|ಎನ್.ಡಿ. ಶಾಂತಕುಮಾರಶಿವಮೊಗ್ಗ
ಜಿಲ್ಲೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಅತಿ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರ ಶಿವಮೊಗ್ಗ. ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ವಯಸ್ಸಿನ ಕಾರಣಕ್ಕೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ವಿಚಾರ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದರೆ, ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದೇ ಬರಲಿದೆ ಎನ್ನುವ ವಿಶ್ವಾಸ ಕಾಂಗ್ರೆಸ್ ಟಿಕೆಟ್ ಬೇಡಿಕೆ ಹೆಚ್ಚಿಸಿದೆ. ಕೆ.ಎಸ್. ಈಶ್ವರಪ್ಪ ಬದಲಿಗೆ ಅವರ ಪುತ್ರ ಕೆ.ಈ. ಕಾಂತೇಶ್​ಗೆ ಟಿಕೆಟ್ ಕೊಟ್ಟರೆ ಚುನಾವಣೆ ಸುಲಭವಾಗಬಹುದು ಎಂಬ ದೂರಾಲೋಚನೆಯೂ ಕೇಸರಿ ಪಡೆಯಲ್ಲಿದೆ. ಜೆಡಿಎಸ್​ನಲ್ಲಿ ತದ್ವಿರುದ್ಧ ಪರಿಸ್ಥಿತಿ. ಹಾಳೂರಿಗೆ ಉಳಿದವನೇ ಗೌಡ ಎನ್ನುವಂತೆ ಶಿವಮೊಗ್ಗದಲ್ಲಿ ಇದುವರೆಗೆ ಶ್ರೀಕಾಂತ್ ಬಿಟ್ಟರೆ ಮತ್ತೊಬ್ಬರು ಕಾಣಿಸುತ್ತಿಲ್ಲ. ಆದರೆ ಈ ಬಾರಿ ಅವರೂ ಮನಸ್ಸು ಮಾಡುತ್ತಿಲ್ಲ.
ಕೆ.ಎಸ್. ಈಶ್ವರಪ್ಪ ಅವರಿಗೆ ಬಹುಶಃ ಈ ಚುನಾವಣೆ ಅಗ್ನಿ ಪರೀಕ್ಷೆ. ಬೆಳಗಾವಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸಂಪುಟದಿಂದ ಹೊರಬಂದ ಅವರು ಕ್ಲೀನ್​ಚಿಟ್ ಪಡೆದ ನಂತರ ಈಗ ಮತದಾರರ ಬಳಿ ಮಂತ್ರಿಯಾಗೇ ಹೋಗಬೇಕು ಎನ್ನುವ ಇರಾದೆ ಹೊಂದಿದ್ದಾರೆ. ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ದರೆ ಜಿಪಂ ಮಾಜಿ ಸದಸ್ಯ, ಪುತ್ರ ಕೆ.ಈ. ಕಾಂತೇಶ್​ನನ್ನು ಕಣಕ್ಕೆ ಇಳಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಆದರೆ ಅಪ್ಪಿತಪ್ಪಿಯೂ ಬಹಿರಂಗವಾಗಿ ಈ ಮಾತನ್ನು ಹೇಳಿಲ್ಲ. ಇತ್ತೀಚೆಗೆ ಬಹುತೇಕ ಕಾರ್ಯಕ್ರಮಗಳಲ್ಲಿ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಿರುವ ಕಾಂತೇಶ್, ತಂದೆಯ ಗೈರಲ್ಲಿ ಅವರೇ ಭಾಗವಹಿಸುತ್ತಿದ್ದಾರೆ.
ಒಂದು ವೇಳೆ ಈಶ್ವರಪ್ಪ ಅವರಿಗೆ ಟಿಕೆಟ್ ಸಿಗದಿದ್ದರೆ ಎಂದು ಹೇಳಿಕೊಳ್ಳುತ್ತಲೇ ಬಿಜೆಪಿ ಟಿಕೆಟ್ ಕೇಳುವವರ ಸಂಖ್ಯೆ ಹೆಚ್ಚಿದೆ. ಈ ಸಾಲಿನಲ್ಲಿ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್ ಮತ್ತಿತರರು ಇದ್ದಾರೆ.
