ರಾಜ್ಯದಲ್ಲೀಗ ಬೇಸಿಗೆ ಆರಂಭಕ್ಕೂ ಮುನ್ನ ಚಳಿಗಾಲದಲ್ಲೇ ವಿದ್ಯುತ್ ಬೇಡಿಕೆ 12 ಸಾವಿರ ಮೆಗಾವಾಟ್ ಗಡಿದಾಟಿದೆ. ಈ ಪ್ರಮಾಣ ಬೇಸಿಗೆಯಲ್ಲಿ ಮತ್ತಷ್ಟು ಅಧಿಕವಾಗಲಿದೆಯಾದರೂ ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಏರಿಕೆಯಾಗಿದ್ದು, ಈ ಬಾರಿ ಲೋಡ್​ಶೆಡ್ಡಿಂಗ್ ಮಾಡದಿರಲು ಕೆಪಿಟಿಸಿಎಲ್ ನಿರ್ಧರಿಸಿದೆ.
ರಾಜ್ಯದಲ್ಲಿ ಕಳೆದ ವರ್ಷ ಸುರಿದ ಉತ್ತಮ ಮಳೆಯಿಂದಾಗಿ ಆಗಸ್ಟ್, ಸೆಪ್ಟೆಂಬರ್​ನಲ್ಲಿ 6,000 ಮೆ.ವಾ.ಗೆ ವಿದ್ಯುತ್ ಬೇಡಿಕೆ ಇಳಿಕೆ ಕಂಡಿತ್ತು. ಆಗ ಆರ್​ಟಿಪಿಎಸ್ ಮತ್ತು ಬಿಟಿಪಿಎಸ್ ಘಟಕಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಡಿಸೆಂಬರ್​ನಿಂದ ಪುನಃ ಬೇಡಿಕೆ ಏರುಮುಖವಾಗುತ್ತ ಬಂದಿದೆ. ಈಗ ಚಳಿಗಾಲವಿದ್ದರೂ ಜನವರಿಯಲ್ಲೇ ಬೇಡಿಕೆ ಪ್ರಮಾಣ 12,305 ಮೆ.ವಾ.ಗೆ ತಲುಪಿದೆ. ಬೇಸಿಗೆಯಲ್ಲಿ 12,500ರ ಗಡಿದಾಟಲಿದೆ ಎಂದು ಅಂದಾಜಿಸಲಾಗಿದೆ. 2019ರ ಮಾ.1ರಂದು 12,476 ಮೆ.ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು ಇದುವರೆಗಿನ ದಾಖಲೆ.
ಉತ್ಪಾದನೆಯೂ ಇದೆ: ಪ್ರಸ್ತುತ ಸೌರ, ಪವನ ಸೇರಿ ಇತರ ಮೂಲಗಳಿಂದ 6,583 ಮೆ.ವಾ., ಕೇಂದ್ರ ಜಾಲದಿಂದ 1,332 ಮೆ.ವಾ. ವಿದ್ಯುತ್ ಲಭ್ಯವಾಗುತ್ತಿದೆ. ಶಾಖೋತ್ಪನ್ನ ಮತ್ತು ಜಲಮೂಲದಿಂದ 3,800 ಮೆ.ವಾ., ಜಲಮೂಲ ವಿದ್ಯುತ್ ಕೇಂದ್ರಗಳಾದ ಶರಾವತಿಯಲ್ಲಿ 753 ಮೆ.ವಾ., ನಾಗ್ಝರಿಯಲ್ಲಿ 437 ಮೆ.ವಾ., ವರಾಹಿಯಲ್ಲಿ 326 ಮೆ.ವಾ. ಸೇರಿ ಜೋಗ್, ಸುಪಾ, ಶಿವಸಮುದ್ರ ಕೇಂದ್ರಗಳಿಂದ ತಕ್ಕಮಟ್ಟಿಗೆ ಬೇಡಿಕೆ ಸರಿದೂಗಿಸಲು ಸಮಸ್ಯೆಯಾಗುತ್ತಿಲ್ಲ. ಪ್ರಸ್ತುತ ಆರ್​ಟಿಪಿಎಸ್​ನ ಆರು ಘಟಕಗಳಿಂದ 931 ಮೆ.ವಾ., ಬಿಟಿಪಿಎಸ್​ನ ಎರಡು ಘಟಕಗಳಿಂದ 642 ಮೆ.ವಾ. ವಿದ್ಯುತ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ. ಯುಪಿಸಿಎಲ್​ನಿಂದಲೂ 292 ಮೆ.ವಾ. ವಿದ್ಯುತ್ ಲಭ್ಯವಾಗುತ್ತಿದೆ. ಕೆಪಿಸಿಎಲ್ ಮಾಹಿತಿಯಂತೆ 2019 ಡಿ.31ರ ವೇಳೆಗೆ ರಾಜ್ಯದಲ್ಲಿ 8,738.30 ಮೆ.ವಾ. ವಿದ್ಯುತ್ ಉತ್ಪಾದನೆಯಾಗಿದೆ.
