| ಹರೀಶ್ ಬೇಲೂರು ಬೆಂಗಳೂರುರಾಜ್ಯದ ನದಿಗಳು, ಉಪನದಿಗಳು ಹಾಗೂ ಸಾವಿರಾರು ಕೆರೆಗಳ ನೀರು ಮಲಿನಗೊಂಡಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಚಾಮರಾಜನಗರದಿಂದ ಹಿಡಿದು ಬೀದರ್​ವರೆಗೆ ಹರಿಯುತ್ತಿರುವ ಎಲ್ಲ ನದಿಗಳು ಕಲುಷಿತಗೊಂಡಿದ್ದು, ಕುಡಿಯುವುದಿರಲಿ, ಈ ನದಿಗಳಲ್ಲಿ ಸ್ನಾನ ಮಾಡಿದರೂ ರೋಗ ಗ್ಯಾರಂಟಿ. ಈ ನೀರನ್ನು ಕೃಷಿಗೂ ಬಳಸಲಾಗದ ಸ್ಥಿತಿಗೆ ತಲುಪಿವೆ.
ಈ ನದಿ ನೀರಿನಿಂದ ತುಂಬಿರುವ ಸಾವಿರಾರು ಕೆರೆಗಳು ಸಹ ಕಲುಷಿತಗೊಂಡಿವೆ. ಸಾಮಾನ್ಯವಾಗಿ ಕುಡಿಯುವ ನೀರು ‘ಎ’ ಗ್ರೇಡ್​ನಲ್ಲಿ ಇರಬೇಕು. ಆದರೆ, ಬಹುತೇಕ ನದಿಗಳ ನೀರು ‘ಸಿ’ ಗ್ರೇಡ್ ಹಂತಕ್ಕೆ ತಲುಪಿದ್ದು, ಸಂಪೂರ್ಣವಾಗಿ ಮಲಿನವಾಗಿದೆ. ಬರೀ ಜಲಚರಗಳು ವಾಸಿಸಲು ಹಾಗೂ ಕಾರ್ಖಾನೆಗಳ ಯಂತ್ರಗಳ ಸ್ವಚ್ಛತೆಗೆ ಬಳಸಬಹುದಾಗಿದೆ. ಆದರೆ, ನದಿಯಂಚಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ನಿವಾಸಿಗಳು ವಿಧಿಯಿಲ್ಲದೆ ಈ ನೀರನ್ನೇ ಕುಡಿಯಲು ಬಳಸುವಂತಾಗಿದೆ. ವರ್ಷದಿಂದ ವರ್ಷಕ್ಕೆ ಇನ್ನಷ್ಟು ಮಲಿನವಾಗುತ್ತಿರುವ ನದಿಗಳ ನೀರು ಭವಿಷ್ಯದಲ್ಲಿ ಜಲಚರಗಳ ಪ್ರಾಣಕ್ಕೂ ಸಂಚಕಾರ ತಂದೊಡ್ಡಲಿದೆ.
ಜೀವನದಿ ಕಾವೇರಿ ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ರೈತರ ಪಾಲಿಗೆ, ಬೆಂಗಳೂರು ಜನತೆಗೆ ಕುಡಿಯಲು ಆಧಾರವಾಗಿದೆ. ವರ್ಷದಿಂದ ವರ್ಷಕ್ಕೆ ಕಾವೇರಿ ನದಿ ಹೆಚ್ಚು ಕಲುಷಿತಗೊಳ್ಳುತ್ತಿದೆ. ಕಬಿನಿಯೂ ಮಲಿನವಾಗಿದೆ. ದಾವಣಗೆರೆ, ರಾಯಚೂರು, ಕಲಬುರಗಿ, ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ, ವಿಜಯಪುರ, ಯಾದಗಿರಿ ಮತ್ತು ಬೀದರ್ ಸೇರಿ ಇತರ ಜಿಲ್ಲೆಗಳ ಕೋಟ್ಯಂತರ ರೈತರಿಗೆ ಜೀವಸೆಲೆಯಾಗಿರುವ ಕೃಷ್ಣಾ, ಭೀಮಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಭದ್ರಾ ಹಾಗೂ ಕಾಳಿ ನದಿಗಳು ಮಲಿನಗೊಂಡಿವೆ. ಅದೇರೀತಿ, ಹಾಸನದಲ್ಲಿ ಹರಿಯುವ ಹೇಮಾವತಿ, ಯಗಚಿ, ಮಂಗಳೂರಿನಲ್ಲಿ ಹರಿಯುವ ನೇತ್ರಾವತಿ, ಕುಮಾರಧಾರಾ, ತುಮಕೂರಿನ ಶಿಂಷಾ ಹಾಗೂ ರಾಮನಗರದ ಅರ್ಕಾವತಿ ನದಿಗಳೂ ಅಪಾಯ ಮಟ್ಟದಲ್ಲಿ ಮಲಿನಗೊಂಡಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ಉಲ್ಲೇಖಿಸಿದೆ.
