|ಕೆ.ಎನ್. ರಾಘವೇಂದ್ರಮಂಡ್ಯ
ದೇವಾಲಯಗಳ ನಾಡೆಂದು ಪ್ರಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಕಾವೇರುತ್ತಿದೆ. ಪ್ರತಿ ಬಾರಿಯಂತೆ ಈ ಸಲವೂ ಜಿದ್ದಾಜಿದ್ದಿನ ಅಖಾಡಕ್ಕೆ ಅಭ್ಯರ್ಥಿಗಳ ಜತೆಗೆ ಕ್ಷೇತ್ರದ ಜನರೂ ಸಜ್ಜಾಗಿದ್ದಾರೆ. ವಿಭಿನ್ನ ರಾಜಕಾರಣಕ್ಕೆ ಹೆಸರಾಗಿರುವ ಕ್ಷೇತ್ರದಲ್ಲಿ ಸದ್ಯ ತ್ರಿಕೋನ ಸ್ಪರ್ಧೆ ಖಚಿತವಾಗಿದೆ. ಸಾಂಪ್ರದಾಯಿಕ ಎದುರಾಳಿಯಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಠಕ್ಕರ್ ಕೊಡಲು ಪ್ರಭಾವಿ ನಾಯಕ ಎಲ್.ಆರ್. ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಯಾರೆನ್ನುವ ಗುಟ್ಟು ಹೊರಬಿದ್ದಿಲ್ಲ.
1952ರಿಂದ 2018ರವರೆಗೆ ಕ್ಷೇತ್ರದಲ್ಲಿ 18 ಚುನಾವಣೆ ನಡೆದಿವೆ. ಈ ಪೈಕಿ 1953, 1973 ಹಾಗೂ 1984ರ ಉಪ ಚುನಾವಣೆಗಳೂ ಸೇರಿವೆ. ಪಕ್ಷೇತರ ಅಭ್ಯರ್ಥಿಗಳೂ ಇಲ್ಲಿ ಹಲವು ಬಾರಿ ಪ್ರಾಬಲ್ಯ ಮೆರೆದಿರುವುದು ವಿಶೇಷ. ಮಾತ್ರವಲ್ಲದೆ, ಹಲವು ಘಟಾನುಘಟಿ ರಾಜಕಾರಣಿಗಳನ್ನು ನೀಡಿದ ಕ್ಷೇತ್ರವೆನ್ನುವ ಹೆಗ್ಗಳಿಕೆಯೂ ಇದೆ. ಈ ಕ್ಷೇತ್ರದಿಂದ ಎಚ್.ಟಿ.ಕೃಷ್ಣಪ್ಪ ನಾಲ್ಕು ಬಾರಿ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ. 1984ರ ಉಪಚುನಾವಣೆಯಲ್ಲಿ ಆಯ್ಕೆಯಾದ ಎಚ್.ಟಿ. ಕೃಷ್ಣಪ್ಪ, ಸಚಿವರಾಗಿ ಅಧಿಕಾರ ಸ್ವೀಕರಿಸಲು ಬೆಂಗಳೂರಿಗೆ ತೆರಳುತ್ತಿದ್ದಾಗಲೇ ಅತ್ತ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ವಿಧಾನಸಭೆ ವಿಸರ್ಜನೆ ನಿರ್ಧಾರ ಕೈಗೊಂಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್​ನಿಂದ ಹಾಲಿ ಶಾಸಕ ಸುರೇಶ್​ಗೌಡ, ಕಾಂಗ್ರೆಸ್​ನಿಂದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಈ ಮೂವರೂ ಅಭ್ಯರ್ಥಿಗಳು ಕ್ಷೇತ್ರದ ಮತದಾರರ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತಿದ್ದಾರೆ. ಬಿಜೆಪಿಯಿಂದ ಫೈಟರ್ ರವಿ ಹೆಸರು ಕೇಳಿಬಂದಿದ್ದರೂ ಅಧಿಕೃತ ಘೊಷಣೆಯಾಗುವವರೆಗೂ ಖಚಿತವಿಲ್ಲ.
