ಬೆಂಗಳೂರು:ಐದು ವರ್ಷವೂ ಸರ್ಕಾರ ಸುಭದ್ರವಾಗಿರಲಿದೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಬಿಜೆಪಿಗೆ ಕಾಂಗ್ರೆಸ್​ನಿಂದ ವಲಸೆ ಹೋಗಿರುವ ಹಾಗೂ ಬಿಜೆಪಿ, ಜೆಡಿಎಸ್​ನಿಂದ ಕಾಂಗ್ರೆಸ್​ನತ್ತ ಮುಖಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್​ನಿಂದ ಸದ್ಯ ಗೆದ್ದಿರುವವರಿಗೆ ಗಾಳ ಹಾಕಿ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಬಲ ಕುಗ್ಗಿಸುವ ಕೈ ಲೆಕ್ಕಾಚಾರದ ಒಂದೊಂದೇ ದಾಳ ಉರುಳಲೂ ಆರಂಭವಾಗಿದೆ.
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಕಡೆ ವಾಲಿರುವ ವಿಷಯ ರಾಜಕೀಯ ಪಡಸಾಲೆಯಲ್ಲಿ ಬಹು ರ್ಚಚಿತ ವಿಷಯ. ಇನ್ನು ನಾಲ್ಕು ದಿನದೊಳಗೆ ನಿರ್ಧಾರ ಪ್ರಕಟಿಸುತ್ತೇನೆಂದು ಅವರು ಹೇಳಿಕೆಯನ್ನೂ ನೀಡಿದ್ದಾರೆ. ಈ ನಡುವೆ ಚುನಾವಣೆ ಮುಗಿದು ಇನ್ನೂ ನೂರು ದಿನ ಸಮೀಪಿಸಿಲ್ಲ. ಅಷ್ಟರಲ್ಲೇ ಪಕ್ಷಾಂತರಕ್ಕೆ ಅವರ ಆಪ್ತರು ಒತ್ತಡ ತಂದಿದ್ದು, ಅನಿವಾರ್ಯವಾಗಿ ತೀರ್ಮಾನ ಕೈಗೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ಮೊದಲ ಹೆಜ್ಜೆಯಾಗಿ ಅವರ ಚುನಾವಣೆ ನಿರ್ವಹಿಸಿಕೊಂಡು ಬಂದಿದ್ದ ಎಲ್ಲ ಆಪ್ತರೂ ಕೆಪಿಸಿಸಿ ಕಚೇರಿಯಲ್ಲಿ ಕೈ ಹಿಡಿದಾಗಿದೆ. ಸೋಮಶೇಖರ್ ಕೂಡ ಆಪ್ತರನ್ನು ಬಿಟ್ಟು ಬಿಜೆಪಿಯಲ್ಲೇ ಮುಂದುವರಿಯುವ ಸ್ಥಿತಿಯಲ್ಲೂ ಇಲ್ಲ. ಹಾಗೆಂದು ಕ್ಷೇತ್ರದಲ್ಲಿ ಬಿಜೆಪಿಗೆ ಸಮರ್ಥ ನಾಯಕತ್ವ ಇಲ್ಲದೇ ಇರುವುದು ಅವರ ಪಾಲಿಗೆ ಪ್ಲಸ್ ಪಾಯಿಂಟ್.
ಬೈರತಿ ಸ್ಥಿತಿ ಬೇರೆ:ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಕೂಡ ಕಾಂಗ್ರೆಸ್ ಕಡೆ ಹೊರಳುವ ಆಲೋಚನೆಯಲ್ಲಿದ್ದಾರೆ. ಕಾಂಗ್ರೆಸ್​ನ ಒಂದು ಬಣ ಅವರ ವೈಯಕ್ತಿಕ ಶಕ್ತಿಯನ್ನರಿತು ಎದುರುಗೊಳ್ಳಲು ಸಿದ್ಧವಿದೆ. ಆದರೆ, ಇನ್ನೊಂದು ಬಣ ಆಸಕ್ತಿ ತೋರಿಸಿಲ್ಲ. ಅಲ್ಲದೆ, ಯಶವಂತಪುರ ಕ್ಷೇತ್ರದ ಪರಿಸ್ಥಿತಿಯೇ ಬೇರೆ, ಕೆ.ಆರ್.ಪುರ ಕ್ಷೇತ್ರದ ಪರಿಸ್ಥಿತಿಯೇ ಬೇರೆ ಎಂಬುದನ್ನು ಬೈರತಿ ಬಸವರಾಜ್ ಕೂಡ ಅರಿತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಸೇರಿದರೂ ತಮಗೇನು ರೆಡ್ ಕಾರ್ಪೆಟ್ ಸ್ವಾಗತ ಸಿಗುವುದಿಲ್ಲ, ಸರ್ಕಾರದಲ್ಲಿ ಪ್ರಾತಿನಿಧ್ಯವೂ ಸಿಗದು. ಅಲ್ಲದೆ, ಕಾಂಗ್ರೆಸ್​ಗೆ ಹೋದ ಸಂದರ್ಭದಲ್ಲಿ ಬಿಜೆಪಿಗೆ ನಾಯಕತ್ವದ ಕೊರತೆ ಇಲ್ಲ ಎಂಬುದು ಮನವರಿಕೆಯಾಗಿ, ಇದೇ ಕಾರಣಕ್ಕೆ ತೀರ್ಮಾನ ಕೈಗೊಳ್ಳಲು ಹಿಂದೆಮುಂದೆ ನೋಡುತ್ತಿದ್ದಾರೆನ್ನಲಾಗಿದೆ.
