ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಉತ್ತರ ಕರ್ನಾಟಕ ಭಾಗದ ಪ್ರಮುಖ ನೀರಾವರಿ ಯೋಜನೆಯಾದ ಕೊಪ್ಪಳ ಏತ ನೀರಾವರಿ ಪ್ರಾಜೆಕ್ಟ್, ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್​ಎಲ್) ಅಧಿಕಾರಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದಿದೆ.
ಸ್ಥಳಿಯ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಕೊರತೆಯಿಂದಾಗಿ ಅಂದಾಜು -5 ಸಾವಿರ ಕೋಟಿ ಮೊತ್ತದ ಬೃಹತ್ ನೀರಾವರಿ ಯೋಜನೆ ಒಂದೂವರೆ ದಶಕದಿಂದ ತೆವಳುತ್ತಿದೆ. 2012ರಲ್ಲಿ ಕೊಪ್ಪಳ ಜಿಲ್ಲೆಯ ನಾರಾಯಣಪುರ ಬಲದಂಡೆಗೆ ಸಂಬಂಧಿಸಿ ದಂತೆ ರೂಪುಗೊಂಡ ಈ ಮಹತ್ವಾಕಾಂಕ್ಷಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳುವ ಬದಲು ಕಳಪೆ ಕಾಮಗಾರಿ ಯಿಂದಾಗಿ ಸದ್ದು ಮಾಡಿದೆ. ಇದರಿಂದಾಗಿ ಯೋಜನೆ ಪೂರ್ಣ ಗೊಳ್ಳದೆ ಸಾಲು ಸಾಲು ವಿಘ್ನಗಳು ಎದುರಾಗುತ್ತಲೇ ಇದೆ. 2ನೇ ಹಂತದ ಕಾಮಗಾರಿಯಲ್ಲಿನ ಲೋಪ-ದೋಷಗಳ ಪರಿಣಾಮ ಇಡೀ ಯೋಜನೆ ಹಳ್ಳ ಹಿಡಿದಿದ್ದು, ರೈತರ ಜಮೀನಿಗೆ ನೀರು ಹರಿಯದೆ ಸಮಸ್ಯೆ ಸೃಷ್ಟಿಸಿದೆ. 2013ರಲ್ಲಿ ಕೆಬಿಜೆಎನ್​ಎಲ್ ಈ ಯೋಜನೆಯ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಿ 5 ವರ್ಷದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಆದರೆ, ಕಳಪೆ ಕಾಮಗಾರಿ ಪರಿಣಾಮ 11 ವರ್ಷ ಕಳೆದರೂ ಲೋಪ ಸರಿಪಡಿಸಲಾಗಲಿಲ್ಲ. ಇತ್ತೀಚೆಗೆ ಸುರಿದ ಭರ್ಜರಿ ಮಳೆಯಿಂದಾಗಿ ನಾರಾಯಣಪುರ ಅಣೆಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಶೇಖರಣೆಗೊಂಡಿದ್ದರೂ, ರೈತರು ಆಕಾಶದೆಡೆ ನೋಡುವ ಸ್ಥಿತಿ ಬದಲಾಗದಿರುವುದು ಯೋಜನೆ ಹಿನ್ನಡೆಗೆ ಕನ್ನಡಿ ಹಿಡಿದಂತಿದೆ.
ಏನಿದು ಯೋಜನೆ?:ನಾರಾಯಣಪುರ ಅಣೆಕಟ್ಟೆಯಿಂದ ಬಲದಂಡೆ ಕಾಲುವೆ ಮೂಲಕ ವಾರ್ಷಿಕ 12.815 ಟಿಎಂಸಿ ನೀರನ್ನು ಬಳಸಿಕೊಂಡು ಯೋಜನಾ ವ್ಯಾಪ್ತಿಯ ಕೆರೆ ತುಂಬಿ ಸುವುದು, ಹನಿ ನೀರಾವರಿ ಮೂಲಕ ಒಟ್ಟು 2.76 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವ ಗುರಿ ಹೊಂದಲಾಗಿತ್ತು.ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕುಷ್ಠಗಿ, ಯಲಬುರ್ಗ, ಕೊಪ್ಪಳ ತಾಲ್ಲೂಕು, ಕನಕಗಿರಿ ಮತ್ತು ಗಂಗಾವತಿ ಮತಕ್ಷೇತ್ರಗಳು, ಬಾಗಲಕೋಟೆ ಜಿಲ್ಲೆಯ ಹುನಗುಂದ, ಬಾದಾಮಿ, ಗದಗ ಜಿಲ್ಲೆಯ ರೋಣ ತಾಲ್ಲೂಕುಗಳಿಗೆ ನೀರೊದಗಿಸಲು ಸರ್ಕಾರ ಸಂಕಲ್ಪ ಕೈಗೊಂಡಿತ್ತು.