ಪೀಕ್ ಲೋಡ್
ಕೆಪಿಟಿಸಿಎಲ್ ಅಂದಾಜಿಸಿರುವಂತೆ ಪ್ರತಿದಿನ ರಾಜ್ಯದಲ್ಲಿ 230ರಿಂದ 250 ಮಿಲಿ ಯೂನಿಟ್ ವಿದ್ಯುತ್​ಗೆ ಬೇಡಿಕೆಯಿದೆ. ಫೆಬ್ರವರಿ ಅಂತ್ಯದಿಂದ ಮಾರ್ಚ್ ಅಂತ್ಯದವರೆಗೆ ಪೀಕ್ ಲೋಡ್ ಎಂದು ಗುರುತಿಸಲಾಗಿದ್ದು, ಆ ಅವಧಿಯಲ್ಲಿ ಪ್ರತಿದಿನ 260 ಮಿ.ಯೂನಿಟ್​ಗಿಂತ ಹೆಚ್ಚಿನ ವಿದ್ಯುತ್ ಬೇಕಿದೆ. ಸದ್ಯ ಪ್ರತಿದಿನ ಸರಾಸರಿ 250 ಮಿ.ಯೂನಿಟ್​ಗೂ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಎರಡು ವರ್ಷಗಳಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿದ್ದು, ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಲಾಗುತ್ತಿದೆ.
ಕೈಹಿಡಿಯುತ್ತಿರುವ ಸೌರ, ಪವನ
ರಾಜ್ಯದಲ್ಲಿ ಸೌರ, ಪವನ ವಿದ್ಯುತ್ ಉತ್ಪಾದನೆ ಗರಿಷ್ಠ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಳವಾಗಿದ್ದರೂ ಸರಿದೂಗಿಸಲು ಕೆಪಿಸಿ ಆಡಳಿತ ಮಂಡಳಿಗೆ ಅನುಕೂಲಕರವಾಗಿದೆ. ಬೇಸಿಗೆಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಳವಾದಲ್ಲಿ ಮಾತ್ರ ಬೇಡಿಕೆಗೆ ತಕ್ಕಂತೆ ವಿದ್ಯುತ್ ನೀಡಲು ಸಾಧ್ಯವಾಗಲಿದೆ.
ರಾಜ್ಯಕ್ಕಾಗುವಷ್ಟು ಉತ್ಪಾದನೆ
ಶರಾವತಿ ಜಲವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ಸಮಸ್ಯೆಯಿರುವ ಕಾರಣ ಸಮರ್ಪಕವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಆದರೂ ಇತರೆಡೆಯಿಂದ ರಾಜ್ಯಕ್ಕಾಗುವಷ್ಟು ಉತ್ಪಾದನೆಯಾಗುತ್ತಿದೆ. ಹೀಗಾಗಿ ಈ ಬಾರಿ ಲೋಡ್​ಶೆಡ್ಡಿಂಗ್​ಗೆ ಅವಕಾಶವಿಲ್ಲ ಎನ್ನುತ್ತಾರೆ ಕೆಪಿಟಿಸಿಎಲ್ ಅಧಿಕಾರಿಗಳು.
ವಿದ್ಯುತ್ ಉತ್ಪಾದನೆ ಈ ಬಾರಿ ಹೆಚ್ಚಳವಾಗಿದ್ದು, ಲೋಡ್​ಶೆಡ್ಡಿಂಗ್ ಇರುವುದಿಲ್ಲ. ಮೇ ತಿಂಗಳವರೆಗೆ ರಾಜ್ಯಕ್ಕೆ ಒಟ್ಟು 13,250 ಮೆ.ವಾ. ಅವಶ್ಯಕತೆಯಿದೆ. ಅದಕ್ಕೆ ತಕ್ಕಂತೆ ಎಲ್ಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉತ್ತಮವಾಗಿಯೇ ಉತ್ಪಾದನೆಯಾಗುತ್ತಿದೆ.
| ರಾಮಾಂಜನೇಯಲು ಕೆಪಿಟಿಸಿಎಲ್ (ಎಲ್​ಡಿಸಿ) ಮುಖ್ಯ ಇಂಜಿನಿಯರ್
| ಶಿವಮೂರ್ತಿ ಹಿರೇಮಠ ರಾಯಚೂರು/ ಗಿರೀಶ್ ಗರಗ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 19 =
Remember me
