ಬೆಂಗಳೂರು:ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿ, ಶೈಕ್ಷಣಿಕ ಗುಣಮಟ್ಟ ಕುಸಿತ, ನೇಮಕ ಅವ್ಯವಹಾರ ಕುರಿತು ವಿಧಾನಸಭೆಯಲ್ಲಿ ಸದಸ್ಯರು ಪಕ್ಷ ಭೇದ ಮರೆತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು 2022ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕ ಪರ್ಯಾಲೋಚನೆಗೆ ಮಂಡಿಸಿದ ಸಂದರ್ಭದಲ್ಲಿ ವಿವಿಗಳ ಹಲವು ಮುಖಗಳನ್ನು ಸದಸ್ಯರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹೊಸದಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕಿಂತ ಈಗಾಗಲೆ ಇರುವ ವಿಶ್ವವಿದ್ಯಾಲಯಗಳಿಗೆ ಮೂಲಸೌಕರ್ಯ ಕಲ್ಪಿಸುವುದು, ಗುಣಮಟ್ಟ ಹೆಚ್ಚಿಸುವುದರ ಕಡೆಗೆ ಆದ್ಯತೆ ಕೊಡಬೇಕು ಎಂಬುದು ಸದಸ್ಯರ ಒಕ್ಕೊರಲ ಆಗ್ರಹವಾಗಿತ್ತು.
ಕುಲಪತಿ ಹುದ್ದೆಗೆ 5 ರಿಂದ 20 ಕೋಟಿ ರೂ. ಡೀಲ್ ನಡೆಯುತ್ತಿದೆ. ಅಯೋಗ್ಯರು ವಿಶ್ವವಿದ್ಯಾಲಯಗಳಿಗೆ ನೇಮಕವಾಗುತ್ತಿದ್ದಾರೆ ಎಂದು ಕಾಂಗ್ರೆಸ್​ನ ಈಶ್ವರ ಖಂಡ್ರೆ ಆರೋಪಿಸಿದರು. ಇದಕ್ಕೆ ದನಿಗೂಡಿಸಿದ ಕೃಷ್ಣ ಬೈರೇಗೌಡ, 2018ರ ಸಿಎಜಿ ವರದಿ, 2021ರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವಿಶ್ವವಿದ್ಯಾಲಯಗಳಲ್ಲಿ ನೇಮಕ, ನಿರ್ಮಾಣ ಕಾಮಗಾರಿಯಲ್ಲಿನ ಅವ್ಯವಹಾರದ ಬಗ್ಗೆ ಬೆಳಕು ಚೆಲ್ಲಿವೆ. ಯಾರೂ ಊಹೆ ಮಾಡಿಕೊಳ್ಳಲಾಗದಷ್ಟು ಮಟ್ಟಿಗೆ ಅಕ್ರಮ ನಡೆದಿವೆ. ರಾಜ್ಯದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಇದೀಗ ಹೆಸರಿಗೆ ಎರಡು ಕೋಟಿ ರೂ. ಇಟ್ಟು ನಂತರ ಸಾರ್ವಜನಿಕರ ನೂರಾರು ಕೋಟಿ ತೆರಿಗೆ ಹಣ ಇದಕ್ಕಾಗಿ ಸುರಿಯಬೇಡಿ ಎಂದು ಕಿವಿ ಮಾತು ಹೇಳಿದರು.
ಕಾಂಗೆಸ್​ನ ಎಂ.ಬಿ.ಪಾಟೀಲ್, ಕರ್ನಾಟಕ ವಿಶ್ವವಿದ್ಯಾಲಯ, ಮಹಿಳಾ ವಿವಿ ಪರಿಸ್ಥಿತಿ ವಿವರಿಸಿದರೆ, ಪರಮೇಶ್ವರ ನಾಯಕ್ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಿದರು. ಬಿಜೆಪಿಯ ಅರವಿಂದ ಬೆಲ್ಲದ್, ವಿಶ್ವವಿದ್ಯಾಲಯಗಳಿಗೆ ನೇಮಕ ಹಾಗೂ ನಿರ್ವಣದ ಹೊಣೆಗಾರಿಕೆ ಕೊಡಬಾರದು. ಅವುಗಳಿಂದಲೇ ಹೆಚ್ಚು ಅಕ್ರಮಗಳು ನಡೆಯುತ್ತಿವೆ. ಅದಕ್ಕಾಗಿಯೇ ಕುಲಪತಿ, ರಜಿಸ್ಟ್ರಾರ್ ಆಗಲು ಪೈಪೋಟಿ ಹಾಗೂ ಲಾಬಿ ನಡೆಯುತ್ತದೆ ಎಂದು ಹೇಳಿದರು.