ಸುರೇಶ್​ಗೌಡಗೆ ಒಳೇಟಿನ ಭೀತಿ:ಜಾತ್ಯತೀತ ದಳಕ್ಕೆ ನಾಗಮಂಗಲ ಪ್ರತಿಷ್ಠಿತ ಕ್ಷೇತ್ರ. ಕಾರಣ, ಚಲುವರಾಯಸ್ವಾಮಿ ಜೆಡಿಎಸ್ ತೊರೆದ ಬಳಿಕ ಅವರನ್ನು ಸೋಲಿಸುವುದೇ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಪ್ರಮುಖ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆಂದು ವಿಶೇಷ ತಂತ್ರಗಾರಿಕೆ ನಡೆಯುತ್ತಿದೆ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್​ಗೆ ಹಿನ್ನಡೆಯಾಗಿದ್ದರೂ ನಾಗಮಂಗಲ ಕ್ಷೇತ್ರದ ಮತದಾರರು ಮಾತ್ರ ಕೈಹಿಡಿದಿದ್ದರು ಎನ್ನುವುದು ವಿಶ್ವಾಸ ಹೆಚ್ಚಿಸಿದೆ. ಆದರೆ ಉಳಿದೆಲ್ಲ ಅಭ್ಯರ್ಥಿಗಳಿಗೂ ಜೆಡಿಎಸ್ ಸೋಲಿಸುವುದೇ ಪ್ರಮುಖವಾಗಿದೆ. ಈ ನಡುವೆ, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಿದೆ. ಆದ್ದರಿಂದ ಮೇಲ್ನೋಟಕ್ಕೆ ಯಾವುದೇ ಅಸಮಾಧಾನವಿಲ್ಲದಂತಿದ್ದರೂ ಶಾಸಕ ಸುರೇಶ್​ಗೌಡ ಅವರಿಗೆ ಒಳೇಟಿನ ಭೀತಿ ಇದೆ.
ಬಿಜೆಪಿಗೆ ದಿಕ್ಕು ಯಾರು?:ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಇತಿಹಾಸ ವಿಲ್ಲ. ಹಿಂದಿನ ಮೂರು ಚುನಾವಣೆಗಳ ಫಲಿತಾಂಶ ಗಮನಿಸಿದರೆ 2008ರಲ್ಲಿ 2618, 2013ರಲ್ಲಿ 1085 ಮತ್ತು 2018ರಲ್ಲಿ 1915 ಮತಗಳಷ್ಟೇ ಬಂದಿದ್ದವು. ಇನ್ನು ಕ್ಷೇತ್ರದಲ್ಲಿ ಹವಾ ಎಬ್ಬಿಸಿದ್ದ ಸಮಾಜ ಸೇವಕ ಫೈಟರ್ ರವಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆನ್ನುವ ಚರ್ಚೆ ನಡುವೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸದ್ಯಕ್ಕೆ ಇವರೇ ಅಭ್ಯರ್ಥಿ ಎಂಬ ಮಾತೂ ಇದೆ. ಆದರೆ, ಹೈಕಮಾಂಡ್ ಯಾರಿಗೆ ಅವಕಾಶ ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ನಾಲ್ಕನೇ ಗೆಲುವಿಗೆ ಸಿಆರ್​ಎಸ್ ಯತ್ನ:ಜೆಡಿಎಸ್​ನಿಂದ ಹೊರಬಂದ ಬಳಿಕ ನಡೆದ 2018ರ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಭಾರಿ ಅಂತರದಲ್ಲಿ ಸೋಲು ಅನುಭವಿಸಿದರು. ಆದರೆ ತಮ್ಮ ನೇತೃತ್ವದಲ್ಲಿಯೇ 2 ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಸ್ಥಾನವನ್ನೂ ಅಲಂಕರಿಸಿರುವ ಅವರು, ಈಗಾಗಲೆ ಕ್ಷೇತ್ರದುದ್ದಕ್ಕೂ ಪ್ರವಾಸ ಮಾಡುತ್ತ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. 