ಬೆಂಗಳೂರು:ಕೇಂದ್ರ ಸರ್ಕಾರದಿಂದ ಐದು ವರ್ಷದಲ್ಲಿ ಬರಬೇಕಾಗಿದ್ದ 1,87,867 ಕೋಟಿ ರೂ. ತೆರಿಗೆ ಪಾಲು ಪಡೆಯಲು ದೆಹಲಿಯಲ್ಲಿ ಫೆ.7 ರಂದು ಪ್ರತಿಭಟನೆ ನಡೆಸುತ್ತಿದ್ದೇವೆಯೇ ಹೊರತು, ಇದು ರಾಜಕೀಯ ಪ್ರತಿಭಟನೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಆರ್ಥಿಕ ತಾರತಮ್ಯ ಕುರಿತಂತೆ ವಿಧಾನಸೌಧದಲ್ಲಿ ಸುದೀರ್ಘ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಜ್ಯದಿಂದ ಕೇಂದ್ರಕ್ಕೆ ವಾರ್ಷಿಕ 4.30 ಲಕ್ಷ ಕೋಟಿ ರೂ. ತೆರಿಗೆ, ಸರ್‌ಚಾರ್ಜ್, ಸೆಸ್ ರೂಪದಲ್ಲಿ ಆದಾಯ ಕ್ರೋಢೀಕರಣವಾಗುತ್ತಿದೆ. ಅದರಲ್ಲಿ ಶೇ.12ರಷ್ಟನ್ನು ರಾಜ್ಯಕ್ಕೆ ಮರಳಿಸಲಾಗುತ್ತಿದ್ದು, ಐದು ವರ್ಷದಲ್ಲಿ ಅಂದಾಜು 1,87,867 ಕೋಟಿ ರೂ. ನಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳೆಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್‌ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜತೆ ನೀಡಲು ಪಕ್ಷಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಣ್ಣು ತೆರೆಸಲು ಹೋರಾಡುತ್ತಿದ್ದೇವೆ ಎಂದರು.
ನಿರಂತರ ಅನ್ಯಾಯ: ಭದ್ರಾ ಯೋಜನೆಗೆ 5300 ಕೋಟಿ ರೂ.ಗಳನ್ನು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈವರೆಗೆ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ. ಬರಗಾಲ ಪರಿಹಾರದ ಹಣವೂ ಇಲ್ಲ. 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ. ಕೇಂದ್ರ ಸರ್ಕಾರದ ಇಂಥ ತಾರತಮ್ಯ ಧೋರಣೆ, ಹಣಕಾಸು ಹಂಚಿಕೆಯ ತಾರತಮ್ಯದ ಬಗ್ಗೆ ದೇಶದ ಜನರ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಶಾಸಕರು, ಮೇಲ್ಮನೆ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದರು.
14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ 4.71 ಇದ್ದದ್ದು, 15ನೇ ಹಣಕಾಸು ಆಯೋಗದಲ್ಲಿ ಶೇ.3.64ಕ್ಕೆ ಇಳಿಕೆಯಾಯಿತು. ಅಂದರೆ ಶೇ.1.07 ಕಡಿಮೆಯಾಗಿದೆ. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರೂ. ರಾಜ್ಯಕ್ಕೆ ಕಡಿತವಾಗಿದೆ. ಇದು ಕೇವಲ ನಗದು ಹಂಚಿಕೆಯೊಂದರಲ್ಲೇ ಆಗಿರುವ ಅನ್ಯಾಯ. ಅಂದಾಜಿನ ಪ್ರಕಾರ ಈ ವರ್ಷ ರಾಜ್ಯಕ್ಕೆ ನಗದು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳು ಕಡಿಮೆಯಾಗಲಿದೆ ಎಂದರು.
ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು 5,495 ಕೋಟಿ ರೂ.ಗಳ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿತ್ತು. ಈ ಹಣವೂ ಬರಲಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಿರಸ್ಕರಿಸಿದರು. ಅಂತಿಮ ವರದಿಯಲ್ಲಿ 3,000 ಕೋಟಿ ರೂ. ಫೆರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ಸೇರಿ 6,000 ಕೋಟಿ ರೂ. ಗಳನ್ನು ಹೆಚ್ವರಿಯಾಗಿ ಕೊಡಲು ಶಿಫಾರಸು ಮಾಡಲಾಯಿತು. ಈ ಹಣವೂ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮೋದಿ ಪ್ರಧಾನಿ ಆದ ಬಳಿಕ 2020-21 ರಿಂದ 2025-26 ರವೆಗಿನ ಅವಧಿಗೆ ರಚನೆಯಾದ 15 ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ ಎಂದರು.2020-21 ಹಾಗೂ 2021-22 ನೇ ಸಾಲಿಗೆ ವಿಶೇಷ ಅನುದಾನ ಕೊಡದೆ ರಾಜ್ಯಕ್ಕೆ 11,495 ಕೋಟಿ ರೂ.ಗಳು ನಷ್ಟವಾಗಿದೆ. ಒಟ್ಟಾರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲಿನಲ್ಲಿ 73,593 ಕೋಟಿ ರೂ.ಗಳು ಕಡಿಮೆಯಾಯಿತು ಎಂದು ವಿವರಿಸಿದರು.
