ. ಜೆಡಿಎಸ್​ನಲ್ಲಿದ್ದ ಪ್ರಮುಖರೇ ಈಗ ಜನತಾ ಪರಿವಾರದ ವೇದಿಕೆಯ ಮುನ್ನೆಲೆಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
| ವಿಲಾಸ ಮೇಲಗಿರಿ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
