|ವಿಲಾಸ ಮೇಲಗಿರಿಬೆಂಗಳೂರು
ಬಿಜೆಪಿ ಹೈಕಮಾಂಡ್ ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಅವರನ್ನು ಸಚಿವ ಸ್ಥಾನದಿಂದ ಮುಕ್ತಗೊಳಿಸಿದ ಮೇಲೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶಿಷ್ಯ ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶಿವನಹಳ್ಳಿ ಮಂಜುನಾಥ್ ಹೆಚ್ಚು ಕ್ರಿಯಾಶೀಲರಾಗಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿ ರಘುನಾಥ್ ಕೂಡ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್​ನಲ್ಲಿ ಎರಡು ಬಾರಿ ಸೋಲು ಕಂಡ ಮಾಜಿ ಮೇಯರ್ ಪದ್ಮಾವತಿ ಈ ಬಾರಿಯೂ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಆದರೆ, ಈ ನಡುವೆ 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಕೆ.ಗೋವಿಂದರಾಜ್ ಹೆಸರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಪದೇಪದೆ ಕಾಂಗ್ರೆಸ್ ಸೋಲು ಕಾಣುತ್ತಿರುವುದರಿಂದ ಹೊಸಮುಖ ಕಣಕ್ಕಿಳಿಸಿ ಲಾಭ ಪಡೆಯುವ ಆಲೋಚನೆಯೂ ಕೈ ನಾಯಕರಲ್ಲಿದೆ ಎನ್ನಲಾಗಿದೆ. ಜೆಡಿಎಸ್​ನಿಂದ ಹಿಂದೆ ಅಭ್ಯರ್ಥಿಯಾಗಿದ್ದ ಎಸ್.ಟಿ. ಆನಂದ್ ಈಗ ಕ್ರಿಯಾಶೀಲರಾಗಿಲ್ಲ. ಜೆಡಿಎಸ್ ಕ್ಷೇತ್ರಾಧ್ಯಕ್ಷ ತಿಮ್ಮೇಗೌಡ ಟಿಕೆಟ್ ಆಕಾಂಕ್ಷಿ. ಹಾಗಾಗಿ ಕಡೇ ಗಳಿಗೆಯಲ್ಲಿ ಯಾರಾದರೂ ಅಭ್ಯರ್ಥಿಯಾಗಬಹುದು.
ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಈ ಕ್ಷೇತ್ರದಲ್ಲಿ ಏಕಮೇವಾದ್ವಿತೀಯ ನಾಯಕ ಎಂಬಂತಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ರಾಮಚಂದ್ರೇಗೌಡ ಅವರ ಪುತ್ರ ಸಪ್ತಗಿರಿಗೌಡ, ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಪುತ್ರ ರಿತಿನ್ ಹೆಸರು ಚಾಲ್ತಿಯಲ್ಲಿವೆ. ಕೋಲಾರ ಜಿಲ್ಲೆ ಮೂಲದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಪ್ಲೆಕ್ಸ್​ಗಳು ಕ್ಷೇತ್ರದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಜೆಡಿಎಸ್ ಮುಖಂಡ ಸೋಮಶೇಖರ್ ಆಗಾಗ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಕಳೆದ ಬಾರಿ ಜಾ.ದಳದ ಸ್ಪರ್ಧಿಯಾಗಿದ್ದ ಸವೋದಯ ನಾರಾಯಣಸ್ವಾಮಿ ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಒಡ್ಡುವ ಸಾಧ್ಯತೆ ಹೆಚ್ಚಿವೆ. ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸ ಮಾಡುತ್ತಿರುವುದರಿಂದ ಡಿಎಂಕೆ/ಎಐಡಿಎಂಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲಕ್ಷಣ ಗೋಚರಿಸುತ್ತಿವೆ. ಜತೆಗೆ ಆಮ್ ಆದ್ಮಿ ಪಾರ್ಟಿ ಕೂಡ ಸ್ಪರ್ಧಿಸಲು ಕಾರ್ಯತಂತ್ರ ರೂಪಿಸುತ್ತಿದೆ.
ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕೈ ತೊರೆದಿರುವ ರೋಷನ್ ಬೇಗ್ ನಿಲುವು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜೆಡಿಎಸ್​ನಿಂದ ಸ್ಪರ್ಧಿಸಬಹುದು. ಇಲ್ಲವೇ ಮಗನನ್ನು ಕಣಕ್ಕಿಳಿಸಬಹುದು ಎಂಬ ಮಾತು ಕೇಳಿ ಬರುತ್ತಿವೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಗಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೇ ಅನುಮಾನ. ಬಿಜೆಪಿಗೆ ಇಲ್ಲಿ ಭದ್ರ ನೆಲೆ ಇಲ್ಲ. ಹಾಗಾಗಿ ಹಿಂದೆ ಈ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರವಣ ಮತ್ತೆ ಕಾರ್ಪೆರೇಟರ್ ಆಗಬೇಕೆಂಬ ಬಯಕೆಯಲ್ಲಿದ್ದು, ಪಕ್ಷದ ಪರದೆ ಮೇಲೆ ಟಿಕೆಟ್ ಆಕಾಂಕ್ಷಿಗಳು ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಹಾದೇವಪುರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಇವರು ಶಾಸಕರಾಗುವುದಕ್ಕೂ ಮೊದಲು ವಿಧಾನ ಪರಿಷತ್ ಸದಸ್ಯರಾಗಿದ್ದರು. ಮತದಾರರು, ಕಾರ್ಯಕರ್ತರ ಜತೆ ನಿರಂತರ ಸಂಪರ್ಕದಲ್ಲಿರುವುದರಿಂದ ಪ್ರಬಲ ಪ್ರತಿಸ್ಪರ್ಧಿಗಳು ಕಾಣುತ್ತಿಲ್ಲ. ಹಿಂದೆ ಮೂರು ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಎ.ಸಿ. ಶ್ರೀನಿವಾಸ್ ಬಿಜೆಪಿಯ ಲಿಂಬಾವಳಿ ವಿರುದ್ಧ ಗೆಲ್ಲುವುದು ಕಷ್ಟ ಎಂಬುದನ್ನು ಮನಗಂಡು ದೇವನಹಳ್ಳಿ ಕ್ಷೇತ್ರದ ಕಡೆಗೆ ಒಲವು ತೋರಿದ್ದಾರೆ ಎಂಬ ಮಾತಿದೆ. ಜೆಡಿಎಸ್ ಇಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬ ಜಿಜ್ಞಾಸೆಯಲ್ಲಿದೆ.
ಕಾಂಗ್ರೆಸ್​ನಿಂದ ವಲಸೆ ಬಂದು ಬಿಜೆಪಿ ಸೇರಿ ಗೆಲುವು ಸಾಧಿಸಿ ಸಚಿವರಾಗಿರುವ ಮುನಿರತ್ನ ಈ ಕ್ಷೇತ್ರದ ಪ್ರತಿನಿಧಿ. ಬಿಜೆಪಿ ನಾಯಕ ತುಳಸಿ ಮುನಿರಾಜುಗೌಡ ವಿಧಾನ ಪರಿಷತ್ ಸದಸ್ಯರಾದ ಮೇಲೆ ಕ್ಷೇತ್ರದ ಟಿಕೆಟ್ ಆಸೆ ಕೈಬಿಟ್ಟಂತಿದೆ. ಹಾಗಾಗಿ ಅಷ್ಟು ಸಕ್ರಿಯರಾಗಿಲ್ಲ. ಕಾಂಗ್ರೆಸ್​ನಿಂದ ಎಚ್.ಕುಸುಮಾ 2023ರಲ್ಲಿ ಮತ್ತೆ ಮುನಿರತ್ನ ವಿರುದ್ಧ ಕಣಕ್ಕಿಳಿಯುವುದು ಗ್ಯಾರಂಟಿಯಾಗಿದೆ. ಮುನಿರತ್ನ ಈ ಕ್ಷೇತ್ರವನ್ನು ತನ್ನ ಕಬ್ಜಾ ಮಾಡಿಕೊಂಡಿದ್ದಾರೆ. ಹಾಗಾಗಿ ಒಕ್ಕಲಿಗ ಮತಗಳನ್ನು ಪೂರ್ಣ ಪ್ರಮಾಣದಲ್ಲಿ ಕ್ರೋಡೀಕೃತಗೊಳಿಸಿಕೊಂಡು, ವಿದ್ಯಾವಂತ ಮತದಾರರನ್ನು ಓಲೈಸಿಕೊಳ್ಳುವಲ್ಲಿ ಕುಸುಮಾ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಯಕ್ಷಪ್ರಶ್ನೆ. ಕಳೆದ ಉಪ ಚುನಾವಣೆಯಲ್ಲಿ ವಿ.ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಈ ಬಾರಿ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ವರಿಷ್ಠರಿಗಷ್ಟೇ ಗೊತ್ತು!
ಯಾವ ಕ್ಷೇತ್ರದಲ್ಲಿ ಯಾರು ಪ್ರಬಲರು?:ಆರ್.ಆರ್.ನಗರ(ಮುನಿರತ್ನ), ಸಿ.ವಿ.ರಾಮನ್ ನಗರ(ಎಸ್.ರಘು), ರಾಜಾಜಿನಗರ(ಸುರೇಶ್​ಕುಮಾರ್), ಮಹಾದೇವಪುರ(ಅರವಿಂದ ಲಿಂಬಾವಳಿ) ಕ್ಷೇತ್ರಗಳು ಬಿಜೆಪಿ ಆಳ್ವಿಕೆಯಲ್ಲಿವೆ. ಗಾಂಧಿನಗರ(ದಿನೇಶ್ ಗುಂಡೂರಾವ್), ಶಿವಾಜಿನಗರ(ರಿಜ್ವಾನ್ ಅರ್ಷದ್), ಚಾಮರಾಜಪೇಟೆ(ಜಮೀರ್ ಅಹ್ಮದ್), ಶಾಂತಿನಗರ(ಎನ್.ಎ.ಹ್ಯಾರೀಸ್), ಸರ್ವಜ್ಞನಗರ(ಕೆ.ಜೆ.ಜಾರ್ಜ್) ಕ್ಷೇತ್ರಗಳು ಕಾಂಗ್ರೆಸ್ ಮುಷ್ಠಿಯಲ್ಲಿವೆ.
