|ಮಂಜುನಾಥ ಅಂಗಡಿಧಾರವಾಡ
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕೂಡ ಒಂದು. ಇದು ಬಿಜೆಪಿಯ ಭದ್ರಕೋಟೆ. 2 ಬಾರಿ ಕ್ಷೇತ್ರವನ್ನಾಳಿರುವ ಬಿಜೆಪಿಯ ಅರವಿಂದ ಬೆಲ್ಲದ, ಹ್ಯಾಟ್ರಿಕ್ ಜಯದ ಉಮೇದಿಯಲ್ಲಿದ್ದಾರೆ. ತಂದೆ ಚಂದ್ರಕಾಂತ ಬೆಲ್ಲದ 3 ಬಾರಿ ಹಾಗೂ ಪುತ್ರ ಅರವಿಂದ 2 ಬಾರಿ ಶಾಸಕರಾಗಿದ್ದು, ‘ಬೆಲ್ಲದ’ ರುಚಿಗೆಡಿಸಲು ಕೈ ಪಡೆಯಲ್ಲಿ ರಣತಂತ್ರ ರೂಪಿಸಲಾಗುತ್ತಿದೆ.
ಕ್ಷೇತ್ರದಲ್ಲಿ 1983ರ ಚುನಾವಣೆ ಯಲ್ಲಿ ಕಾಂಗ್ರೆಸ್​ನ ಎಸ್.ಆರ್. ಮೋರೆ, 1985ರಲ್ಲಿ ಸ್ವತಂತ್ರ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ, 1989ರಲ್ಲಿ ಎಸ್.ಆರ್. ಮೋರೆ, 1994 ಮತ್ತು 1999ರಲ್ಲಿ ಬಿಜೆಪಿಯ ಚಂದ್ರಕಾಂತ ಬೆಲ್ಲದ, 2004ರಲ್ಲಿ ಎಸ್.ಆರ್. ಮೋರೆ, 2008ರಲ್ಲಿ ಮತ್ತೆ ಚಂದ್ರಕಾಂತ ಬೆಲ್ಲದ ಜಯ ಗಳಿಸಿದ್ದಾರೆ. ತಂದೆ ರಾಜಕೀಯದಿಂದ ದೂರ ಸರಿದು ಅರವಿಂದಗೆ ‘ಪಟ್ಟಾಭಿಷೇಕ’ ಮಾಡಿದ್ದು, 2013 ಮತ್ತು 2018ರಲ್ಲಿ ಅರವಿಂದ ಅಭೂತಪೂರ್ವ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್​ನ ಎಸ್.ಆರ್. ಮೋರೆ 3 ಬಾರಿ ಚುನಾಯಿತರಾಗಿ 2 ಬಾರಿ ಸಚಿವರೂ ಆಗಿದ್ದರು. ಚಂದ್ರಕಾಂತ ಬೆಲ್ಲದ 3 ಬಾರಿ ಗೆದ್ದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಅವರ ಮಗ ಅರವಿಂದ ಬೆಲ್ಲದ ಮುಖ್ಯಮಂತ್ರಿ ರೇಸ್​ನಲ್ಲಿ ಗುರುತಿಸಿಕೊಂಡು ಗಮನ ಸೆಳೆದಿದ್ದರು. ಇದು ಜಿಲ್ಲೆಯ ಪಕ್ಷದ ಹಿರಿಯ ಮುಖಂಡರನ್ನು ಕೆರಳಿಸಿದ್ದೂ ಉಂಟು.
2008 ಮತ್ತು 2013ರಲ್ಲಿ ಜೆಡಿಎಸ್​ನ ಇಸ್ಮಾಯಿಲ್ ತಮಟಗಾರ ಸ್ಪರ್ಧೆಯೊಡ್ಡಿದ್ದರು. 2018ರಲ್ಲಿ ಕಾಂಗ್ರೆಸ್ ಸೇರಿದ ಅವರು ಅರವಿಂದಗೆ ಪ್ರತಿಸ್ಪರ್ಧೆ ನೀಡಿದರೂ ಬಿಜೆಪಿ ರಣತಂತ್ರದಿಂದ ಮತ್ತೊಮ್ಮೆ ಕಮಲ ಅರಳಿತ್ತು. ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕಿತ್ತೂರ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಬೆಂಬಲಿಸಿದ್ದರೂ ಬಿಜೆಪಿ ಮೇಲೆ ಪರಿಣಾಮ ಬೀರಲಿಲ್ಲ. ಕ್ಷೇತ್ರದ ಬಿಜೆಪಿ ವಲಯದಲ್ಲಿ ಒಳಜಗಳ, ಟಿಕೆಟ್​ಗಾಗಿ ಪೈಪೋಟಿ ಇಲ್ಲದಿರುವುದು ಅರವಿಂದ ಬೆಲ್ಲದಗೆ ವರವಾಗಿ ಪರಿಣಮಿಸಿದೆ. ಈ ಮಧ್ಯೆ ಮೇಯರ್ ಈರೇಶ ಅಂಚಟಗೇರಿ ಆಕಾಂಕ್ಷಿ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಯುವ ಮತ್ತು ದೂರದೃಷ್ಟಿಯ ರಾಜಕಾರಣಿ ಹಾಗೂ ಸಂಘದ ಮುಖಂಡರೊಂದಿಗೆ ಒಡನಾಟ ಹೊಂದಿರುವ ಅರವಿಂದ ಹ್ಯಾಟ್ರಿಕ್ ಜಯ ದಾಖಲಿಸಲು ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರದ್ದೇ ಪ್ರಾಬಲ್ಯ. ನಂತರದ ಸ್ಥಾನ ಮರಾಠಾ, ಮುಸ್ಲಿಂ ಮತ್ತು ಒಬಿಸಿ ಮತದಾರರದ್ದು. ಹೀಗಾಗಿ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಅರವಿಂದಗೆ 2 ಬಾರಿ ಜಯ ಸಲೀಸಾಗಿದೆ.

