ಪ್ರದೀಪ ಕೆಂಜಿಗೆ:ರಘು, ನೀವು, ತೇಜಸ್ವಿ, ಸ್ವಲ್ಪಮಟ್ಟಿಗೆ ನಾನು, ಒಟ್ಟಿಗೇ ಈ ಡಿಜಿಟಲ್ ತಂತ್ರಜ್ಞಾನಕ್ಕೆ ಪದಾರ್ಪಣೆ ಮಾಡಿದ್ದು. 1996 ಅಂತ ಕಾಣುತ್ತೆ. ಆಮೇಲೆ ನಾನು ನನ್ನ ದಾರಿ, ಆಸಕ್ತಿಗಳ ಬೆನ್ನುಹತ್ತಿ ಹೊರಟೆ. ನೀವಿಬ್ಬರು ಮಾತ್ರ ಪುಸ್ತಕ ಪ್ರಕಟಣೆ ಮೂಲಕ ಸತತವಾಗಿ ತಂತ್ರಾಂಶದ ಜಗತ್ತಿನಲ್ಲಿ ಓಡಾಡಿದಿರಿ. ತೇಜಸ್ವಿ ನಿಧನದ ನಂತರವೂ ನೀವು ಅದೇ ಹಾದಿಯಲ್ಲಿ ಸಾಗಿ ಸಾಕಷ್ಟು ಪರಿಣತಿ ಗಳಿಸಿದ್ದೀರಿ. ಹಾಗಾಗಿ ಹಿಂದಿನದ್ದು ಮಾತ್ರವಲ್ಲ, ಈಗಿನ ಕನ್ನಡ ತಂತ್ರಾಂಶ ಜಗತ್ತಿನ ಸವಾಲುಗಳ ಬಗ್ಗೆ ಸಹ ಮಾತಾಡಬಹುದು. ಅದಕೆ್ಕೆ ಪೀಠಿಕೆಯಾಗಿ ತೇಜಸ್ವಿಯವರಿಗಿದ್ದ ಇತರ ತಂತ್ರಜ್ಞಾನಗಳ ಬಗೆಗಿನ ಆಸ್ಥೆ ಕುರಿತು ಸ್ವಲ್ಪ ಹೇಳಿ.
ರಘು ಜನ್ನಾಪುರ:ಹೌದು, ನಾವೆಲ್ಲಾ ತಂತ್ರಾಂಶ ಯುಗಕ್ಕೆ ಕಣ್ತೆರೆದದ್ದು 1995-1996ರಲ್ಲಿ. ಆದರೆ, ತೇಜಸ್ವಿಯವರಿಗೆ ಮಾತ್ರ ಹುಟ್ಟಿನಿಂದಲೂ ವಿಜ್ಞಾನ, ತಂತ್ರಜ್ಞಾನದಲ್ಲಿ ಆಸಕ್ತಿ. ಥಿಯರಿ ಮಾತ್ರ ಅಲ್ಲ ಪ್ರ್ರಾಯೋಗಿಕ ಜ್ಞಾನವೂ ಇತ್ತು. ಎಲ್ಲಾ ಬಗೆಯ ಯಂತ್ರೋಪಕರಣಗಳನ್ನು ಅಭ್ಯಸಿಸುವುದು. ಬಿಚ್ಚಿ, ಜೋಡಿಸಿ ಅರ್ಥ ಮಾಡಿಕೊಳ್ಳುವುದು ಅವರ ನೆಚ್ಚಿನ ಹವ್ಯಾಸ. ಕ್ಯಾಮರಾಗಳು, ವಾಹನಗಳು, ಬಂದೂಕುಗಳು, ಮೀನು ಹಿಡಿಯುವ ಪರಿಕರಗಳು ಎಲ್ಲವೂ ಈ ಪರೀಕ್ಷೆಗೆ ಒಳಪಡುತ್ತಿದ್ದವು.