ಜಿಎಸ್‌ಟಿಯಲ್ಲೂ ರಾಜ್ಯಕ್ಕೆ ಅನ್ಯಾಯ:ಜಿಎಸ್‌ಟಿ ಜಾರಿಗೆ ಬಂದಾಗ ರಾಜ್ಯದ ತೆರಿಗೆ ಬೆಳವಣಿಗೆ ದರ ಶೇ.15 ಇತ್ತು. ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗುತ್ತದೆ ಎಂದು ಕೇಂದ್ರ ತಿಳಿಸಿತ್ತು. ತೆರಿಗೆ ನಷ್ಟಕ್ಕೆ ಪರಿಹಾರವಾಗಿ ನೀಡುತ್ತಿದ್ದ ಮೊತ್ತವನ್ನು 2022ರ ಜೂನ್‌ಗೆ ನಿಲ್ಲಿಸಿದ್ದಾರೆ. ರಾಜ್ಯಕ್ಕೆ ಜಿಎಸ್‌ಟಿಯಲ್ಲಿ ಅನ್ಯಾಯವಾಗುತ್ತಲೇ ಇದೆ ಎಂದು ಹೇಳಿದರು.ರಾಜ್ಯದಿಂದ ಪ್ರತಿವರ್ಷ ಕೇಂದ್ರಕ್ಕೆ 4,30,000 ಕೋಟಿ ರೂ ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ಬಿಟ್ಟರೆ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಮಗೆ ಈ ವರ್ಷ ತೆರಿಗೆ ಪಾಲಿನಲ್ಲಿ 37,252 ಕೋಟಿ, ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 13,005 ಕೋಟಿ ಸೇರಿ ಕೇವಲ 50,257 ಕೋಟಿ ರೂ. ರಾಜ್ಯಕ್ಕೆ ಬಂದಿದೆ. ರಾಜ್ಯಕ್ಕೆ ಇದು ಭೀಕರ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು.ರಾಜ್ಯದಿಂದ 100 ರೂ. ಕೇಂದ್ರಕ್ಕೆ ಹೋದರೆ ಅದರಲ್ಲಿ ನಮಗೆ 12- 13 ರೂ.ಗಳು ಮಾತ್ರ ವಾಪಸ್ ಬರುತ್ತಿದೆ. ಉಳಿದದ್ದು ಕೇಂದ್ರ ಸರ್ಕಾರವವೇ ಇಟ್ಟುಕೊಳ್ಳುತ್ತಿದೆ ಎಂದು ವಿವರಿಸಿದರು.2017-18ರಲ್ಲಿ ಕೇಂದ್ರದ ಬಜೆಟ್ ಗಾತ್ರ ₹21,46,735 ಕೋಟಿ ಇತ್ತು. ಆಗ ರಾಜ್ಯಕ್ಕೆ ₹31,908 ಕೋಟಿ, ಗ್ರಾಂಟ್ಸ್ ಹಾಗೂ ನಗದು ಹಂಚಿಕೆ ₹16,072 ಕೋಟಿ ಸೇರಿ ₹47,990 ಕೋಟಿ, 2018-19 ರಲ್ಲಿ ಕೇಂದ್ರ ಬಜೆಟ್ ಗಾತ್ರ ₹24,42,213 ಕೋಟಿಗೆ ವೃದ್ಧಿಸಿತು. ಆಗ ನಗದು ಹಂಚಿಕೆ ಸಿಕ್ಕಿದ್ದು 36,215 ಕೋಟಿ. ಇಲ್ಲಿ ₹2,000 ಕೋಟಿ ಕಡಿಮೆ ಆಯಿತು. 2023-24 ಸಾಲಿನಲ್ಲಿ ₹45,03,097 ಕೋಟಿ ಕೇಂದ್ರ ಬಜೆಟ್ ಆಗಿದ್ದು, ರಾಜ್ಯಕ್ಕೆ 50,257 ಕೋಟಿ ಮಾತ್ರ ಸಿಗುವ ಅಂದಾಜಿದೆ. ಡೆವಲ್ಯೂಷನ್ 2.2 ಯಿಂದ 2024-25ಕ್ಕೆ 1.23ಕ್ಕೆ ಇಳಿದಿದೆ. ಇದರಿಂದಾಗಿ ರಾಜ್ಯಕ್ಕೆ ಆಗುವ ಅನ್ಯಾಯದ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ತಿಳಿಸಿದರು.
ಸೆಸ್, ಸರ್ ಚಾರ್ಜ್ ಮೂಲಕ ಕೇಂದ್ರ ವಸೂಲಿ ಮಾಡುವ ತೆರಿಗೆಯಲ್ಲಿ ರಾಜ್ಯಗಳಿಗೆ ನಯಾ ಪೈಸೆ ಸಿಗುತ್ತಿಲ್ಲ. ಆದ್ದರಿಂದ 16 ನೇ ಹಣಕಾಸು ಆಯೋಗದ ಮುಂದೆ ಸೆಸ್ ಹಾಗೂ ಸರ್‌ಚಾರ್ಜ್ ನಲ್ಲೂ ಪಾಲು ಕೊಡಲೇಬೇಕು ಎಂದು ಒತ್ತಾಯಿಸುತ್ತೇವೆ ಎಂದು ಸಿಎಂ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + four =
Remember me
