|ಜಗನ್ನಾಥ್ ಕಾಳೇನಹಳ್ಳಿತುಮಕೂರು
ಏಷ್ಯಾದ ಅತಿದೊಡ್ಡ ಏಕಶಿಲಾಬೆಟ್ಟವಿರುವ ಮಧುಗಿರಿ ಕ್ಷೇತ್ರದಲ್ಲೀಗ ಚುನಾವಣಾ ಕಾವು ಏರಿದೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧವೇ ಬಹಿರಂಗವಾಗಿ ತೊಡೆತಟ್ಟಿ ‘ಮೈತ್ರಿಧರ್ಮ’ ಮುರಿದಿದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಸೋಲಿನ ಸೇಡುತೀರಿಸಿಕೊಳ್ಳಲು ಗೌಡರ ಕುಟುಂಬ ವ್ಯೂಹ ಹೆಣೆಯುತ್ತಿದೆ. ಸೇಡಿನ ರಾಜಕಾರಣದ ಅಖಾಡದಲ್ಲಿ ಈ ಬಾರಿ ‘ಭಾವನಾತ್ಮಕ’ಅಸ್ತ್ರ ಹೂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದ ರಾಜಣ್ಣಗೆ ಮಗ್ಗಲು ಮುರಿಯಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತ್ಯಸ್ತ್ರ ಬಳಸಲಿದ್ದು ಇದು ಎಚ್ಡಿಕೆ ವರ್ಸಸ್ ಕೆಎನ್ನಾರ್ ನಡುವಿನ ಕಣವಾಗಿ ಮಾರ್ಪಟ್ಟಿದೆ.
ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರದಲ್ಲಿ ಅಭಿವೃದ್ಧಿಪರ್ವದ ಹೊರತಾಗಿಯೂ ಕಳೆದ ಚುನಾವಣೆಯ ಸೋಲಿನ ಆಘಾತದಿಂದ ಚೇತರಿಸಿಕೊಂಡಿರುವ ರಾಜಣ್ಣ ‘ಇದು ನನ್ನ ಕೊನೆಯ ಚುನಾವಣೆ’ ಎಂದು ‘ಭಾವನಾತ್ಮಕ’ ದಾಳ ಉರುಳಿಸಿದ್ದಾರೆ. ಆರೋಗ್ಯದ ನೆಪ ಹೇಳಿ ಚುನಾವಣಾ ಕಣದಿಂದಲೇ ಹಿಂದೆ ಸರಿಯುವುದಾಗಿ ಘೊಷಿಸಿದ್ದ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಅವರನ್ನೇ ಮನವೊಲಿಸಿ ಮತ್ತೊಮ್ಮೆ ಕಣಕ್ಕಿಳಿಸುವ ಮೂಲಕ ಕುಮಾರಸ್ವಾಮಿ ‘ಚೆಕ್’ ನೀಡಿರುವುದು ಕ್ಷೇತ್ರದಲ್ಲೀಗ ಕದನ ಕುತೂಹಲ ಹುಟ್ಟುಹಾಕಿದೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಸಾಮಾನ್ಯ ಕ್ಷೇತ್ರವಾಯಿತು. ಕ್ಷೇತ್ರ ಪ್ರತಿನಿಧಿಸುತ್ತಿದ್ದ ಜಿ.ಪರಮೇಶ್ವರ್ ನೆರೆಯ ಕೊರಟಗೆರೆಯತ್ತ ಮುಖಮಾಡಿದರೆ, ಕಾಂಗ್ರೆಸ್ ತೊರೆದು ಜೆಡಿಎಸ್ ಕೈಹಿಡಿದಿದ್ದ ರಾಜಣ್ಣ 2004ರಲ್ಲಿ ಬೆಳ್ಳಾವಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಬೆಳ್ಳಾವಿ ಕ್ಷೇತ್ರ ಅಸ್ತಿತ್ವ ಕಳೆದುಕೊಂಡ ಬಳಿಕ ಮತ್ತೆ ಮಾತೃಪಕ್ಷಕ್ಕೆ ಮರಳಿದ ರಾಜಣ್ಣ ರಾಜಕೀಯ ಭವಿಷ್ಯ ಅರಸಿ ಮಧುಗಿರಿಗೆ ಕಾಲಿಟ್ಟರು.
