|ಎನ್.ವೆಂಕಟೇಶ್ಚಿಕ್ಕಬಳ್ಳಾಪುರ
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಬಯಲುಸೀಮೆಯ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಇದೀಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್.
ಇದು ಮೊದಲಿನಿಂದಲೂ ಕಾಂಗ್ರೆಸ್​ನ ಭದ್ರಕೋಟೆ. ಸುಧಾಕರ್ ಸಹ ಕಾಂಗ್ರೆಸ್​ನಿಂದಲೇ ಎರಡು ಬಾರಿ ಜಯ ಗಳಿಸಿದ್ದರು. ಆದರೆ, 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಬೆಂಬಲಿಸಿದ ಸುಧಾಕರ್ ಬಳಿಕ ನಡೆದ ಉಪ ಚುನಾವಣೆಯಲ್ಲಿ ವೈಯಕ್ತಿಕ ವರ್ಚಸ್ಸಿನ ಮೂಲಕ ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ಅದು ದಾಖಲೆಯ 34,801 ಮತಗಳ ಅಂತರದಲ್ಲಿ. ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ, ಕೈ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡೂ ಮುಖಭಂಗ ಅನುಭವಿಸುವಂತೆ ಮಾಡಿದ್ದರು. ಇದೀಗ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಬಿಜೆಪಿ ಹಾಗೂ ಸುಧಾಕರ್ ಮುಂದಿದ್ದರೆ, ಕಳೆದುಕೊಂಡಿರುವ ಕ್ಷೇತ್ರವನ್ನು ಶತಾಯ ಗತಾಯ ಮತ್ತೊಮ್ಮೆ ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಈ ನಡುವೆ ಜೆಡಿಎಸ್ ಕೂಡ ಪ್ರಬಲ ಸ್ಪರ್ಧೆ ಒಡ್ಡುವುದು ನಿಚ್ಚಳವಾಗಿದೆ.
ಹಿಂದಿನ ಚುನಾವಣೆಗಳಿಗೆ ಹೋಲಿಸಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೆಚ್ಚಿಗೆ ಪೈಪೋಟಿ ಇರುವುದು ಕಂಡು ಬರುತ್ತದೆ. ಆಗಾಗ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಆದರೆ, ಈಗ ಸುಧಾಕರ್ ವರ್ಚಸ್ಸಿನಿಂದ ಬಿಜೆಪಿಯು ಮುನ್ನಡೆಯಲಿದೆ. ಎರಡು ಪಕ್ಷಗಳ ಬದಲಿಗೆ ತ್ರಿಕೋನ ಸ್ಪರ್ಧೆಯ ವಾತಾವರಣ ನಿರ್ವಣವಾಗಿದೆ. ಕ್ಷೇತ್ರದಲ್ಲಿ ಒಂದು ಉಪಚುನಾವಣೆ ಸೇರಿ 1957ರಿಂದ ಇಲ್ಲಿಯವರೆಗೆ 16 ವಿಧಾನಸಭಾ ಚುನಾವಣೆಗಳು ನಡೆದಿವೆ. ಕಾಂಗ್ರೆಸ್ 10 ಬಾರಿ, ಪಕ್ಷೇತರ ಅಭ್ಯರ್ಥಿಗಳು ನಾಲ್ಕು ಬಾರಿ, ಜೆಡಿಎಸ್ ಮತ್ತು ಬಿಜೆಪಿ ತಲಾ ಒಂದು ಬಾರಿ ಗೆದ್ದಿವೆ. 1978ರಿಂದ 2004ರವರೆಗೆ ಪರಿಶಿಷ್ಟ ಮೀಸಲು ಹೊಂದಿದ್ದ ಕ್ಷೇತ್ರವು 2008ರಿಂದ ಸಾಮಾನ್ಯ ವರ್ಗಕ್ಕೆ ಪರಿವರ್ತಿತಗೊಂಡಿದೆ. ಪ್ರಸ್ತುತ ಕ್ಷೇತ್ರದಲ್ಲಿ 1,00,902 ಪುರುಷರು ಮತ್ತು 1,03,321 ಮಹಿಳೆಯರು ಸೇರಿ 2,04,223 ಮತದಾರರಿದ್ದಾರೆ. ಇನ್ನು ಜಾತಿವಾರು ಲೆಕ್ಕಾಚಾರ ನೋಡಿದರೆ ಒಕ್ಕಲಿಗರು 42 ಸಾವಿರ, ಬಲಿಜ 41 ಸಾವಿರ, ಕುರುಬರು 27 ಸಾವಿರ, ಮುಸ್ಲಿಮರು 23 ಸಾವಿರ, ಪರಿಶಿಷ್ಟ ವರ್ಗ 33 ಸಾವಿರ ಮತ್ತು ಇತರೆ ವರ್ಗ 34 ಸಾವಿರ ಅಂದಾಜು ಮತದಾರರು ಇದೆ.

