ಬೆಂಗಳೂರು:ರಾಜ್ಯದ ಬಹುತೇಕ ಜಿಲ್ಲೆಗಳು ನೆರೆ, ಅತಿವೃಷ್ಟಿ ಅಬ್ಬರಕ್ಕೆ ತತ್ತರಿಸಿದ್ದರೆ, ಸೋಮವಾರ ಶುರುವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಆರೋಪ-ಪ್ರತ್ಯಾರೋಪಗಳ ಕುಂಭದ್ರೋಣ ಮಳೆಯಾಗುವ ನಿರೀಕ್ಷೆಯಿದೆ.
ಒಂದು ವರ್ಷದಲ್ಲಿ ಎರಡು ಬಾರಿ ಸದನ ಸಮಾವೇಶಗೊಳ್ಳುವುದು ಕಡ್ಡಾಯ. ಅಂತೆಯೇ, ಬಜೆಟ್ ಅಧಿವೇಶನದ ಬಳಿಕ ಆರು ತಿಂಗಳು ಮುಗಿಯುವ ಹೊಸ್ತಿಲಲ್ಲಿ ಮಳೆಗಾಲದ ಅಧಿವೇಶನ ನಿಗದಿಯಾಗಿದೆ. ಸೋಮವಾರದಿಂದ ಸೆ.23ರವರೆಗೆ ಸದನವು ಮಾತಿನ ಮಲ್ಲಯುದ್ಧದ ಅಖಾಡ ಆಗಲಿದೆ. ಆಡಳಿತ, ಪ್ರತಿಪಕ್ಷಗಳ ಜತೆಗೆ ಪಕ್ಷೇತರರು ಜನರ ಸಂಕಷ್ಟ, ಅಭಿವೃದ್ಧಿ ಬಗ್ಗೆ ಚರ್ಚೆಗಿಂತ ರಾಜಕೀಯ ಲಾಭದ ಲೆಕ್ಕಾಚಾರದಲ್ಲೇ ಪರಸ್ಪರ ನಿಕಷಕ್ಕೆ ಒಡ್ಡಿಕೊಳ್ಳುವ ಸಂಭವವಿದೆ. ಅಧಿವೇಶನದ ಪೂರ್ವ ನಿದರ್ಶನಗಳು ಈ ಸಂಶಯಕ್ಕೆ ಪುಷ್ಟಿ ನೀಡುವಂತಿವೆ.
ಸಾಮಗ್ರಿ ಜೋಡಣೆಗೆ ವೇದಿಕೆ:ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಸದನದ ಮೊದಲ ದಿನ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮಂಗಳವಾರಕ್ಕೆ ಮುಂದೂಡಿಕೆಯಾಗಲಿದೆ. ಬಳಿಕ ಕಲಾಪ ಸಲಹಾ ಸಮಿತಿ ಸಭೆ ನಡೆಯಲಿದೆ. ಅಲ್ಪಾವಧಿ ಅಧಿವೇಶನದಲ್ಲಿ ಕಾರ್ಯ-ಕಲಾಪಗಳು ಸುಸೂತ್ರ ನೆರವೇರಿಸುವುದು ಈ ಸಭೆಯ ಉದ್ದೇಶ. ಆದರೆ, ಮೂರು ಪ್ರಮುಖ ಪಕ್ಷಗಳಿಗೆ ಈಗಾಗಲೇ 2023ರ ‘ಚುನಾವಣೆ ಜ್ವರ’ ಬಾಧಿಸಲಾರಂಭಿಸಿದ್ದು, ಗೆಲುವಿನ ಓಟಕ್ಕೆ ಬೇಕಾದ ಸಾಮಗ್ರಿ ಜೋಡಿಸಿಕೊಳ್ಳಲು ಅಧಿವೇಶನವನ್ನು ವೇದಿಕೆಯಾಗಿ ಮಾಡಿಕೊಳ್ಳಲಿವೆ. ಜನರ ಕಷ್ಟ-ಕಾರ್ಪಣ್ಯಗಳನ್ನು ಮುಂದಿಟ್ಟುಕೊಂಡು ಪರಸ್ಪರ ತಿವಿಯುವ, ಆ ಮೂಲಕ ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ಕಳುಹಿಸಲು ತಾಲೀಮು ನಡೆಸಿವೆ.
ರಾಜ್ಯದ ಪ್ರತಿ ಮೂಲೆ, ಹಳ್ಳಿಗಳಲ್ಲೂ ಜನಸ್ಪಂದನ ಸಮಾವೇಶ ಏರ್ಪಡಿಸಿ ಪಕ್ಷದ ವಿಜಯ ಯಾತ್ರೆಯನ್ನಾಗಿ ಪರಿವರ್ತಿಸುತ್ತೇವೆ. ತಾಕತ್ತಿದ್ದರೆ, ಧಮ್ ಇದ್ದರೆ ತಡೆಯಿರಿ ಎಂದು ನೇರವಾಗಿ ಸಿದ್ದರಾಮಯ್ಯಗೆ ಸೆಡ್ಡು ಹೊಡೆದಿದ್ದಾರೆ. ಸಿದ್ದರಾಮಯ್ಯ ಕೂಡ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಸದನದೊಳಗೆ ‘ತಾಕತ್ತು’ ಮಾರ್ದನಿಸುವುದಂತೂ ನಿಶ್ಚಿತ.
