|ಮಂಜುನಾಥ ಟಿ. ಭೋವಿಮೈಸೂರು
ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕರ್ಮಭೂಮಿ ಹುಣಸೂರು ವಿಧಾನಸಭಾ ಕ್ಷೇತ್ರ ಚುನಾವಣೆಯ ಕಾವು ಪಡೆದುಕೊಳ್ಳುತ್ತಿದೆ. ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ದಂಗಲ್ ಇದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಚುನಾವಣಾ ಅಖಾಡವನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಅಭ್ಯರ್ಥಿ ಯಾರು ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ.
ಕ್ಷೇತ್ರದ ಚುನಾವಣಾ ಚರಿತ್ರೆಯ ಪುಟ ತಿರುವಿ ಹಾಕಿದರೆ ರಾಜಕೀಯದ ಏರುಪೇರಿನ ಗೆರೆ ಗೋಚರವಾಗುತ್ತವೆ. ಪಕ್ಷಕ್ಕಿಂತ ವ್ಯಕ್ತಿಗೆ ಇಲ್ಲಿನ ಜನರು ಮನ್ನಣೆ ನೀಡಿದ್ದಾರೆ. ಅರಸು ಪ್ರಭಾವಳಿ ಸಹ ದಶಕಗಳ ಕಾಲ ಪ್ರಭಾವ ಬೀರಿದೆ. ಇಲ್ಲಿಯ ಚುನಾವಣಾ ಇತಿಹಾಸವು ಪ್ರಾರಂಭವಾಗುವುದೇ ಅರಸು ಅವರಿಂದ. 26ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡಿದ ಡಿ.ದೇವರಾಜ ಅರಸು ಅವರು, ಇಲ್ಲಿಂದಲೇ ಅಪ್ರತಿಮ ನಾಯಕರಾಗಿ ಬೆಳೆದರು. ಮೊದಲ ಚುನಾವಣೆಯಿಂದ 1982ರವರೆಗೆ ಈ ಕ್ಷೇತದ ಮೇಲೆ ಪಾರುಪತ್ಯ ಸ್ಥಾಪಿಸಿದ್ದರು. 3 ತಿಂಗಳ ಅವಧಿ ಹೊರತುಪಡಿಸಿದರೆ, ಅವರು ಸತತವಾಗಿ 6 ಬಾರಿ ಗೆಲುವು ಸಾಧಿಸಿ ರಾಜ್ಯದ ಮುಖ್ಯಮಂತ್ರಿ, ರಾಷ್ಟ್ರೀಯ ನಾಯಕರಾಗಿ ದೇಶದ ಗಮನ ಸೆಳೆದವರು.
1952 ಮತ್ತು 1957ರ ಚುನಾವಣೆಗಳಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ಕ್ರಮವಾಗಿ ಎರಡು ಸಲ ಅರಸು ಹಾಗೂ ಎನ್.ರಾಚಯ್ಯ ಜಯ ಗಳಿಸಿದ್ದರು. 1962ರಲ್ಲಿ ಏಕಸದಸ್ಯ ಕ್ಷೇತವಾಗಿ ಪರಿವರ್ತನೆಯಾದ ಬಳಿಕ ಡಿ.ದೇವರಾಜ ಅರಸು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದರು. ಇದು ಕ್ಷೇತ್ರ ಮತ್ತು ಜಿಲ್ಲೆಯ ಚುನಾವಣಾ ಇತಿಹಾಸದಲ್ಲಿ ದಾಖಲೆಯಾಗಿದೆ.
ಇಂತಹ ಹಿನ್ನೆಲೆ ಹೊಂದಿರುವ ಹುಣಸೂರು ಕ್ಷೇತ್ರದ 2023ರ ಚುನಾವಣೆಗೆ ಹಾಲಿ ಶಾಸಕರಾಗಿರುವ ಎಚ್.ಪಿ. ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ನಿಶ್ಚಿತ. ಅಂತೆಯೆ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಮತ್ತು ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್​ಗೌಡ ಜೆಡಿಎಸ್ ಅಭ್ಯರ್ಥಿ ಎಂದು ಘೊಷಿಸಲಾಗಿದೆ.
