|ಆನಂದ ಅಂಗಡಿ
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿ ಪಾಲಿಗೆ ಭದ್ರನೆಲೆ ಎಂದೇ ಹೆಸರಾಗಿದೆ. ಈ ಕ್ಷೇತ್ರದಿಂದ (ಹಿಂದಿನ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ) ಸತತ 6 ಬಾರಿ ಗೆಲವು ಸಾಧಿಸಿರುವ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಸೇರಿ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇದೀಗ, 7ನೇ ಬಾರಿಗೂ ಅವರೇ ಸ್ಪರ್ಧೆಗೆ ಇಳಿಯುವುದು ಖಚಿತ ಎಂದೇ ಹೇಳಲಾಗುತ್ತಿದೆ. ಆದರೆ, ಈ ಬಾರಿ ಜಗದೀಶ ಶೆಟ್ಟರ್​ಗೆ ರಾಜ್ಯಪಾಲ ಹುದ್ದೆಯ ಸ್ಥಾನಮಾನ ನೀಡುವ ಬಗ್ಗೆಯೂ ಪಕ್ಷದಲ್ಲಿ ಗುಸುಗುಸು ಕೇಳಿಬರುತ್ತಿವೆ. ಹಾಗೇನಾದರೂ ಆದಲ್ಲಿ ಆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರಿಗೆ ಚುನಾವಣೆ ಟಿಕೆಟ್ ಖಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಹಿಂದೆಲ್ಲ ಜಗದೀಶ ಶೆಟ್ಟರ್ ವಿರುದ್ಧ ಸ್ಪರ್ಧಿಸಿದ್ದ ಬಹುತೇಕ ಕಾಂಗ್ರೆಸ್ಸಿಗರು ಬಿಜೆಪಿ ಸೇರಿರುವುದು ವಿಶೇಷ. ಕಾಂಗ್ರೆಸ್​ನಿಂದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಂಬಂಧಿ ರಜತ ಉಳ್ಳಾಗಡ್ಡಿಮಠ, ಮಾಜಿ ಮೇಯರ್ ಅನಿಲ ಪಾಟೀಲ, ಗಿರೀಶ ಗದಿಗೆಪ್ಪಗೌಡ ಹೆಸರು ಕೇಳಿಬರುತ್ತಿದೆ. ಜೆಡಿಎಸ್​ನಿಂದ ಉದ್ಯಮಿ ತಬರೇಜ್ ಸಂಶಿ, ರಾಜು ನಾಯಕವಾಡಿ, ತುಳಸಿಕಾಂತ ಖೋಡೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಲಿಂಗಾಯತ ಮತದಾರರು ಇಲ್ಲಿ ನಿರ್ಣಾಯಕರು.
ಸಕ್ಕರೆ, ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ವಕ್ಷೇತ್ರ ನವಲಗುಂದ. ಮುನೇಕೊಪ್ಪ ಅವರಿಗೆ ಈ ಬಾರಿಯೂ ಟಿಕೆಟ್ ಲಭಿಸುವುದು ಖಚಿತ. ಅಲ್ಲಿ ಬೇರೆ ಆಕಾಂಕ್ಷಿಗಳು ಇಲ್ಲ. ರೈತ ಬಂಡಾಯದ ನಾಡು ನವಲಗುಂದ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಪ್ರಯತ್ನಿಸಿರುವುದು ಮುನೇನಕೊಪ್ಪಗೆ ಪ್ಲಸ್ ಪಾಯಿಂಟ್. ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಕಾಂಗ್ರೆಸ್ ಸೇರಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರೊಂದಿಗೆ ಕಾಂಗ್ರೆಸ್​ನ ವಿನೋದ ಅಸೂಟಿ, ಮಾಜಿ ಸಚಿವ ಕೆ.ಎನ್.ಗಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಲಿಂಗಾಯತ, ಮರಾಠ ಸಮುದಾಯದ ಮತಗಳು ಪ್ರಮುಖವಾಗಿವೆ.
ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಪಶ್ಚಿಮ. ನೇರ ನುಡಿಯ ಅರವಿಂದ ಬೆಲ್ಲದಗೆ ಈ ಬಾರಿ ಟಿಕೆಟ್ ತಪ್ಪಿಸಬೇಕೆಂಬ ಪ್ರಯತ್ನಗಳು ಪಕ್ಷದ ಒಳಗೇ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ದೆಹಲಿ ಮಟ್ಟದಲ್ಲಿ ಉತ್ತಮ ಸಂಬಂಧ ಇಟ್ಟುಕೊಂಡಿರುವ ಬೆಲ್ಲದ ಅವರನ್ನು ಚುನಾವಣೆ ಕಣದಿಂದ ದೂರ ಸರಿಸುವುದು ಅಷ್ಟು ಸುಲಭವಿಲ್ಲ. ಸತತ 2 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಬೆಲ್ಲದ, ಹ್ಯಾಟ್ರಿಕ್ ಸಾಧನೆಯ ಉತ್ಸಾಹದಲ್ಲಿದ್ದಾರೆ. ಒಂದು ವೇಳೆ ಅರವಿಂದ ಬೆಲ್ಲದಗೆ ಟಿಕೆಟ್ ತಪ್ಪಿದರೆ, ಇಲ್ಲಿಯೂ ಮಹೇಶ ಟೆಂಗಿನಕಾಯಿ ಹೆಸರು ಕೇಳಿಬರುತ್ತಿದೆ. ಕಾಂಗ್ರೆಸ್​ನಲ್ಲಿ ನಾಗರಾಜ ಗೌರಿ, ದೀಪಕ ಚಿಂಚೋರೆ ಹಾಗೂ ಸ್ವಾತಿ ಮಳಗಿ ಆಕಾಂಕ್ಷಿಗಳಾಗಿದ್ದಾರೆ. ನಾಗರಾಜ ಗೌರಿ ಅವರಂತೂ ಲಾಕ್​ಡೌನ್ ಸಮಯದಿಂದಲೇ ಕ್ಷೇತ್ರದ ಉದ್ದಗಲಕ್ಕೂ ಓಡಾಡುತ್ತ, ಮತದಾರರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಮರಾಠ, ಲಿಂಗಾಯತ ಸಮುದಾಯದ ಮತಗಳೇ ಇಲ್ಲಿ ಪ್ರಮುಖ.
ಸ್ಥಾನ ಹೆಚ್ಚಿಸುವ ತವಕ:ಧಾರವಾಡ ಜಿಲ್ಲೆಯ ಒಟ್ಟು 7 ವಿಧಾನಸಭೆ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಕುಂದಗೋಳ ಹಾಗೂ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೇರೂರಿದೆ. ಈಗಿರುವ ಐದು ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜತೆಗೆ ಬಾಕಿ ಉಳಿದಿರುವ ಎರಡು ಕ್ಷೇತ್ರಗಳಲ್ಲಿಯೂ ಕಮಲ ಅರಳಿಸಬೇಕೆಂಬ ತವಕ ಕೇಸರಿ ಪಡೆಯದ್ದು. ಕಾಂಗ್ರೆಸ್ ಸಹ ಈಗಿರುವ ಎರಡು ಕ್ಷೇತ್ರಗಳನ್ನು ಬರುವ ಚುನಾವಣೆಯಲ್ಲಿ ಉಳಿಸಿಕೊಳ್ಳುವ ಜತೆಗೆ ಇನ್ನೂ ಹೆಚ್ಚಿನೆಡೆ ವಿಜಯ ಪತಾಕೆ ಹಾರಿಸಬೇಕೆಂಬ ಪ್ರಯತ್ನದಲ್ಲಿದೆ.