ಪ್ರದೀಪ:ಹೋ…., ನೀವು ಬಂದೂಕು, ವಾಹನಗಳ ವಿಚಾರ ಎತ್ತಿದ್ದು ಒಳ್ಳೆಯದಾಯಿತು. ನನಗೆ ತೇಜಸ್ವಿ ಪರಿಚಯ ಆಗುವ ಹೊತ್ತಿಗೆ ಬಂದೂಕು ಬಿಟ್ಟು, ರಾಡು ರೀಲು ಹಿಡಿದು ಮೀನು ಶಿಕಾರಿಗೆ ಶುರು ಮಾಡಿಕೊಂಡಿದ್ದರು. ಆದರೂ ಹಳೇ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದರು. ಹಾಗೇ, ಒಂದು .22 ರೈಫಲ್ ಅನ್ನು, ತಾವು ಪಂಡಿತ್ ರವಿಶಂಕರ್ ಅವರಿಂದ ಕೊಂಡಿದ್ದ ಸಿತಾರ್​ನಷ್ಟೇ ಜತನದಿಂದ ಜೋಪಾನ ಮಾಡುತ್ತಿದ್ದರು. ಅವರ ಕಾಡುಬೇಟೆಯಲ್ಲಿ ನೀವೇನಾದ್ರೂ ಕೈ ಜೋಡಿಸಿದ್ರಾ? ಯಾವುದಾದರೂ ರಸವತ್ತಾದ ಪ್ರಸಂಗ….?
ರಘು:ನಾನೂ ಅವರನ್ನು ಪ್ರಥಮ ಬಾರಿಗೆ ಭೇಟಿ ಆಗಿದ್ದು ಹೇಮಾವತಿ ನದಿ ದಡದಲ್ಲೇ; ಮೀನು ಹಿಡಿಯಲು ಬಂದಿದ್ದಾಗ. ಅಷ್ಟೊತ್ತಿಗೆ ಶಿಕಾರಿ ಕೈಬಿಟ್ಟಿದ್ದರು. ಆದರೂ ಮನೆಯಲ್ಲಿ ಒಂದು. 22ಛಿಞಜ್ಞಿಜಠಿಟ್ಞ ರೈಫಲ್ ಇತ್ತು. ಅದು ಅವರ ಕಾಲೇಜು ದಿನದ ಸೆಮಿ ಆಟೋಮೆಟಿಕ್ ಬಂದೂಕು. ಛೇ, ಇನ್ನು ಐದು ರೂಪಾಯಿ ಹೆಚ್ಚಿಗೆ ಕೊಟ್ಟಿದ್ದರೆ ಫುಲ್ ಆಟೋಮೆಟಿಕ್ ಬರುತ್ತಿತ್ತು ಕಣಯ್ಯ ಎಂದು ಪೇಚಾಡಿಕೊಳ್ಳುತ್ತಿದ್ದರು. ತಂದೆ ಕುವೆಂಪು ಅವರನ್ನು ಕೇಳಿದ್ದಕ್ಕೆ, ‘ನೀನೇನು ಶಿಕಾರಿ ಕಲಿಯುತ್ತಿದ್ದೀಯೋ ಅಥವಾ ಯುದ್ಧಭೂಮಿಗೆ ಹೊರಟಿದ್ದೀಯೋ, ಅಟೋಮೆಟಿಕ್ ಬಂದೂಕು ತಗೊಂಡು….?’ ಎಂದು ಜೋರು ಮಾಡಿದ್ದರಂತೆ. ಸದ್ಯ ಈ ಕೋವಿಯಾದರೂ ಕೊಡಿಸಿದರಲ್ಲಾ ಎಂದು ಸುಮ್ಮನೆ ಅದನ್ನೇ ಒಪ್ಪಿಕೊಂಡು ತಂದಿದ್ದರಂತೆ. ಪ್ರದೀಪ, ನೀವೇನಾದ್ರೂ ಅವರ ಜೊತೆ ಶಿಕಾರಿಗೆ ಹೋಗಿದ್ರಾ?
