|ಸುಭಾಸ ಧೂಪದಹೊಂಡಕಾರವಾರ
ಸ್ಪರ್ಧಿಸಿದಾಗಿನಿಂದ ಸೋಲೇ ಕಾಣದೆ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿರುವ ಹಾಲಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಎದುರಿಸಲು ಕಾಂಗ್ರೆಸ್​ನಲ್ಲಿ ಸಮರ್ಥ ಅಭ್ಯರ್ಥಿ ಯಾರು ಎಂಬ ಚರ್ಚೆ ಕ್ಷೇತ್ರದಲ್ಲಿ ನಡೆದಿದೆ. ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ಕಿತ್ತುಕೊಳ್ಳಬೇಕು ಎಂದು ಎದುರಾಳಿ ಪಕ್ಷಗಳು ತಂತ್ರ ಹುಡುಕುತ್ತಿವೆ. ಈ ನಡುವೆ ಕಾಗೇರಿಗೆ ಈ ಬಾರಿ ಟಿಕೆಟ್ ತಪ್ಪಿಸುವುದು ಹೇಗೆ ಎಂಬ ಪ್ರಯತ್ನಗಳೂ ಪಕ್ಷದೊಳಗೇ ಪ್ರಾರಂಭವಾಗಿವೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಸದ್ಯದ ಕಣ ಚಿತ್ರಣ.
ಹವ್ಯಕ ಬ್ರಾಹ್ಮಣ ಹಾಗೂ ನಾಮಧಾರಿಗಳು ಇಲ್ಲಿನ ನಿರ್ಣಾಯಕ ಮತದಾರರು. ಸ್ವಜಾತಿಯ ಹವ್ಯಕರು ಕಾಗೇರಿಗೆ ಅಭಯ ಹಸ್ತರಾಗಿದ್ದಾರೆ. ಜತೆಗೆ ಬಿಜೆಪಿ ಅಭಿಮಾನಿ ನಾಮಧಾರಿಗಳೂ ಸಾಕಷ್ಟಿರುವುದು ನಿರಂತರ ಗೆಲುವಿಗೆ ಸಹಕಾರಿಯಾಗಿದೆ. ಕೀಳು ಮಟ್ಟದ ರಾಜಕೀಯ ಕೆಸರೆರಚಾಟ, ಹಣದ ಹೊಳೆ ಇಲ್ಲದೇ ಅತ್ಯಂತ ಶಾಂತ, ಸರಳವಾಗಿ ಚುನಾವಣೆ ನಡೆಯುವ ಅಪರೂಪದ ಕ್ಷೇತ್ರ ಎಂಬ ವಿಶೇಷಣ ಶಿರಸಿಗಿದೆ.
6 ಬಾರಿ ನಿರಂತರ ಗೆಲುವು:ವಿಶ್ವೇಶ್ವರ ಹೆಗಡೆ ಕಾಗೇರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಿಂದ ಬೆಳೆದು ಬಂದವರು. ಸತತ 6 ಬಾರಿ ವಿಧಾನಸಭೆ ಪ್ರತಿನಿಧಿಸಿದ್ದಾರೆ. ಮೊದಲು ಶಿರಸಿ ತಾಲೂಕಿನ ಕೆಲ ಭಾಗ ಹಾಗೂ ಕರಾವಳಿಯ ಅಂಕೋಲಾ ತಾಲೂಕನ್ನೊಳಗೊಂಡಿದ್ದ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 1994, 1999, ಹಾಗೂ 2004ರಲ್ಲಿ ಬಿಜೆಪಿಯಿಂದ ಗೆದ್ದು ಬಂದಿದ್ದರು. 2008ರ ಕ್ಷೇತ್ರ ಪುನರ್ ವಿಂಗಡನೆಯ ನಂತರ ನಂತರ ಶಿರಸಿ, ಸಿದ್ದಾಪುರ ತಾಲೂಕನ್ನೊಳಗೊಂಡ ಕ್ಷೇತ್ರದಿಂದ ನಿರಂತರ ಮೂರು ಬಾರಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಚೇತರಿಕೆ ಕಂಡಿದೆ. ಯಾವುದೇ ವಿವಾದಗಳಿಗೆ ಸಿಲುಕದೆ ಕ್ಲೀನ್ ಇಮೇಜ್ ಉಳಿಸಿಕೊಂಡಿರುವುದು, ಕ್ಷೇತ್ರದ ಸಾಮಾನ್ಯನ ಮದುವೆ, ಮುಂಜಿ ಸಮಾರಂಭಗಳಿಗೂ ತೆರಳುವುದು ಇವರ ವಿಶೇಷ. ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರೂ ಕ್ಷೇತ್ರದ ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕಿಲ್ಲ. ಪರ್ಯಾಯ ನಾಯಕರನ್ನು ಬೆಳೆಸಿಲ್ಲ. ಕಾರ್ಯಕರ್ತರ, ಆಪ್ತರ ವೈಯಕ್ತಿಕ ಕಾರ್ಯಗಳಿಗೆ ಸ್ಪಂದಿಸುವುದಿಲ್ಲ ಎಂಬ ಆರೋಪ ಕಾಗೇರಿ ಮೇಲಿದೆ.
