|ಸ.ದಾ.ಜೋಶಿಬೀದರ್
ಗಡಿ ಕ್ಷೇತ್ರ, ಮರಾಠಿಗರ ಪ್ರಭಾವ ಹೊಂದಿರುವ ಭಾಲ್ಕಿ ಕ್ಷೇತ್ರದಲ್ಲಿ ಹಾಲಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತ. ಸತತ ಮೂರು ಸಲ ಗೆದ್ದು ಹ್ಯಾಟ್ರಿಕ್ ಬಾರಿಸಿರುವ ಖಂಡ್ರೆ ಓಟಕ್ಕೆ ಬ್ರೇಕ್ ಹಾಕುವುದು ಬಿಜೆಪಿಗೆ ಬಿಗ್ ಚಾಲೆಂಜ್ ಆಗಿದೆ. ಸದ್ಯ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಇದು ಕೈ ಪಡೆಗೆ ಜೋಶ್ ತಂದರೆ, ಕೇಸರಿ ಪಾಳಯದಲ್ಲಿ ಗೊಂದಲ ಸೃಷ್ಟಿಸಿದೆ. ಕಳೆದ ಸಲ ಖಂಡ್ರೆಗೆ ಪ್ರಬಲ ಸ್ಪರ್ಧೆಯೊಡ್ಡಿದ್ದ ಡಿ.ಕೆ.ಸಿದ್ರಾಮ ಮತ್ತೊಮ್ಮೆ ಬಿಜೆಪಿ ಟಿಕೆಟ್ ಗಿಟ್ಟಿಸಿ ಅದೃಷ್ಟ ಪರೀಕ್ಷಿಸಲು ಹವಣಿಸುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ಪ್ರಕಾಶ ಖಂಡ್ರೆ ಸಹ ಬಿಜೆಪಿ ಟಿಕೆಟ್​ನ ಪ್ರಬಲ ಆಕಾಂಕ್ಷಿ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆಯಲ್ಲಿ ಪ್ರಕಾಶ ಖಂಡ್ರೆ ಸ್ಪರ್ಧಿಸಿ ಸೋತ ಬಳಿಕ ಭಾಲ್ಕಿ ಕ್ಷೇತ್ರದಲ್ಲಿ ಇನ್ನೊಮ್ಮೆ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ.
ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅಕಾಲಿಕ ನಿಧನದಿಂದ 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ ಶರಣು ಸಲಗರ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಗೆಲುವಿನ ನಗೆ ಬೀರಿದ್ದಾರೆ. ಈಗ ಮತ್ತೆ ಸಲಗರ ಕಮಲ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಉದ್ಯಮಿ ಧನರಾಜ ತಾಳಂಪಳ್ಳಿ ಸೇರಿ 10ಕ್ಕೂ ಹೆಚ್ಚು ಮುಖಂಡರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತಿದ್ದ ದಿ.ನಾರಾಯಣರಾವ್ ಪತ್ನಿ ಮಾಲಾ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಲು ಬಯಸಿದ್ದಾರೆ. ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಮಾಜಿ ಎಂಎಲ್ಸಿ ವಿಜಯಸಿಂಗ್ ಟಿಕೆಟ್ ಸಿಗುವ ಉಮೇದಿನಲ್ಲಿ ಕ್ಷೇತ್ರ ಸಂಚಾರಕ್ಕೆ ಸೈ ಎಂದಿದ್ದಾರೆ. ಜೆಡಿಎಸ್​ನಿಂದ ಅಶ್ರಫ್ ಅಲಿ ಪ್ರಬಲ ಆಕಾಂಕ್ಷಿ. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನಡೆ ನಿಗೂಢವಿದೆ.