ಪ್ರದೀಪ:ಅವರ ಮರಣಕ್ಕೆ ಏಳೆಂಟು ವರ್ಷಗಳ ಹಿಂದೆ ನಡೆದ ಘಟನೆ. ಒಂದು ಸಂಜೆ ಫೋನ್ ಮಾಡಿ, ‘ಏ ಪ್ರದೀಪ ನಾಳೆ ಬೆಳಿಗ್ಗೆ 5 ಗಂಟೆಗೆ ನಿನ್ನ ಆ .22 ರೈಫಲ್ ತಗೊಂಡು ಬಾ. ಅದರ ಟೆಲಿಸ್ಕೋಪ್ ಸರಿ ಇದೆಯಾ ಚೆಕ್ ಮಾಡೋಣ, ಕಾಡುಕೋಳಿ ಹೊಡೆಯೋಣ’ ಅಂದರು. ಡಿಸೆಂಬರ್ ಕಾಲ, ಗದ್ದೆ ಕೊಯ್ಲು ಮುಗಿದು ಭತ್ತ, ಹುಲ್ಲನ್ನು ಲಾರಿಯಲ್ಲಿ ತುಂಬಿಸಿ ಮಂಗಳೂರಿಗೆ ರಾತ್ರಿಯಿಡೀ ಸಾಗಿಸುತ್ತಿರುತ್ತಾರೆ. ಆಗ ದಾರಿಯಲ್ಲಿ ಉದುರಿದ ಕಾಳನ್ನು ಹೆಕ್ಕಿ ತಿನ್ನಲು ಬೆಳಗಿನ ಜಾವ ಕಾಡುಕೋಳಿ, ಆಡ್ಲಹಕ್ಕಿಗಳು ಮುಖ್ಯ ರಸ್ತೆಗೇ ಬರುತ್ತವೆ. ಬೇಟೆಗಾರರಿಗೆ ಹಬ್ಬ. ಆ ದಿನ ನಾವು ಹೋದಾಗ ಸ್ವಲ್ಪ ತಡವಾಗಿತ್ತು; ವಾಹನ ಸಂಚಾರ ಪ್ರಾರಂಭವಾಗಿದ್ದರಿಂದ ಹೆಚ್ಚು ಪ್ರಾಣಿಪಕ್ಷಿಗಳು ಕಾಣಲಿಲ್ಲ. ತೇಜಸ್ವಿ ಒಂದು ಕೋಳಿ ಹೊಡೆದರು. ಮೂರು ಗುರಿ ತಪ್ಪಿದವು. ನಿನ್ನ ಕೋವಿಯ ಟೆಲಿಸ್ಕೋಪ್ ಪುನಃ ಅಡ್ಜೆಸ್ಟ್ ಮಾಡಬೇಕು ಅಂತ ಕಾಣುತ್ತೆ ಅಂದರು.
ಆದರೆ ನನಗೆ ಮಾತ್ರ ಒಂದು ಅನುಮಾನ, ಆ ದಿನ ಅವರು ನನ್ನ ಕೋವಿಯನ್ನಲ್ಲಾ, ಸ್ವತಃ ತಮ್ಮ ದೈಹಿಕ ಸಾಮರ್ಥ್ಯ ಪರೀಕ್ಷಿಸುತ್ತಿದ್ದರು ಅನ್ನಿಸುತ್ತೆ. ಬಹಳ ವರ್ಷಗಳಿಂದ ಬೇಟೆ ಆಡಿರಲಿಲ್ಲ. ಕೋವಿ ಹಿಡಿದಾಗ ಕೈ ನಡುಗುತ್ತದೆಯೇ? ಕಣ್ಣಿನ ದೃಷ್ಟಿ ಕುಗ್ಗಿದೆಯೇ ಎಂದು ಓರೆ ಹಚ್ಚಿ ನೋಡುತ್ತಿದ್ದರು.
