ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಷಯ ಭಾರಿ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯು ಪುಷ್ಪ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಮೂಲಕ ಇತರ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿದೆ.
ಕುಂದಾ ನಗರಿ ಖ್ಯಾತಿಗೆ ಕುಂದುಂಟು ಮಾಡಿದ್ದ ಈ ಕಸ ವಿಲೇವಾರಿ ಕ್ರಮೇಣ ಪರಿಸರಸ್ನೇಹಿ ವ್ಯವಸ್ಥೆಗೆ ಹೊಂದುಕೊಳ್ಳುತ್ತಿದೆ. ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 250 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಈ ಪೈಕಿ ಹಸಿ ಕಸದ್ದೇ ಸಿಂಹಪಾಲು. ಅಶೋಕನಗರದ ಸಗಟು ಹೂವಿನ ಮಾರುಕಟ್ಟೆಯಲ್ಲಿ ನಿತ್ಯವೂ 300-500 ಕೆಜಿ ಹೂ ತ್ಯಾಜ್ಯ ಬೀಳುತ್ತಿತ್ತು. ಇದನ್ನು ತಿಪ್ಪೆಗೆ ಬಿಸಾಡದೇ ಸಂಸ್ಕರಣೆ ಮೂಲಕ ಆದಾಯದ ಮೂಲವನ್ನಾಗಿಸುವಲ್ಲಿ ಪಾಲಿಕೆ ಸಲವಾಗಿದೆ.
ನಿತ್ಯವೂ ಹೂ ಸಂಗ್ರಹಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರು ಸಂಗ್ರಹಿಸಿದ ಹೂವನ್ನು ಯಂತ್ರದಿಂದ ಪುಡಿ ತಯಾರಿಸಿ ಕಚ್ಚಾವಸ್ತು ತಯಾರಿಸಲಾಗುತ್ತದೆ. ಪುಷ್ಪ ತ್ಯಾಜ್ಯದಿಂದ 50 ಕೆಜಿ ಪುಡಿ ಸಿಗುತ್ತಿದ್ದು, ಇದಕ್ಕೆ ಮಿಕ್ಸಿಂಗ್ ಪೌಡರ್ ಹಾಗೂ ಗೈಕಾಸ್ ಅಂಟು ಬಳಸಲಾಗುತ್ತದೆ. ಇವುಗಳನ್ನು ಬಳಸಿ ಬಿದಿರಿನ ಸಣ್ಣ ಕಡ್ಡಿಗಳನ್ನು ಅಗರಬತ್ತಿಯನ್ನಾಗಿಸುವ ತರಬೇತಿಯನ್ನು ದುರ್ಗಾ ಮಹಿಳಾ ಸ್ವಸಹಾಯ ಸಂಘಕ್ಕೆ ನೀಡಲಾಗಿದೆ. 10 ಮಂದಿ ಇರುವ ಈ ಸಂಘದ ನಿತ್ಯ 20 ಸಾವಿರ ಅಗರಬತ್ತಿಯನ್ನು ತಯಾರಿಸುತ್ತದೆ. ಮಾಸಿಕ ಸಾವಿರಾರು ರೂ. ಆದಾಯ ಕಂಡುಕೊಳ್ಳುತ್ತಿದ್ದು, ಪಾಲಿಕೆ ಒದಗಿಸುವ ಜಾಗದಲ್ಲೇ ತ್ಯಾಜ್ಯ ಹೂಗಳನ್ನು ಒಣಗಿಸಿ ಕಚ್ಚಾವಸ್ತುವಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