ಆದರೆ, ಮೂರು ಜಿಲ್ಲೆಗಳಿಗೆ ಸೇರಿದ ವಿವಿಧ ತಾಲ್ಲೂಕುಗಳಲ್ಲಿ ಜಾರಿಗೊಳಿಸಿರುವ ನೀರಾವರಿ ಯೋಜನೆಗಳಿಗೆ ನೀರೊದಗಿಸುವ ಮೂಲ ಆಶಯ ಬದಲು ಕಳಪೆ ಕಾಮಗಾರಿಗಳು ವಿಜೃಂಭಿಸಿವೆ ಎಂಬ ಆರೋಪ ಕೇಳಿ ಬಂದಿದೆ. 2013ರಲ್ಲಿ ಈ ಯೋಜನೆಯಡಿ ವಿದ್ಯುತ್ ಉಪ ಕೇಂದ್ರಗಳು, ಪಂಪ್​ಹೌಸ್​ಗಳ ನಿರ್ವಣ, ಪೈಪ್​ಲೈನ್ ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆದಾರ ಜಿ. ಶಂಕರ್​ಗೆ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆ ವಹಿಸಲಾಗಿತ್ತು. ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದೆ ಪದೇ ಪದೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಯಿತು. ಹೀಗಾಗಿ ಈ ಏತ ನೀರಾವರಿ ಯೋಜನೆ ಸಾಫಲ್ಯ ಪಡೆಯದೆ ವೈಫಲ್ಯಗಳನ್ನೇ ಹೊದ್ದು ಮಲಗಿ ಯೋಜನೆಯನ್ನು ಮಣ್ಣುಗೂಡಿರುವುದನ್ನು ದೃಢಪಡಿಸುವ ದಾಖಲೆಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ.
ಆಕ್ಟ್ ಆಫ್ ಗಾಡ್ ಸಬೂಬು?:ಪ್ರಸ್ತುತ ನಾರಾಯಣಪುರ ಜಲಾಶಯದಲ್ಲಿ ನೀರು ಸಂಗ್ರಹ ಹೆಚ್ಚಿದೆ. ಆದರೆ, ಆಕ್ಟ್ ಆಫ್ ಗಾಡ್ ಸಬೂಬಿನಿಂದ ಏತ ನೀರಾವರಿ ಮೂಲಕ ನೀರು ಹರಿಸುವ ಕಾರ್ಯ ಸಫಲತೆ ಕಂಡಿಲ್ಲ. ಐದು ವರ್ಷದ ನಿರ್ವಹಣೆ ಅವಧಿ ಅಂಶ ಹೊಂದಿರುವ ಗುತ್ತಿಗೆಯಡಿ ನಡೆದಿರುವ ಈ ಕಾಮಗಾರಿ ಜಾರಿಗೂ ಮುನ್ನ ಸಬ್ ಸ್ಟೇಷನ್​ನ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದೆ ಎಂದು ದೂರಲಾಗಿದೆ. ಯೋಜನೆಯ ಆರಂಭಿಕ ಹಂತದ ಕಾಮಗಾರಿ ಅಂದರೆ ಹೆಡ್​ವರ್ಕ್ಸ್​ನ ಕಾಮಗಾರಿಯಾದ ಬಾಲಾಕುಂದಿ ಪಂಪ್​ಹೌಸ್ ಚಾಲನೆಗೆ ನಿರ್ವಿುಸಿದ್ದ 25 ಎಂವಿಎ ಸಾಮರ್ಥ್ಯದ 220/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರದ ಪರಿವರ್ತಕಗಳು ಸುಟ್ಟು ಹೋಗಿವೆ. ಇದರಿಂದಾಗಿ ನೀರು ಲಭ್ಯವಿದ್ದರೂ ಅದನ್ನು ಬಳಸಿಕೊಳ್ಳಲಾಗದ ಸ್ಥಿತಿ ನಿರ್ವಣವಾಗಿದೆ. ಈ ಸಮಸ್ಯೆಗೆ ಆಕ್ಟ್ ಆಫ್ ಗಾಡ್ ಹಣೆಪಟ್ಟಿ ಕಟ್ಟಿರುವ ಗುತ್ತಿಗೆದಾರರು ಮಿಂಚು- ಸಿಡಿಲಿನಿಂದ ಟ್ರಾನ್ಸ್​ಫಾರ್ಮರ್ ಸುಟ್ಟಿದೆ ಎಂಬ ನೆಪ ಹೇಳಿದೆ. ಗುತ್ತಿಗೆಯ ಷರತ್ತಿನಂತೆ ನಿರ್ವಹಣೆ ಜವಾಬ್ದಾರಿ ತನ್ನದಿದ್ದರೂ ಟ್ರಾನ್ಸ್​ಫಾರ್ಮರ್ ಬದಲಿಸುವ ಬದಲು ನಿಗಮದೊಂದಿಗೆ ಪತ್ರ ಸಮರ ನಡೆಸುವ ಮೂಲಕ ಗುತ್ತಿಗೆದಾರರು ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ರಹಸ್ಯ ಏಕೆ?:ಕೊಪ್ಪಳ ಭಾಗದ ಈ ಪ್ರಮುಖ ನೀರಾವರಿ ಯೋಜನೆ ಜಾರಿ ಬಗ್ಗೆ ಅನುಮಾನಗಳು ಮೂಡುವಷ್ಟು ಕಳಪೆ ಕಾಮಗಾರಿ ಆಗಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ. ಜತೆಗೆ ಯೋಜನೆಯ ಪ್ರಮುಖ ಭಾಗದಲ್ಲಿ ಕಳಪೆ ಕಾಮಗಾರಿ ನಡೆದಿದ್ದರೂ ಕೆಬಿಜೆಎನ್​ಎಲ್ ಈ ವಿಷಯವನ್ನು ಸರ್ಕಾರಕ್ಕೆ ತಿಳಿಸದೆ ರಹಸ್ಯವಾಗಿ ಇಟ್ಟಿದೆ. ಈ ನಿರ್ಲಕ್ಷ್ಯಕ್ಕೆ ನಿಗಮದ ಅಧಿಕಾರಿಗಳು ಉತ್ತರಿಸಬೇಕಿದೆ ಎಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.
ಎಡವಟ್ಟುಗಳ ಸರಣಿ:ಎರಡನೇ ಹಂತದ ಹೆಡ್ ವರ್ಕ್ಸ್ ಎನ್ನಲಾಗುವ ಮೂಲ ಕಾಮಗಾರಿ ಟೆಂಡರ್ ಅನ್ನು 2013ರಲ್ಲಿ ಗುತ್ತಿಗೆ ನೀಡಲಾಗಿದೆ. ಷರತ್ತಿನನ್ವಯ 2016ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದರೂ, 2017ಕ್ಕೆ ಕೊನೆಗೊಳಿಸಲಾಯಿತು. 2022ರಲ್ಲಿ ವಿದ್ಯುತ್ ಉಪ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡಲಾಯಿತು. 2022ರ ಜೂ.4ರಲ್ಲಿ ಯೋಜನೆ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಆ ನಂತರದ 60 ತಿಂಗಳವರೆಗೆ ಗುತ್ತಿಗೆದಾರರೇ ಯೋಜನೆಯ ನಿರ್ವಹಿಸಬೇಕಿತ್ತು. ಆದರೂ, 2022ರಿಂದ ಈವರೆಗೆ ಪೈಪ್ ಲೈನ್ ಸೋರಿಕೆ ಸೇರಿ ಒಂದಿಲ್ಲೊಂದು ದೋಷ ಕಂಡು ಬಂದ ಪರಿಣಾಮ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಜತೆಗೆ ಯೋಜನೆ ಮತ್ತು ಇದಕ್ಕೆ ಹೊಂದಿಕೊಂಡಿರುವ ಇತರ ನೀರಾವರಿ ಯೋಜನೆಗಳಿಗೆ ಇದರಿಂದಲೇ ನೀರು ಸರಬರಾಜು ಆಗಬೇಕಿದ್ದು, ಈ ದೋಷದ ಪರಿಣಾಮ ಆ ಭಾಗದ ಪ್ರಮುಖ ಪ್ರಾಜೆಕ್ಟ್​ಗಳಿಗೆ ಈವರೆಗೆ ಚಾಲನೆಯೇ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮುಡಾ ಹಗರಣ: ಹೈಕೋರ್ಟ್​ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 2 =
Remember me