ಬೆಂಗಳೂರಿನ 123, ಹಾಸನ 20, ಧಾರವಾಡ, ತುಮಕೂರು 8, ಮೈಸೂರು 7, ದಾವಣಗರೆ, ರಾಯಚೂರು, ಕೋಲಾರ 4, ರಾಮನಗರ 3 ಸೇರಿ ರಾಜ್ಯಾದ್ಯಂತ 193 ಪ್ರಮುಖ ಕೆರೆಗಳ ನೀರು ಕಲ್ಮಶವಾಗಿದೆ. ರಾಜ್ಯದಲ್ಲಿ ಒಟ್ಟು 3,670 ಕೆರೆಗಳಿದ್ದು, ಇದರಲ್ಲಿ 870 ಕೆರೆಗಳು ಪೂರ್ಣವಾಗಿ ತುಂಬಿದರೆ 999 ಕೆರೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ನೀರು ಸಂಗ್ರಹವಾಗುತ್ತದೆ. 1,454 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು ಹಾಗೂ 347 ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಏರಿ ಬಲವರ್ಧನೆ, ಕೋಡಿ ಮತ್ತು ಕಾಲುವೆ ದುರಸ್ತಿ, ಹೂಳು ತೆಗೆಯುವುದು ಸೇರಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಅವಶ್ಯವಿರುವ ಹಣಕಾಸಿನ ಬೇಡಿಕೆಯನ್ನು ನಿಖರವಾಗಿ ಲೆಕ್ಕ ಮಾಡುವುದು ಕಷ್ಟವೆಂದು ಸರ್ಕಾರವೇ ಒಪ್ಪಿಕೊಂಡಿರುವುದು ಕೆರೆಗಳ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.
ಇಚ್ಛಾಶಕ್ತಿ ತೋರಲಿ:ನದಿ, ಉಪನದಿಗಳು, ಕೆರೆಗಳಿಗೆ ಕಾಯಕಲ್ಪ ನೀಡಲು ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ಇವುಗಳಿಗೆ ಕಾಯಕಲ್ಪ ನೀಡದಿದ್ದರೆ, ಭವಿಷ್ಯದಲ್ಲಿ ಕುಡಿಯಲು ಶುದ್ಧ ನೀರು ಸಿಗದೆ ಪರಿತಪಿಸಬೇಕಾಗುತ್ತದೆ. ಸರ್ಕಾರಗಳು ಹೊರಡಿಸುವ ಆದೇಶಗಳು, ಮಂಡಳಿ ನೀಡಿರುವ ಶಿಫಾರಸು ಕಾಗದಕ್ಕೆ ಸೀಮಿತವಾಗದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವಂತಾಗಬೇಕು. ಇದಕ್ಕೆ ಖಾಸಗಿ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯ.
ಕಲುಷಿತ ಹೇಗೆ?:ಪರಿಸರ ಮತ್ತು ನೈರ್ಮಲ್ಯ ಇಲಾಖೆ ನಿಯಮ ಪ್ರಕಾರ ನದಿಗಳಿಗೆ ಕೊಳಚೆ ನೀರು ಬಿಡಬಾರದು. ಆದರೆ, ಅಪಾಯಕಾರಿ ಕೈಗಾರಿಕೆಗಳಿಂದ ಹೊರಬಿಡುವ ರಾಸಾಯ ನಿಕಯುಕ್ತ ಕೊಳಚೆ ನೀರು ನದಿಗಳ ಒಡಲು ಸೇರುತ್ತಿದೆ. ಕಸ, ಕೃಷಿ, ವೈದ್ಯಕೀಯ ಹಾಗೂ ಮಾಂಸದ ತ್ಯಾಜ್ಯ, ತೈಲ ಸೋರಿಕೆಯಿಂದ ನದಿಗಳ ನೀರು ಕಲುಷಿತವಾಗುತ್ತಿದೆ.
ಗ್ರೇಡ್ ಬದಲಾವಣೆ:ಕಾವೇರಿ, ಕಬಿನಿ, ಹೇಮಾವತಿ, ಯಗಚಿ, ನೇತ್ರಾವತಿ, ಕುಮಾರಧಾರಾ, ಲಕ್ಷ್ಮಣತೀರ್ಥ, ಶರಾವತಿ, ಕೃಷ್ಣ, ಭೀಮಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಭದ್ರಾ, ಶಿಂಷಾ, ಕಾಳಿ, ವಾಣಿ ವಿಲಾಸ ನದಿಗಳು ಮತ್ತು ಉಪನದಿಗಳು ‘ಸಿ’ ಗ್ರೇಡ್ ಹಂತಕ್ಕೆ ತಲುಪಿವೆ. ಸಾಮಾನ್ಯ ಸಂಸ್ಕರಣೆ ಮಾಡಿಯೂ ಕುಡಿಯಬಹುದಾದ ಜಲಮೂಲಗಳೇ ಇಲ್ಲದಂತಾಗುತ್ತಿವೆ. ಹಲವು ಜಿಲ್ಲೆಗಳಲ್ಲಿ 110ಕ್ಕೂ ಅಧಿಕ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಿರುವ ಮಂಡಳಿಯು ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ಬಿಡುಗಡೆ ಮಾಡುತ್ತಿದೆ. ಒಂದೊಂದು ತಿಂಗಳಲ್ಲಿ ನದಿಗಳ ನೀರಿನ ಗ್ರೇಡ್ ಬದಲಾಗುತ್ತಿದೆ.
‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
