|ಮೃತ್ಯುಂಜಯ ಕಲ್ಮಠಗದಗ
ಗದಗ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ಹಾಲಿ ಶಾಸಕ ಎಚ್.ಕೆ.ಪಾಟೀಲ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿರುವುದರಿಂದ ಹೈವೋಲ್ಟೇಜ್ ಕಣ ಎಂದೇ ಬಿಂಬಿತವಾಗಿದೆ. ಮಹಾರಾಷ್ಟ್ರ ಉಸ್ತುವಾರಿ ಆಗಿ ಕಾರ್ಯನಿರ್ವಹಿಸಿದ್ದಲ್ಲದೆ, ಎಐಸಿಸಿ ಮುಖಂಡರೊಂದಿಗೆ ಒಡನಾಟ ಹೊಂದಿರುವ ಎಚ್.ಕೆ.ಪಾಟೀಲ ಅವರಿಗೆ 2023ರ ಚುನಾವಣೆ ಬಹುದೊಡ್ಡ ಸವಾಲು. ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಎಚ್.ಕೆ.ಪಾಟೀಲ ಸಾಕಷ್ಟು ಅನುದಾನ ತಂದರೂ ಕಳೆದ ಬಾರಿ ಅಲ್ಪಮತಗಳ ಅಂತರದಲ್ಲಿ ಗೆಲುವು ಸಾಧಿಸಿ ನಿಟ್ಟುಸಿರುಬಿಡಬೇಕಾಯಿತು. ಕೇವಲ 1850 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಯುವಮುಖಂಡ ಅನೀಲ ಮೆಣಸಿನಕಾಯಿ ಬಿಜೆಪಿಯಲ್ಲಿ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಅಲ್ಪಮತಗಳ ಸೋಲು ಅವರಿಗೆ ಈ ಬಾರಿ ಲಾಭವಾಗುವ ಲಕ್ಷಣಗಳಿವೆ. ಹಾಲಿ ಶಾಸಕ ಮತ್ತು ಪರಾಜಿತ ಅಭ್ಯರ್ಥಿ ಕ್ಷೇತ್ರದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಯುವ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಜತೆಗೆ ಉದ್ಯಮಿ ವಿಜಯಕುಮಾರ ಗಡ್ಡಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಕಮಲ ಪಡೆ ಶತಪ್ರಯತ್ನ ನಡೆಸಿದೆ. ಕಾಂಗ್ರೆಸ್​ಗೆ ಕ್ಷೇತ್ರ ಉಳಿಸಿಕೊಳ್ಳುವ ಪ್ರತಿಷ್ಠೆ ಎದುರಾಗಿದೆ.
ಕಳೆದ ಚುನಾವಣೆಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಹಾಗೂ ಕಾಂಗ್ರೆಸ್​ನ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟು, ರಾಮಣ್ಣ ಲಮಾಣಿ 29 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಶಾಸಕ ರಾಮಣ್ಣ ಲಮಾಣಿ ಕಾರ್ಯವೈಖರಿ ಬಗ್ಗೆ ಕ್ಷೇತ್ರದಲ್ಲಿ ಸದ್ಯ ಅಪಸ್ವರ ಕೇಳುಬರುತ್ತಿದೆ. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಬಗ್ಗೆಯೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಷ್ಟು ಒಲವಿಲ್ಲ. ಹೀಗಾಗಿ ಈ ಸಲ ಎರಡೂ ಪಕ್ಷಗಳು ಹೊಸಮುಖಗಳಿಗೆ ಮಣೆ ಹಾಕಬಹುದು ಎಂಬ ಮಾತಿದೆ. ಬಿಜೆಪಿ ವರಿಷ್ಠರು ಮೂರು ಅವಧಿಗೆ ಬಂಜಾರಾ ಸಮುದಾಯಕ್ಕೆ ಅವಕಾಶ ನೀಡಿದ್ದಾರೆ. ಈ ಸಲ ಜಾತಿ ಲೆಕ್ಕಾಚಾರದಲ್ಲಿ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಬಹುದೆಂಬ ಚರ್ಚೆ ಇದೆ. ಕ್ಷೇತ್ರದಲ್ಲಿ ಜನಸಂಪರ್ಕ ಹಾಗೂ ಸೇವಾ ಚಟುವಟಿಕೆಯಲ್ಲಿ ಹೆಚ್ಚು ತೊಡಗಿರುವ ಉದ್ಯಮಿ ಗುರುನಾಥ ದಾನಪ್ಪನವರ ಹೆಸರು ಕಮಲ ಪಡೆಯಲ್ಲಿ ಮುಂಚೂಣಿಯಲ್ಲಿದೆ. ಇವರಿಗೆ ಟಿಕೆಟ್ ಸಿಕ್ಕರೆ ಪಕ್ಷದ ಗೆಲುವು ಸುಲಭವಾಗಲಿದೆ ಎನ್ನಲಾಗಿದೆ. ಇನ್ನು, ಸಂಜಯ ಚವಡಾಳ, ಡಾ.ಚಂದ್ರು ಲಮಾಣಿ, ಭೀಮಸಿಂಗ್ ರಾಠೋಡ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಭರತ್ ನಾಯಕ ಕಾಂಗ್ರೆಸ್ ಟಿಕೆಟ್​ಗೆ ಪ್ರಯತ್ನ ನಡೆಸಿದ್ದಾರೆ.