ಜೆಡಿಎಸ್ ನೆಚ್ಚಿದ ಜಿಲ್ಲೆಯ ಏಕೈಕ ಕ್ಷೇತ್ರ ಬೀದರ್ ದಕ್ಷಿಣ. ಶಾಸಕ ಬಂಡೆಪ್ಪ ಖಾಶೆಂಪುರ ಮತ್ತೊಮ್ಮೆ ಜೆಡಿಎಸ್​ನಿಂದ ಸ್ಪರ್ಧಿಸಲಿದ್ದಾರೆ. ಖಾಶೆಂಪುರ ಉತ್ತಮ ನೆಟ್​ವರ್ಕ್ ಹೊಂದಿದ್ದು, ಮತ್ತೊಮ್ಮೆ ಗೆಲ್ಲುವ ತವಕದಲ್ಲಿ ತಾಲೀಮು ನಡೆಸಿದ್ದಾರೆ. 2008ರಲ್ಲಿ ಹೊಸದಾಗಿ ಉದಯಿಸಿದ ಕ್ಷೇತ್ರ ಮೂರು ಚುನಾವಣೆ ಕಂಡಿದ್ದು, ಎರಡು ಬಾರಿ ಜೆಡಿಎಸ್, ಒಮ್ಮೆ ಕರ್ನಾಟಕ ಮಕ್ಕಳ ಪಕ್ಷ ಗೆದ್ದಿದೆ. ಇದು ಸಂಪೂರ್ಣ ಹಳ್ಳಿಗಳಿಂದ ಕೂಡಿದ ಕ್ಷೇತ್ರ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಸೋತ ಕೆಎಸ್​ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಈಗ ಪ್ರಬಲ ಆಕಾಂಕ್ಷಿ. ಸೋತ ಬಳಿಕ ಕ್ಷೇತ್ರದಲ್ಲಿ ನಿರಂತರ ಸುತ್ತಾಡುತ್ತ ಸಂಘಟನೆಯಲ್ಲಿ ತೊಡಗಿದ್ದಾರೆ. ಮುಖಂಡ ಸಂಜಯ ಖೇಣಿ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಕಸರತ್ತು ನಡೆಸಿದ್ದಾರೆ. ಮಾಜಿ ಶಾಸಕ ಅಶೋಕ ಖೇಣಿ ಮತ್ತೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಸಿಎಂ ಧರ್ಮಸಿಂಗ್ ಅಳಿಯ ಚಂದ್ರಾಸಿಂಗ್ ಸಹ ಕೈ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಆಮ್​ದಿ್ಮ ಪಕ್ಷದಿಂದ ನಸೀಮ್ ಪಟೇಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಹುಮನಾಬಾದ್ ಕಾಂಗ್ರೆಸ್ ಭದ್ರಕೋಟೆಯಾಗಿ ಪರಿಣಮಿಸಿದೆ. ಹಾಲಿ ಶಾಸಕ ರಾಜಶೇಖರ ಪಾಟೀಲ್ (ಗೌಡರು) ನಾಲ್ಕು ಬಾರಿ ಗೆದ್ದು ಬಿಗಿ ಹಿಡಿತ ಸಾಧಿಸಿದ್ದು, ಐದನೇ ಜಯಕ್ಕಾಗಿ ಭರ್ಜರಿ ತಾಲೀಮು ನಡೆಸಿದ್ದಾರೆ. ಇವರಿಗೆ ಟಕ್ಕರ್ ಕೊಡುವ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಿಲ್ಲ. ಸಮರ್ಥ ಎದುರಾಳಿ ಇಲ್ಲದಿರುವುದು ಬಿಜೆಪಿ ವರಿಷ್ಠರ ಚಿಂತೆ ಹೆಚ್ಚಿಸಿದೆ. ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಕಳೆದ ಸಲ ಸ್ಪರ್ಧಿಸಿ ಸೋತಿದ್ದ ಸುಭಾಷ ಕಲ್ಲೂರ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಶಾಸಕ ಪಾಟೀಲ್ ಸಹೋದರ ಸಂಬಂಧಿ ಡಾ.ಸಿದ್ದು ಪಾಟೀಲ್ ಇತ್ತೀಚೆಗೆ ಬಿಜೆಪಿ ಸೇರಿದ್ದು, ಮುಂದಿನ ಚುನಾವಣೆ ಲೆಕ್ಕದಲ್ಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತ ನಸೀಮ್ ಪಟೇಲ್ ಈಗ ಆಮ್ ಆದ್ಮಿ ಪಕ್ಷ ಸೇರಿದ್ದು, ಜೆಡಿಎಸ್​ನಿಂದ ಯಾರು ಎಂಬ ಪ್ರಶ್ನೆಯೂ ಮೂಡಿದೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸ್ಪರ್ಧಿಸಬಹುದೆಂಬ ಮಾತು ಕೇಳಿಬರುತ್ತಿವೆ. ಆದರೆ ಇದು ಖಚಿತವಾಗಿಲ್ಲ.
