ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ಹೊಸಕೋಟೆ ಹಾಗೂ ಆನೇಕಲ್ ಕ್ಷೇತ್ರಗಳನ್ನು ಒಳಗೊಂಡ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಈ ಬಾರಿ ಅಚ್ಚರಿ ಫಲಿತಾಂಶ ಹೊರಬೀಳಲಿದೆ ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ. ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಾಗಿರುವ ಈ ಭಾಗದಲ್ಲಿ ಇತ್ತೀಚೆಗೆ ಸಚಿವ ಎಂಟಿಬಿ ನಾಗರಾಜ್ ಹಾಗೂ ಡಾ.ಕೆ.ಸುಧಾಕರ್ ಪ್ರಭಾವದಿಂದ ಬಿಜೆಪಿ ಹವಾ ಸೃಷ್ಟಿಯಾಗಿದ್ದು, ಬದಲಾವಣೆ ಗಾಳಿಯೂ ಜೋರಾಗಿದೆ. ಕಳೆದ ಚುನಾವಣೆಯಲ್ಲಿ ಎರಡಲ್ಲಿ ಜೆಡಿಎಸ್, ಮೂರರಲ್ಲಿ ಕಾಂಗ್ರೆಸ್, ಒಂದರಲ್ಲಿ ಬಿಜೆಪಿ ಗೆದ್ದಿತ್ತು. ಈ ಮಧ್ಯೆ ಹೊಸಕೋಟೆ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿನ ದಡ ಸೇರಿದ್ದರು. ಸದ್ಯದ ಚಿತ್ರಣ ಗಮನಿಸಿದರೆ ಆರು ಕ್ಷೇತ್ರಗಳಲ್ಲೂ ಹಾಲಿ ಶಾಸಕರ ವರ್ಚಸ್ಸು ಮತ್ತೊಮ್ಮೆ ಕಮಾಲ್ ಮಾಡಲಿದೆ ಎಂಬ ನಿರೀಕ್ಷೆ ಇದೆ. ಆದರೂ ಕೆಲವರಿಗೆ ಪಕ್ಷ ಟಿಕೆಟ್ ನೀಡದಿರಬಹುದೆಂಬ ಚರ್ಚೆಯೂ ನಡೆಯುತ್ತಿದೆ. ಇದರಿಂದ ಹಾಲಿ ಶಾಸಕರು ಬಂಡಾಯವಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೆ ಪಕ್ಷ ಸೇರ್ಪಡೆ ಮತ್ತಿತರ ಕಾರ್ಯಕ್ರಮ ಮೂಲಕ ಪಕ್ಷ ಬಲವರ್ಧನೆಗೆ ಬಿಜೆಪಿ ಆದ್ಯತೆ ನೀಡಿದೆ. ಒಕ್ಕಲಿಗ, ಕುರುಬ, ದಲಿತ ಸಮುದಾಯಗಳು ಸೇರಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಲಿದ್ದು, ಕಮಲ ಕಮಾಲ್ ಮಾಡಲಿದೆಯೇ ಎಂಬ ಕುತೂಹಲವಿದೆ.
|ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಹೈವೋಲ್ಟೇಜ್ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಹೊಸಕೋಟೆ ಈಗಾಗಲೆ ಚುನಾವಣೆಯ ಕಾವಲಿಯಲ್ಲಿ ಬಿಸಿಯಾಗಿದೆ. ಪರಿಷತ್ ಸದಸ್ಯರೂ ಆದ ಸಚಿವ ಎಂಟಿಬಿ ನಾಗರಾಜ್​ಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಹಾಲಿ ಶಾಸಕ ಶರತ್ ಬಚ್ಚೇಗೌಡ ಅಷ್ಟೇ ಪ್ರಬಲವಾಗಿ ಪೈಪೋಟಿ ನೀಡಲು ತಾಲೀಮು ನಡೆಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ನಡುವೆಯೇ ನೇರ ಪೈಪೋಟಿ ಇದ್ದು, ಜೆಡಿಎಸ್ ನೆಪಮಾತ್ರ. ಕಾಂಗ್ರೆಸ್​ನಿಂದ ಶರತ್ ಬಚ್ಚೇಗೌಡ ಅಭ್ಯರ್ಥಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಹಿಂದೆಯಷ್ಟೇ ಘೋಷಿಸಿದ್ದಾರೆೆ. ಉಪಚುನಾವಣೆ ಸೋಲಿನಿಂದ ಕೆರಳಿರುವ ಎಂಟಿಬಿ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂ. ಅನುದಾನ ತಂದಿದ್ದಾರೆ. ಕಳೆದ ಬಾರಿ ಏಕಾಏಕಿ ಪಕ್ಷ ಬದಲಾವಣೆಯಿಂದ ಎರಡೂ ಪಕ್ಷದ ಕಾರ್ಯಕರ್ತರು ಗೊಂದಲಗೊಂಡಿದ್ದರು. ಈ ಬಾರಿ ಸರಿದೂಗಿಸಿಕೊಂಡು ದೊಡ್ಡಮಟ್ಟದ ಕಾರ್ಯಕರ್ತರ ಪಡೆ ಸಜ್ಜುಗೊಳಿಸಿದ್ದಾರೆ. ಉಪ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಗೆಲುವು ಕಂಡ ಶರತ್ ಪ್ರಭಾವವೂ ಇರುವುದರಿಂದ ಕ್ಷೇತ್ರದಲ್ಲಿ ಚುನಾವಣಾ ಫೈಟ್ ಬಿರುಸಾಗಲಿದೆ.