ಡಿಸಿಸಿ ಬ್ಯಾಂಕ್​ನಲ್ಲಿ ಹಿಡಿತ ಸಾಧಿಸಿ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ರಾಜಣ್ಣ ಜಾತಿಬಲವಿಲ್ಲದಿದ್ದರೂ 2008ರ ಸಾರ್ವತ್ರಿಕ ಹಾಗೂ 2009ರ ಬೈಎಲೆಕ್ಷನ್​ನಲ್ಲಿ ಅತ್ಯಲ್ಪ ಮತಗಳಿಂದ ಸೋಲುಂಡರು. ಇದರಿಂದ ಕಂಗೆಡದ ಕೆಎನ್ನಾರ್ ಕ್ಷೇತ್ರದ ನಂಟು ಕಳಚಿಕೊಳ್ಳದೆ ಡಿಸಿಸಿ ಬ್ಯಾಂಕ್ ಅಧಿಕಾರ ಬಳಸಿಕೊಂಡು ಈ ಅವಧಿಯಲ್ಲಿ ಜನರಿಗೆ ಬಹಳ ಹತ್ತಿರವಾದರು. ಅದರ ಪರಿಣಾಮ 2013ರ ವಿಧಾನಸಭೆ ಚುನಾವಣೆಯಲ್ಲಿ ರಾಜಣ್ಣರನ್ನು ಕ್ಷೇತ್ರದ ಜನ ಕೈಹಿಡಿದರು. ಈ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದರೂ ರಾಜಣ್ಣ ತಮ್ಮ ಪ್ರಭಾವಬೀರಿ ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸುವ ಮೂಲಕ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕೆಲಸ ಮಾಡಿಸಿ ಮಧುಗಿರಿಗೆ ಜಿಲ್ಲೆಯ ಇಮೇಜ್ ತಂದುಕೊಟ್ಟರು. ಅಭಿವೃದ್ಧಿ ಜತೆಜತೆಗೆ ರಾಜಣ್ಣ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡು, ಆಪ್ತರನ್ನು ದೂರ ಮಾಡಿಕೊಂಡರು. ಅಲ್ಲದೆ, ಪ್ರಬಲ ಒಕ್ಕಲಿಗ ಸಮುದಾಯದವರು ರಾಜಣ್ಣ ವಿರುದ್ಧ ತಿರುಗಿಬಿದ್ದರು. 2018ರ ಚುನಾವಣೆಯಲ್ಲಿ ಜನರ ತೀರ್ಪಿಗೆ ಕೆಎನ್ನಾರ್ ತಲೆಬಾಗುವಂತಾಯಿತು.
ಎಂವಿವಿ ಎಂಟ್ರಿ:ಜೆಡಿಎಸ್ ಭದ್ರ ನೆಲೆಗಳಲ್ಲೊಂದಾದ ಕ್ಷೇತ್ರಕ್ಕೆ 2013ರಲ್ಲಿ ಎಂಟ್ರಿಕೊಟ್ಟ ನಿವೃತ್ತ ಐಎಎಸ್ ಅಧಿಕಾರಿ ಎಂ.ವಿ.ವೀರಭದ್ರಯ್ಯ ಮೊದಲ ಪ್ರಯತ್ನದಲ್ಲಿ ಎಡವಿದರು. ಸೋತಬಳಿಕ ಕ್ಷೇತ್ರದಿಂದ ದೂರ ಹೋಗದೆ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. ಅಧಿಕಾರ ಇಲ್ಲದಿದ್ದರೂ ಜನಮಾನಸದಲ್ಲಿ ಸ್ಥಾನಪಡೆದ ಮೃದುಸ್ವಭಾವದ ಎಂವಿವಿಗೆ 2018ರ ಚುನಾವಣೆ ಕೈಹಿಡಿಯಿತು.