ರಘು:ಅವರಿಗೆ ಬಂದೂಕಗಳ ರೀತಿಯಲ್ಲೇ ವಾಹನಗಳ ಬಗ್ಗೆ, ಯಂತ್ರ ವಿಜ್ಞಾನದ ಬಗ್ಗೆ ಅಪಾರ ಕುತೂಹಲ; ತುಂಬಾ ತಿಳಿದುಕೊಂಡಿದ್ದರು. ರಿಪೇರಿ ವ್ಯವಹಾರದಲ್ಲಿ ಎತ್ತಿದ ಕೈ. ಒಂದು ದಿನ ಅವರ ಮನೆಗೆ ಹೋಗಿ ನೋಡುತ್ತೇನೆ, ಅಚ್ಚಹೊಸ ಸ್ಕೂಟರ್, ಔMಔಅಂತ ಕಾಣುತ್ತೆ, ಶೆಡ್​ನಲ್ಲಿ ನಿಂತಿತ್ತು! ಅಬ್ಬಾ ಅಂತೂ ಮೂವತ್ತು ವರ್ಷದ ಮುದಿ ವೆಸ್ಪಾಗೆ ಮುಕ್ತಿ ಸಿಕ್ತು; ನಮ್ಮ ಬಾಸ್ ಇನ್ನು ಹೊಸ ಸ್ಕೂಟರ್​ನಲ್ಲಿ ಓಡಾಡುತ್ತಾರೆ ಎಂದುಕೊಂಡೆ. ಮಾರನೇ ದಿನದಿಂದ ಅವರ ಹಳೆಯ ಸ್ಕೂಟರ್​ನ ರಿಪೇರಿ ಯಾಗ ಶುರುವಾಯ್ತು. ನಾಲ್ಕು ಹೊಸ ಬಾಂಡಲಿಗಳನ್ನು ತಂದು ಸ್ವಲ್ಪ ಸೀಮೆ ಎಣ್ಣೆ ಸುರಿದು ನಟ್ಟು, ಬೋಲ್ಟು ಆದಿಯಾಗಿ ಎಲ್ಲಾ ಭಾಗಗಳನ್ನು ಬಿಚ್ಚಿ, ಅದರಲ್ಲಿ ಅದ್ದಿಟ್ಟರು. ಪ್ರತಿ ನಿತ್ಯ ಬೆಳಿಗ್ಗೆ ಎದ್ದರೆ ಅದರದ್ದೇ ಕೆಲಸ. ಹಳೇ ಭಾಗಗಳನ್ನು ಉಜ್ಜಿ ಉಜ್ಜಿ ಹೊಳಪು ಕೊಟ್ಟು ಅಚ್ಚ ಹೊಸದರಂತೆ ಮಾಡಿ ಜೋಡಿಸುವುದು, ನಿರುಪಯುಕ್ತವಾದವುಗಳನ್ನು ಎಸೆದು ಹೊಸ ಬಿಡಿಭಾಗವನ್ನು ತಂದು ಜೋಡಿಸುವುದು, ಸರಿಹೊಂದಲಿಲ್ಲ ಎಂದರೆ ಹೊಸ ಸ್ಕೂಟರ್ ಹತ್ತಿ ಚಿಕ್ಕಮಗಳೂರಿಗೆ ಓಡುವುದು, ಹೀಗೇ ಎರಡುಮೂರು ತಿಂಗಳು ನಡೆಯಿತು. ಅಂತೂ ಕೊನೆಗೊಂದು ದಿನ ಅದು ಬಣ್ಣಗಿಣ್ಣ ಬಳಿದುಕೊಂಡು ಸಿದ್ಧವಾಗಿ ನಿಂತಿತ್ತು. ಬಾ ಹೇಗಿದೆ ನೋಡೋಣ ಎಂದು ಕೂರಿಸಿಕೊಂಡು ಹೊರಟರು. ದಾರಿಯುದ್ದಕ್ಕೂ ಪುನಃ ಹೊಸ ಸೀರೆ ಉಟ್ಟ ಹಣ್ಣು ಮುದುಕಿಯ ಗುಣಗಾನ.