ಶಾಸಕ ಸ್ಥಾನದ ಅನರ್ಹತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಗೆಲುವು ಸಾಧಿಸಿದ್ದರ ಜತೆಗೆ ಕ್ಷೇತ್ರದಲ್ಲಿ ಬಿಜೆಪಿ ಗಟ್ಟಿ ನೆಲೆ ಹೊಂದಿರದ ಸಂದರ್ಭದಲ್ಲಿ ಉಪ ಚುನಾವಣೆ ಎದುರಿಸಿ ದಾಖಲೆ ಮತಗಳ ಅಂತರದಲ್ಲಿ ಜಯಶೀಲರಾಗಿ ಇದೀಗ ಸಚಿವಗಾದಿಯಲ್ಲಿ ಕುಳಿತಿದ್ದಾರೆ ಡಾ.ಕೆ.ಸುಧಾಕರ್. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಜೆಡಿಎಸ್ ಅಭ್ಯರ್ಥಿ. ಮೂರು ಬಾರಿಯ ಸ್ಪರ್ಧೆಯಲ್ಲಿ ಒಮ್ಮೆ ಗೆಲುವು, ಎರಡು ಬಾರಿ ಸೋಲುಂಡಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವ ನಿಲುವು ಬಹಿರಂಗವಾಗಿ ಪ್ರದರ್ಶಿಸಿದಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪರ್ಧೆಗೆ ಒಪ್ಪಿಸಿದ್ದಾರೆ.
ಇನ್ನು ಕಾಂಗ್ರೆಸ್​ನಲ್ಲಿ ಅಭ್ಯರ್ಥಿ ವಿಚಾರದಲ್ಲಿ ಸ್ಪಷ್ಟತೆ ಕಂಡುಬಂದಿಲ್ಲ. ಮಾಜಿ ಸಂಸದ ಆರ್.ಎಲ್.ಜಾಲಪ್ಪರ ಮೊಮ್ಮಗ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಘು, ಜಿ.ಪಂ.ಮಾಜಿ ಅಧ್ಯಕ್ಷ ಗಂಗರೆಕಾಲುವೆ ನಾರಾಯಣಸ್ವಾಮಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಮುಖಂಡ ಲಾಯರ್ ನಾರಾಯಣಸ್ವಾಮಿ ಸೇರಿ ಐದು ಮಂದಿ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಕ್ಷೇತ್ರಕ್ಕೆ ಹೊರಭಾಗದ ಪ್ರಭಾವಿ ನಾಯಕರನ್ನು ತಂದು ಚುನಾವಣೆಗೆ ನಿಲ್ಲಿಸುವ ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಎಐಸಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಸ್ಪರ್ಧೆಗೆ ವರಿಷ್ಠರು ಗ್ರೀನ್ ಸಿಗ್ನಲ್ ತೋರಿಸಿಲ್ಲ. ಮಾಜಿ ಶಾಸಕ ಕೊತ್ತೂರು ಮಂಜುನಾಥರನ್ನು ಕರೆ ತರಲು ಯತ್ನಿಸಲಾಗುತ್ತಿದೆ. ಇದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಹಿರಂಗವಾಗಿ ವಲಸಿಗರನ್ನು ಬೆಂಬಲಿಸುವುದಿಲ್ಲ ಎಂಬುದಾಗಿ ಘೊಷಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಣ ಸೃಷ್ಟಿ, ನಾಯಕತ್ವ ಭಿನ್ನಮತವು ಸಂಘಟನೆಗೆ ತಲೆ ನೋವಾಗಿ ಪರಿಣಿಮಿಸಿದೆ.

ವೈಯಕ್ತಿಕ ವರ್ಚಸ್ಸು:ಕ್ಷೇತ್ರದಲ್ಲಿ ಬಿಜೆಪಿ ವೋಟ್ ಬ್ಯಾಂಕ್ ತುಂಬಾ ಕಡಿಮೆ. ಈ ಸಂಖ್ಯೆ 5ರಿಂದ 7 ಸಾವಿರ ಇದ್ದಿರಬಹುದು. ಸುಧಾಕರ್​ಗಿಂತ ಮೊದಲು ಬಿಜೆಪಿಯಿಂದ ಸ್ಪರ್ಧಿಸಿದ್ದ ಬಹುತೇಕ ಅಭ್ಯರ್ಥಿಗಳು ಕನಿಷ್ಠ ಠೇವಣಿಯನ್ನೂ ಉಳಿಸಿಕೊಂಡಿಲ್ಲ. ಸುಧಾಕರ್ ವೈಯಕ್ತಿಕ ಬಲವೇ ಇಲ್ಲಿ ಬಿಜೆಪಿಗೆ ಗೆಲುವು ತಂದುಕೊಡಬೇಕಿದೆ. ಈಗಾಗಲೇ ಕ್ಷೇತ್ರದ ಪ್ರಚಾರದಲ್ಲಿ ಮೋದಿ ಅಲೆ, ರಾಜ್ಯ ಬಿಜೆಪಿ ಸರ್ಕಾರದ ಕೊಡುಗೆಗಳ ಸ್ಮರಣೆಯ ಜತೆಗೆ ಸಚಿವರ ವರ್ಚಸ್ಸಿನ ಅಸ್ತ್ರಗಳ ಬಳಕೆ ಪ್ರಾರಂಭವಾಗಿವೆ. ಚಿಕ್ಕಬಳ್ಳಾಪುರ ಉತ್ಸವ, ಶಿವೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ವಿವಿಧ ಸಮಾವೇಶಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದರ ಮೂಲಕ ಮತದಾರರನ್ನು ಸೆಳೆಯುವ ಕೆಲಸವಾಗುತ್ತಿದೆ. ಇದರ ನಡುವೆ ಉಪ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆ ಎರಡು ಪರಸ್ಪರ ಭಿನ್ನವಾಗಿರುತ್ತವೆ ಎನ್ನುತ್ತಿರುವ ಎದುರಾಳಿ ಅಭ್ಯರ್ಥಿಗಳು, ಮೊದಲಿನಿಂದಲೂ ಸ್ಥಳೀಯವಾಗಿ ಪಕ್ಷ ಗಳಿಸಿರುವ ವೋಟ್ ಬ್ಯಾಂಕ್ ಲೆಕ್ಕಾಚಾರದ ವಿಶ್ವಾಸದಲ್ಲಿ ಬಿಜೆಪಿಯನ್ನು ಎದುರಿಸಲು ಮುಂದಾಗಿದ್ದಾರೆ.
ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ

ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋಗಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು, ನಾಲ್ವರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
