ಬೆಂಗಳೂರು:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮದ ರಾಜಕೀಯ ಪರಿಣಾಮದ ಬಗ್ಗೆ ಪಕ್ಷಗಳ ಪಡಸಾಲೆಯಲ್ಲಿ ತೀವ್ರ ಚರ್ಚೆ ನಡೆದಿದೆ. ವಿವಿಧ ಮಗ್ಗಲುಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕಲಾಗುತ್ತಿದೆ.
ಲೋಕಸಭೆ ಚುನಾವಣೆಗೆ ನೂರು ದಿನವೂ ಉಳಿದಿಲ್ಲ. ಹೀಗಾಗಿ ಇನ್ಮುಂದೆ ರಾಜಕೀಯ ಉದ್ದೇಶದ ಪ್ರಮುಖ ಘಟನೆಗಳು, ಹೇಳಿಕೆಗಳು ಚುನಾವಣೆ ಮೇಲೆ ಒಂದಷ್ಟು ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ಜನ ಸಾಮಾನ್ಯರ ಸಂಭ್ರಮಾಚರಣೆ ಚುನಾವಣೆ ಮೇಲೆ ಪರಿಣಾಮ ಬೀರುವ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ವೇದಿಕೆಗಳಲ್ಲಿ ಭರದ ಚರ್ಚೆ ನಡೆದಿದೆ. ಎರಡೂ ಪಕ್ಷದ ಮಧ್ಯಮ ಸ್ಥರದ ಮುಖಂಡರು ಹಾಗೂ ಕಾರ್ಯಕರ್ತರನ್ನು ಅನೌಪಚಾರಿಕವಾಗಿ ವಿಜಯವಾಣಿ ಮಾತಿಗೆಳೆದಾಗ ಅವರು ತಮ್ಮ ಆಲೋಚನೆ ಮತ್ತು ಪಕ್ಷದೊಳಗಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಕಮಲಪಡೆಯಲ್ಲಿ ತಳಮಳ:ಅಯೋಧ್ಯೆ ಶ್ರೀ ರಾಮಮಂದಿರ ನಮ್ಮ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಅಡಕಗೊಂಡಿದ್ದ ವಿಷಯ. ಇದೀಗ ಮಂದಿರ ಉದ್ಘಾಟನೆಯಾಗಿದೆ. ದೇಶದ ಉದ್ದಗಲಕ್ಕೂ ಜನ ಸಂಭ್ರಮಿಸಿದ್ದಾರೆ. ಚುನಾವಣೆ ಮೇಲೆ ಈ ವಿಷಯ ಪರಿಣಾಮ ಬೀರಲಿದೆ, ಚುನಾವಣೆ ಪೂರ್ವದಲ್ಲಿ ನೀತಿ ನಿರೂಪಣೆ ಸಿದ್ಧಪಡಿಸುವ ಹೊತ್ತಿನಲ್ಲಿ ನಮ್ಮ ಪರವಾದ ಭೂಮಿಕೆ ಸಿದ್ಧವಾಗಿದೆ. ಆದರೂ ಅಳುಕಿದೆ ಎಂಬ ಸಂಗತಿಯನ್ನು ಬಿಜೆಪಿ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪರಿಷತ್ ಮಾಜಿ ಸದಸ್ಯರು ಬಿಟ್ಟುಕೊಟ್ಟರು. ಈಗಿನ ವಾತಾವರಣ ನೋಡಿದರೆ ನಾವು 400 ಲೋಕಸಭಾ ಸ್ಥಾನಗಳ ಗಡಿ ದಾಟುವುದು ನಿಶ್ಚಿತ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಈ ಬೆಳವಣಿಗೆ ನಮಗೆ ಸಾಧಕವೂ ಹೌದು, ಬಾಧಕವೂ ಹೌದೆನ್ನುವುದು ಅವರ ಅಭಿಪ್ರಾಯ. ನಾವು ಚುನಾವಣೆ ಗೆಲ್ಲುತ್ತೇವೆ ಎಂಬ ಧನಾತ್ಮಕ ವಾತಾವರಣ ರೂಪಿತ ಚರ್ಚೆ ಸರಿಯೇ ಆದರೂ ಈ ಅತಿಯಾದ ಆತ್ಮವಿಶ್ವಾಸದಲ್ಲಿ ಮುಳುಗಿ ತಳಮಟ್ಟದ ಕೆಲಸ ಮಾಡದೇ ಹೋದರೆ ಪಕ್ಷಕ್ಕೆ ಕಷ್ಟವಾಗಲಿದೆ ಎಂಬ ಆತಂಕವಿದೆ ಎಂದು ವಿವರಿಸಿದರು. ಪಕ್ಷದಿಂದ ದೂರ ನಿಂತವರು, ಯಾವುದೇ ಪಕ್ಷದೊಂದಿಗೆ ಗುರುತಿಸಿ ಕೊಳ್ಳದವರಿಗೂ ಮೋದಿ ಅಲೆಯ ತಾಪ ತಟ್ಟಿದೆ ಎಂಬ ಲೆಕ್ಕಾಚಾರ ಕಮಲ ನಾಯಕರ ನಡುವೆ ನಡೆದಿದೆ.
