ಬೆಂಗಳೂರು:ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಬಹು ನಿರೀಕ್ಷಿತ ಗೋಹತ್ಯೆ ನಿಷೇಧ ವಿಧೇಯಕ ಗುರುವಾರ ವಿಧಾನಪರಿಷತ್​ನಲ್ಲಿ ಮಂಡನೆಯೇ ಆಗಲಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಸುಗ್ರೀವಾಜ್ಞೆ ತರುವುದು ಅನಿವಾರ್ಯವಾಗಿದೆ. ವಿಧಾನಸಭೆಯಲ್ಲಿ ಬುಧವಾರ ವಿಧೇಯಕಕ್ಕೆ ಅನುಮೋದನೆ ಸಿಕ್ಕ ಬಳಿಕ ಗುರುವಾರ ಪರಿಷತ್​ನಲ್ಲಿ ಮಂಡಿಸಬೇಕಾಗಿತ್ತು. ಆದರೆ ಮಧ್ಯಾಹ್ನದ ಬಳಿಕ ಸಭಾಪತಿ ವಿರುದ್ಧದ ಅವಿಶ್ವಾಸದ ವಿಷಯದಲ್ಲಿ ಗದ್ದಲ ಉಂಟಾಗಿದ್ದರಿಂದ ಮಸೂದೆ ಮಂಡನೆಗೆ ಅವಕಾಶ ಸಿಗಲಿಲ್ಲ. ಸಭಾಪತಿಗಳ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ವಿಚಾರವನ್ನು ಚರ್ಚೆಗೆ ತರುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಪ್ರಸ್ತಾಪಿಸಿದರು.
ಅದರ ನಡುವೆಯೇ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸಂಬಂಧಪಟ್ಟ ಸಚಿವರಿಲ್ಲದ ಕಾರಣ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಶುಕ್ರವಾರ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ವಿಧೇಯಕ ಅಜೆಂಡಾದಲ್ಲಿರುವುದರಿಂದ ಇಂದೇ ಮಂಡಿಸಬೇಕು. ಶುಕ್ರವಾರದಿಂದ ಗ್ರಾಮ ಪಂಚಾಯಿತಿ ಚುನಾವಣೆ ಕೆಲಸ ಮಾಡಬೇಕಿರುವುದರಿಂದ ಸದನ ಕಲಾಪ ಅಂತ್ಯಗೊಳಿಸುವಂತೆಯೂ ಆಗ್ರಹಿಸಿದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿತ್ತು. ಆಯನೂರು ಮಂಜುನಾಥ್ ಮತ್ತೊಮ್ಮೆ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಅವಿಶ್ವಾಸ ನಿರ್ಣಯದ ಕುರಿತಂತೆ ಕಾನೂನು ತಜ್ಞರ ಸಲಹೆ ಪಡೆದು, ಕಡತದಲ್ಲಿ ಮಂಡಿಸಿದ್ದೇನೆ. ಅದನ್ನು ಸದಸ್ಯರಿಗೆ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. ಬಳಿಕ ಬಿಜೆಪಿ ಸದಸ್ಯರು ಗದ್ದಲವೆಬ್ಬಿಸಿದರು. ಅದರ ನಡುವೆಯೇ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದರು.
ಗುರುವಾರ ಬೆಳಗ್ಗೆ ವಿಧಾನಪರಿಷತ್​ಗೆ ಬಂದಿದ್ದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮಧ್ಯಾಹ್ನ ವಿಧೇಯಕ ಮಂಡನೆಯಾಗುವುದು ಗೊತ್ತಿದ್ದರೂ ಸದನಕ್ಕೆ ಬರದಿದ್ದೇಕೆಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಭೂ ಸುಧಾರಣಾ ಕಾಯ್ದೆಗೆ ಬೆಂಬಲ ನೀಡಿದ್ದ ಜೆಡಿಎಸ್, ಗೋಹತ್ಯೆ ನಿಷೇಧದ ವಿಚಾರದಲ್ಲಿ ಅದೇ ನಿಲುವು ತಳೆಯುವ ಖಚಿತತೆ ಇರಲಿಲ್ಲ. ವಿಧೇಯಕಕ್ಕೆ ಸೋಲಾಗಬಹುದೆಂದು ತಿಳಿದೇ ಸಚಿವರು ಗೈರಾಗಿದ್ದರೆಂದು ಹೇಳಲಾಗುತ್ತಿದೆ. ಪರಿಷತ್​ನಲ್ಲಿ ಪ್ರತಿಪಕ್ಷಗಳು ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಪಟ್ಟು ಹಿಡಿದರೆ ಸಭಾಪತಿ ಅದಕ್ಕೆ ಒಪು್ಪವ ಸಾಧ್ಯತೆ ಇತ್ತು. ಆ ರೀತಿಯಾದರೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ಅವಕಾಶ ಆಗುವುದಿಲ್ಲ. ಆದ್ದರಿಂದ ಚರ್ಚೆ ಮಾಡಿಯೇ ವಿಧೇಯಕ ಮಂಡನೆ ಮಾಡದಿರುವ ನಿರ್ಧಾರಕ್ಕೂ ಬರಲಾಗಿತ್ತು. ಹೀಗಾಗಿಯೇ ಅವಿಶ್ವಾಸದ ವಿಚಾರದಲ್ಲಿ ಬಿಜೆಪಿ ಗದ್ದಲ ಎಬ್ಬಿಸಿತೆಂದು ಹೇಳಲಾಗುತ್ತಿದೆ.
