ನವದೆಹಲಿ:ಮೂರೇ ದಿನದಲ್ಲಿ ಹೊಸ ವಿದ್ಯುತ್ ಸಂಪರ್ಕ, ವಾಹನಗಳ ಚಾರ್ಜಿಂಗ್​ಗೆ ಪ್ರತ್ಯೇಕ ಮೀಟರ್, ಛಾವಣಿ ಸೋಲಾರ್ ಯೋಜನೆಗೆ ತಾಂತ್ರಿಕ ಕಾರ್ಯ ಸಾಧ್ಯತಾ ವರದಿಯಿಂದ ವಿನಾಯ್ತಿ ಸೇರಿದಂತೆ ಗ್ರಾಹಕರಿಗೆ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡ ವಿದ್ಯುತ್ (ಗ್ರಾಹಕರ ಹಕ್ಕುಗಳು) ಕಾಯ್ದೆ- 2020 ತಿದ್ದುಪಡಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಪರಿಷ್ಕೃತ ನಿಯಮಗಳ ಪ್ರಕಾರ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಕೇಂದ್ರ ವಿದ್ಯುತ್ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ವಿವರಿಸಿದ್ದಾರೆ.
ಸೌರ ಫಲಕ ಅಳವಡಿಕೆ ಬೇಗ-ಸುಲಭ
ರೂಫ್ ಟಾಪ್ ಸೋಲಾರ್ ಅಳವಡಿಕೆ ಸುಲಭದಲ್ಲಿ ಮತ್ತು ವೇಗವಾಗಿ ಆಗಲು ಅನುಕೂಲ ಆಗುವಂತೆ ನಿಯಮಗಳನ್ನು ಪರಿಷ್ಕರಣೆ ಮಾಡಲಾಗಿದೆ. ಅಂದರೆ 10 ಕಿ.ವ್ಯಾ. ಸಾಮರ್ಥ್ಯದವರೆಗಿನ ವ್ಯವಸ್ಥೆಗಳಿಗೆ ತಾಂತ್ರಿಕ ಕಾರ್ಯಸಾಧ್ಯತೆಯ ವರದಿಯಿಂದ ವಿನಾಯಿತಿ ನೀಡಲಾಗಿದೆ. 10 ಕಿ.ವ್ಯಾ.ಗಿಂತ ಹೆಚ್ಚಿನ ಸಾಮರ್ಥ್ಯದ ವ್ಯವಸ್ಥೆಗಳಿಗೆ ಕಾರ್ಯಸಾಧ್ಯತೆಯ ಅಧ್ಯಯನ ಪೂರ್ಣಗೊಳಿಸುವ ಅವಧಿಯನ್ನು ಈ ಹಿಂದಿನ 20 ದಿನಗಳಿಂದ 15 ದಿನಗಳಿಗೆ ಇಳಿಸಲಾಗಿದೆ. ಅಲ್ಲದೆ, ನಿಗದಿತ ಸಮಯದೊಳಗೆ ಅಧ್ಯಯನ ಪೂರ್ಣಗೊಳಿಸದಿದ್ದರೆ ಅನುಮೋದನೆ ನೀಡಲಾಗಿದೆ ಎಂದು ಪರಿಗಣಿಸಲೂ ಈ ತಿದ್ದುಪಡಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಐದು ಕಿ.ವ್ಯಾ. ಸಾಮರ್ಥ್ಯದ ವರೆಗಿನ ಮೇಲ್ಛಾವಣಿ ಸೋಲಾರ್ ಫೋಟೋವೋಲ್ಟಾಯಿಕ್ ವ್ಯವಸ್ಥೆಗಳಿಗೆ ಅಗತ್ಯವಾದ ವಿತರಣಾ ವ್ಯವಸ್ಥೆ ಬಲಪಡಿಸುವಿಕೆಯನ್ನು ವಿತರಣಾ ಕಂಪನಿಯೇ ಸ್ವಂತ ಖರ್ಚಿನಲ್ಲಿ ಮಾಡಿಕೊಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ರೂಫ್​ಟಾಪ್ ಸೋಲಾರ್ ಯೋಜನೆ ಕಾರ್ಯಾರಂಭಕ್ಕೆ ಪರವಾನಗಿ ವಿತರಿಸಲು ಇದ್ದ 30 ದಿನಗಳ ಗಡುವನ್ನು 15 ದಿನಗಳಿಗೆ ಇಳಿಸಲಾಗಿದೆ.