2 ಲಕ್ಷ ರೂ. ಹೂಡಿಕೆ:
ಈ ಹೊಸ ಉಪಕ್ರಮದಿಂದಾಗಿ ಬೆಳಗಾವಿ ಪಾಲಿಕೆಗೆ ಪುಷ್ಯ ತ್ಯಾಜ್ಯವು ವ್ಯಾಜ್ಯವಾಗಿ ಕಂಡಿಲ್ಲ. ಪರಿಸರ ಸ್ವಚ್ಚತೆ ಜತೆಗೆ ಉದ್ಯೋಗಾವಕಾಶ ಸೃಷ್ಟಿಸಲಾಗಿದೆ. ಎರಡು ಲಕ್ಷ ರೂ. ಹಣದಲ್ಲಿ ಮಿಕ್ಸಿಂಗ್ ಯಂತ್ರ, ಸ್ಟಿಕ್ ಮೇಕಿಂಗ್ ಯಂತ್ರ, ಸಣ್ಣ ಶೆಡ್ ನಿರ್ಮಿಸಲಾಗಿದೆ. ಇಲ್ಲಿಯೇ ಕಚ್ಚಾವಸ್ತುವನ್ನು ರೂಪಿಸಿ ಅಗರಬತ್ತಿ ತಯಾರಿಸಲಾಗುತ್ತಿದೆ. ಇಂತಹ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ ಬೆಳಗಾವಿ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಹಾಗೂ ಆಯುಕ್ತ ಅಶೋಕ ದುಡಗುಂಟಿ ಪ್ರೋತ್ಸಾಹ ನೀಡಿದ್ದರಿಂದ ನಾಲ್ಕೇ ತಿಂಗಳಲ್ಲಿ ಹೊಸ ಐಡಿಯಾ ಬೆಳಗಾವಿ ಜಿಲ್ಲೆಯಾದ್ಯಂತ ಸದ್ದು ಮಾಡಿದೆ.
ಇತ್ತೀಚಿಗೆ ಎನ್‌ಜಿಟಿಯ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ಅಧ್ಯಕ್ಷ ನ್ಯಾ. ಸುಭಾಷ್ ಬಿ ಅಡಿ ಅವರು ಬೆಳಗಾವಿ ಪಾಲಿಕೆಯ ಪ್ರಯತ್ನವನ್ನು ಖುದ್ದು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಉಪಕ್ರಮವು ಕೇಂದ್ರ ನಗರಾಭಿವೃದ್ಧಿ ಸಚಿವಾಯದ ಗಮನ ಸೆಳೆದಿದ್ದು ಎಲ್ಲೆಲ್ಲಿ ಪುಷ್ಪ ತ್ಯಾಜ್ಯ ಲಭ್ಯವಿದೆಯೋ ಅಂತಹ ಕಡೆಗಳಲ್ಲಿ ಘಟಕಗಳ ಸ್ಥಾಪನೆ ಮಾಡಬಹುದೆಂಬ ಸಂದೇಶ ರವಾನಿಸಿದೆ.
ಬೆಳಗಾವಿ ಜಿಲ್ಲೆಯೆಲ್ಲೆಡೆ ವಿಸ್ತರಣೆ:
ಪುಷ್ಪ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಉಪಕ್ರಮವನ್ನು ಗೋಕಾಕ್-ನಿಪ್ಪಾಣಿ ನಗರಸಭೆ ಹಾಗೂ ಯಲ್ಲಮ್ಮ ಸವದತ್ತಿ ಪುರಸಭೆಗೂ ವಿಸ್ತರಿಸಲಾಗುತ್ತಿದೆ. ಯಲಮ್ಮ ಸವದತ್ತಿಯಲ್ಲಿ ಹೆಚ್ಚಿನ ಹೂ ತ್ಯಾಜ್ಯ ಸಿಗುವುದರಿಂದ ಶೀಘ್ರವೇ ಘಟಕ ಆರಂಭವಾಗಲಿದೆ. ಈ ಎರಡೂ ಕಡೆ ಯಶಸ್ವಿಯಾದಲ್ಲಿ ಇಡೀ ಬೆಳಗಾವಿ ಜಿಲ್ಲೆಯ ಎಲ್ಲ ಪುರಸಭೆ ಹಾಗೂ ನಗರಸಭೆಗಳ ವ್ಯಾಪ್ತಿಗೂ ವಿಸ್ತರಿಸಲು ಚಿಂತನೆ ನಡೆದಿದೆ.
