|ಎನ್.ವೆಂಕಟೇಶ್ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರದಲ್ಲಿ ವಿಧಾನಸಭಾ ಚುನಾವಣೆ ಇತಿಹಾಸದಲ್ಲೇ ಕಳೆದ ಉಪಚುನಾವಣೆಯಲ್ಲಿ ಮೊದಲ ಬಾರಿಕಮಲ ಅರಳಿದೆ. ಕಾಂಗ್ರೆಸ್​ನಿಂದ ಸತತ 2 ಬಾರಿ ಗೆಲುವು ಸಾಧಿಸಿದ್ದ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಿ, ಬಿಜೆಪಿ ಅಪ್ಪಿಕೊಂಡು ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಹೇಗಾದರೂ ಮಾಡಿ ಮತ್ತೆ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದು ಕೈ ನಾಯಕರ ಹಂಬಲ. ಇದಕ್ಕೆ ಸಚಿವರನ್ನು ಎದುರಿಸಲು ಸ್ಥಳೀಯರ ಬದಲಿಗೆ ಪ್ರಬಲ ನಾಯಕರನ್ನು ಕರೆ ತರಲು ಯತ್ನಿಸುತ್ತಿದ್ದಾರೆ. ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾರಾಮಯ್ಯಗೆ ಸ್ಪರ್ಧಿಸಲು ಒತ್ತಡ ಹೇರಲಾಗುತ್ತಿದ್ದರೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇದರ ನಡುವೆ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಎಂ.ಆಂಜಿನಪ್ಪ, ಯಲುವಹಳ್ಳಿ ಎನ್.ರಮೇಶ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಮತ್ತೊಂದೆಡೆ ಸ್ಪರ್ಧೆಗೆ ಇಷ್ಟವಿಲ್ಲದಿದ್ದರೂ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಎನ್ನುತ್ತ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ.
ಸಮಾಜ ಸೇವೆಯಿಂದ ಸತತ ಎರಡು ಬಾರಿ ಗೆದ್ದು ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಮಾಜಿ ಶಾಸಕ ಎನ್.ಸಂಪಂಗಿ ಪೈಪೋಟಿಯ ತಲೆನೋವು ನಿವಾರಣೆಯಾಗಬೇಕಾಗಿದೆ. ಸಿಪಿಎಂ ಪ್ರಾಬಲ್ಯದೊಂದಿಗೆ ಗಮನ ಸೆಳೆಯುತ್ತಿರುವ ಕ್ಷೇತ್ರದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅಗಲಿಕೆ ಬಳಿಕ ದುರ್ಬಲಗೊಂಡಿರುವ ಪಕ್ಷದ ಸಂಘಟನೆಯಲ್ಲಿ ಹಿಡಿತ ಸಾಧಿಸಿ, ಮತ್ತೆ ಗತ ವೈಭವಕ್ಕೆ ತರುವ ಹೊಣೆ ಕೆಂಪು ಸೇನಾನಿಗಳಿಗೆ ಸವಾಲಾಗಿದೆ. ಅಭ್ಯರ್ಥಿಗಳಾಗಿ ವೈದ್ಯ ಅನಿಲ್ ಕುಮಾರ್, ಹೋರಾಟಗಾರ ಪಿ.ಮಂಜುನಾಥ್ ರೆಡ್ಡಿ ಹೆಸರು ಕೇಳಿ ಬರುತ್ತಿದೆ. ಈ ಮಧ್ಯೆ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು ಬಿದ್ದಿದೆ. ಬೆಂಗಳೂರು ಉಪವರ್ತಲ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರಾಮಲಿಂಗಪ್ಪ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಜೆ.ನಾಗರಾಜ್ ರೆಡ್ಡಿ ಹೆಸರು ಘೊಷಣೆಯಾಗಿದ್ದರೂ ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ ಟಿಕೆಟ್​ಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಕಾಂಗ್ರೆಸ್​ನ ಭದ್ರಕೋಟೆ ಗೌರಿಬಿದನೂರು ಕ್ಷೇತ್ರದಲ್ಲಿ 5 ಬಾರಿ ಸತತ ಗೆಲುವು ಸಾಧಿಸಿದ ಹಾಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮತ್ತೊಮ್ಮೆ ಕಣಕ್ಕಿಳಿಯುವುದು ಖಚಿತ. ಚುನಾವಣೆ ದೃಷ್ಟಿಯಲ್ಲಿ ಉಚಿತ ಕೊಡುಗೆಗಳ ಮೂಲಕ ಗಮನ ಸೆಳೆಯುತ್ತಿರುವ ಸಮಾಜ ಸೇವಕರ ಪೈಪೋಟಿಯು ಕೈ ಪಾಳಯಕ್ಕೆ ತಲೆನೋವಾಗಿದೆ. ಸ್ವಪಕ್ಷೀಯ ಅತೃಪ್ತ ಮುಖಂಡರು ಉದ್ಯಮಿ ಪುಟ್ಟಸ್ವಾಮಿಗೌಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಸಮಾಜಸೇವೆಯ ಮೂಲಕ ಜಿಪಂ ಮಾಜಿ ಸದಸ್ಯ ಕೆ.ಕೆಂಪರಾಜು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದ ಸಿ.ಆರ್. ನರಸಿಂಹಮೂರ್ತಿ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ವೈದ್ಯ ಡಾ.ಶಶಿಧರ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಜತೆಗೆ ಪಕ್ಷೇತರರ ಪೈಪೋಟಿಯೂ ತೀವ್ರವಾಗಿದೆ.