ಪಕ್ಷದಲ್ಲೇ ವಿರೋಧ:ಕ್ಷೇತ್ರದಲ್ಲಿ ಸಂಘ ಪರಿವಾರದ ಬೇರು ಗಟ್ಟಿಯಾಗಿದೆ. ಬಿಜೆಪಿ ಸಂಘಟನೆಯೂ ಉತ್ತಮವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕಮಲದ ಚಿನ್ಹೆಯೇ ಕಾಣುತ್ತಿದೆ. ಆದರೆ, ಪಕ್ಷದಲ್ಲಿ ಒಳಜಗಳವೂ ಸಾಕಷ್ಟಿವೆ. ಇದೇ ಊರಿನ ಸಂಸದ ಅನಂತ ಕುಮಾರ ಹೆಗಡೆ ಹಾಗೂ ಕಾಗೇರಿ ಸಂಬಂಧ ಅಷ್ಟಕ್ಕಷ್ಟೆ. ಆದರೆ, ನಯ ನಾಜೂಕಿನ, ಜಾಣ ನಡೆಯಿಂದಲೇ ಕಾಗೇರಿ ಎಲ್ಲವನ್ನೂ ಹ್ಯಾಂಡಲ್ ಮಾಡಿಕೊಂಡು ಬಂದಿದ್ದಾರೆ. ಗುಜರಾತ್ ಮಾದರಿ ಪ್ರಯೋಗವನ್ನು ಬಿಜೆಪಿ ರಾಜ್ಯದಲ್ಲೂ ಮಾಡುತ್ತದೆ. ನಿರಂತರವಾಗಿ ಐದಾರು ಬಾರಿ ಗೆದ್ದ ನಾಯಕರಿಗೆ ಬೇರೆ ಕ್ಷೇತ್ರ ನೀಡಿ, ಅಲ್ಲಿ ಸ್ಪರ್ಧಿಸುವ ಚಾಲೆಂಜ್ ನೀಡಲಾಗುತ್ತದೆ. ಅದರಲ್ಲಿ ಕಾಗೇರಿ ಹೆಸರೂ ಸೇರಿದೆ.
ಆರ್​ಎಸ್​ಎಸ್ ಗಟ್ಟಿ ಇರುವ ಶಿರಸಿಯಲ್ಲಿ ಈ ಹೊಸ ಪ್ರಯೋಗ ನಡೆಯುತ್ತದೆ ಎಂಬುದು ಕಾಗೇರಿ ಬದಲು ಬಿಜೆಪಿ ಟಿಕೆಟ್ ಬಯಸುತ್ತಿರುವವರ ವಾದ. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಕೆ.ಜಿ. ನಾಯ್ಕ ಜಾತಿಯ ಕಾರ್ಡ್ ಉರುಳಿಸಿ ಪ್ರಯತ್ನ ನಡೆಸಿದ್ದಾರೆ. ಕಾಗೇರಿಗೆ ತಪ್ಪಿದರೆ ತಾವ್ಯಾಕೆ ಪ್ರಯತ್ನಿಸಬಾರದು ಎಂದು ಕೆಲ ಯುವ ಮುಖಗಳೂ ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಮಕೃಷ್ಣ ಹೆಗಡೆ ಗೆದ್ದ ಕ್ಷೇತ್ರ:ಶಿರಸಿ ತಾಲೂಕಿನ ಅರ್ಧ ಭಾಗ ಹಾಗೂ ಸಿದ್ದಾಪುರ ತಾಲೂಕನ್ನೊಳಗೊಂಡ ಶಿರಸಿ ವಿಧಾನಸಭಾ ಕ್ಷೇತ್ರದಿಂದ 1957 ಹಾಗೂ 1962ರಲ್ಲಿ ಖ್ಯಾತ ಮುತ್ಸದ್ದಿ , ಮಾಜಿ ಸಿಎಂ ದಿ. ರಾಮಕೃಷ್ಣ ಹೆಗಡೆ ರಾಷ್ಟ್ರೀಯ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. ಇಂದಿಗೂ ಕ್ಷೇತ್ರದಲ್ಲಿ ಅವರ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ, ಅವರದ್ದೇ ಕುಟುಂಬದ ಶಶಿಭೂಷಣ ಹೆಗಡೆ ಇಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಸಾಧ್ಯವಾಗದೇ ಇರುವುದು ವಿಪರ್ಯಾಸ. 1967ರಲ್ಲಿ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ರಾಮಕೃಷ್ಣ ಹೆಗಡೆ ಕ್ಷೇತ್ರ ಬದಲಿಸಬೇಕಾಯಿತು. ನಂತರ ಶಿರಸಿಯಲ್ಲಿ ಎರಡು ಬಾರಿ ಎಂ.