ಎರಡು ಬಾರಿ ಬಿಜೆಪಿ ತೆಕ್ಕೆಯಲ್ಲಿ, ಮತ್ತೆರೆಡು ಬಾರಿ ಜೆಡಿಎಸ್ ಪಾಲಾಗಿರುವ ನೆಲಮಂಗಲದಲ್ಲಿ ಸದ್ಯ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಂಡಿದೆ. ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 400 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳು, ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ಯುಜಿಡಿ ಕಾಮಗಾರಿ, ಹಿಂದುಳಿದ ಹಾಗೂ ಒಕ್ಕಲಿಗ ಸಮುದಾಯ ಹಾಗೂ ಜೆಡಿಎಸ್ ಭದ್ರಕೋಟೆ ಇವೆಲ್ಲವೂ ಗೆಲುವಿನ ಹಾದಿ ಸುಗಮಗೊಳಿಸಿವೆ ಎಂಬ ಆಶಾಭಾವ ಜೆಡಿಎಸ್​ನದ್ದಾಗಿದೆ. ಇದರ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಹೊಸ ಮುಖಗಳ ಅಬ್ಬರ ಕಂಡುಬರುತ್ತಿದೆ. ಬಿಜೆಪಿಯಿಂದ ವೆಂಕಟೇಶ್ ದೊಡ್ಡೇರಿ ಹಾಗೂ ಹೊಂಬಯ್ಯ ಹೆಸರು ಚಲಾವಣೆಯಲ್ಲಿದೆ. ಈ ನಡುವೆ ಮಾಜಿ ಶಾಸಕ ನಾಗರಾಜ್ ಟಿಕೆಟ್​ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್​ನಿಂದ ಎನ್.ಶ್ರೀನಿವಾಸ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್, ಬಿಜೆಪಿ ನಡುವೆ ನೇರ ಫೈಟ್ ಸಾಧ್ಯತೆ ಕಂಡುಬರುತ್ತಿದೆ.
ಕಳೆದೆರಡು ಬಾರಿ ಕಾಂಗ್ರೆಸ್​ನಿಂದ ಗೆದ್ದಿರುವ ಶಾಸಕ ವೆಂಕಟರಮಣಯ್ಯ ಅವರ ವಿರುದ್ಧ ವಿರೋಧಿ ಅಲೆ ಜೋರಾಗಿದೆ. ಚುನಾವಣೆಯಲ್ಲಷ್ಟೇ ಕಾಣಿಸಿಕೊಳ್ಳುವ ಶಾಸಕರು ನಂತರದಲ್ಲಿ ಅಪರೂಪ ಎಂಬ ಮಾತಿದೆ. ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಈ ಮಧ್ಯೆ ಕೆಎಂಎಫ್ ನಿರ್ದೇಶಕ ಆನಂದ್ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದು, ವರಿಷ್ಠರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ಕೈತಪು್ಪವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಹರಿದಾಡುತ್ತಿದೆ. ಪರ್ಯಾಯ ನಾಯಕರಿಲ್ಲದೆ ಕಾಂಗ್ರೆಸ್ ಸೊರಗುತ್ತಿದ್ದು, ಬಿಜೆಪಿ ಖಾತೆ ತೆರೆಯಲು ದೊಡ್ಡಮಟ್ಟದ ವೇದಿಕೆ ಸೃಷ್ಟಿಸಿಕೊಳ್ಳುತ್ತಿದೆ. ಧೀರಜ್​ವುುನಿರಾಜು ಹೆಸರು ಮುಂಚೂಣಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಆಪ್ತರೆನಿಸಿದ್ದು, ಕ್ಷೇತ್ರದಲ್ಲಿ ಟಿಕೆಟ್ ಗಟ್ಟಿಯಾಗಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಈ ಮಧ್ಯೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ ಹೆಸರು ಕೇಳಿಬರುತ್ತಿದೆ. ಯಲಹಂಕ ಶಾಸಕ ವಿಶ್ವನಾಥ್, ಪುತ್ರನನ್ನು ಕಣಕ್ಕಿಳಿಸುವ ಯೋಚನೆ ಹೊಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಎರಡು ಬಾರಿ ಪರಾಭವಗೊಂಡಿರುವ ಜೆಡಿಎಸ್​ನ ಮುನೇಗೌಡ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಈ ಎಲ್ಲವುಗಳ ನಡುವೆ ಜಿಲ್ಲೆಯಲ್ಲಿ ಡಿಸಿ ಆಗಿದ್ದ ಕರೀಗೌಡ ಹೆಸರು ಕೇಳಿಬರುತ್ತಿದ್ದು, ಜೆಡಿಎಸ್ ಅಥವಾ ಬಿಜೆಪಿಯಿಂದ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಲಹಂಕ ವಿಧಾನಸಭಾ ಕ್ಷೇತ್ರ ಈ ಕ್ಷಣದ ವರೆಗೂ ಬಿಜೆಪಿಯ ಭದ್ರಕೋಟೆಯಂತೆಯೇ ಕಾಣಿಸುತ್ತಿದೆ. ಹಾಲಿ ಶಾಸಕ ವಿಶ್ವನಾಥ್ ಹಾಗೂ ಪಕ್ಷದ ಕಾರ್ಯಕರ್ತರ ಪಡೆ ಕೋಟೆಯನ್ನು ಭದ್ರಪಡಿಸಿಕೊಂಡೇ ಬಂದಿದೆ. ಕಾಂಗ್ರೆಸ್​ನ ಗೋಪಾಲಕೃಷ್ಣ ವೈಯಕ್ತಿಕ ಕಾರಣದಿಂದ ತೆರೆಮರೆಗೆ ಸರಿದಿರುವುದು ಕಾಣಿಸಿದೆ. ಹಾಗೆಯೇ ಕೇಶವ ರಾಜೇಂದ್ರ ಟಿಕೆಟ್ ಪ್ರಬಲ ಆಕಾಂಕ್ಷಿ. ಇವರ ಹೊರತಾಗಿ ಅಚ್ಚರಿ ಹೆಸರು ಕೊನೆಯ ಹಂತದಲ್ಲಿ ಬಂದರೂ ಬರಬಹುದು. ಜೆಡಿಎಸ್ ವಿಚಾರಕ್ಕೆ ಬಂದರೆ, ಎನ್.ಕೃಷ್ಣಪ್ಪ ಮತ್ತು ಹನುಮಂತೇಗೌಡ ಟಿಕೆಟ್ ಆಕಾಂಕ್ಷಿಗಳು. ಇವರನ್ನೇ ಕಣಕ್ಕಿಳಿಸಲು ಪಕ್ಷ ಸಿದ್ಧವಿದ್ದಂತಿಲ್ಲ. ಹೊಸ ಅಭ್ಯರ್ಥಿಗಳ ಹುಡುಕಾಟದಲ್ಲಿ ಎಂಬ ಮಾತೂ ಜೆಡಿಎಸ್ ಪಾಳಯದಲ್ಲಿ ಕೇಳಿಬಂದಿದೆ. ಯಲಹಂಕದ ಚಹರೆ ಬದಲಿಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಕಾರ್ಯಕರ್ತರ ಜತೆಗಿನ ಒಡನಾಟದಿಂದ ವಿಶ್ವನಾಥ್ ಇನ್ನಷ್ಟು ಬೇರುಬಿಟ್ಟಂತೆ ಕಾಣಿಸುತ್ತಿದೆ. ಗ್ರಾಮಾಂತರ ಭಾಗದಲ್ಲೂ ಪರ್ಯಾಯ ಕಾಣಿಸುತ್ತಿಲ್ಲ.