ರಾಯಲಸೀಮಾ ಮಾದರಿಯಲ್ಲಿ ಹಣಾಹಣಿಗೆ ಹೆಸರಾಗಿರುವ ಚಿಂತಾಮಣಿ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ ಎಂ.ಸಿ.ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿ. ಈ ಹಿಂದೆ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಮುನಿಸಿಕೊಂಡು ಪಕ್ಷದಿಂದ ಹೊರ ಹೋಗಿದ್ದರು. ಇದೀಗ ಕೋಲಾರದ ಘಟಬಂಧನ್ ನಾಯಕ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಕೈ ಪಾಳಯಕ್ಕೆ ಬಂದಿದ್ದಾರೆ. ಸತತ ಎರಡು ಬಾರಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಎಂ.ಕೃಷ್ಣಾರೆಡ್ಡಿ ಜೆಡಿಎಸ್​ನಿಂದ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಗೆ ಅಭ್ಯರ್ಥಿ ವಿಚಾರದಲ್ಲಿ ಖಚಿತತೆ ಇಲ್ಲ. ಹೊರ ಭಾಗದವರನ್ನು ಕರೆ ತರುವ ಲೆಕ್ಕಾಚಾರ ನಾಯಕರದ್ದಾಗಿದೆ.
ಶಿಡ್ಲಘಟ್ಟದಲ್ಲಿ 6 ಬಾರಿ ಆಯ್ಕೆಯಾಗಿರುವ ಮಾಜಿ ಸಚಿವ ವಿ.ಮುನಿಯಪ್ಪ ಚುನಾವಣಾ ನಿವೃತ್ತಿ ಬಯಸಿದ್ದಾರೆ. ಆದರೆ, ನಾಯಕತ್ವವನ್ನು ಅನ್ಯರಿಗೆ ಬಿಟ್ಟು ಕೊಡಲು ಬಯಸುತ್ತಿಲ್ಲ. ಈ ಬಾರಿ ಕೊನೇ ಸ್ಪರ್ಧೆ ಇಲ್ಲವೇ ಪುತ್ರ ಶಶಿಧರ್​ಗೆ ಟಿಕೆಟ್ ಕೊಡಿಸುವ ಯತ್ನದಲ್ಲಿದ್ದಾರೆ. ಇದರ ನಡುವೆ ಸಮಾಜ ಸೇವಕರಾದ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಪಕ್ಷದ ವರಿಷ್ಠರ ಕೃಪಾಕಟಾಕ್ಷ ಬಯಸಿ ಶಕ್ತಿ ಪ್ರದರ್ಶಿಸಿ, ಸಂಘಟನೆಯಲ್ಲಿ ತೊಡಗಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಸ್ಪರ್ಧೆ ಖಚಿತ. ಬಿಜೆಪಿಗೆ ಮಾಜಿ ಶಾಸಕ ಎಂ.ರಾಜಣ್ಣ (ಜೆಡಿಎಸ್​ನಿಂದ ಸೇರ್ಪಡೆ) ಹೆಸರು ಹೇಳಲಾಗುತ್ತಿದೆಯಾದರೂ ಸ್ವಪಕ್ಷೀಯರು ಮೂಲ ಮತ್ತು ವಲಸಿಗ ಮುನಿಸಿನಲ್ಲಿ ಹೊರ ಭಾಗದವರನ್ನು ಕಣಕ್ಕಿಳಿಸುವ ಯೋಜನೆ ಹೊಂದಿದ್ದಾರೆ. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಡಿ.ಎನ್.ದೇವರಾಜ್ ಹೆಸರು ಕೇಳಿ ಬರುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