ಕಾಂಗ್ರೆಸ್ ಶಾಸಕ ಸಿ.ಎಸ್.ಶಿವಳ್ಳಿ ನಿಧನದ ನಂತರ ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅನುಕಂಪದ ಅಲೆಯಲ್ಲಿ ಗೆದ್ದರು. ಈ ಬಾರಿಯೂ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ದಿ. ಸಿ.ಎಸ್.ಶಿವಳ್ಳಿ ಸಹೋದರ ಮುತ್ತಣ್ಣ ಶಿವಳ್ಳಿ ಅವರಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ ಪುತ್ರ ಚಂದ್ರಶೇಖರ ಜುಟ್ಟಲ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿಯೂ ಟಿಕೆಟ್​ಗಾಗಿ ಪೈಪೋಟಿ ತೀವ್ರಗೊಂಡಿದೆ. ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದು, ಈ ಬಾರಿಯೂ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಮುಖಂಡರ ಮನವೊಲಿಕೆಯಿಂದ ಕಣದಿಂದ ಹಿಂದಕ್ಕೆ ಸರಿದಿದ್ದ ಎಂ.ಆರ್.ಪಾಟೀಲ ಈ ಬಾರಿ ಟಿಕೆಟ್ ಕೊಡಲೇಬೇಕೆಂಬ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಆರ್​ಎಸ್​ಎಸ್ ಮೂಲದಿಂದ ರಾಜಕೀಯಕ್ಕೆ ಇಳಿದಿರುವ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಹೆಸರೂ ಕೇಳಿಬರುತ್ತಿದೆ. ಲಿಂಗಾಯತ, ಮರಾಠ, ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ ಎನಿಸಿವೆ.
ಕಲಘಟಗಿ ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಈ ಬಾರಿಯೂ ಟಿಕೆಟ್​ಗಾಗಿ ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ಹು-ಧಾ ಸೆಂಟ್ರಲ್ ಅಥವಾ ಹು-ಧಾ ಪಶ್ಚಿಮ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಒಂದು ವೇಳೆ ಅವೆರೆಡೂ ಕ್ಷೇತ್ರದ ಟಿಕೆಟ್ ತಪ್ಪಿದರೆ, ಕಲಘಟಗಿಯಿಂದಾದರೂ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಗಣಿ ಉದ್ಯಮಿ, ಕಾಂಗ್ರೆಸ್​ನ ಸಂತೋಷ ಲಾಡ್ 2008ರಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದ ನಂತರ ಕಲಘಟಗಿ ರಾಜ್ಯ ರಾಜಕೀಯದ ಗಮನ ಸೆಳೆಯಿತು. 2013ರ ಚುನಾವಣೆಯಲ್ಲಿಯೂ ಮರು ಆಯ್ಕೆಗೊಂಡ ಸಂತೋಷ ಲಾಡ್ ಅವರನ್ನು 2018ರ ಚುನಾವಣೆಯಲ್ಲಿ ತಿರಸ್ಕರಿಸಿ, ಬಿಜೆಪಿಯ ನಿಂಬಣ್ಣವರ ಅವರನ್ನು ಮತದಾರರು ಆಯ್ಕೆ ಮಾಡಿದರು. ಲಾಡ್ ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಅತಿ ವಿರಳ. ಇದು ಅವರ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಸಂತೋಷ ಲಾಡ್ ಇದೀಗ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್​ನ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಟಿಕೆಟ್​ಗಾಗಿ ಹರಸಾಹಸ ನಡೆಸಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರೂ ಆಕಾಂಕ್ಷಿ. ಜೆಡಿಎಸ್​ನಿಂದ ಡಾ. ಈರಣ್ಣ ಶೀಗಿಗಟ್ಟಿ, ಮಾರುತಿ ಹಿಂಡಸಗೇರಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮರಾಠ, ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಆಗಿವೆ.
ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಟಿಕೆಟ್ ಪಕ್ಕಾ ಎಂದು ಹೇಳುತ್ತಿದ್ದರೂ, ಕಾಂಗ್ರೆಸ್​ನ ಮತ್ತೊಬ್ಬ ಆಕಾಂಕ್ಷಿ ಎಫ್.ಎಚ್.ಜಕ್ಕಪ್ಪನವರ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ. ಇದು ಎಸ್​ಸಿ (ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರ. ಪ್ರಸಾದ ಅಬ್ಬಯ್ಯ ಸತತ 2 ಬಾರಿ ಗೆದ್ದಿದ್ದಾರೆ. ಅಬ್ಬಯ್ಯ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದು, ಈ ಬಾರಿ ಗೆದ್ದರೆ ಹ್ಯಾಟ್ರಿಕ್. 2008ರಲ್ಲಿ ಬಿಜೆಪಿಯ ವೀರಭದ್ರಪ್ಪ ಹಾಲಹರವಿ ಶಾಸಕರಾಗಿದ್ದರು. ನಂತರದ ಚುನಾವಣೆಯಲ್ಲಿ ಕೆಜೆಪಿ ಮತಗಳ ವಿಭಜನೆಯಿಂದಾಗಿ ಅವರು ಸೋಲನುಭವಿಸಿದರು. ಬಿಜೆಪಿಯ ಡಾ.ಕ್ರಾಂತಿಕಿರಣ, ಬಸವರಾಜ ಅಮ್ಮಿನಬಾವಿ, ಚಂದ್ರಶೇಖರ ಗೋಕಾಕ ಪ್ರಬಲ ಆಕಾಂಕ್ಷಿಗಳಾಗಿ ದ್ದಾರೆ. ಅಬ್ಬಯ್ಯ ಹ್ಯಾಟ್ರಿಕ್ ಗೆಲವು ಸಾಧಿಸುವರೇ ಅಥವಾ ಬ್ರೇಕ್ ಬೀಳಲಿದೆಯೇ ಎಂಬುದನ್ನು ಕಾದುನೋಡಬೇಕು. ಮುಸ್ಲಿಂ ಹಾಗೂ ದಲಿತರ ಮತಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
ಈ ಮೊದಲು ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಧಾರವಾಡ ಕ್ಷೇತ್ರ (ಹಳೆಯ ಧಾರವಾಡ ಗ್ರಾಮೀಣ) ಕಳೆದ ಬಾರಿ ಕಮಲದ ತೆಕ್ಕೆಗೆ ಜಾರಿದೆ. ಬಿಜೆಪಿಯ ಅಮೃತ ದೇಸಾಯಿ ಹಾಲಿ ಶಾಸಕರಾಗಿದ್ದು, ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆಯಾಗಿದ್ದ ಸವಿತಾ ಅಮರಶೆಟ್ಟಿ, ತವನಪ್ಪ ಅಷ್ಟಗಿ ಅವರೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಈ ಹಿಂದೆ ಒಂದು ಬಾರಿ ಪಕ್ಷೇತರ ಹಾಗೂ 2 ಬಾರಿ ಕಾಂಗ್ರೆಸ್​ನಿಂದ ಗೆದ್ದಿದ್ದ ವಿನಯ ಕುಲಕರ್ಣಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಬಿಜೆಪಿಯ ಯೋಗೀಶಗೌಡ ಕೊಲೆ ಆರೋಪದಲ್ಲಿ ಬಂಧಿತರಾಗಿ, ಜಾಮೀನಿನಡಿ ಧಾರವಾಡ ಜಿಲ್ಲೆಯಿಂದ ಹೊರಗೆ ಇದ್ದಾರೆ. ಅವರು ಸಹ ಕಾಂಗ್ರೆಸ್​ನ ಪ್ರಬಲ ಆಕಾಂಕ್ಷಿ. ವಿನಯಗೆ ಒಂದು ವೇಳೆ ಟಿಕೆಟ್ ಸಿಗದಿದ್ದರೆ ಅವರ ಪತ್ನಿ ಶಿವಲೀಲಾ ಅವರಿಗಾದರೂ ಟಿಕೆಟ್ ಕೊಡಬೇಕೆಂಬ ಒತ್ತಡವನ್ನು ಪಕ್ಷದ ಹೈಕಮಾಂಡ್ ಮೇಲೆ ಹೇರುತ್ತಿದ್ದಾರೆ ಎನ್ನಲಾಗಿದೆ. ಕೈ ಪಡೆಯ ಇಸ್ಮಾಯಿಲ್ ತಮಟಗಾರ ಸಹ ಟಿಕೆಟ್​ಗಾಗಿ ಯತ್ನಿಸುತ್ತಿದ್ದಾರೆ. ಒಂದು ವೇಳೆ ವಿನಯ ಕುಲಕರ್ಣಿಗೆ ಟಿಕೆಟ್ ಸಿಗದಿದ್ದರೆ ಜೆಡಿಎಸ್​ನಿಂದ ಗುರುರಾಜ ಹುಣಸಿಮರದ ಕಣಕ್ಕೆ ಇಳಿಯುವ ಲೆಕ್ಕಾಚಾರದಲ್ಲಿದ್ದಾರೆ. ಲಿಂಗಾಯತ, ಮರಾಠ, ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