ರಾಜಧಾನಿಯಲ್ಲಿ ಗೊಬ್ಬರಕ್ಕೆ ಸೀಮಿತ:
ಬೆಂಗಳೂರಿನ ಕೆ.ಆರ್.ಮಾರುಕಟ್ಟೆನಲ್ಲಿ ಹೆಚ್ಚು ಪುಷ್ಪ ಮಾರಾಟವಾಗುತ್ತಿದ್ದು, ಇಲ್ಲೇ ತ್ಯಾಜ್ಯ ಕೂಡ ಅಧಿಕ ಉತ್ಪತ್ತಿಯಾಗುತ್ತದೆ. ಆದರೆ, ಇಲ್ಲಿನ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಷ್ಟೇ ಬಳಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ಇತರ ಮಾರುಕಟ್ಟೆಗಳಲ್ಲೂ ಬಿಸಾಡಿದ ಹೂಗಳನ್ನು ಹಸಿ ಕಸದಲ್ಲೇ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಂಪೋಸ್ಟ್ ಗೊಬ್ಬರಕ್ಕೆ ರೈತರಿಂದ ನಿರಂತರ ಬೇಡಿಕೆ ಇದೆ.
ದೇಗುಲಗಳಲ್ಲಿ ಕಾಂಪೋಸ್ಟ್‌ಗೆ ಗಮನ:
ಬಿಬಿಎಂಪಿ ವ್ಯಾಪ್ತಿಯ ಕೆಲ ದೇಗುಲಗಳಲ್ಲಿ ಪುಷ್ಪ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದೆ. 2016ರಲ್ಲಿ ಕಲ್ಯಾಣನಗರದ ಮಹಾಗಣಪತಿ ದೇವಸ್ಥಾನದಲ್ಲಿ ಬಳಸಿ ಬಿಸಾಡಿದ ಹೂಗಳಿಂದ ಗೊಬ್ಬರ ತಯಾರಿಸುವ ಉಪಕ್ರಮ ಮುನ್ನೆಲೆಗೆ ಬಂದಿತು. ನಂತರದಲ್ಲಿ ಮುಜರಾಯಿ ದೇಗುಲಗಳಲ್ಲೂ ಪುಷ್ಪ ಹಾಗೂ ತರಕಾರಿ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಸಲಾಗುತ್ತಿದೆ. ಬನಶಂಕರಿ ದೇಗುಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಗೊಬ್ಬರ ತಯಾರಿಕೆಯನ್ನು ಪುನಾರಂಭಿಸಲು ಸಿದ್ಧತೆ ನಡೆದಿದೆ.
ಬೆಳಗಾವಿಯ ಪುಷ್ಪ ಹರಾಜು ಕೇಂದ್ರದಲ್ಲಿ ಉತ್ಪತ್ತಿಯಾಗುವ ಹೂವಿನ ತ್ಯಾಜ್ಯವನ್ನು ವಿಲೇವಾರಿ ಸಮಸ್ಯೆಯನ್ನು ನಿವಾರಿಸಲು ಅಗರಬತ್ತಿ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ನಿತ್ಯವೂ ಹೂ ತ್ಯಾಜ್ಯ ವಿಲೇಗೆ ಪರಿಹಾರ ಸಿಕ್ಕಿದ್ದು, ಸ್ವಸಹಾಯ ಸಂಘದ 10 ಮಂದಿಗೆ ಉದ್ಯೋಗ ದೊರೆತಿದೆ. ಈ ಯಶೋಗಾಥೆ ಆಧರಿಸಿ ಬೆಳಗಾವಿ ಜಿಲ್ಲೆಯ ಇತರ ಪೌರ ಸಂಸ್ಥೆಗಳಿಗೂ ವಿಸ್ತರಿಸುವ ಆಶಯ ಇದೆ.– ಹನುಮಂತಪ್ಪ ಕಲಾದಗಿ, ಪರಿಸರ ಅಭಿಯಂತರ, ಬೆಳಗಾವಿ ಮಹಾನಗರಪಾಲಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