ಬಿಜೆಪಿ ಸದಸ್ಯ ವೀರಣ್ಣ ಚರಂತಿಮಠ, ಸಂಗೀತ ಹಾಗೂ ಜಾನಪದ ಹೀಗೆ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳನ್ನು ಒಂದುಗೂಡಿಸಿ ಎಂಬ ಬೆಲ್ಲದ್ ಅವರ ಮಾತಿಗೆ ದನಿಗೂಡಿಸಿದರು. ಕಾಂಗ್ರೆಸ್​ನ ಶಿವಾನಂದ ಪಾಟೀಲ್, ಈಶ್ವರ್ ಖಂಡ್ರೆ ವಿಧೇಯಕಗೆ ಅಂಗೀಕಾರ ಬೇಡ. ಸದ್ಯಕ್ಕೆ ವಿಧೇಯಕ ಅಂಗೀಕಾರ ಬಿಟ್ಟು ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಇರುವ ವಿಶ್ವವಿದ್ಯಾಲಯಗಳ ಗುಣಮಟ್ಟ ಸುಧಾರಿಸಿ ಎಂಬ ಸಲಹೆ ನೀಡಿದರು. ಬಿಎಸ್​ಪಿಯ ಮಹೇಶ್, ಬಿಜೆಪಿಯ ವೇದವ್ಯಾಸ ಕಾಮತ್, ಕಾಂಗ್ರೆಸ್​ನ ಬಸನಗೌಡ ದದ್ದಲ್ ಮತ್ತಿತರರು ಕೂಡ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಹಾಗೂ ಹಾಲಿ ಇರುವ ವಿಶ್ವವಿದ್ಯಾಲಯಗಳನ್ನು ಬಲಪಡಿಸುವಂತೆ ಕೇಳಿದರು.
ವಿದ್ಯಾರ್ಥಿಗಳು ಶೇ.90 ರಿಂದ 95 ಅಂಕ ಪಡೆಯುತ್ತಾರೆ ಎಂದು ಪ್ರಚಾರ ನೀಡಿ ಡೀಮ್್ಡ ವಿ.ವಿ.ಗಳ ದುಡ್ಡು ಮಾಡುವ ದಂಧೆ ನಡೆಸಿವೆ. ಡೀಮ್್ಡ ವಿ.ವಿ.ಗಳ ಪರೀಕ್ಷಾ ವ್ಯವಸ್ಥೆಯನ್ನು ಸರ್ಕಾರವೇ ನೋಡಿಕೊಳ್ಳಬೇಕು. ಏಕರೂಪದ ಪರೀಕ್ಷೆ, ಮೌಲ್ಯಮಾಪನ ವ್ಯವಸ್ಥೆ ಅವಶ್ಯ.
|ಎ.ಟಿ.ರಾಮಸ್ವಾಮಿಜೆಡಿಎಸ್ ಶಾಸಕ
ನಮ್ಮ ರಾಜ್ಯದಿಂದ ಹೊರ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕೊಡದ ಶಿಕ್ಷಣ ಅಲ್ಲಿ ಕೊಡುತ್ತಿದ್ದಾರಾ? ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೆ?
|ವಿಶ್ವೇಶ್ವರ ಹೆಗಡೆಕಾಗೇರಿ ಸ್ಪೀಕರ್
ಜನಸಂಖ್ಯೆ, ಜಿಲ್ಲಾ ವ್ಯಾಪ್ತಿ, ಹೊಸಶಿಕ್ಣ ನೀತಿ, ಜ್ಞಾನ ಆಯೋಗದ ನೀತಿ-ನಿಯಮ ಆಧರಿಸಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬುದು ಸರ್ಕಾರದ ಉದ್ದೇಶ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 22 ವರ್ಷದ ಬಳಿಕ ನಾವು ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡಿ ಮಾಡುತ್ತಿದ್ದೇವೆ. ಡಿಜಿಟಲೀಕರಣದಿಂದ ಸಾಕಷ್ಟು ಸುಧಾರಣೆಯಾಗುತ್ತಿದೆ. ಭ್ರಷ್ಟಾಚಾರಕ್ಕೂ ಕಡಿವಾಣ ಬೀಳುತ್ತಿದೆ. ಹಳೆಯ ವಿಶ್ವವಿದ್ಯಾಲಯಗಳಿಗೆ ನಾವು ನೀಡುವ ಅನುದಾನದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಿಎಜಿ ವರದಿ, ಸದಸ್ಯರ ಆರೋಪ, ಆಶಯಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಕೋರಿದರು. ಬಳಿಕ ಈ ವಿಧೇಯಕಕ್ಕೆ ಧ್ವನಿ ಮತದ ಅಂಗೀಕಾರ ದೊರೆಯಿತು.
ಬೆಂಗಳೂರು:ತೋಟಗಾರಿಕೆ ಇಲಾಖೆಯಲ್ಲಿ 200 ತೋಟಗಾರರ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು. ಕಾಂಗ್ರೆಸ್​ನ ಅಮರೇಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿದರು. ಇಲಾಖೆಯಲ್ಲಿ 200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮೇ 8ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿ ಮೇಲೆ ಸಲ್ಲಿಸಿರುವ ಆಕ್ಷೇಪಗಳ ಅರ್ಜಿಗಳು ಪರಿಶೀಲನಾ ಹಂತದಲ್ಲಿದೆ. ಪರಿಶೀಲನೆ ಪೂರ್ಣಗೊಂಡ ತಕ್ಷಣ ಆದೇಶ ನೀಡಲಾಗುವುದು ಎಂದು ಹೇಳಿದರು. ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನೀವು ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡುವುದಿಲ್ಲ. ಪದೇ ಪದೆ ನಾವು ಕೇಳಿ ಕೇಳಿ ಸಾಕಾಗಿದೆ. ಕೊನೆ ಪಕ್ಷ ವಿದ್ಯಾರ್ಥಿಗಳ ಅಂಕಪಟ್ಟಿಯನ್ನಾದರೂ ಕೊಡಿ. ಅವರು ಬೇರೆ ಕೆಲಸನ್ನಾದರೂ ನೋಡಿಕೊಳ್ಳುತ್ತಾರೆ. ವಯೋಮಿತಿ ಮೀರಿದರೆ ಯಾರು ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಮುನಿರತ್ನ, ಇನ್ನು ಒಂದು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ ಎಂದು ಹೇಳಿದರು.
ಪಂಚತಾರಾ ಹೋಟೆಲ್​ನಲ್ಲಿ ಸಿಂಡಿಕೇಟ್ ಸಭೆ:ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ಬೆಂಗಳೂರಿನ ಪಂಚತಾರಾ ಹೋಟೆಲ್​ನಲ್ಲಿ ನಡೆಯುತ್ತಿದೆ! ಎಂದು ಕಾಂಗ್ರೆಸ್​ನ ಯು.ಟಿ.ಖಾದರ್ ಗಮನ ಸೆಳೆದರು. ಈ ವಿ.ವಿ.ಯಲ್ಲಿ 500 ಮಂಜೂರಾತಿ ಹುದ್ದೆ ಇದ್ದರೆ 780 ಹೊರಗುತ್ತಿಗೆ ಹುದ್ದೆಗಳಿವೆ. ಅವರಿಗೆ ಇಷ್ಟ ಬಂದಂತೆ ವೇತನ ನಿಗದಿ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳು, ಶಿಕ್ಷಣದ ಗುಣಮಟ್ಟಕ್ಕಿಂತ ಸಭಾ ಸಭೆ ಭತ್ಯೆ ಹೆಚ್ಚಳಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಾರೆ ಎಂದು ಹೇಳಿದರು.