ಕೈ ಪಾಳಯದಲ್ಲಿ ಆತಂಕ:ಶ್ರೀ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ವಿಚಾರವಾಗಿ ಕಾಂಗ್ರೆಸ್​ನಲ್ಲಿ ವಿಭಿನ್ನ ಅಭಿಪ್ರಾಯವಿದೆ. ಕಾರ್ಯಕ್ರಮದಿಂದ ದೂರ ಉಳಿದಿದ್ದರ ಕುರಿತು ಪರ, ವಿರೋಧ ಎರಡೂ ಅನಿಸಿಕೆ ಕೇಳಿಬಂದಿದೆ. ಕೆಲವಷ್ಟು ಮಂದಿ, ಪಕ್ಷದ ಪ್ರತಿನಿಧಿಯಾಗಿ ಒಬ್ಬರು ಪಾಲ್ಗೊಂಡಿದ್ದರೆ ಬಿಜೆಪಿಗೆ ಚರ್ಚೆಗೆ ಅವಕಾಶ ಇಲ್ಲದಂತೆ ಮಾಡಬಹುದಿತ್ತು ಎಂದು ಹೇಳುವವರಿದ್ದಾರೆ. ಇನ್ನೂ ಕೆಲವರು ದೂರ ಉಳಿದಿದ್ದೇ ಸರಿ, ಬಿಜೆಪಿಯೇತರ ಮತಗಳನ್ನು ಒಗ್ಗೂಡಿಸಲು ಗಟ್ಟಿ ನಿಲುವು ಎಂದು ವಾದ ಮುಂದಿಡುತ್ತಾರೆ. ಧರ್ಮ, ದೇವರು ವಿಷಯದಲ್ಲಿ ನಾವು ಪಕ್ಷದ ವಿಚಾರಕ್ಕೆ ಅಂಟಿಕೊಳ್ಳಬಾರದು. ನಾವಂತೂ ನಮ್ಮ ಮನೆ ಬಳಿಯಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡೆವು, ಖುಷಿಪಟ್ಟೆವು. ಸಂಜೆ ದೀಪೋತ್ಸವವನ್ನೂ ಮಾಡಿದೆವು. ಧರ್ಮದ ವಿಚಾರದಲ್ಲಿ ರಾಜಕೀಯ ತರಬಾರದೆಂದು ಬೆಂಗಳೂರು, ವಿಜಯನಗರ, ವಿಜಯಪುರದಲ್ಲಿ ನಡೆದ ಕಾರ್ಯಕ್ರಮದ ವಿವರಣೆಯನ್ನು ಮುಖಂಡರೊಬ್ಬರು ನೀಡಿದರು. ನಮ್ಮ ರಾಮ ಬೇರೆ, ಬಿಜೆಪಿ ರಾಮ ಬೇರೆ ಎಂದು ವಾದ ಮಾಡುತ್ತಾ, ನಾವು ರಾಮ ಭಕ್ತರು ಎಂದು ನಾಯಕರಾದವರು ಪ್ರತಿ ನಿತ್ಯ ಪ್ರತಿಕ್ರಿಯೆ ನೀಡುತ್ತಾ ಕೆರೆದು ಗಾಯ ಹುಣ್ಣುಮಾಡಿಕೊಳ್ಳಬಾರದು ಎಂಬುದು ಕಾಂಗ್ರೆಸ್​ನ ಮುಸ್ಲಿಂ ಯುವ ಮುಖಂಡರ ಅಭಿಪ್ರಾಯವಾಗಿತ್ತು.
ರಾಜ್ಯ ಬಜೆಟ್ ಮುಂದೂಡುವಂತೆ ಮನವಿ:ವಿಧಾನ ಪರಿಷತ್​ನ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ದಿನದಂದೇ ರಾಜ್ಯ ಬಜೆಟ್ ಮಂಡಿಸುವುದಕ್ಕೆ ತಡೆ ನೀಡುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ ಮಾಡಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಬಿಜೆಪಿ ನಿಯೋಗವು ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿ, ಮಧ್ಯಪ್ರವೇಶಿಸುವಂತೆ ಒತ್ತಾಯಿಸಿತು. ಬಳಿಕ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಚುನಾವಣಾ ಆಯೋಗವು ಬೆಂಗಳೂರಿನ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರವರಿ 16 ರಂದು ಮತದಾನ ನಿಗದಿಪಡಿಸಿದೆ. ಅಂದೇ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಮಾದರಿ ನೀತಿಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ ಪ್ರಕಾರ ಇದು ನ್ಯಾಯಬದ್ಧವಲ್ಲ. ಬಜೆಟ್ ಮಂಡನೆ ದಿನವನ್ನು ಮುಂದೂಡಬೇಕು ಎಂದು ಕೋರಿದ್ದೇವೆ. ಸರ್ಕಾರಕ್ಕೆ ಸೂಚಿಸುವುದಾಗಿ ರಾಜ್ಯಪಾಲರೂ ತಿಳಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 9 =
Remember me
