|ಡಿಪಿಎನ್ ಶ್ರೇಷ್ಠಿಚಿತ್ರದುರ್ಗ
ಬಿಜೆಪಿಯ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಎದುರು ಚಿತ್ರದುರ್ಗ ಕ್ಷೇತ್ರದಲ್ಲಿ ಸದ್ಯಕ್ಕಂತೂ ಪ್ರಬಲ ಪ್ರತಿಸ್ಪರ್ಧಿಗಳು ಕಾಣಿಸುತ್ತಿಲ್ಲ. ಅವರು ಇನ್ನೂ 2-3 ಚುನಾವಣೆ ಎದುರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಹನುಮಲಿ ಷಣ್ಣುಖಪ್ಪ ಮತ್ತೆ ಕಣಕ್ಕಿಳಿಯಬಹುದು. ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಯಾವ ಪಕ್ಷದ ಅಭ್ಯರ್ಥಿ ಎಂಬ ಕುತೂಹಲವಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಜೆಡಿಎಸ್​ನ ವೀರೇಂದ್ರ ಪಪ್ಪಿ ಮತ್ತೆ ಅಖಾಡಕ್ಕಿಳಿಯಲಿದ್ದಾರೆ. ಮಾಜಿ ಎಂಎಲ್​ಸಿ ರಘು ಆಚಾರ್ ಕೂಡ ದುರ್ಗದ ಮೇಲೆ ಕಣ್ಣಿಟ್ಟಿದ್ದಾರಂತೆ!
ಹೊಸದುರ್ಗ ಕ್ಷೇತ್ರದಲ್ಲಿ ಮತ್ತೆ ಕಣಕ್ಕಿಳಿಯಬೇಕೆಂಬುದು ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಇಚ್ಛೆ. ಆದರೆೆ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ವಿಧಾನ ಪರಿಷತ್​ನ ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಪರ್ಧಾಕಾಂಕ್ಷಿಯಾಗಿದ್ದ ಲಿಂಗಮೂರ್ತಿ ಈಗ ವಿಧಾನಸಭೆ ಎಲೆಕ್ಷನ್​ಗೆ ಸಜ್ಜಾಗುತ್ತಿದ್ದಾರೆ. ಹೊಸದುರ್ಗದಲ್ಲಿ ಲಿಂಗಮೂರ್ತಿ ಸ್ಥಾಪಿಸಿರುವ ಜನಸಂಪರ್ಕ ಕಚೇರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿರುವುದು ವಿಶೇಷ. ಒಂದು ವೇಳೆ ಬಿಜೆಪಿ ಟಿಕೆಟ್ ಕೈ ತಪ್ಪಿದರೆ ಗೂಳಿಹಟ್ಟಿ ಶೇಖರ್ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಕಣಕ್ಕೆ ಇಳಿಯಲಿದ್ದಾರೆ. ವಿವಿಧ ಪಕ್ಷಗಳ ಹಲವು ಆಕಾಂಕ್ಷಿಗಳು ಅಖಾಡ ಸಿದ್ಧಮಾಡಿಕೊಳ್ಳುತ್ತಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದು, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಹಾಗೂ ಅಕ್ಟೋಬರ್​ನಲ್ಲಿ ಒಂದು ವಾರ ಜಿಲ್ಲೆಯಲ್ಲಿ ಹಾದು ಹೋಗಲಿರುವ ಭಾರತ್ ಜೋಡೊ ಪಾದಯಾತ್ರೆ, ರಾಹುಲ್ ಇಷ್ಟಲಿಂಗ ದೀಕ್ಷೆ ಪಡೆದಿ ರುವುದು ಪಕ್ಷದ ಬಲವರ್ಧನೆಗೆ ಪೂರಕವಾಗಲಿವೆ ಎಂಬ ಆಶಯ ಕಾಂಗ್ರೆಸ್ ವಲಯದಲ್ಲಿ ಗರಿಗೆದರಿದೆ. ಕೇಂದ್ರ ಮಂತ್ರಿ, ಮೂವರು ಎಂಎಲ್​ಸಿ ಹಾಗೂ ಐವರು ಶಾಸಕರನ್ನು ಹೊಂದಿರುವ ಬಿಜೆಪಿ, ಸಂಘಟನೆಯೊಂದಿಗೆ ಜಯಭೇರಿ ಬಾರಿಸಲು ಸಿದ್ಧತೆ ನಡೆಸಿದೆ.