ಮುನಿರತ್ನ ಸೇರ್ಪಡೆಗೆ ಒಮ್ಮತವಿಲ್ಲ:ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರನ್ನು ಕಾಂಗ್ರೆಸ್​ಗೆ ಕರೆತರಲು ಪಕ್ಷದಲ್ಲಿ ಒಮ್ಮತವಿಲ್ಲ. ಅಲ್ಲದೆ, ಮುನಿರತ್ನ ಒಮ್ಮೆ ಕಾಂಗ್ರೆಸ್​ಗೆ ಬರುತ್ತೇನೆ ಎನ್ನುವುದು, ಇನ್ನೊಂದು ಘಳಿಗೆಗೆ ಬರುವುದಿಲ್ಲ ಎಂದು ಅಭಿಪ್ರಾಯ ನೀಡಿದ್ದಾರೆ. ಮುಖ್ಯವಾಗಿ ಸಂಸದ ಡಿ.ಕೆ.ಸುರೇಶ್ ಸಾಕಷ್ಟು ರೀತಿಯಲ್ಲಿ ತೊಂದರೆ ಕೊಡುತ್ತಾರೆ. ನನಗೆ ರಾಜಕೀಯವೇ ಸಾಕಾಗಿದೆ ಎಂದು ಆಪ್ತರ ಬಳಿ ಖಾಸಗಿಯಾಗಿ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಹೆಬ್ಬಾರ್ ಲಾಭ-ನಷ್ಟ ಲೆಕ್ಕಾಚಾರ:ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ತಮಗಾಗುವ ವೈಯಕ್ತಿಕ ಲಾಭ ನಷ್ಟದ ಲೆಕ್ಕಾಚಾರದಲ್ಲಿದ್ದು, ಯಾವುದೇ ತೀರ್ವನಕ್ಕೆ ಬರಲು ಸಿದ್ಧರಿಲ್ಲ. ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದು ಕಾಲದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿದ್ದ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷಕ್ಕೆ ಕರೆತಂದು ಮುಂದಿನ ಲೋಕಸಭೆ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಕಣಕ್ಕಿಳಿಸುವ ಆಲೋಚನೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಈ ಬಗ್ಗೆ ಇನ್ನೂ ಪ್ರಾಥಮಿಕ ಹಂತದ ಚರ್ಚೆಯಷ್ಟೇ ನಡೆದಿದೆ. ಹೆಬ್ಬಾರ್ ಕೂಡ ಕಾಂಗ್ರೆಸ್​ನಿಂದ ಯಾವ ಸಂದೇಶ ಬರಬಹುದು ಎಂದು ಕಾದುಕುಳಿತಿದ್ದಾರೆ. ಈ ಚರ್ಚೆಗಳು ಒಂದು ರೂಪ ಪಡೆದುಕೊಳ್ಳಲು ಇನ್ನೊಂದು ತಿಂಗಳಾದರೂ ಆಗಲಿದೆ. ಅಲ್ಲಿಯವರೆಗೂ ಅವರು ಯಾವುದೇ ನಿರ್ಧಾರಕ್ಕೆ ಬರದಿರಲು ತೀರ್ವನಿಸಿದ್ದಾರೆಂದು ಕಾಂಗ್ರೆಸ್ ಮೂಲಗಳೇ ತಿಳಿಸಿವೆ.