ಬಿಜೆಪಿ ಶಾಸಕ ಎಸ್.ರಘು ಈ ಬಾರಿಯೂ ಸ್ಪರ್ಧಿಸುವುದು ನಿಶ್ಚಿತ. ಸಿ.ವಿ.ರಾಮನ್ ನಗರ ಈ ಮೊದಲು ಶಾಂತಿನಗರಕ್ಕೆ ಸೇರಿತ್ತು. ರಘು ಎರಡು ಬಾರಿ ಶಾಂತಿನಗರ ಎಂಎಲ್​ಎ ಆಗಿದ್ದರು. ಸಿ.ವಿ.ರಾಮನ್ ನಗರ ಕ್ಷೇತ್ರವಾದ ಮೇಲೆ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ನಿರಂತರ ಗೆಲುವು ಸಾಧಿಸುತ್ತಿರುವುದರಿಂದ ಪ್ರತಿಸ್ಪರ್ಧಿಯಾಗಲು ಕಾಂಗ್ರೆಸ್​ನಿಂದ ಸ್ಪರ್ಧಿಸಲು ಯಾರೂ ಮುಂದೆ ಬರುತ್ತಿಲ್ಲ. ಕಾಂಗ್ರೆಸ್​ನಿಂದ ಸಿದ್ದರಾಮಯ್ಯ ಅವರ ಹಿಂಬಾಲಕರಾಗಿದ್ದ ಪಿ.ರಮೇಶ್ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ. ಜೆಡಿಎಸ್​ನಿಂದ ಅಭ್ಯರ್ಥಿಗಾಗಿ ತಲಾಶ್ ನಡೆದಿದೆ.
ಕಾಂಗ್ರೆಸ್​ನ ಮಾಜಿ ಸಚಿವ ಕೆ.ಜೆ.ಜಾರ್ಜ್ ಈ ಕ್ಷೇತ್ರದ ಹಾಲಿ ಪ್ರತಿನಿಧಿ. ಬಿಜೆಪಿಯಲ್ಲಿ ಪದ್ಮನಾಭರೆಡ್ಡಿ ಹಾಗೂ ಮಾಜಿ ಕಾರ್ಪೆರೇಟರ್ ಎಂ.ಸಿ. ಶ್ರೀನಿವಾಸ್ ತಕ್ಷಣಕ್ಕೆ ಕಾಣುವ ಮುಖಗಳು. ಕ್ಷೇತ್ರದಲ್ಲಿ ರಾಜೀ ರಾಜಕಾರಣ ನಡೆಯುವ ಬಗ್ಗೆ ಮಾತು ಕೇಳಿಬರುತ್ತವೆ. ಈ ಕ್ಷೇತ್ರದಲ್ಲಿ ಬಿಜೆಪಿ ಪದೇಪದೆ ಅಭ್ಯರ್ಥಿ ಬದಲು ಮಾಡುತ್ತಿರುವುದರಿಂದ ಭದ್ರನೆಲೆ ಇಲ್ಲವಾಗಿದೆ. ರಾಜ್ಯಸಭೆ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿಗೆ ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಕೊಟ್ಟು ಕಣಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ. ಜೆಡಿಎಸ್​ನಿಂದ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್​ನ ಎನ್.ಎ.ಹ್ಯಾರೀಸ್ ಶಾಂತಿನಗರ ಕ್ಷೇತ್ರದ ಶಾಸಕ. ಮಾಜಿ ಕಾಪೋರೇಟರ್ ಶಿವಕುಮಾರ್, ಮಾಜಿ ಮೇಯರ್ ಗೌತಮ್ ಕುಮಾರ್ ಬಿಜೆಪಿ ಟಿಕೆಟ್ ನಿರೀಕ್ಷಿಸಿದ್ದಾರೆ. ಶಿವಕುಮಾರ್ ಅಣ್ಣ ವಾಸುದೇವಮೂರ್ತಿ ಈ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಜೆಡಿಎಸ್​ಗೆ ಯಾರೆಂಬುದು ನಿರ್ಧಾರವಾಗಿಲ್ಲ. ಮೂಲಗಳ ಪ್ರಕಾರ ಮಹಿಳಾ ಅಭ್ಯರ್ಥಿ ಕಣಕ್ಕಿಳಿ ಸಲು ವರಿಷ್ಠರು ಆಲೋಚಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 5 =
Remember me