ಆದರೆ, ಈ ಬಾರಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಈ ಲೆಕ್ಕಾಚಾರಗಳ ನಡುವೆ ವೀರಭದ್ರಯ್ಯ ಆರೋಗ್ಯದ ನೆಪ ಹೇಳಿ ಚುನಾವಣಾ ಕಣದಿಂದಲೇ ಹಿಂದೆ ಸರಿಯುವುದಾಗಿ ಘೊಷಿಸಿದ್ದು ರಾಜಕೀಯವ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತು. ತಕ್ಷಣ ಮಧ್ಯ ಪ್ರವೇಶಿಸಿದ ವರಿಷ್ಠರು ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಲ್ಲದೆ, ಎಂವಿವಿ ಮನವೊಲಿಸಿ ಮತ್ತೆ ಅಭ್ಯರ್ಥಿಯನ್ನಾಗಿ ಘೊಷಿಸಿದ್ದಾರೆ. ನೆಲೆಯೇ ಇಲ್ಲದ ಬಿಜೆಪಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅಚ್ಚರಿ ಮುನ್ನಡೆ ದೊರೆತಿತ್ತು. ದೇವೇಗೌಡರ ವಿರುದ್ಧ ಜಿ.ಎಸ್.ಬಸವರಾಜು ಗೆಲುವಿನಲ್ಲಿ ರಾಜಣ್ಣರ ಕಾಣದ ಕೈ ಕೆಲಸ ಮಾಡಿತ್ತು. ಈ ಸೋಲಿಗೆ ಸೇಡುತೀರಿಸಿಕೊಳ್ಳಲು ಜೆಡಿಎಸ್ ವರಿಷ್ಠರು ಹವಣಿಸುತ್ತಿದ್ದಾರೆ.
ಮಧುಗಿರಿಯನ್ನು ಸಂಘಟನಾತ್ಮಕ ಜಿಲ್ಲೆಯಾಗಿ ರಚಿಸಿಕೊಂಡ ಬಳಿಕವೂ ಬಿಜೆಪಿ ಸಂಘಟಿತವಾಗಿ ಶಕ್ತಿಶಾಲಿ ಆಗಿಲ್ಲ. ಉಪಚುನಾವಣೆ ಹೊರತು ಬಿಜೆಪಿಗೆ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಠೇವಣಿ ಬಂದಿಲ್ಲ. ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಎಂಎಲ್ಸಿ ಚಿದಾನಂದಗೌಡ ಹೆಸರು ಕೇಳಿಬರುತ್ತಿದ್ದು ಗೆಲುವಿಗಿಂತ ಸಂಘಟನೆ ದೃಷ್ಟಿಯಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿಕೊಳ್ಳಲು ಸಮರ್ಥ ಅಭ್ಯರ್ಥಿಗಾಗಿ ಶೋಧ ನಡೆದಿದೆ. ಪ್ರತಿ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ನಡುವೆಯೇ ನೇರ ಪೈಪೋಟಿ ಇದೆ. ಇನ್ನೂ ಜೆಡಿಎಸ್ ಪಂಚರತ್ನ ರಥಯಾತ್ರೆ ಯಶಸ್ಸು ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.
ಕುಂಚಿಟಿಗರ ಪ್ರಾಬಲ್ಯ:ಮಧುಗಿರಿಯಲ್ಲಿ ಕುಂಚಿಟಿಗ ಒಕ್ಕಲಿಗರ ಪ್ರಾಬಲ್ಯವಿದೆ. ಪರಿಶಿಷ್ಟ ಜಾತಿ, ಪಂಗಡದ ಮತಗಳ ಸಂಖ್ಯೆಯೂ ಹೆಚ್ಚಿದೆ. ನಂತರ ಕುರುಬರು, ಗೊಲ್ಲರು, ನಾಯಕರು, ಲಿಂಗಾಯತರಿದ್ದಾರೆ. ಅಹಿಂದ ಮತಗಳ ಕ್ರೋಡೀಕರಣ ಕಾಂಗ್ರೆಸ್​ಗೆ ಹೆಚ್ಚಿನ ಬಲ ತಂದುಕೊಡಲಿದೆ ಎಂಬ ಲೆಕ್ಕಾಚಾರ ಇದೆ. ಕುಂಚಿಟಿಗ ಒಕ್ಕಲಿಗ ಸಮುದಾಯದ ವೀರಭದ್ರಯ್ಯ ಹಾಗೂ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ರಾಜಣ್ಣ ನಡುವೆಯೇ ಈ ಬಾರಿಯೂ ನೇರ ಹಣಾಹಣಿ ಏರ್ಪಟ್ಟಿದೆ. ಮಧುಗಿರಿ ಸಂಘಟನಾತ್ಮಕ ಜಿಲ್ಲೆ ಆದ ಬಳಿಕ ನೆಲೆಯೇ ಇಲ್ಲದ ಬಿಜೆಪಿಯಲ್ಲಿ ಚುನಾವಣೆ ಉತ್ಸಾಹ ಕಂಡು ಬರುತ್ತಿದೆಯಾದರೂ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆದಿದೆ.