ಬೆಂಗಳೂರು:ಜನಸಂಖ್ಯೆ ಆಧರಿಸಿ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗದಿ, ಬಿಬಿಎಂಪಿಯಲ್ಲಿ ಒಬಿಸಿಗೆ ಮೀಸಲು ನಿಗದಿ, ರೇಷ್ಮೆ ವಹಿವಾಟಿಗೆ ಆನ್​ಲೈನ್ ವ್ಯವಸ್ಥೆ ಸೇರಿ ಐದು ತಿದ್ದುಪಡಿ ಮಸೂದೆಗಳಿಗೆ ವಿಧಾನ ಪರಿಷತ್ ಬುಧವಾರ ಅಸ್ತು ಎಂದಿತು. ಗ್ರಾಮ ಸ್ವರಾಜ್ ಮತ್ತು ಪಂಚಾಯತ್​ರಾಜ್ ತಿದ್ದುಪಡಿ ವಿಧೇಯಕದ ಮೇಲೆ ಚರ್ಚೆ ನಡೆದ ಚರ್ಚೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತ ಕಾಂತರಾಜ್ ವರದಿಯನ್ನು ಸರ್ಕಾರ ಒಪ್ಪಿಲ್ಲ ಎಂದರು.
ಇದಕ್ಕೂ ಮುನ್ನ ಕಾಂಗ್ರೆಸ್​ನ ನಾಗರಾಜ್ ಯಾದವ್ ಮಾತನಾಡಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾಂತರಾಜ್ ನೇತೃತ್ವದ ಆಯೋಗದಿಂದ ವರದಿ ತರಿಸಿಕೊಳ್ಳಲು 175 ಕೋಟಿ ರೂ. ವೆಚ್ಚವಾಗಿದೆ. ಒಬಿಸಿ ಮೀಸಲು ನಿಗದಿಗೆ ಈ ವರದಿಯಲ್ಲಿನ ದತ್ತಾಂಶಗಳನ್ನು ಬಳಸಿಕೊಳ್ಳಲು ಅವಕಾಶವಿತ್ತು ಎಂದರು. ನ್ಯಾ.ಭಕ್ತವತ್ಸಲ ನೇತೃತ್ವದ ಸಮಿತಿ ನೀಡಿದ ವರದಿ ಆಧರಿಸಿ ಬಿಬಿಎಂಪಿಯಲ್ಲಿ ಒಬಿಸಿ ಮೀಸಲು ನಿಗದಿಪಡಿಸಿದೆ. ಉಳಿದ ಪ್ರಕ್ರಿಯೆಗಳು ಮುಗಿಸಿ ಸರ್ಕಾರ ಸಲ್ಲಿಸಲಿರುವ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದರೆ ಸೂಚಿಸಿದ ಕಾಲಮಿತಿಯೊಳಗೆ ಚುನಾವಣೆ ನಡೆಯಲಿದೆ ಎಂದರು.
ಚುನಾವಣೆ ಜತೆಗೆ ಮೀಸಲು ಪಟ್ಟಿ:ನ್ಯಾ.ಭಕ್ತವತ್ಸಲ ಸಮಿತಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದ ಸೀಮಾ ನಿರ್ಣಯ ಸಮಿತಿ ಅಂತಿಮ ವರದಿ ಸಲ್ಲಿಸಿದ ಬಳಿಕ ಜಿ.ಪಂ., ತಾ.ಪಂ. ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಮಾಧುಸ್ವಾಮಿ ಹೇಳಿದರು. ಜಿ.ಪಂ., ತಾ.ಪಂ. ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲು ನಿಗದಿಪಡಿಸಲಾಗುವುದು ಎಂಬ ಭರವಸೆ ನೀಡಿದರು. ಸೀಮಾ ನಿರ್ಣಯ ಸಮಿತಿ ವರದಿಯಂತೆ ಜಿಲ್ಲಾ ಪಂಚಾಯಿತಿಗೆ 2.30 ಲಕ್ಷ ಜನಸಂಖ್ಯೆ ನಿಗದಿ ಮಾಡಿದ್ದು, ಸದಸ್ಯ ಬಲವನ್ನು 25 ರಿಂದ 28ಕ್ಕೇರಿಸಲಾಗಿದೆ ಎಂದರು.
ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ರೈತರನ್ನು ಕಾನೂನಿನ ಕುಣಿಕೆಯಿಂದ ರಕ್ಷಿಸಲು ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕದಲ್ಲಿನ ಕೆಲವು ಲೋಪಗಳನ್ನು ಜೆಡಿಎಸ್​ನ ಎ.ಟಿ.ರಾಮಸ್ವಾಮಿ ಎತ್ತಿ ಹಿಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಪಾಲಿಕೆಗಳ ಮಿತಿಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿನ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಲಾದ ರೈತರ ವಿರುದ್ಧ ಕ್ರಿಮಿನಲ್ ವ್ಯವಹರಣೆ ತಪ್ಪಿಸಲು ಈ ತಿದ್ದುಪಡಿ ವಿಧೇಯಕ ತರಲಾಗುತ್ತಿದೆ ಎಂಬುದು ಸರ್ಕಾರದ ವಿವರಣೆಯಾಗಿತ್ತು. ಆದರೆ ಬಿಬಿಎಂಪಿ ಮತ್ತು ನಗರಪಾಲಿಕೆ ವ್ಯಾಪ್ತಿಯನ್ನು ಹೊರತುಪಡಿಸಿ ಭೂ ಕಬಳಿಕೆ ಕಾನೂನು ಅನ್ವಯವಾಗಲ್ಲ ಎಂದರೆ ಭೂಗಳ್ಳರಿಗೆ ಅನುಕೂಲವಾಗಲಿದೆ. ಏಕೆಂದರೆ ಬೆಳೆಯುತ್ತಿರುವ ನಗರದ ಹೊರ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವ್ಯಾಪಕವಾಗುತ್ತಿದೆ. ಬೆಂಗಳೂರನ್ನೇ ಉದಾಹರಣೆ ತೆಗೆದುಕೊಂಡರೆ ದೇವನಹಳ್ಳಿ, ಆನೇಕಲ್, ಹೊಸಕೋಟೆ ವ್ಯಾಪ್ತಿಯಲ್ಲಿನ ಸರ್ಕಾರಿ ಭೂ ಒತ್ತುವರಿ ದಾರರಿಗೆ ಅನುಕೂಲವಾಗುತ್ತದೆ. ಹೀಗಾಗಿ ವ್ಯಾಪ್ತಿ ನಿಗದಿ ಮಾಡಬೇಕೆಂಬುದು ರಾಮಸ್ವಾಮಿ ಆಗ್ರಹಿಸಿದರು.
ಸರ್ಕಾರದ ಸ್ಪಷ್ಟನೆ:ಈ ತಿದ್ದುಪಡಿ ವಿಧೇಯಕ ತರುವುದರಿಂದ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡ ಭೂಗಳ್ಳರಿಗೆ ಅನುಕೂಲವಾಗುತ್ತದೆ ಎಂದಾದರೆ, ಕೆಲವು ತಿದ್ದುಪಡಿ ಮಾಡಿ ವಿಧೇಯಕ ಮಂಡಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಬಿಬಿಎಂಪಿ ವ್ಯಾಪ್ತಿಯಿಂದ 18 ಕಿಮೀ, ನಗರ ಪಾಲಿಕೆಯ ವ್ಯಾಪ್ತಿಯಿಂದ 15 ಕಿಮೀ, ನಗರಸಭೆ ವ್ಯಾಪ್ತಿಯಿಂದ 10 ಕಿಮೀ, ಪುರಸಭೆ, ಪಟ್ಟಣ ಪಂಚಾ ಯಿತಿಯಿಂದ 3 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗದಂತೆ ತಿದ್ದುಪಡಿ ಮಸೂದೆ ಮಂಡಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೇ ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2022ಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯಿತು. ವಿಧಾನಪರಿಷತ್​ನಲ್ಲಿ ಅಂಗೀಕಾರ ರೂಪದಲ್ಲಿದ್ದ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಸದನದಲ್ಲಿ ಮಂಡಿಸಿ ಅನುಮೋದನೆ ಕೋರಿದರು. ಈ ನಡುವೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವನಿ ಮತದ ಮೂಲಕ ಈ ಕಾಯ್ದೆಗೆ ಅಂಗೀಕಾರ ನೀಡಿದರು.