ಎರಡು ದಿನ ಆಗಿರಬಹುದು, ಮೂಡಿಗೆರೆಯಲ್ಲಿ ಅವರ ಹೊಸ ಸ್ಕೂಟರ್ ನೋಡಿದೆ. ಯಾರೋ ಬೇರೆಯವರು ಓಡಿಸುತ್ತಿದ್ದರು! ತೇಜಸ್ವಿ ತಮ್ಮ ವಾಹನಗಳನ್ನು ಎಂದೂ ಇತರರಿಗೆ ಕೊಡುತ್ತಿರಲಿಲ್ಲ. ಕುತೂಹಲದಿಂದ ವಿಚಾರಿಸಿದಾಗ, ತೇಜಸ್ವಿಯವರು ಈ ಸ್ಕೂಟರ್ ಮಾರಿದ್ದಾರೆ ಅಂತ ಗೊತ್ತಾಯ್ತು. ತೇಜಸ್ವಿ ಯಥಾಪ್ರಕಾರ ರಿಪೇರಿಯಾದ ತಮ್ಮ ಹಳೇ ಸ್ಕೂಟರ್​ನಲ್ಲಿ, ಹಿಂದಿನ ಆಸನ ಬಿಚ್ಚಿ ಒಂಟಿ ಸೀಟಿನ ಪ್ರಯಾಣ ಮುಂದುವರಿಸಿದರು. ಅಂತೂ ಹಳೇ ಸ್ಕೂಟರ್​ನ ರಿಪೇರಿ ಓಡಾಟಕ್ಕೆ ಬೇಕಾಗುತ್ತೆ ಅಂತ ಹೊಸ ಸ್ಕೂಟರ್ ಕೊಂಡಿದ್ದರು ಅಂತ ಕಾಣುತ್ತೆ!
ವಾಹನಗಳ ಬಗ್ಗೆ ಮಾತ್ರವಲ್ಲ, ಕೃಷಿಯಂತ್ರ, ಸಲಕರಣೆಗಳ ಜೊತೆಗೂ ಅವರ ಅನುಸಂಧಾನ (ಹಾಗೇ ಹೇಳಬಹುದೇನೊ) ಸತತವಾಗಿ ನಡೆಯುತ್ತಲೇ ಇರುತ್ತಿತ್ತು. ತಮ್ಮ ಸ್ಕೂಟರನ್ನೇ ಉಪಯೋಗಿಸಿಕೊಂಡು ಭತ್ತದ ಗದ್ದೆಗೆ ನೀರು ಹಾಯಿಸುವ ಪಂಪ್​ಗೇ ಸೆಟ್ ಮಾಡಿದ್ದರು. ಇದರ ವಿಶೇಷತೆ ಅಂದರೆ ಸ್ಕೂಟರಿನ ಮೂರನೇ ಗೇರ್​ನಲ್ಲಿ ನೀರು ಬಹಳ ರಭಸವಾಗಿ ಬರುತ್ತಿತ್ತು. ದೇವಯ್ಯನ ಬೀಸೇಕಲ್ಲು ರೀತಿಯಲ್ಲಿ ತೇಜಸ್ವಿಯವರ ಸ್ಕೂಟರ್ ನೀರಾವರಿ! ಇದನ್ನು ನೋಡಲು ಮೂಡಿಗೆರೆಯ ಮೆಕ್ಯಾನಿಕ್​ಗಳೂ ಬಂದಿದ್ದರು.
ಪ್ರದೀಪ:ಮೂಡಿಗೆರೆಯಲ್ಲಿ ಅಂದು ಇಂಟರ್​ನೆಟ್ ಬಂದಿಲ್ಲದ ಸಮಯದಲ್ಲೇ ಕನ್ನಡದ ವೆಬ್​ಸೈಟ್ ಮಾಡಲು ತೇಜಸ್ವಿ, ಅರವಿಂದ ಜೈನ್ ಎಂಬ ಯುವಕನ ಜೊತೆ ಒದ್ದಾಡುತ್ತಿದ್ದದ್ದೂ ನೋಡಿದ್ದೆ. ಅದರ ಬಗ್ಗೆ ಏನಾದರೂ….?
ರಘು:ಹೌದು, ಅವರಿಬ್ಬರೂ ಸೇರಿ ಕನ್ನಡ ವೆಬ್​ಸೈಟ್ ಒಂದನ್ನು ಸಿದ್ಧಗೊಳಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಇಂಟರ್​ನೆಟ್ ಸಂಪರ್ಕದ ವೈಫಲ್ಯದಿಂದಾಗಿ ಮುಂದುವರಿಸಲಾಗಲಿಲ್ಲ. ಮುಂದಿನ ದಿನಗಳಲ್ಲಿ ತೇಜಸ್ವಿಯವರ ಎರಡನೇ ಮಗಳು-ಅಳಿಯರಾದ ಈಶಾನ್ಯೆ ಮತ್ತು ಗ್ಯಾನೇಶ್ ಅವರು ಕುವೆಂಪು ಡಾಟ್ ಕಾಮ್ ಎಂಬ ವೆಬ್​ಸೈಟ್ ಆರಂಭಿಸಿದರು.