ಗದಗ ಜಿಲ್ಲೆಯ ಮತದಾರರ ನಾಡಿಮಿಡಿತ ಸುಲಭವಾಗಿ ತಿಳಿಯುವಂತಹದಲ್ಲ ಎಂಬುದು ಕಳೆದೆರಡುವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. 2008ರ ಚುನಾವಣೆ ಯಲ್ಲಿ ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಗದಗ, ರೋಣ, ನರಗುಂದ ಮತ್ತು ಶಿರಹಟ್ಟಿ ಮೀಸಲು ಕ್ಷೇತ್ರಗಳಲ್ಲಿ ಕಮಲ ಪಡೆ ಪಾರಮ್ಯ ಸಾಧಿಸಿತ್ತು. ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಬೇಕೆಂದು ಅಖಾಡಕ್ಕಿಳಿದಿದ್ದ ಪ್ರಭಾವಿ ಮುಖಂಡ ಎಚ್.ಕೆ.ಪಾಟೀಲ ಸಹ ಪರಾಭವಗೊಂಡಿದ್ದರು. 2013ರ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದ್ದು ಗಮನಾರ್ಹ. 2018ರ ಚುನಾವಣೆಯಲ್ಲಿ ಕಮಲ ಮತ್ತೆ ಪುಟಿದೆದ್ದಿತು.
ನರಗುಂದ ಕ್ಷೇತ್ರದಲ್ಲಿ ಶಾಸಕ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ನೂರಾರು ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ, ಅರಣ್ಯ, ವಾರ್ತಾ ಇಲಾಖೆ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಇದೀಗ ಲೋಕೋಪಯೋಗಿ ಖಾತೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಬಿಜೆಪಿಯಿಂದ ಸಿ.ಸಿ.ಪಾಟೀಲ ಅವರಿಗೆ ಟಿಕೆಟ್ ನೀಡುವ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಪೈಪೋಟಿ ಶುರುವಾಗಿದ್ದು, ಮಾಜಿ ಶಾಸಕ ಬಿ.ಆರ್. ಯಾವಗಲ್, ಕೆಪಿಸಿಸಿ ಸಂಯೋಜಕ ಡಾ.ಸಂಗಮೇಶ ಕೊಳ್ಳಿ ಆಕಾಂಕ್ಷಿಗಳಾಗಿದ್ದಾರೆ.
ರೋಣ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಡಲಿದ್ದು, ಇಲ್ಲಿ ಒಂದು ಸಲ ಬಿಜೆಪಿಗೆ ಅವಕಾಶ ಸಿಕ್ಕರೆ ಮತ್ತೊಂದು ಸಲ ಕಾಂಗ್ರೆಸ್ ಗೆಲುವು ಸಾಧಿಸುತ್ತಾ ಬಂದಿದೆ. ಬಿಜೆಪಿ ಹಾಲಿ ಶಾಸಕ ಕಳಕಪ್ಪ ಬಂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಕ್ಷೇತ್ರದ ಕೆಲವೆಡೆ ಅಡ್ಡಗಾಲು ಆಗುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಪಕ್ಷ ಸಂಘಟನೆ ಮತ್ತು ಸಂಘದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ರವಿ ದಂಡಿನ, ಅಂದಪ್ಪ ಸಂಕನೂರ, ಶಾಸಕ ಕಳಕಪ್ಪ ಬಂಡಿ ಸಹೋದರ ಸಿದ್ದಣ್ಣ ಬಂಡಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್​ಗೆ ಆಕಾಂಕ್ಷಿಗಳು ಇಲ್ಲದ್ದರಿಂದ ಮಾಜಿ ಶಾಸಕ ಜಿ.ಎಸ್.ಪಾಟೀಲ ದಾರಿ ಸುಗಮವಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