ಸುಗ್ರೀವಾಜ್ಞೆ ದಿಕ್ಕು:ವಿಧೇಯಕ ಪರಿಷತ್​ನಲ್ಲಿ ಮಂಡನೆಯಾಗದಿರುವುದರಿಂದ ಬಹುತೇಕ ಮುಂದಿನ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ತಂದು ಜಾರಿಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ವಿರುದ್ಧ ಅಸ್ತ್ರ:ಈ ವಿಷಯವನ್ನು ರಾಜಕೀಯವಾಗಿಯೂ ಬಳಸಿಕೊಳ್ಳುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯಾಗಿದೆ. ಗೋವುಗಳ ರಕ್ಷಣೆ ಉದ್ದೇಶದಿಂದ ತರಲಾದ ಗೋಹತ್ಯೆ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ, ಕಾಂಗ್ರೆಸ್​ನವರು ಸಭಾಪತಿ ಜತೆ ಸೇರಿಕೊಂಡು ವಿಧಾನಪರಿಷತ್​ನಲ್ಲಿ ಚರ್ಚೆಯಾಗದಂತೆ ನೋಡಿಕೊಂಡರು. ಇದರಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆಂದು ಬಿಂಬಿಸಲು ಬಿಜೆಪಿ ತೀರ್ವನಿಸಿರುವುದಾಗಿ ಮೂಲಗಳು ತಿಳಿಸಿವೆ.
ಸಭಾಪತಿ ನಿರಾಳ:ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗದ ಕಾರಣ ಮುಂದಿನ ಅಧಿವೇಶನದ ತನಕ ಕೆ. ಪ್ರತಾಪಚಂದ್ರ ಶೆಟ್ಟಿ ನಿರಾಳರಾಗಿದ್ದಾರೆ.
ರಾಷ್ಟ್ರಗೀತೆ ಗಮನಿಸದ ಸಭಾಪತಿ:ಸದನ ಮುಂದೂಡಿದ ನಂತರ ರಾಷ್ಟ್ರಗೀತೆ ಪ್ರಸಾರ ಮಾಡಲಾಯಿತು. ಆದರೆ, ಅದನ್ನು ಗಮನಿಸದ ಸಭಾಪತಿಗಳು ಪೀಠದಿಂದ ಎದ್ದು ನಡೆದರು. ಕೊನೆಗೆ ಇದರ ಅರಿವಾಗಿ ವಾಪಸ್ ಪೀಠದತ್ತ ಬಂದು ಗೌರವ ಸೂಚಿಸಿದರು.
ಸ್ಟಾಂಪ್ ವಿಧೇಯಕಕ್ಕೆ ಅನುಮೋದನೆ:ಜನರಿಗೆ ಕಡಿಮೆ ಬೆಲೆಯಲ್ಲಿ ಫ್ಲ್ಯಾಟ್ ಖರೀದಿಸುವುದಕ್ಕೆ ಅವಕಾಶವಾಗುವಂತೆ ಸ್ಟಾಂಪ್ ಡ್ಯೂಟಿಯನ್ನು ಕಡಿಮೆ ಮಾಡಿರುವ ಕರ್ನಾಟಕ ಸ್ಟಾಂಪ್ (2ನೇ ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್​ನಲ್ಲಿ ಅನುಮೋದನೆ ನೀಡಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