ಕೋಟೆ ನಗರಿ ಬೀದರ್ ಉತ್ತರ ಕ್ಷೇತ್ರದಿಂದ ಹಾಲಿ ಶಾಸಕ ರಹೀಮ್ ಖಾನ್ ಕಾಂಗ್ರೆಸ್​ನಿಂದ ಕಣಕ್ಕಿಳಿಯಲಿದ್ದಾರೆ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕಾರಣ ರಹೀಮ ಖಾನ್ ಮತ್ತೆ ಗೆಲುವಿನ ಹುಮ್ಮಸ್ಸಿನಲ್ಲಿ ಕ್ಷೇತ್ರ ಸುತ್ತಾಟ ನಡೆಸಿದ್ದಾರೆ. ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿ ಸೋತಿರುವ ಸೂರ್ಯಕಾಂತ ನಾಗಮಾರಪಳ್ಳಿಗೆ ಮತ್ತೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಈ ದಿಸೆಯಲ್ಲಿ ಸೂರ್ಯಕಾಂತ ಸಿದ್ಧತೆ ಆರಂಭಿಸಿದ್ದಾರೆ. ಆದರೂ ಎರಡು ಬಾರಿ ಸೋತವರಿಗೆ ಟಿಕೆಟ್ ಅನುಮಾನ ಎಂಬ ಮಾತು ಕಮಲ ಪಡೆಯಲ್ಲೇ ಕೇಳಿಬರುತ್ತಿರುವುದರಿಂದ ಸೂರ್ಯಕಾಂತ ಮತ್ತವರ ಟೀಮ್ಲ್ಲಿ ಒಂದಿಷ್ಟು ದುಗುಡವೂ ಸೃಷ್ಟಿಸಿದೆ. ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಟಿಕೆಟ್ ಗಿಟ್ಟಿಸುವ ಪ್ರಯತ್ನ ನಡೆಸಿದ್ದಾರೆ. ಮುಖಂಡರಾದ ಗುರುನಾಥ ಕೊಳ್ಳುರ್, ಈಶ್ವರಸಿಂಗ್ ಠಾಕೂರ್, ಬಾಬು ವಾಲಿ ಇತರರೂ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್​ನಿಂದ ರಮೇಶ ಪಾಟೀಲ್ ಹೆಸರು ಕೇಳಿಬರುತ್ತಿದೆ.
ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಗೆ ಹೊಂದಿಕೊಂಡ ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಔರಾದ್​ನಲ್ಲಿ ಬಿಜೆಪಿಯಿಂದ ಮತ್ತೆ ಪ್ರಭು ಚವ್ಹಾಣ್ ಸ್ಪರ್ಧಿಸಲಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಸತತ ಗೆದ್ದು ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆ ಮಾಡಿದ ಕೀರ್ತಿ ಚವ್ಹಾಣ್ ಅವರಿಗಿದೆ. ಚವ್ಹಾಣ್​ಗೆ ಸಂಪುಟದಲ್ಲಿ ಪಶು ಸಂಗೋಪನೆ ಖಾತೆ ಸಿಕ್ಕಿದ್ದು, ಅಭಿವೃದ್ಧಿ ಕಾರ್ಯಗಳ ಬಲದ ಜತೆಗೆ ಜನರೊಂದಿಗೆ ಬೆರೆಯುವ ಸ್ವಭಾವ, ಸರಳ ವ್ಯಕ್ತಿತ್ವ, ನಾನಾ ಚಟುವಟಿಕೆ ಇವರ ಶಕ್ತಿ ಹೆಚ್ಚಿಸಿದೆ. ಪಕ್ಷದೊಳಗೆ ಒಂದು ಟೀಮ್ ಇವರ ವಿರುದ್ಧ ನಿರಂತರ ಸಕ್ರಿಯವಿದೆ. ಇದ್ಯಾವುದಕ್ಕೂ ಜಗ್ಗದ, ಬಗ್ಗದ ಚವ್ಹಾಣ್ ಸೆಡ್ಡು ಹೊಡೆದು ತಮ್ಮ ಪ್ರಭಾವ, ಪ್ರಾಬಲ್ಯ ಸಾಬೀತುಪಡಿಸಿ ನಾಲ್ಕನೇ ಬಾರಿ ವಿಧಾನಸಭೆಗೆ ಎಂಟ್ರಿ ಕೊಡಲು ರಣತಂತ್ರ ಹೆಣೆದಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಸ್ವಲ್ಪದರಲ್ಲೇ ಸೋತಿದ್ದ ವಿಜಯಕುಮಾರ ಕೌಡ್ಯಾಳ ಸೇರಿ ಅರ್ಧ ಡಜನ್​ಗೂ ಅಧಿಕ ಆಕಾಂಕ್ಷಿಗಳು ಕಾಂಗ್ರೆಸ್​ನಲ್ಲಿದ್ದಾರೆ. ಭೀಮಸೇನರಾವ ಸಿಂಧೆ, ಶಂಕರರಾವ ದೊಡ್ಡಿ, ಡಾ.ಲಕ್ಷ್ಮಣ ಸೋರಳ್ಳಿಕರ ಇತರರು ಟಿಕೆಟ್​ಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
