ಎನ್.ಎಲ್. ಶಿವಮಾದು ಬೆಂಗಳೂರುರಾಜ್ಯದ ಸರ್ಕಾರಿ ಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಕ್ಕೆ ನಿರ್ಧರಿಸಿರುವ ಶಿಕ್ಷಣ ಇಲಾಖೆ ಅನುಮತಿ ನೀಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ರಾಜ್ಯ ಸರ್ಕಾರವು ಬಜೆಟ್​ನಲ್ಲಿ ಘೋಷಿಸಿರುವಂತೆ ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆಯು ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮಾಡಿಕೊಳ್ಳುತ್ತಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅನುಮತಿ ನೀಡಿದ ತಕ್ಷಣ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಸುಪ್ರೀಂ ತೀರ್ಪು ಮುಖ್ಯ: ಶಿಕ್ಷಣ ಇಲಾಖೆಯು ಹೊಸದಾಗಿ ಶಿಕ್ಷಕರ ನೇಮಕಾತಿ ಮಾಡುವುದಕ್ಕೂ ಮೊದಲು 2022-23ನೇ ಸಾಲಿನಲ್ಲಿ ನೇಮಕ ಮಾಡಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿಲ್ಲ. ಮೀಸಲಾತಿ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಹೊಸ ನೇಮಕಾತಿಗೆ ಹಿಂದಿನ ನೇಮಕಾತಿ ಆದೇಶವು ಮುಖ್ಯವಾಗಲಿದೆ.
ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳ ಆದಾಯ ಪ್ರಮಾಣಪತ್ರವು ತಂದೆ/ಪತಿಯದ್ದಾಗಿರಬೇಕಾ ಎಂಬ ಗೊಂದಲ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ಯಾವ ರೀತಿಯ ತೀರ್ಪು ಪ್ರಕಟವಾಗಲಿದೆ ಎಂಬುದನ್ನು ಆಕಾಂಕ್ಷಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 13,352 ಮಂದಿ ಅರ್ಹತೆ ಪಡೆದಿದ್ದರು. ಇದರಲ್ಲಿ ಇಲ್ಲಿಯವರೆಗೂ 11,494 ಮಂದಿಗೆ ನೇಮಕಾತಿ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ ಪ್ರಮಾಣಪತ್ರ ವಿತರಣೆ ಮಾಡಬೇಕಿದೆ. ಪ್ರಕರಣವು ಸುಪ್ರೀಂಕೋರ್ಟ್​ನಲ್ಲಿ ಇರುವುದರಿಂದ ಉಳಿದ ಅಭ್ಯರ್ಥಿಗಳಿಗೆ ಇನ್ನಷ್ಟೇ ಪ್ರಮಾಣಪತ್ರ ವಿತರಣೆ ಮಾಡಬೇಕಿದೆ. ಸುಪ್ರೀಂಕೋರ್ಟ್ ಮತ್ತು ಆರ್ಥಿಕ ಇಲಾಖೆ ಅನುಮತಿ ನೀಡಿದ ತಕ್ಷಣ ಇಲಾಖೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
1.25 ಲಕ್ಷ ಅರ್ಹ ಅಭ್ಯರ್ಥಿಗಳು:ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು 1.25 ಲಕ್ಷ ಮಂದಿ ಟಿಇಟಿ ಉತ್ತೀರ್ಣರಾಗಿ ಅರ್ಹತೆ ಪಡೆದಿದ್ದಾರೆ. ಮತ್ತೆ ಈಗ ಜೂ.30ರಂದು ಟಿಇಟಿ ನಡೆಸಲಾಗಿದ್ದು, 2.5 ಲಕ್ಷ ಮಂದಿ ಟಿಇಟಿ ಬರೆದಿದ್ದಾರೆ. ಕನಿಷ್ಠ 1.5 ಲಕ್ಷ ಮಂದಿ ಅರ್ಹ ಅಭ್ಯರ್ಥಿಗಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಪ್ರತಿ ವರ್ಷ 10 ಸಾವಿರ ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿತ್ತು. ಆದರೆ, 2023-24ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿಯಾಗದ ಕಾರಣ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ.
45 ಸಾವಿರ ಅತಿಥಿ ಶಿಕ್ಷಕರ ಕಾರ್ಯ:ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಮತ್ತು ಪ್ರೌಢಶಾಲೆಗಳಲ್ಲಿ 10 ಸಾವಿರ ಸೇರಿ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ. ಅದರಂತೆ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ನೇಮಕ ಪ್ರಕ್ರಿಯೆಗಳು ನಡೆಯುತ್ತಿವೆ.
50 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ: ರಾಜ್ಯದ 43,348 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1.40 ಲಕ್ಷ ಶಿಕ್ಷಕರು ಮತ್ತು 4,838 ಪ್ರೌಢಶಾಲೆಗಳಲ್ಲಿ 28 ಸಾವಿರ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 50 ಸಾವಿರ ಮತ್ತು ಪ್ರೌಢಶಾಲೆಗಳಲ್ಲಿ 5 ಸಾವಿರ ಸೇರಿ 55 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಇದೆ. 10 ಸಾವಿರ ಶಿಕ್ಷಕರನ್ನು ನೇಮಿಸಿದರೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ.
ಸರ್ಕಾರಿ ಶಾಲೆಗಳಲ್ಲಿ 10 ಸಾವಿರ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ನೀಡಿದ ತಕ್ಷಣ ಅಧಿಸೂಚನೆ ಪ್ರಕಟಿಸಲಾಗುತ್ತದೆ.
| ಬಿ.ಬಿ. ಕಾವೇರಿ ಆಯುಕ್ತೆ, ಶಾಲಾ ಶಿಕ್ಷಣ
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:sixteen + nine =
Remember me