ಆರ್​ಎಸ್​ಎಸ್ ಸಂಘಟನೆಯೊಂದಿಗೆ ಗುರುತಿಸಿ ಕೊಂಡಿದ್ದ ಡಾ. ಧನಂಜಯ ಸರ್ಜಿ ಅವರು ಬರಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು ಎಂದು ನಿರ್ಧರಿಸಿ ಒಂದು ವರ್ಷದಿಂದ ಹಿಂದೆಯೇ ರಂಗಕ್ಕೆ ಧುಮುಕಿದ್ದರು. ಬಿಜೆಪಿ ಮೊದಲ ಆದ್ಯತೆ, ಒಂದು ವೇಳೆ ಬಿಜೆಪಿಯಿಂದ ಅವಕಾಶ ಸಿಗದಿದ್ದರೆ ಕಾಂಗ್ರೆಸ್ ಅಥವಾ ಆಮ್ ಆದ್ಮಿಯಾದರೂ ಸರಿ. ಯಾವುದೇ ಪಕ್ಷದ ಚಿಹ್ನೆ ಸಿಗದಿದ್ದರೆ ಪಕ್ಷೇತರನಾದರೂ ಸರಿ ಎಂಬ ನಿಲುವಿಗೆ ಬಂದಿದ್ದರು. ಜನಪರ ಜೀವಪರ ಎಂಬ ಅವರ ಸ್ಲೋಗನ್​ನೊಂದಿಗೆ ಹವಾ ಕ್ರಿಯೇಟ್ ಮಾಡಿದ್ದರು. ಆದರೆ ಯಾರೂ ನಿರೀಕ್ಷೆ ಮಾಡದ ರೀತಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಬೇಷರತ್ ಎಂಬ ಮಾಮೂಲಿ ಪದ ಬಳಕೆಯಾಗಿದೆ.
ಆಯನೂರು ಮಂಜುನಾಥ್ ಯಾವಾಗ ಪಕ್ಷದ ಯಾವ ಮುಖಂಡರೊಂದಿಗೆ ಮುನಿಸಿಕೊಳ್ಳುತ್ತಾರೆ. ಯಾವಾಗ ಅವರೊಂದಿಗೆ ಚಹಾ ಕುಡಿಯುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ಆದರೆ ಅವರ ಮಾತುಗಳು/ಬೇಡಿಕೆಗಳಲ್ಲಿ ಹಿಡನ್ ಅಜೆಂಡಾ ಇರುವುದು ಮಾತ್ರ ಅಂಗೈ ಹುಣ್ಣಿನಷ್ಟೇ ಸ್ಪಷ್ಟ ಎಂದು ಹೇಳಲಾಗುತ್ತಿದೆ. ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಯಾರಿಗೋ ಗುರಿ ಇಡುವ ಕಲೆ ಅವರಿಗೆ ಸಿದ್ಧಿಸಿದಂತೆ ಕಾಣಿಸುತ್ತದೆ.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್. ದತ್ತಾತ್ರಿ ಮತ್ತು ಜ್ಯೋತಿ ಪ್ರಕಾಶ್ ಕೂಡ ಟಿಕೆಟ್ ಕೇಳುತ್ತಿದ್ದಾರೆ. ಬ್ರಾಹ್ಮಣರ ಕೋಟಾದಲ್ಲಿ ಹಕ್ಕು ಮಂಡಿಸುತ್ತಿರುವ ಎಸ್. ದತ್ತಾತ್ರಿ ಪಕ್ಷ ಸಂಘಟನೆಗೆ ನಮ್ಮ ಕೊಡುಗೆಯೂ ಇದೆ ಎಂದು ಹೇಳುತ್ತಿದ್ದಾರೆ. ಲಿಂಗಾಯತ ಜಾತಿ ಲೆಕ್ಕಾಚಾರದಲ್ಲಿ ಜ್ಯೋತಿ ಪ್ರಕಾಶ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಬಿಜೆಪಿಯತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಚಿತ್ತ: ಕಾಂಗ್ರೆಸ್​ನಿಂದ ಹತ್ತಕ್ಕೂ ಅಧಿಕ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಅಧ್ಯಕ್ಷ ಬಿ.ಕೆ. ಸುಂದರೇಶ್, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ಸದಸ್ಯ ಎಚ್.ಸಿ. ಯೋಗೀಶ್, ಎಸ್.ಪಿ. ದಿನೇಶ್, ವೈ.ಎಚ್. ನಾಗರಾಜ್ , ಇಮ್ತಿಯಾಜ್, ನರಸಿಂಹಮೂರ್ತಿ, ಶೀನ್ ಜೋಸೆಫ್ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಾಲ್ಕೈದು ಆಕಾಂಕ್ಷಿಗಳು ಗಂಭೀರ ಪ್ರಯತ್ನ ಮಾಡುತ್ತಿದ್ದಾರೆ.
ಡಾ. ಧನಂಜಯ ಸರ್ಜಿ ಎಲ್ಲಿ ಪ್ರಭಾವ (?) ಬಳಸಿ ಟಿಕೆಟ್ ತಂದು ಬಿಡುತ್ತಾರೋ ಎಂಬ ಆತಂಕದಲ್ಲಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು, ಸರ್ಜಿ ಬಿಜೆಪಿ ಸೇರುತ್ತಿದ್ದಂತೆ ಸ್ವಲ್ಪ ನಿರಾಳರಾಗಿದ್ದಾರೆ. ಜೆಡಿಎಸ್​ನಿಂದ ಮತ್ತೊಬ್ಬರು ಬರುವ ಆತಂಕ ಇದೆಯಾದರೂ ಅವರು ಡಾ. ಸರ್ಜಿಯಷ್ಟು ಅಪಾಯ ಕಾರಿಯಾಗಲಾರರು ಎನ್ನುವ ಸಮಾಧಾನ ಇದ್ದಂತೆ ಕಾಣುತ್ತಿದೆ. ಆದರೆ ಸ್ವಾಮೀಜಿಯೊಬ್ಬರು ಜೆಡಿಎಸ್​ನ ಮುಖಂಡರಿಗೆ ಕಾಂಗ್ರೆಸ್ ಸೇರುವ ಸಲಹೆ ನೀಡಿರುವ ಸುದ್ದಿ ಹರಡಿದೆ.

ಕೆಜೆಪಿ- ಬಿಜೆಪಿ ಜಗಳದಲ್ಲಿ ವಿಧಾನಸಭೆ ಪ್ರವೇಶ ಮಾಡಿದ್ದ ಕೆ.ಬಿ. ಪ್ರಸನ್ನಕುಮಾರ್ ಎರಡನೇ ಪ್ರಯತ್ನದಲ್ಲಿ ವಿಫಲರಾಗಿದ್ದರು. ಈಗ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾಧ್ಯಕ್ಷ ಬಿ.ಕೆ. ಸುಂದರೇಶ್ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಒಂದು ಕೈ ನೋಡೋಣ ಎಂದು ಸಜ್ಜಾಗಿದ್ದಾರೆ. ಕುರುಬ ಸಮಾಜದ ಮರಿಯಪ್ಪ ಅವರು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೃಪೆಯ ನಿರೀಕ್ಷೆಯಲ್ಲಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿ ಬೇರೆ ಸಮಾಜದವರಿಗೆ ಅವಕಾಶ ಕಲ್ಪಿಸಿದರೆ ಕುರುಬ ಸಮಾಜಕ್ಕೆ ಟಿಕೆಟ್ ಕೊಡಿ ಎಂದು ಹಕ್ಕು ಮಂಡನೆ ಮಾಡುವುದು ಅವರ ಲೆಕ್ಕಾಚಾರ. ನಗರಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಪಕ್ಷ ಸಂಘಟನೆಯಲ್ಲಿ ಚುರುಕಾಗಿದ್ದು ಪಕ್ಷದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮಾಜಿ ಶಾಸಕರ ಪುತ್ರರೂ ಆಗಿರುವ ಅವರು ಯುವಕರ ಕೋಟಾದಲ್ಲಿ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ನೆಲೆ ಇಲ್ಲದ ಜೆಡಿಎಸ್:ಜಿಲ್ಲೆಯಲ್ಲಿ ಜೆಡಿಎಸ್ ಸ್ಥಿತಿ ಶೋಚನೀಯವಾಗಿದ್ದು, ವೋಟ್ ಬ್ಯಾಂಕ್ ಇಲ್ಲ. ಸ್ವಂತ ಬಲದಿಂದ ಗೆದ್ದು ಬರುವವರ ಮೇಲೆ ಪಕ್ಷ ಅವಲಂಬನೆಯಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಸರಿಯಾಗಿ ಸ್ಪರ್ಧೆ ನೀಡುವ ಲಕ್ಷ್ಮೀಕಟಾಕ್ಷ ಇರುವ ಹುರಿಯಾಳುಗಳು ಕಾಣಿಸುತ್ತಿಲ್ಲ. ಕಾಣಿಸುತ್ತಿಲ್ಲ ಎನ್ನುವುದಕ್ಕಿಂತ ಬಂಡವಾಳ ಹೂಡಿದರೆ ಚುನಾವಣೆ ಎಂಬ ವ್ಯಾಪಾರದಲ್ಲಿ ಲಾಭ ಸಿಗುವ ಅವಕಾಶ ಕಡಿಮೆ ಎನ್ನುವುದು ವಸ್ತುಸ್ಥಿತಿ. ಇದುವರೆಗೆ ಎಲ್ಲ ಚುನಾವಣೆಗಳಲ್ಲಿ ಶ್ರೀಕಾಂತ್ ಕಾಯಂ ಜೆಡಿಎಸ್ ಅಭ್ಯರ್ಥಿ. ಆದರೆ ಈ ಬಾರಿ ಅವರು ಮನಸ್ಸು ಮಾಡಿದಂತೆ ಕಾಣಿಸುತ್ತಿಲ್ಲ. ಸ್ವಲ್ಪ ದಿನ ಪಕ್ಷದ ಚಟುವಟಿಕೆಗಳಿಂದ ದೂರು ಇದ್ದ ಅವರು ಇತ್ತೀಚೆಗೆ ಮತ್ತೆ ಸಕ್ರಿಯರಾಗಿದ್ದಾರೆ. ಆದರೆ ಚುನಾವಣೆ ಸ್ಪರ್ಧೆಗೆ ಉತ್ಸಾಹ ಇದ್ದಂತಿಲ್ಲ. ಆದರೂ ಏನೋ ಲೆಕ್ಕಾಚಾರಗಳು ನಡೆದಿರುವಂತಿದೆ.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
