|ಎನ್. ಮುನಿವೆಂಕಟೇಗೌಡಕೋಲಾರ
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಇಲ್ಲಿನ ಮತದಾರರು ಮಣೆ ಹಾಕಿದ್ದಾರೆ. 40 ವರ್ಷಗಳಿಂದ ಹಾಲಿ ಶಾಸಕ ಕೆ.ಆರ್. ರಮೇಶ್​ಕುಮಾರ್ (ಸ್ವಾಮಿ), ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ(ರೆಡ್ಡಿ) ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಮತ್ತೊಬ್ಬರ ಪ್ರವೇಶಕ್ಕೆ ಅವಕಾಶ ಸಿಕ್ಕಿಲ್ಲ.
1978ರಿಂದ 6 ಬಾರಿ ರಮೇಶ್​ಕುಮಾರ್ ಹಾಗೂ 4 ಬಾರಿ ಜಿ.ಕೆ.ವೆಂಕಟಶಿವಾರೆಡ್ಡಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. 1978ರಲ್ಲಿ ಆರ್.ಜಿ.ನಾರಾಯಣರೆಡ್ಡಿ ವಿರುದ್ಧ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದಿದ್ದ ರಮೇಶ್​ಕುಮಾರ್​ಗೆ 1983ರ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಕೆ.ವೆಂಕಟಶಿವಾರೆಡ್ಡಿ ಎದುರು ಸೋಲು ಅನುಭವಿಸಿದರು. ಅಲ್ಲಿಂದ 2013ರ ತನಕ ಸ್ವಾಮಿ-ರೆಡ್ಡಿ ಪರಸ್ಪರ ಎದುರಾಳಿಗಳಾಗಿ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಒಂದು ಬಾರಿ ಅವರು, ಮತ್ತೊಂದು ಬಾರಿ ಇವರು ಆಯ್ಕೆಯಾಗುತ್ತಿದ್ದರು. ಇಬ್ಬರೂ ಆಗಾಗ ಪಕ್ಷ ಅದಲು-ಬದಲು ಮಾಡಿಕೊಂಡರೂ ಕಾರ್ಯಕರ್ತರು ಮಾತ್ರ ಅವರವರ ಹಿಂಬಾಲಕರಾಗಿಯೇ ಇದ್ದಾರೆ. ಈ ನಡುವೆ 2013, 2018ರಲ್ಲಿ ಆಯ್ಕೆಯಾಗುವ ಮೂಲಕ ರಮೇಶ್​ಕುಮಾರ್ ರೋಸ್ಟರ್ ಪದ್ಧತಿ ಮುರಿದಿದ್ದಾರೆ.
ಮತದಾರರ ಲೆಕ್ಕಾಚಾರ:ಕ್ಷೇತ್ರದಲ್ಲಿ 2,05,932 ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳು 78 ಸಾವಿರ, ಒಕ್ಕಲಿಗರ ಮತಗಳು 67 ಸಾವಿರ ಇವೆ. ಅಲ್ಪಸಂಖ್ಯಾತರು 20 ಸಾವಿರ ಇದ್ದರೆ ಇತರ ಜಾತಿಯ ಮತಗಳು ಅಲ್ಪಪ್ರಮಾಣದಲ್ಲಿವೆ. ಕ್ಷೇತ್ರದಲ್ಲಿ ಎಸ್​ಸಿ ಮತ್ತು ಎಸ್​ಟಿ ಹೊರತುಪಡಿಸಿದರೆ ಒಕ್ಕಲಿಗದ್ದೇ ಪ್ರಾಬಲ್ಯ. ರಮೇಶ್​ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರೂ ‘ಸ್ವಾಮಿ’ ನಿಷ್ಠೆ ಮೆರೆದಿದ್ದಾರೆ. ಜಿ.ಕೆ.ವೆಂಕಟಶಿವಾರೆಡ್ಡಿ ಒಕ್ಕಲಿಗ ಜನಾಂಗದ ಬೆಂಬಲದೊಂದಿಗೆ ಇತರ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಯಾರೇ ಗೆಲುವು ಸಾಧಿಸಿದರೂ ಅಂತರ 10 ಸಾವಿರ ಮತಗಳನ್ನು ದಾಟಿಲ್ಲ.