ಹಿರಿಯೂರು ಚುನಾವಣಾ ಕಣದಲ್ಲಿ ಬಿಜೆಪಿ ಶಾಸಕಿ ಪೂರ್ಣಿಮಾ ಅವರನ್ನು ಮಾಜಿ ಸಚಿವ ಕಾಂಗ್ರೆಸ್ ಡಿ.ಸುಧಾಕರ್ ಮತ್ತೆ ಎದುರಿಸಲಿದ್ದಾರೆ. ಆದರೆ, ಕ್ಷೇತ್ರದಲ್ಲಿ ಕೈ ಟಿಕೆಟ್ ಮೇಲೆ ಇನ್ನೂ ಕೆಲವರು ಕಣ್ಣಿಟ್ಟು, ಓಡಾಡುತ್ತಿರುವುದು ಸುಧಾಕರ್​ಗೆ ಇರಿಸುಮುರಿಸು ತರಿಸಿದೆ. ಜೆಡಿಎಸ್​ನಿಂದ ಸ್ಪರ್ಧಿಸುತ್ತಾರೆಂದು ಹೇಳಲಾಗುತ್ತಿದ್ದ ವೀರೇಂದ್ರ ಪಪ್ಪಿ ಮತ್ತೆ ಚಿತ್ರದುರ್ಗದೆಡೆ ಮುಖ ಮಾಡಿದ್ದಾರೆನ್ನಲಾಗಿದೆ.
ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಮಾಜಿ ಸಚಿವ ಆಂಜನೇಯ ಹಾಗೂ ಬಿಜೆಪಿ ಶಾಸಕ ಎಂ.ಚಂದ್ರಪ್ಪ ನಡುವೆ ಮತ್ತೆ ಹಣಾಹಣಿ ಏರ್ಪಡಲಿದೆ. ಆದರೆ, ಜಿಪಂ ಮಾಜಿ ಸದಸ್ಯೆ ಸವಿತಾರಘು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವಿಧಾನಸಭೆ ಪ್ರವೇಶಿಸಲು ಆಸಕ್ತಿ ತೋರಿಸಿರುವ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ನಾನು ಯಾವುದೇ ಕಾರಣಕ್ಕೂ ಹೊಳಲ್ಕೆರೆಯಿಂದ ಮಾತ್ರ ಸ್ಪರ್ಧಿಸು ವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀರಂಗಯ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಎಣ್ಣೆ ನಗರಿ, ಸೈನ್ಸ್​ಸಿಟಿ ಖ್ಯಾತಿಯ ಚಳ್ಳಕೆರೆಯಲ್ಲಿ ಹ್ಯಾಟ್ರಿಕ್ ಸಾಧನೆ ತವಕದಲ್ಲಿ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಇದ್ದಾರೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ ಈಗ ಪಕ್ಷದಲ್ಲಿ ಇಲ್ಲ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ರವೀಶ್​ಕುಮಾರ್ ಮತ್ತೆ ಕಣಕ್ಕೆ ಇಳಿಯಬಹುದು. ಬಿಜೆಪಿ ಮತ್ತೆ ಅವಕಾಶ ನೀಡಿದರೆ ಕುಮಾರಸ್ವಾಮಿ, ಈ ಹಿಂದೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿ.ಪಿ.ಜಯಪಾಲಯ್ಯ ಹಾಗೂ ಇನ್ನೂ ಕೆಲವರ ಹೆಸರು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ. ಅಧಿಕಾರಿಗಳೂ ಕಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸಚಿವ ಬಿ.ಶ್ರೀರಾಮುಲು ಮತ್ತೆ ಮೊಳಕಾಲ್ಮೂರಿನಿಂದಲೇ ಕಣಕ್ಕೆ ಇಳಿಯಬಹುದು. ಒಂದು ವೇಳೆ ಅವರು ಮೊಳಕಾಲ್ಮೂರು ತೊರೆದರೆ ಅವರ ಆಪ್ತರಿಗೆ ಟಿಕೆಟ್ ಕೊಡಿಸಬಹುದೆಂಬ ಮಾತಿದೆ. ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಎಲ್ಲಿಂದ ಸ್ಪರ್ಧಿಸುತ್ತಾರೆಂಬ ಕುತೂಹಲವಿದೆ. ಅವರ ನಿರ್ಧಾರ ಇತರ ಪಕ್ಷದ ಪ್ರಮುಖರ ಪಕ್ಷಾಂತರಕ್ಕೆ ಕಾರಣವಾಗಲಿದೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ರಾಮುಲು ಬಳ್ಳಾರಿಗೆ ಹಿಂತಿರುಗಿದರೆ ಮೊಳಕಾಲ್ಮೂರಿಂದ ಸ್ಪರ್ಧೆಗೆ ಅವಕಾಶ ಸಿಗಬಹುದೆಂಬ ಎಣಿಕೆಯಲ್ಲಿ ಜಯಪಾಲಯ್ಯ ಕೂಡ ಇದ್ದಾರೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಡಾ.ಬಿ.ಯೋಗೇಶ್​ಬಾಬು ಹಾಗೂ ಮಾಜಿ ಶಾಸಕ ತಿಪ್ಪೇಸ್ವಾಮಿ ಕೈ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಎನ್.ವೈ.ಹನುಮಂತಪ್ಪ ಕುಟುಂಬ ಸದಸ್ಯರ ಹೆಸರೂ ಕೇಳಿ ಬರುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + four =
Remember me