ಎಸ್ಸಿ ಮೀಸಲು ಕ್ಷೇತ್ರವಾದ ಆನೇಕಲ್​ನಲ್ಲಿ ಈ ಬಾರಿಯೂ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ. ಕಾಂಗ್ರೆಸ್​ನಿಂದ ಎರಡು ಬಾರಿ ಶಾಸಕರಾಗಿರುವ ಬಿ.ಶಿವಣ್ಣ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಎ.ನಾರಾಯಣಸ್ವಾಮಿ ಸ್ಪರ್ಧಿಸಿ ಕೇಂದ್ರ ಸಚಿವರಾಗಿರುವುದರಿಂದ ಇಲ್ಲಿಗೆ ಮುಂದಿನ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲ ಇದೆೆ. ಈಗಾಗಲೆ ಹುಲ್ಲಹಳ್ಳಿ ಶ್ರೀನಿವಾಸ್, ಕೆ.ಶಿವರಾಮ್ ಟಿವಿ ಬಾಬು, ಬಂಡಾಪುರ ರಾಮಚಂದ್ರ, ಪಟಾಪಟ್ ಶ್ರೀನಿವಾಸ್, ಶೀಥಲ್ ನಾರಾಯಣಸ್ವಾಮಿ, ಸಂದೀಪ್ ಎಂಬುವರು ಟಿಕೆಟ್​ಗಾಗಿ ಫೈಟ್ ನಡೆಸುತ್ತಿದ್ದಾರೆ. ಇನ್ನೊಂದೆಡೆ ಹೈಕಮಾಂಡ್ ಸೂಚಿಸಿದ್ರೆ ಎ.ನಾರಾಯಣಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳೂ ಇವೆೆ. ಕಳೆದ ಬಾರಿ ಜೆಡಿಎಸ್ ಹಾಗೂ ಬಿಎಸ್ಪಿ ಹೊಂದಾಣಿಕೆಯಿಂದ ಟಿಕೆಟ್ ಸಿಗದೆ ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದ ಜೆಡಿಎಸ್ ಅಭ್ಯರ್ಥಿ ಕೆ.ಪಿ. ರಾಜು ಕಣಕ್ಕಿಳಿಯುತ್ತಿದ್ದರೆ, ಬಿಎಸ್ಪಿಯಿಂದ ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ ಸ್ಪರ್ಧಿಸಲಿದ್ದಾರೆ.
ಕಳೆದ ಬಾರಿ ಕಡೇ ಗಳಿಗೆಯಲ್ಲಿ ಜೆಡಿಎಸ್​ನಿಂದ ಬಿ-ಫಾರಂ ಗಿಟ್ಟಿಸಿಕೊಂಡು ಗೆಲುವು ಕಂಡಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ ಈ ಬಾರಿ ಮಂಕಾದಂತೆ ಕಾಣುತ್ತಿದ್ದಾರೆ. ಮೊದಲೆರಡು ವರ್ಷ ಇದ್ದ ಉತ್ಸಾಹ ಕಂಡುಬರುತ್ತಿಲ್ಲ, ಇದರ ನಡುವೆ ಜೆಡಿಎಸ್​ನಲ್ಲೇ ಎರಡು ಬಣಗಳು ಹುಟ್ಟಿಕೊಂಡಿದ್ದು, ಹಾಲಿ ಶಾಸಕರಿಗೆ ಟಿಕೆಟ್ ಕೈತಪು್ಪವ ಮಾತುಗಳು ಹರಿದಾಡುತ್ತಿವೆ. ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ದಂಡೇ ಇದ್ದು, ಕಾರ್ಯಕರ್ತರಲ್ಲೂ ಇದು ಗೊಂದಲ ಮೂಡಿಸಿದೆ. ಎ.ಸಿ.ಶ್ರೀನಿವಾಸ್ ಹೆಸರು ಮುಂಚೂಣಿಯಲ್ಲಿದ್ದರೆ ಆನಂದ್, ರಾಜಣ್ಣ ಸ್ಪರ್ಧೆಗೆ ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ. ಏನತ್ಮಧ್ಯೆ ಮಾಜಿ ಶಾಸಕ ವೆಂಕಟಸ್ವಾಮಿ ಹಾಗೂ ಮುನಿನರಸಿಂಹಯ್ಯ ಹೆಸರು ತಳುಕು ಹಾಕಿಕೊಂಡಿದೆ. ಬಿಜೆಪಿಯಲ್ಲಿ ಅಂಥ ಸ್ಪರ್ಧೆ ಕಂಡುಬರದಿದ್ದರೂ ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ ಟವಲ್ ಹಾಕಿದ್ದಾರೆನ್ನಲಾಗಿದೆ. ಕಳೆದ ಬಾರಿ ಕಡೇ ಕ್ಷಣದಲ್ಲಿ ಜೆಡಿಎಸ್​ನಿಂದ ಟಿಕೆಟ್ ವಂಚಿತರಾಗಿದ್ದ ಇವರು ಕ್ಷೇತ್ರದಲ್ಲಿ ಪ್ರಭಾವಿಯಾಗಿದ್ದಾರೆ.
ಮೋದಿ ನಡೆಯನ್ನು ಮೆಚ್ಚಿದ ಪಾಕಿಸ್ತಾನಿ ಪತ್ರಕರ್ತ; ಪಾಕ್ ಸರ್ಕಾರದ ವಿರುದ್ಧ ಅಸಮಾಧಾನ..

ಮರದ ಕೆಳಗೆ ಸಿಲುಕಿ ಬೈಕ್ ಸವಾರ ಸಾವು; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
