ಬೆಂಗಳೂರು:ಶ್ರೀಸಾಮಾನ್ಯರು, ಬಡವರು, ವಿದ್ಯಾರ್ಥಿಗಳು, ಮಕ್ಕಳು ಮತ್ತು ಇತರ ಅವಕಾಶ ವಂಚಿತ ಸಮುದಾಯಗಳ ಪ್ರವಾಸೋದ್ಯಮದ ಅವಶ್ಯಕತೆಗಳಿಗೆ ಪೂರಕವಾದ ನೀತಿಗಳನ್ನು ಸರ್ಕಾರಗಳು ರೂಪಿಸಬೇಕೆಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಪ್ರತಿಪಾದಿಸಿದರು.
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ದಕ್ಷಿಣದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಸಚಿವರುಗಳ ಸಮ್ಮೇಳನದಲ್ಲಿ ಅವರು ಕರ್ನಾಟಕದ ನಿಲುವನ್ನು ಪ್ರತಿಪಾದಿಸಿದರು.ವಿಲಾಸಿ ಮತ್ತು ಮೇಲ್ಮದ್ಯಮ ವರ್ಗದವರ ಮತ್ತು ಶ್ರೀಮಂತರ ಪ್ರವಾಸೋದ್ಯಮ ಅವಶ್ಯಕತೆಗಳನ್ನು ಪೂರೈಸುವ ಜೊತೆಗೆ ವಂಚಿತ ಸಮುದಾಯಗಳ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಕರ್ನಾಟಕ ಪ್ರವಾಸೋದ್ಯಮ ಅತ್ಯಂತ ಉಚ್ಚಾಯ ಸ್ಥಿತಿಯಲ್ಲಿದ್ದು, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಪ್ರಯತ್ನಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಬೆಂಬಲಿಸುತ್ತಿಲ್ಲ. ಮೈಸೂರಿನ ಚಾಮುಂಡೇಶ್ವರಿ ದೇವಿ ಬೆಟ್ಟವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಬಿಡುಗಡೆಯಾಗಬೇಕಾದ 45.17 ಕೋಟಿ ರೂ.ಗಳ ಮೊದಲ ಕಂತು ಇನ್ನು ಬಿಡುಗಡೆ ಮಾಡಿಲ್ಲ. ಮೈಸೂರು ಮತ್ತು ಹಂಪಿ ಯೋಜನೆಗಳನ್ನು ಸ್ವದೇಶಿ ದರ್ಶನ 2.0 ಕಾರ್ಯಕ್ರಮಗಳ ಅಡಿಯಲ್ಲಿ ಅನುಮೋದನೆ ನೀಡಿದ್ದು 46.17 ಕೋಟಿ ರೂ. ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಹಣ ಬಿಡುಗಡೆಯಲ್ಲಿ ಇಂಥ ವಿಳಂಬಗಳು ಅತ್ಯಂತ ಮಹತ್ವದ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ಅಡ್ಡಿಯುಂಟುಮಾಡುತ್ತಿದ್ದು ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವಲ್ಲಿ ರಾಜ್ಯ ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ಕಾಲಕಾಲಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಲ್ಡನ್ ಚಾರಿಯೆಟ್ ರೈಲು ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಭಾರತ್ ಗೌರವ ರೈಲ್ವೆ ನೀತಿಯಂತೆ ಗೋಲ್ಡನ್ ಚಾರಿಯೆಟ್ ಪ್ರವಾಸದ ನೀತಿಯನ್ನು ಬದಲಾವಣೆ ಮಾಡಿ ಪ್ರವಾಸದ ಶುಲ್ಕವನ್ನು ಕಡಿತಗೊಳಿಸುವ ಮೂಲಕ ಅತ್ಯಂತ ಮಹತ್ವದ ವೈಭವದ ಈ ಪ್ರವಾಸ ಯೋಜನೆಗೆ ಸಾರ್ವಜನಿಕರು ಉಪಯೋಗಿಸಲು ಅನುಕೂಲವಾಗಬೇಕೆಂದು ಒತ್ತಾಯಿಸಿದರು.