ಇದಕ್ಕೂ ಮುನ್ನ ಕಾಂಗ್ರೆಸ್​ನ ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಶಿವಾನಂದ ಪಾಟೀಲ್ ಸೇರಿ ಹಲವು ಸದಸ್ಯರು ಈ ವಿಧೇಯಕ ಕಾನೂನು ಬಾಹಿರವಾಗಿದೆ. ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅದಕ್ಕೆ ಉತ್ತರ ನೀಡಿದ ಸಚಿವ ಆರಗ ಜ್ಞಾನೇಂದ್ರ, ಈ ವಿಧೇಯಕದಲ್ಲಿ ದುರುದ್ದೇಶ, ದುರುಪಯೋಗಕ್ಕೆ ಅವಕಾಶಗಳಿಲ್ಲ. ಸಂವಿಧಾನದ 25ನೇ ಅನುಚ್ಛೇದದ ಅಡಿ ಯಾವುದೇ ವ್ಯಕ್ತಿ ಸ್ವ ಇಚ್ಛೆಯಿಂದ ಮತಾಂತರಗೊಳ್ಳುವ ಸ್ವಾತಂತ್ರ್ಯ ಹಾಗೂ ಹಕ್ಕಿದೆ. ಆದರೆ ಅನೇಕ ಸಲ ಬಲವಂತ, ಆಮಿಷ್ನ ಒಡ್ಡಿ, ಸಾಮೂಹಿಕವಾಗಿ ಮತಾಂತರ ಮಾಡುವಂತಹ ಪ್ರಕರಣಗಳು ನಡೆಯುತ್ತವೆ. ಇದನ್ನು ತಪ್ಪಿಸಲು ಹಾಗೂ ತಪ್ಪಿತಸ್ಥರಿಗೆ ಏನು ಶಿಕ್ಷೆ ಎಂಬುದನ್ನು ಈ ವಿಧೇಯಕದಲ್ಲಿ ತರಲಾಗಿದೆ ಎಂದು ವಿವರಣೆ ನೀಡಿದರು.
ಕಾಯ್ದೆ ಪ್ರಕಾರ ಮತಾಂತರಗೊಳ್ಳುವ ವ್ಯಕ್ತಿ ಒಂದು ತಿಂಗಳ ಮೊದಲು ಜಿಲ್ಲಾಧಿಕಾರಿಗೆ ಮಾಹಿತಿ ಸಲ್ಲಿಸಬೇಕು. ಮತಾಂತರ ನಡೆಸುವ ಮೌಲ್ವಿಗಳು, ಫಾದರ್​ಗಳು ಸೇರಿದಂತೆ ಯಾವುದೇ ಧಾರ್ವಿುಕ ಗುರುಗಳು, ಮುಖಂಡರು ಕೂಡ ಮಾಹಿತಿ ಕೊಡಬೆಕು. ಬಳಿಕ ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಅನುಮತಿ ನೀಡುತ್ತಾರೆ. ಒಂದು ವೇಳೆ ಪರಿಶೀಲನೆಯಲ್ಲಿ ಬಲವಂತ, ಆಮಿಷಗಳಿಂದ ಮತಾಂತರದ ಪ್ರಯತ್ನಗಳಿದ್ದರೆ ಅದಕ್ಕೆ ಶಿಕ್ಷೆಗೆ ಒಳಪಡಿಸುತ್ತಾರೆ. ದೂರು ಬಂದ ಮಾತ್ರಕ್ಕೆ ಶಿಕ್ಷೆ ನೀಡುವುದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಉತ್ತರಕ್ಕೆ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