ಮುಖ್ಯಾಂಶಗಳು
1. ಮೂರೇ ದಿನದಲ್ಲಿ ಹೊಸ ವಿದ್ಯುತ್ ಸಂಪರ್ಕ
2. ವಾಹನ ಚಾರ್ಜಿಂಗ್​ಗೆ ಪ್ರತ್ಯೇಕ ಮೀಟರ್ ಪಡೆಯಬಹುದು
3. ದೂರುಗಳಿದ್ದಲ್ಲಿ ತ್ವರಿತವಾಗಿ ಹೊಸ ಮೀಟರ್
4. ವಸತಿ ಸಮುಚ್ಚಯಗಳಿಗೂ ಹೆಚ್ಚು ಆಯ್ಕೆಗಳ ಸೌಲಭ್ಯ
5. ಛಾವಣಿ ಸೌರ ವಿದ್ಯುತ್ ಯೋಜನೆಗೆ ನಿಯಮ ಸರಳ
ಇವಿ ವಾಹನಗಳಿಗಾಗಿ ಪ್ರತ್ಯೇಕ ಸಂಪರ್ಕ:ವಿದ್ಯುತ್​ಚಾಲಿತ ವಾಹನಗಳಿಗಾಗಿ ಗ್ರಾಹಕರು ಇನ್ನುಮುಂದೆ ಚಾರ್ಜಿಂಗ್ ಸ್ಟೇಷನ್​ಗಳಿಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆಯಲಿಕ್ಕೂ ಪರಿಷ್ಕೃತ ನಿಯಮದಲ್ಲಿ ಅವಕಾಶ ಮಾಡಿಕೊಡಲಾಗಿದೆ. ದೇಶದ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ತಗ್ಗಿಸುವ ಹಾಗೂ 2070ರ ವೇಳೆಗೆ ಇದನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಬಣ್ಣಿಸಲಾಗಿದೆ.
ಹೊಸ ಸಂಪರ್ಕ, ಬದಲಾವಣೆ ಎರಡೂ ಕ್ಷಿಪ್ರ:ಹೊಸ ಸಂಪರ್ಕ ಪಡೆಯುವುದು ಮಾತ್ರವಲ್ಲ, ಇರುವ ಸಂಪರ್ಕವನ್ನು ಬದಲಾವಣೆ ಮಾಡಿಕೊಳ್ಳಲಿಕ್ಕೂ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಈ ಪ್ರಕ್ರಿಯೆ ವೇಗವಾಗಿ ಮಾತ್ರವಲ್ಲದೆ, ಸುಲಭದಲ್ಲಿಯೂ ಆಗಲಿದೆ. ಹೊಸ ಸಂಪರ್ಕ ಪಡೆಯಲು ಮಹಾನಗರ ಪ್ರದೇಶಲ್ಲಿದ್ದ ಗಡುವನ್ನು ಏಳು ದಿನಗಳಿಂದ 3 ದಿನಕ್ಕೆ ಇಳಿಸಲಾಗಿದೆ. ಮುನ್ಸಿಪಲ್ ಪ್ರದೇಶದಲ್ಲಿ ಈ ಸಮಯವನ್ನು 15ರಿಂದ 7ಕ್ಕೆ ಗ್ರಾಮೀಣ ಪ್ರದೇಶದಲ್ಲಿ 30ರಿಂದ 15 ದಿನಗಳಿಗೆ ಇಳಿಸಲಾಗಿದೆ. ಆದರೆ, ಗುಡ್ಡಗಾಡು ಪ್ರದೇಶಗಳಲ್ಲಿ ಹೊಸ ಸಂಪರ್ಕ ಇಲ್ಲವೇ ಬದಲಿ ಸಂಪರ್ಕಕ್ಕೆ ಎಂದಿನಂತೆ 30 ದಿನಗಳೇ ಇರಲಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಬಳಕೆದಾರರಿಗೆ ಹೆಚ್ಚುವರಿ ಹಕ್ಕುಗಳು:ವಸತಿ ಕಾಲನಿಗಳ ಹಾಗೂ ಫ್ಲ್ಯಾಟ್​ಗಳ ಬಳಕೆದಾರರಿಗೆ ಪರಿಷ್ಕೃತ ನಿಯಮಗಳಿಂದಾಗಿ ಹೆಚ್ಚುವರಿ ಹಕ್ಕುಗಳು ಲಭಿಸಲಿವೆ. ಮೀಟರಿಂಗ್ ಹಾಗೂ ಬಿಲ್ಲಿಂಗ್​ನಲ್ಲಿ ಹೆಚ್ಚಿನ ಪಾರದರ್ಶಕತೆ ಹೊಂದುವಲ್ಲಿ ಗ್ರಾಹಕರಿಗೆ ಆಯ್ಕೆ ಅವಕಾಶ ನೀಡಲಾಗಿದೆ. ಅಂದರೆ, ಸಹಕಾರಿ ವಸತಿ ಸಮುಚ್ಚಯಗಳಲ್ಲಿ, ಬಹುಮಹಡಿ ಕಟ್ಟಡಗಳ, ವಸತಿ ಕಾಲನಿ ಇತ್ಯಾದಿಗಳ ಮಾಲೀಕರು ವಿತರಣಾ ಪರವಾನಗಿದಾರರಿಂದ ಪ್ರತಿಯೊಬ್ಬರಿಗೂ ವೈಯಕ್ತಿಕ ಸಂಪರ್ಕಗಳನ್ನು ಇಲ್ಲವೇ ಇಡೀ ಆವರಣಕ್ಕೆ ಏಕಬಿಂದು ಸಂಪರ್ಕ ಆಯ್ಕೆ ಮಾಡಿಕೊಳ್ಳಬಹುದು. ಏಕಬಿಂದು ಸಂಪರ್ಕದ ಮೂಲಕ ವಿದ್ಯುತ್ ಸರಬರಾಜು ಮಾಡುವ ಗ್ರಾಹಕರು ಮತ್ತು ವೈಯಕ್ತಿಕ ಸಂಪರ್ಕಗಳನ್ನು ಪಡೆಯುವವರಿಗೆ ವಿಧಿಸುವ ದರದಲ್ಲಿ ಸಮಾನತೆಯೂ ಇರಲಿದೆ.
ವಿತರಣಾ ಪರವಾನಗಿದಾರರಿಂದ ಪಡೆದ ವೈಯಕ್ತಿಕ ವಿದ್ಯುತ್ ಬಳಕೆ, ವಸತಿ ಸಂಘದಿಂದ ಒದಗಿಸಲಾದ ಬ್ಯಾಕಪ್ ವಿದ್ಯುತ್​ನ ವೈಯಕ್ತಿಕ ಬಳಕೆ ಮತ್ತು ವಿತರಣಾ ಪರವಾನಗಿದಾರರಿಂದ ಅಂಥ ವಸತಿಸಂಘಗಳ ಸಾಮಾನ್ಯ ಪ್ರದೇಶಗಳ ವಿದ್ಯುತ್ ಬಳಕೆಗೆ ಪ್ರತ್ಯೇಕ ಮೀಟರಿಂಗ್, ಬಿಲ್ಲಿಂಗ್ ಮತ್ತು ಸಂಗ್ರಹಕ್ಕೂ ಅವಕಾಶ ಇರಲಿದೆ.
ದೂರು ಪ್ರಕರಣಗಳಲ್ಲಿ ಹೆಚ್ಚುವರಿ ಮೀಟರ್
ಒಂದುವೇಳೆ ಬಳಕೆದಾರರು ತಮ್ಮ ವಿದ್ಯುತ್ ಬಳಕೆ ಸಂಬಂಧ ಮಾಹಿತಿ ಕುರಿತು ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿದರೆ ಅಂಥ ಸಂದರ್ಭಗಳಲ್ಲಿ ಸರಬರಾಜು ಕಂಪನಿಯು ದೂರು ಸ್ವೀಕರಿಸಿದ ಐದು ದಿನಗಳ ಒಳಗೆ ಪರಿಶೀಲನೆಗಾಗಿ ಹೆಚ್ಚುವರಿ ಮೀಟರ್ ಅಳವಡಿಸಬೇಕು. ಈ ಹೆಚ್ಚುವರಿ ಮೀಟರನ್ನು 3 ತಿಂಗಳ ವರೆಗೆ ಇರಿಸಿ ಪರಿಶೀಲಿಸಲು ಅವಕಾಶ ಇರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