ಸಿದ್ದರಾಮಯ್ಯ ‘ಅಹಿಂದ’ ಶ್ರೀರಕ್ಷೆ:2013ರಲ್ಲಿ ರಮೇಶ್​ಕುಮಾರ್ ಮಂತ್ರಿಯಾದ ಬಳಿಕ ಕ್ಷೇತ್ರದಲ್ಲಿ ಪೈಲಟ್ ಯೋಜನೆ ಮೂಲಕ 20 ಸಾವಿರ ಮನೆಗಳು, ರಸ್ತೆಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ, ಕೆಸಿ ವ್ಯಾಲಿ ನೀರು, ಶುದ್ಧ ನೀರಿನ ಘಟಕಗಳು ಹೀಗೆ ಅಭಿವೃದ್ಧಿ ಕಡೆ ಹೆಚ್ಚು ಗಮನಕೊಟ್ಟ ಕಾರಣ 2018ರಲ್ಲೂ ಆಯ್ಕೆಯಾದರು. ಈ ಬಾರಿ ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿದರೆ ‘ಅಹಿಂದ’ ಮತಗಳು ಕೈಹಿಡಿಯಲಿವೆ ಎಂಬ ಲೆಕ್ಕಾಚಾರದಲ್ಲಿ ಹಾಲಿ ಶಾಸಕರಿದ್ದಾರೆ.

ಜಿ.ಕೆ.ವೆಂಕಟಶಿವಾರೆಡ್ಡಿ ಪರಾಭವಗೊಂಡಿದ್ದರೂ 10 ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತರ ರಕ್ಷಣೆಗಾಗಿ ನಿಂತಿದ್ದಾರೆ. ಅಧಿಕಾರ ಇಲ್ಲದಿದ್ದರೂ ಕಾರ್ಯಕರ್ತರ ಕೆಲಸ ಮಾಡಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ರಮೇಶ್​ಕುಮಾರ್ ಗೆದ್ದು ಹ್ಯಾಟ್ರಿಕ್ ಸಾಧಿಸುವರೋ ಅಥವಾ ಜಿ.ಕೆ.ವೆಂಕಟಶಿವಾರೆಡ್ಡಿಗೆ ಸತತ ಸೋಲಿನ ಸಿಂಪಥಿ ಮತ್ತು ಕಾಂಗ್ರೆಸ್​ನಲ್ಲಿನ ಹಿತಶತ್ರ್ರುಗಳ ಕಾಟ ವರವಾಗುವುದೋ ಕಾದು ನೋಡಬೇಕಿದೆ.
ಮೂರನೇ ವ್ಯಕ್ತಿಯ ಪ್ರವೇಶ?:ಕಾಂಗ್ರೆಸ್ ಮತ್ತು ಜೆಡಿಎಸ್ ಹೊರತುಪಡಿಸಿದರೆ ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ಬಾರಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರದಲ್ಲಿ ಕಮಲ ಪಡೆ ಅಭ್ಯರ್ಥಿ ಘೊಷಣೆ ಆಗಿಲ್ಲದಿದ್ದರೂ ಎಸ್​ಎಲ್​ಎನ್ ಮಂಜುನಾಥ್ ಮತ್ತು ಡಾ.ವೇಣುಗೋಪಾಲ್ ಬಿರುಸಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಸ್ವಾಮಿ-ರೆಡ್ಡಿಗಳ ಮಧ್ಯೆ ಕಮಲ ಅರಳುವುದು ಕಷ್ಟಸಾಧ್ಯ. ಜತೆಗೆ ಸ್ವತಂತ್ರವಾಗಿ ಗುಂಜೂರು ಶ್ರೀನಿವಾಸರೆಡ್ಡಿ ಸಮಾಜಸೇವೆ ಮಾಡುವ ಮೂಲಕ ರೆಡ್ಡಿ-ಸ್ವಾಮಿ ಬೆಂಬಲಿಗರನ್ನು ತನ್ನ ಕಡೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಗೋಪಾಲಕೃಷ್ಣ ಕೈ ಟಿಕೆಟ್ ಆಕಾಂಕ್ಷಿ!:ಸುಮಾರು 30 ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿರುವ ದಳಸನೂರು ಎಲ್.ಗೋಪಾಲಕೃಷ್ಣ ಈ ಬಾರಿ ಪಕ್ಷದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ರಮೇಶ್​ಕುಮಾರ್ ಅವರಿಂದ ಅಂತರ ಕಾಯ್ದುಕೊಂಡಿದ್ದು, ಪಕ್ಷ ಟಿಕೆಟ್ ನೀಡಿದರೆ ನನ್ನ ಪರವಾಗಿ ಕೆಲಸ ಮಾಡಬೇಕೆಂದು ಸಭೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್​ಗೆ ಕಷ್ಟವಾಗಬಹುದು.
‘ಸತ್ತು ಹೋದವ’ ಸತ್ತ ಮರುದಿನವೇ ತಾನು ಮೃತಪಟ್ಟಿದ್ದ ಆ ಸ್ಥಳದಲ್ಲೇ ಮತ್ತೆ ಕಾಣಿಸಿಕೊಂಡಿದ್ದ!; ಆಗಿದ್ದಾದರೂ ಏನು, ಏಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 6 =
Remember me