ಈಗಲೂ ನಾನು ಬಿಜೆಪಿಯಲ್ಲೇ ಇದ್ದೇನೆ. ಮಾನಸಿಕವಾಗಿ ಬಿಜೆಪಿ ಜತೆಯೇ ಇದ್ದೇನೆ. ಯಡಿಯೂರಪ್ಪ ಅವರು ನನ್ನ ಜತೆ ಮಾತನಾಡಿದ್ದು, ಸಮಸ್ಯೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ದೆಹಲಿಗೆ ಬರುವಂತೆಯೂ ಸಂದೇಶ ಬಂದಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು. ದೆಹಲಿ ನಾಯಕರ ನಿರ್ಧಾರದ ಮೇಲೆ ನನ್ನ ತೀರ್ಮಾನ ಅಂತಿಮವಾಗಲಿದೆ. ಬಿಜೆಪಿ ತೊರೆಯುವ ಬಗ್ಗೆ ಇನ್ನು ನಾಲ್ಕು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಯಶವಂತಪುರದಲ್ಲಿದ್ದ ಒಳ್ಳೆಯ ವಾತಾವರಣ ಕೆಡಿಸಿದ್ದಾರೆ. ಗೊಂದಲ ಸರಿಪಡಿಸಿದರೆ ಮಾತ್ರ ಬಿಜೆಪಿಯಲ್ಲಿ ಮುಂದುವರಿಯುವೆ. ವರಿಷ್ಠರು ನನ್ನ ಬೇಡಿಕೆ ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಚಿಕ್ಕಬಳ್ಳಾಪುರ:ಕಳೆದ ಒಂದೂವರೆ ವರ್ಷದಿಂದಲೂ ಬಿಜೆಪಿ ಚಟುವಟಿಕೆಯಿಂದ ದೂರ ಉಳಿದಿರುವ ಸಂಸದ ಬಿ.ಎನ್.ಬಚ್ಚೇಗೌಡ, ಪರೋಕ್ಷವಾಗಿ ಚುನಾವಣಾ ನಿವೃತ್ತಿ ಘೊಷಿಸಿದ್ದಾರೆ. ಅಲ್ಲದೆ, ಬಿಜೆಪಿಯನ್ನು ಟೀಕಿಸಿ ಕಾಂಗ್ರೆಸ್ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಲ್ಲ ಎನ್ನಲಾಗುತ್ತಿದೆ. ನನಗೀಗ 81 ವರ್ಷ. ಅದರಂತೆ ನನಗೆ ವಯಸ್ಸಾಗಿರುವುದನ್ನು ಮಾನದಂಡವಾಗಿ ತೆಗೆದುಕೊಂಡು ಸ್ಪರ್ಧೆಗೆ ಅವಕಾಶ ನೀಡುವುದಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತೇನೆ ಅಷ್ಟೇ ಎಂದು ಬಚ್ಚೇಗೌಡ ಹೇಳಿದ್ದಾರೆ. ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ, ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಕಮಲ ಬಿಟ್ಟು ಕಾಂಗ್ರೆಸ್ ಸೇರಿಕೊಂಡರು. ಇಲ್ಲಿ ನೆಲೆ ಕಂಡುಕೊಂಡಿರುವ ಮಗನ ರಾಜಕೀಯ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಂಸದರು, ಒಂದೂವರೆ ವರ್ಷದಿಂದಲೂ ಸ್ವಪಕ್ಷ ಬಿಜೆಪಿ ಚಟುವಟಿಕೆಯಲ್ಲಿ ಸಕ್ರಿಯವಾಗಿಲ್ಲ. ಸಂಸದರ ನೇತೃತ್ವದ ಪ್ರಗತಿ ಪರಿಶೀಲನಾ ಸಭೆ, ಕೇಂದ್ರ ಸರ್ಕಾರದ ಯೋಜನೆಯ ಜಾಗೃತಿ ಚಟುವಟಿಕೆಗೆ ಗೈರಾಗುತ್ತಿದ್ದಾರೆ. ಈ ತಟಸ್ಥ ಧೋರಣೆಯಿಂದ ಮುಂಬರುವ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸುವ ಒಲವು ಹೊಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ದುರ್ಬಲಗೊಳ್ಳುತ್ತಿದೆ. ಇಲ್ಲಿಯವರೆಗೂ ರಾಜ್ಯ ವಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುತ್ತೋ? ಮತ್ತೆ ಮೋದಿ ಪ್ರಧಾನಿಯಾಗುತ್ತಾರೋ ಇಲ್ಲವೋ ಎನ್ನುವುದನ್ನು ಹೇಳಲಿಕ್ಕಾಗುವುದಿಲ್ಲ.
| ಬಿ.ಎನ್.ಬಚ್ಚೇಗೌಡ, ಸಂಸದ
ಹಾವೇರಿ:ಹಾವೇರಿ-ಗದಗ ಲೋಕಸಭಾ ಟಿಕೆಟ್ ಅನ್ನು ಪುತ್ರ ಕೆ.ಇ. ಕಾಂತೇಶಗೆ ಕೊಡಿಸಬೇಕು ಎಂದು ಓಡಾಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಜಿಲ್ಲೆಯ ವಾತಾವರಣ ಕೆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ವಾಗ್ದಾಳಿ ನಡೆಸಿದರು. ಈಶ್ವರಪ್ಪನವರು ಕಾಂಗ್ರೆಸ್​ನಿಂದ ವಲಸೆ ಬಂದ ನಮ್ಮ ಬಗ್ಗೆ ಈ ಹಿಂದೆ ಮಾತನಾಡಿದ್ದರು. ನಾನು ಕರೆ ಮಾಡಿ ಕೇಳಿದಾಗ, ‘ನಾನು ಹಾಗೆ ಹೇಳಿಲ್ಲ. ಕ್ಷಮಿಸಿ’ ಎಂದಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ವಿರೋಧ ಚಟುವಟಿಕೆ ಮಾಡಿದವರನ್ನು ಕರೆದುಕೊಂಡು ಈಗ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