ಬಿಜೆಪಿಗೆ ನಾಯಕತ್ವ ಕೊರತೆ:ಬಿಜೆಪಿಗೆ ಸ್ಥಳೀಯವಾಗಿ ನಾಯಕತ್ವ ಕೊರತೆ ಇದೆಯಾದರೂ ಆಕಾಂಕ್ಷಿಗಳಿಗೇಗೂ ಅಭಾವ ಇಲ್ಲ. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದ, ನಗರಸಭೆ ಸದಸ್ಯ ಗಣೇಶ್​ಕುಮಾರ್ ಸ್ವಾಮಿ, ಹಿರಿಯ ಮುಖಂಡ ಬಿ.ಎನ್.ನಾಗರಾಜಪ್ಪ, ತಾಲೂಕು ಅಧ್ಯಕ್ಷ ನಾಗಣ್ಣಗೌಡ ಟಿಕೆಟ್ ಬಯಸಿದ್ದಾರೆ. ಆದರೆ, ವರ್ಚಸ್ಸು, ಪ್ರಬಲ ನಾಯಕತ್ವ, ವೈಯಕ್ತಿಕ ಸಂಘಟನಾ ಬಲವಿಲ್ಲದ ಕಾರಣಕ್ಕೆ ಇವರಿಗೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂಬ ಮಾತು ಆ ಪಕ್ಷದಲ್ಲೇ ಕೇಳಿಬರುತ್ತಿದೆ. ಹೀಗಾಗಿ, ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ. ಹೀಗಾಗಿ, ಹೊರಗಿನವರು ಬರಬಹುದು ಎಂಬ ಮಾತು ಕೇಳಿಬರುತ್ತಿದೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈ ಬಾರಿ ಮನಸ್ಸು ಮಾಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಬಾರಿ ಹಳ್ಳಿಹಕ್ಕಿ ಇಲ್ಲ:ಉಪಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್ ಮತ್ತೊಂದು ಚುನಾವಣೆಗೆ ಇನ್ನೂ ಅಣಿಯಾಗಿಲ್ಲ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಜತೆಗೆ, ಬಿಜೆಪಿ ವಿರುದ್ಧವೇ ಕೆಂಡ ಕಾರುತ್ತಿದ್ದು, ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ.
ಜೆಡಿಎಸ್​ನಲ್ಲಿ ಒಳಬೇಗುದಿ:ಜೆಡಿಎಸ್​ನಲ್ಲಿ ಒಳಬೇಗುದಿಯ ಕಾವಿದೆ. ಕಳೆದ 3 ವರ್ಷಗಳಿಂದ ಪಕ್ಷದಿಂದ ದೂರ ಉಳಿದಿದ್ದ ಜಿ.ಟಿ.ದೇವೇಗೌಡ ಮತ್ತು ಹರೀಶ್​ಗೌಡ ಅವರು ಬಿಜೆಪಿ, ಕಾಂಗ್ರೆಸ್​ನೊಂದಿಗೆ ಸಖ್ಯ ಬೆಳೆಸಿಕೊಂಡು ರಾಜಕೀಯ ಲಾಭ ಪಡೆದುಕೊಂಡರು. ಅಪ್ಪ- ಮಗನಿಗೆ ಅಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಜೆಡಿಎಸ್​ಗೆ ವಾಪಸ್ ಆಗಿದ್ದಾರೆ. ಇದು ಪಕ್ಷದಲ್ಲಿ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಜಿಟಿಡಿ ವಿರೋಧಿ ಬಣದ ಮುಖಂಡರು ಮುಂದಿನ ಚುನಾವಣೆಯಲ್ಲಿ ಅಪ್ಪ- ಮಗನನ್ನು ಸೋಲಿಸುವುದಾಗಿ ನಿರ್ಧರಿಸಿದ್ದಾರೆ. ಇದು ಜೆಡಿಎಸ್​ಗೆ ಬಿಸಿ ತುಪ್ಪವಾಗಿದೆ.

ನಾಲ್ಕನೇ ಗೆಲುವಿಗೆ ಯತ್ನ:ನಾಲ್ಕನೇ ಬಾರಿ ಗೆಲುವಿಗಾಗಿ ಶಾಸಕ ಎಚ್.ಪಿ.ಮಂಜುನಾಥ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತುತ್ತಿದ್ದಾರೆ. 2008, 2013ರಲ್ಲಿ ಸತತ ಎರಡು ಬಾರಿ ಗೆದ್ದಿದ್ದ ಇವರು, 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್.ವಿಶ್ವನಾಥ್ ವಿರುದ್ಧ ಸೋತಿದ್ದರು. 2019ರ ಉಪಚುನಾವಣೆಯಲ್ಲಿ ಕಮಲ ಪಕ್ಷದ ಅಭ್ಯರ್ಥಿಯಾದ ವಿಶ್ವನಾಥ್​ರನ್ನು ಸೋಲಿಸುವ ಮೂಲಕ ಎಚ್.ಪಿ.ಮಂಜುನಾಥ್ ಕ್ಷೇತ್ರದಲ್ಲಿ 3ನೇ ಜಯ ದಾಖಲಿಸಿದರು. ಇದೀಗ ಅವರು ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಮತ್ತೊಂದೆಡೆ, ಹರೀಶ್​ಗೌಡ ಮತದಾರರ ಭೇಟಿಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