ಮಗ್ಗುಲ ಮುಳ್ಳಾಗುವರೇ ಕೊಂಡವಾಡಿ!:ಮಧುಗಿರಿ ಕ್ಷೇತ್ರದ ಚಿತ್ರಣವನ್ನೇ ರಾಜಣ್ಣ ಬದಲಿಸಿದರೂ 2018ರಲ್ಲಿ ಸೋಲು ತಪ್ಪಲಿಲ್ಲ. 2015ರ ವಿಧಾನಪರಿಷತ್ ಚುನಾವಣೆಯಲ್ಲಿ ಪುತ್ರ ರಾಜೇಂದ್ರನ ಸೋಲಿನ ಆಘಾತ ರಾಜಣ್ಣರನ್ನು ಸ್ವಪಕ್ಷೀಯರ ವಿರುದ್ಧವೇ ಸಿಡಿದೇಳುವಂತೆ ಮಾಡಿತ್ತು. ಈ ಸ್ವಯಂಕೃತ ಅಪರಾಧದಿಂದಾಗಿ 2018ರಲ್ಲಿ ಸೋಲುವಂತಾಯಿತು. ಈ ಬಾರಿಯೂ ಕೆಎನ್ನಾರ್​ಗೆ ಸ್ವಪಕ್ಷೀಯರ ಕಾಟ ಇದ್ದಿದ್ದೆ. ಪರಂ ಜತೆಗಿನ ಮುನಿಸು ಮುಂದುವರಿದಿದೆ. ಕೆಎನ್ನಾರ್ ತನ್ನ ರಾಜಕೀಯ ಗುರು ಎಂದು ಹೇಳಿಕೊಳ್ಳುವ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿರುವುದು, ರಾಜಣ್ಣ ಪುತ್ರ, ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದು ಸಹಜವಾಗಿ ಆಂತರಿಕ ಬೇಗುದಿಗೆ ಕಾರಣವಾಗಿದೆ.
ಬಿಜೆಪಿಯ ಅಚ್ಚರಿ ಅಭ್ಯರ್ಥಿ!:ಕಳೆದ ಲೋಕಸಭೆ ಚುನಾವಣೆಯ ಅಭೂತಪೂರ್ವ ಮತಗಳಿಕೆ ಬಿಜೆಪಿಯಲ್ಲಿ ರಣೋತ್ಸಾಹ ಹೆಚ್ಚಲು ಕಾರಣವಾಗಿದೆ. ಹಾಗಾಗಿ, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ನಾಯಕ ಸಮುದಾಯದ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜುಗೆ ಗಾಳ ಹಾಕಲು ಮುಂದಾಗಿದೆ. ಜೆಡಿಎಸ್​ನಿಂದ ಸ್ಪರ್ಧಿಸಲು ಕಣ್ಣಿಟ್ಟಿದ್ದ ನಾಗರಾಜುಗೆ ಎಂವಿವಿ ಅಭ್ಯರ್ಥಿಯನ್ನಾಗಿ ಘೊಷಿಸಿರುವುದು ನಿರಾಸೆ ತಂದಿದೆ. ಇದನ್ನು ಎನ್​ಕ್ಯಾಶ್ ಮಾಡಲು ಬಿಜೆಪಿ ಹೊರಟಂತಿದೆ.
ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