ತಾಕತ್ತಿನ ಮಾರ್ದನಿ:ಹಾನಗಲ್ ವಿಧಾನಸಭೆ ಉಪಚುನಾವಣೆ ಪ್ರಚಾರ ಕಣದಲ್ಲಿ ‘ಪ್ರತಿಪಕ್ಷ ನಾಯಕ ಬಾರಪ್ಪ, ಏನೆಲ್ಲ ಮಾಡಿಸ್ತೀವಪ್ಪ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ವರಿಷ್ಠರ ಸೂಚನೆ, ಸಹೋದ್ಯೋಗಿಗಳ ಒತ್ತಾಸೆಯಂತೆ ಸಿಎಂ ಬೊಮ್ಮಾಯಿ ತಮ್ಮ ಗಡಸು ಧ್ವನಿ ಸುಧಾರಿಸಿಕೊಂಡಿದ್ದು, ದೊಡ್ಡಬಳ್ಳಾಪುರದ ಕಾರ್ಯಕ್ರಮದಲ್ಲಿ ಥೇಟ್ ಸಿದ್ದರಾಮಯ್ಯ ಶೈಲಿಯಲ್ಲೇ ಗುಡುಗಿದ್ದಾರೆ.
ಸಮಜಾಯಿಷಿ, ಸಮರ್ಥನೆ ಜತೆಗೆ ತಕ್ಕ ಉತ್ತರ ನೀಡುವುದಕ್ಕೆ ‘ಮನೆ ಪಾಠ’ ಮಾಡಿಕೊಳ್ಳುವಂತೆ ಹಲವು ಸದಸ್ಯರಿಗೆ ಸಂದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಕಾಂಗ್ರೆಸ್ ಆಡಳಿತಾವಧಿ ಅಕ್ರಮಗಳು, ವೈಫಲ್ಯಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪ್ರತಿಪಕ್ಷದ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಲು ಕಮಲಪಡೆ ಸನ್ನದ್ಧವಾಗಿದೆ.
ಪ್ರತಿತಂತ್ರಕ್ಕೆ ಸಜ್ಜು:ಪ್ರತಿಪಕ್ಷಗಳು ಮುಟ್ಟಿಸಲಿರುವ ಬಿಸಿ ತಣ್ಣಗಾಗಿಸಲು ಆಡಳಿತ ಪಕ್ಷ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಕಿವಿಯಾಗುವ ಜತೆಗೆ ಹರಿಹಾಯುವುದಕ್ಕೂ ಭೂಮಿಕೆ ಸಿದ್ಧಪಡಿಸಿಕೊಂಡಿದೆ. ಜನರ ಬವಣೆ, ಪರಿಹಾರೋಪಾಯ, ರಾಜ್ಯದ ಅಭಿವೃದ್ಧಿ ನೆಲೆಯಲ್ಲಿ ವಿಪಕ್ಷಗಳು ನಡೆಸುವ ಚರ್ಚೆ, ಸಲಹೆ-ಸೂಚನೆಗಳಿಗೆ ಓಗೊಡಲು ತಯಾರಾಗಿದೆ. ಅದೇ ಕಾಲಕ್ಕೆ ಜನರ ಕುಂದು- ಕೊರತೆ, ಅಭಿವೃದ್ಧಿ ನೆಪದಲ್ಲಿ ರಾಜಕೀಯ ದಾಳ ಉರುಳಿಸಿದರೆ ಪ್ರತಿ ತಂತ್ರಗಾರಿಕೆಯನ್ನೂ ಬಿಜೆಪಿ ಹೆಣೆದುಕೊಂಡಿದೆ.
ಕಾಂಗ್ರೆಸ್​ಗೆ ಕರೆಂಟ್ ಶಾಕ್:ಕಾಂಗ್ರೆಸ್​ನ ನಲವತ್ತು ಪರ್ಸೆಂಟ್ ಆರೋಪಕ್ಕೆ ತಿರುಗೇಟು ನೀಡಲು ಯತ್ನಿಸುತ್ತಿರುವ ಬಿಜೆಪಿ ಒಂದಷ್ಟು ಅಸ್ತ್ರಗಳನ್ನು ಬತ್ತಳಿಕೆಗೆ ಸೇರಿಸಿಕೊಂಡಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕ ಪ್ರಕರಣವನ್ನು ಕೆದಕಿದೆ. ಇದೀಗ ಇಂಧನ ಇಲಾಖೆಯಲ್ಲೂ ಶರವೇಗದಲ್ಲಿ ದಾಖಲೆ ಹುಡುಕಾಟ ನಡೆದಿದೆ. ವಿದ್ಯುತ್ ಖರೀದಿ ಒಡಂಬಡಿಕೆಗಳ ಬಗ್ಗೆ ಸಾಕಷ್ಟು ಅನುಮಾನ ಕಂಡುಬಂದಿದ್ದು, ‘ಅನ್ಯರಿಗೆ’ ಅನುಕೂಲ ಮಾಡಿಕೊಡುವ ಉದ್ದೇಶ ಎದ್ದು ಕಾಣಿಸಿದೆ. ಇದರಿಂದಾಗಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಗಳ ಹೊರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಅಬ್ಬಬ್ಬ.. ಏನಿದು ಬೆಸ್ಕಾಂ ಸಿಬ್ಬಂದಿಯ ಸಾಹಸ!; ಸ್ವಲ್ಪ ಸಮಸ್ಯೆಯಾದರೂ ಪ್ರಾಣಕ್ಕೇ ಸಂಚಕಾರ…

ನಾಳೆ ರಾಜ್ಯದ ಎಲ್ಲೆಲ್ಲಿ ಜೋರು ಮಳೆ?; ಇಲ್ಲಿದೆ ಅಲರ್ಟ್ ವಿವರ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 + 15 =
Remember me