ಬೇರೆ ಬೇರೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಪಾರಂಪರಿಕ ತಾಣಗಳು ಮತ್ತು ಇಕೋ ಟೂರಿಸಂ ತಾಣಗಳನ್ನು ಅಂದರೆ ಪರಿಸರ ಪ್ರವಾಸೋದ್ಯಮ ತಾಣಗಳನ್ನು ಗೋಲ್ಡನ್ ಚಾರಿಯೆಟ್ ಯೋಜನೆಗೆ ಜೋಡಿಸಬೇಕೆಂದು ಎಲ್ಲ ವರ್ಗದ ಜನರು ಈ ಯೋಜನೆಯನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ನೀತಿ ಬದಲಾವಣೆ ಮತ್ತು ಪ್ರವೃತ್ತಿ ಬದಲಾವಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕರ್ನಾಟಕದ ಪ್ರಸ್ತುತ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಮಾರ್ಗದತ್ತು ಯೋಜನೆ, ನಮ್ಮ ಸ್ಮಾರಕ ಯೋಜನೆ ಯೋಜನೆಯಡಿ ದತ್ತು ನೀಡಲು 800 ಸ್ಮಾರಕ ಗುರುತಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 25,000 ಅಲಕ್ಷಿತ ಸ್ಮಾರಕಗಳಿವೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಅತ್ಯಂತ ಜನಪ್ರಿಯ ಯೋಜನೆಯಾದ ಶಕ್ತಿ ಯೋಜನೆಯಡಿ 285 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಪಾರಂಪರಿಕ ಮತ್ತು ಶ್ರದ್ಧಾ ಪ್ರವಾಸೋದ್ಯಮದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ ಎಂದು ಮಾನ್ಯ ಸಚಿವರು ವಿವರಿಸಿದರು.
ಕರ್ನಾಟಕದ 5 ಪಾರಂಪರಿಕ ತಾಣಗಳನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗಳಿಗೆ ಸೇರ್ಪಡೆಯಾಗಿದ್ದು ಡೆಕ್ಕನ್ ಸುಲ್ತನೇಟ್‌ನ ಕೋಟೆಗಳು, ಶ್ರೀರಂಗಪಟ್ಟಣದ ಸ್ಮಾರಕಗಳು, ಐಹೊಳೆ-ಬಾದಾಮಿಯ ಮಂದಿರಗಳ ಶಿಲ್ಪಕಲೆ, ಹಿರೆಬೆಣಕಲ್‌ನ ಮೆಗಾಲಿಟಿಕ್ ಸೈಟ್ ಮತ್ತು ಬೀದರ್‌ನ ಕರೇಜ್ ವ್ಯವಸ್ಥೆ ಹಾಗೂ ಲಕ್ಕುಂಡಿಯ ಪಾರಂಪರಿಕ ಶಿಲ್ಪಕಲಾ ವೈಭವಗಳು ಯುನೆಸ್ಕೋದ ವಿಶ್ವಪಾರಂಪರಿಕ ತಾಣಗಳ ಪಟ್ಟಿಗಳಿಗೆ ಸೇರಬೇಕೆಂದು ಕರ್ನಾಟಕದ ಉತ್ಕಟವಾದ ಬಯಕೆಯಾಗಿದೆ. ಇಂಥ ತಾಣಗಳನ್ನು ಯುನೆಸ್ಕೋ ತಾಣಗಳಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರ ಅಗತ್ಯದ ಬೆಂಬಲ ನೀಡಬೇಕೆಂದು ಎಚ್.ಕೆ.ಪಾಟೀಲ ಮನವಿ ಮಾಡಿದರು.
ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಹಾಯಕ ಸಚಿವ ಸುರೇಶ ಗೋಪಿ, ಆಂದ್ರಪ್ರದೇಶ ಮತ್ತು ಪುದುಚೇರಿಗಳ ಪ್ರವಾಸೋದ್ಯಮ ಸಚಿವರು ಹಾಗೂ ದಕ್ಷಿಣದ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − one =
Remember me