ಹಿಂದಿನ ಫಲಿತಾಂಶ:2018 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅರವಿಂದ ಬೆಲ್ಲದ 96,848 ಮತ ಗಳಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​ನ ಇಸ್ಮಾಯಿಲ್ ತಮಟಗಾರ 55,975 ಮತ ಪಡೆದು ಸೋಲನುಭವಿಸಿದ್ದರು. ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಅಂದರೆ 40,487 ಮತಗಳ ಅಂತರದಿಂದ ಜಯ ಗಳಿಸಿದ ಸಾಧನೆ ಬೆಲ್ಲದ ಅವರದು.
ಜೆಡಿಎಸ್ ಸ್ಪರ್ಧೆಗೆ ಸಜ್ಜು:2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ನಗಣ್ಯವಾಗಿತ್ತು. ಕಾರಣ ಇಬ್ಬರು ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿತ್ತು. ಮೊದಲು ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕಿತ್ತೂರ ನಾಮಪತ್ರ ಊರ್ಜಿತವಾಗಿತ್ತು. ಮಾರನೇ ದಿನ ನಾಮಪತ್ರ ಸಲ್ಲಿಸಿದ ಗುರುರಾಜ ಹುಣಸೀಮರದ ನಾಮಪತ್ರ ಅಸಿಂಧುವಾಗಿತ್ತು. ಕೊನೇ ವೇಳೆಗೆ ಉಮೇದುವಾರಿಕೆ ವಾಪಸ್ ಪಡೆದಿದ್ದ ಅಲ್ತಾಫ್ ಕಿತ್ತೂರ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಈ ಬಾರಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದಗೆ ಟಿಕೆಟ್ ಪಕ್ಕಾ ಎನ್ನಲಾಗಿದೆ.
ಹಸ್ತದಿಂದ 10 ಅರ್ಜಿ:ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಾಳಯದ ಹೆಚ್ಚಿನ ನಾಯಕರು ತುದಿಗಾಲ ಮೇಲೆ ನಿಂತಿದ್ದಾರೆ. ಕಾಂಗ್ರೆಸ್​ನ 10 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ, ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ಕೀರ್ತಿ ಮೋರೆ (ಮಾಜಿ ಸಚಿವ ದಿ. ಎಸ್.ಆರ್. ಮೋರೆ ಪುತ್ರಿ), ಶರಣಪ್ಪ ಕೊಟಗಿ, ಬಸವರಾಜ ಮಲಕಾರಿ, ಪಿ.ಎಚ್. ನೀರಲಕೇರಿ, ಅಲ್ತಾಫ್ ಕಿತ್ತೂರ, ರಫೀಕ ಸಾವಂತನವರ, ಆರ್.ಕೆ. ಪಾಟೀಲ ಕಾಂಗ್ರೆಸ್ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿ:ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ, ಪ್ರಕೋಷ್ಠಗಳ ಆಯೋಜನೆ ಮೂಲಕ ಪಕ್ಷ ಬಲವರ್ಧನೆ.
ಕಾಂಗ್ರೆಸ್:ಟಿಕೆಟ್ ಆಕಾಂಕ್ಷಿಗಳಿಂದ ಕ್ಷೇತ್ರದಲ್ಲಿ ಸಂಚಾರ, ವೈಯಕ್ತಿಕ ವರ್ಚಸ್ಸು ವೃದ್ಧಿಯತ್ತ ಗಮನ.
ಜೆಡಿಎಸ್:ಪ್ರತಿ ಬೂತ್, ವಾರ್ಡ್​ಗಳಲ್ಲಿ ಸಂಘಟನೆ, ಕೊಳಚೆ ಪ್ರದೇಶಗಳಲ್ಲಿ ಜನ ಜಾಗೃತಿ, ಶಾಸಕರ ವಿರೋಧಿ ಅಲೆ ಬಿಂಬಿಸುವ ಯತ್ನ.
ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ!

ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − nine =
Remember me