1999, 2004 ಮತ್ತು 2013ರಲ್ಲಿ ಶಾಸಕರಾಗಿದ್ದ ಸಿಆರ್​ಎಸ್, 4ನೇ ಗೆಲುವಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪಕ್ಷೇತರರಾಗಿ ಶಿವರಾಮೇಗೌಡ ಪ್ರಭಾವಿ:ನೇರನುಡಿಯ ರಾಜಕಾರಣಿ ಎಲ್.ಆರ್. ಶಿವರಾಮೇಗೌಡ ಕ್ಷೇತ್ರದಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಜೆಡಿಎಸ್​ನಿಂದ ಹೊರಬಂದ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ಮತದಾರರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. 2 ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕರಾದ ಇತಿಹಾಸವನ್ನೂ ಹೊಂದಿದ್ದಾರೆ. ಆದ್ದರಿಂದ ತಮಗೆ ಪಕ್ಷದ ಅಗತ್ಯವಿಲ್ಲವೆಂದು ಪಕ್ಷೇತರರಾಗಿಯೇ ಮತ್ತೊಮ್ಮೆ ಕಣಕ್ಕಿಳಿಯಲಿದ್ದು, ಇದು ಸ್ವಾಭಿಮಾನದ ಹೋರಾಟವೆಂದು ಹೇಳುತ್ತಿದ್ದಾರೆ.
ಕಾಂಗ್ರೆಸ್:ಕೆಲ ದಿನಗಳ ಹಿಂದೆ ಕ್ಷೇತ್ರದಲ್ಲಿ ನಡೆದ ಭಾರತ್​ಜೋಡೋ ಯಾತ್ರೆಗೆ ನಿರೀಕ್ಷೆಗೂ ಮೀರಿದ ಯಶಸ್ಸು ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಮತದಾರರೊಂದಿಗೆ ಸಮಾಲೋಚನೆ ಮಾಡಲಾಗುತ್ತಿದೆ. ಚಲುವರಾಯಸ್ವಾಮಿಗೆ ಪತ್ನಿ, ಮಗ ಸಾಥ್ ನೀಡುತ್ತಿದ್ದಾರೆ.
ಜೆಡಿಎಸ್:ಇತ್ತೀಚೆಗೆ ನಡೆದ ಪಂಚರತ್ನ ಯಾತ್ರೆಗೆ ಅದ್ದೂರಿ ಸ್ವಾಗತ ಸಿಕ್ಕಿತು. ಮಾತ್ರವಲ್ಲದೆ, ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದರಿಂದ ಪಕ್ಷಕ್ಕೆ ಹೊಸ ಹುರುಪು ಕೊಟ್ಟಿದೆ. ಸುರೇಶ್​ಗೌಡ ಮತ್ತು ಅವರ ಪತ್ನಿ ಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.
ಪಕ್ಷೇತರ:ಎಲ್.ಆರ್.ಶಿವರಾಮೇಗೌಡರ ಕ್ಷೇತ್ರ ಸಂಚಾರ ಕೂಡ ಜೋರಾಗಿಯೇ ನಡೆಯುತ್ತಿದೆ. ಮಗನೊಂದಿಗೆ ಪ್ರತಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಜೆಡಿಎಸ್​ನಲ್ಲಿರುವ ಒಡನಾಡಿಗಳೊಂದಿಗೆ ಚರ್ಚೆ ನಡೆಸುವ ಮೂಲಕ ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ.
ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ: ತನ್ನ ಸಂಸ್ಥೆಯ ಮಾರ್ಕೆಟಿಂಗ್​ಗಾಗಿ ಫ್ಲೈಓವರ್​ ಮೇಲಿಂದ ಹಣ ಎಸೆದೆ ಎಂದು ತಪ್ಪೊಪ್ಪಿಕೊಂಡ

ನಾಲ್ಕು ದಿನಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತ; ಯಾವ ಮಾರ್ಗದಲ್ಲಿ, ಯಾವ್ಯಾವ ದಿನ? ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − one =
Remember me