ಪ್ರದೀಪ:ರಘು, ನೀವು ಆವತ್ತಿನ ತೊಂದರೆಗಳನ್ನೆಲ್ಲಾ ಹೇಗೇಗೋ ನಿಭಾಯಿಸಿ, ಬಗೆಹರಿಸಿಕೊಂಡು ಬಂದಿದ್ದೀರಿ. ಆದರೆ, ಈಗಲೂ ತಂತ್ರಾಂಶ ಕ್ಷೇತ್ರ ವಿಸ್ತಾರವಾಗುತ್ತಿರುವ ಜೊತೆಜೊತೆಗೆ ಹೊಸಹೊಸ ಸವಾಲು, ಸಮಸ್ಯೆ ಎದುರಾಗುತ್ತಿರಬೇಕು. ಕನ್ನಡ ಭಾಷೆಯ ಬೆಳವಣಿಗೆ ದೃಷ್ಟಿಯಿಂದ ಅವನ್ನೆಲ್ಲಾ ಇಲ್ಲಿ ಸ್ವಲ್ಪ ವಿವರಿಸಬಹುದೇ?
ರಘು:ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಮೊಬೈಲ್​ಗಳು ಬಂದಿವೆ. ಅದರಲ್ಲಿ ಟೈಪಿಸುವುದೂ ಸುಲಭವಾಗಿದೆ. ಸ್ಮಾರ್ಟ್ ಮೊಬೈಲ್​ನಲ್ಲಿ ಎರಡು ಅಕ್ಷರ ಟೈಪಿಸಿದರೆ ಚ್ಠಠಿಟ್ಛಜ್ಝಿ ನಮಗೆ ಅವಶ್ಯವಿರುವ ಮೂರ್ನಾಲ್ಕು ಪದಗಳನ್ನು ತೋರಿಸುತ್ತದೆ, ಅದರಲ್ಲಿ ಬೇಕಾದುದನ್ನು ಆಯ್ಕೆ ಮಾಡಿದರೆ ಅದು ಬಂದು ಪರದೆಯ ಮೇಲೆ ಕೂರುತ್ತದೆ.ಇನ್ನೂ ಮುಂದೆ ಹೋಗಿ ಠಟಛಿಛ್ಚಿಜ ಠಿಟ ಠಿಛ್ಡಿಠಿ ಬಂದಿರುವುದರಿಂದ ನಾವು ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಹಾಗೇ ಅದೇ ಟೈಪ್ ಮಾಡಿಕೊಂಡು ಬಿಡುತ್ತದೆ.
ಇದನ್ನು ಬಳಸಿ ಫೇಸ್​ಬುಕ್, ಬ್ಲಾಗ್, ವ್ಯಾಟ್ಸ್​ಆಪ್​ನಲ್ಲಿ ಅನೇಕರು ಸಕ್ರಿಯರಾಗಿರುವರು. ಆದರೆ, ಇದರ ನ್ಯೂನತೆಯೆಂದರೆ ಆ ಪದದ ಫಾಂಟ್​ಗಳೆಲ್ಲಾ ಯೂನಿಕೋಡ್​ನಲ್ಲಿ ಇರುವುದು. ಅದನ್ನು ಮುದ್ರಣಾಲಯಕ್ಕೆ ಕಳಿಸುವಂತೆ ಅಣಿ ಮಾಡಲು ಇಂಗ್ಲೀಷ್ ಭಾಷೆಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳ ತಂತ್ರಜ್ಞರು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಕೋರಿಕೆ.
ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಮಳೆ ಮತ್ತಷ್ಟು ಜೋರು; ಹಲವು ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