ಎಚ್. ಜಯಪ್ರಕಾಶ ನಾರಾಯಣ, ಒಂದು ಸಾರಿ ಉಮಾಕಾಂತ ಬುದ್ದು ಬೋರ್ಕರ್, ಮೂರು ಬಾರಿ ಗೋಪಾಲ ಮುಕುಂದ ಕಾನಡೆ, ಒಮ್ಮೆ ಪ್ರೇಮಾನಂದ ಜಯವಂತ, ಎರಡು ಬಾರಿ ವಿವೇಕಾನಂದ ವೈದ್ಯ ಆಯ್ಕೆಯಾದರು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯೊಂದಿಗೆ ಮತ್ತೆ ಸಾಮಾನ್ಯಕ್ಕೆ ತೆರೆದುಕೊಂಡಿತು. 1999 ರಿಂದಲೂ ಶಿರಸಿ ಕ್ಷೇತ್ರದಲ್ಲಿ ನಿರಂತರವಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ.
ಕಾಂಗ್ರೆಸ್​ನಲ್ಲಿ ಹಲವರು:ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಸಿದ್ದಾಪುರದ ಮುಖಂಡ ವಸಂತ ನಾಯ್ಕ, ಶಿರಸಿಯ ಶ್ರೀಪಾದ ಹೆಗಡೆ ಕಡವೆ ಟಿಕೆಟ್​ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ, ಫೈಟ್​ನಲ್ಲಿದ್ದಾರೆ. ಜೆಡಿಎಸ್​ನಲ್ಲಿರುವ ಶಶಿಭೂಷಣ ಹೆಗಡೆ ಅವರನ್ನು ಕಾಂಗ್ರೆಸ್​ಗೆ ಕರೆತರುವ ಯತ್ನ ನಡೆದಿದೆ ಎಂಬ ಸುದ್ದಿಯೂ ಇದೆ. ಆದರೂ ಕಾಗೇರಿಯನ್ನು ಎದುರಿಸುವ ಸಮರ್ಥ ನಾಯಕ ಕಾಂಗ್ರೆಸ್​ನಲ್ಲಿ ಕಾಣುತ್ತಿಲ್ಲ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಕಾಂಗ್ರೆಸ್ ಬೆಳವಣಿಗೆಗೆ ಮುಳ್ಳಾಗಿದೆ. ಶಿರಸಿ ಕ್ಷೇತ್ರದವರೇ ಆಗಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ ಪಕ್ಷ ತೊರೆದು ಕೈ ಹಿಡಿದಿದ್ದಾರೆ. ಶಶಿಭೂಷಣ ಹೆಗಡೆ ಜೆಡಿಎಸ್​ನಲ್ಲಿದ್ದೂ ಇಲ್ಲದಂತಿದ್ದಾರೆ. ಇದರಿಂದ ಜೆಡಿಎಸ್ ಚುನಾವಣೆಯಲ್ಲಿ ಫೈಟ್ ನೀಡುವ ಸ್ಥಿತಿಯಲ್ಲಿಲ್ಲ.
ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!

ದೇವಸ್ಥಾನಕ್ಕೆ ಹೊರಟಿದ್ದವರ ವಾಹನ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಮೂವರ ಪರಿಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
