ಬೆಂಗಳೂರು:ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣಾ ಮೂಡ್​ನಲ್ಲಿವೆ. ಈ ವಾರದೊಳಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮಹತ್ವದ ಸಭೆಗಳು ನಡೆಯಲಿವೆ.
ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಉಮೇದು, ವರ್ಚಸ್ಸು ಸಾಬೀತುಪಡಿಸುವ ಉತ್ಸಾಹ ಕಾಂಗ್ರೆಸ್​ನದು. ಹಾಲಿ ಸಂಖ್ಯಾಬಲವನ್ನು ಉಳಿಸಿಕೊಳ್ಳುವ ಜತೆಗೆ ಜೆಡಿಎಸ್ ಮೈತ್ರಿ ಬಲದಿಂದ ಎಲ್ಲ 28 ಸ್ಥಾಗಳನ್ನು ಗೆಲ್ಲಬೇಕೆಂಬುದು ಬಿಜೆಪಿ ಛಲ. ಮತಗಳಿಕೆ ಪ್ರಮಾಣ ಕುಸಿತ, ಪಲ್ಲಟವಾಗಿದ್ದರೂ ಪಕ್ಷಕ್ಕೆ ಅಸ್ತಿತ್ವವಿದೆ. ಬಿಜೆಪಿ ಜತೆಗೆ ಮರುದೋಸ್ತಿ ಮೂಲಕ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಉತ್ಸುಕವಾಗಿದೆ.
ಮುಂದುವರಿದ ಪ್ರಧಾನಿ ನರೇಂದ್ರ ಮೋದಿ ಅಲೆ, ಬದಲಾದ ರಾಜ್ಯ ರಾಜಕೀಯ ನಕ್ಷೆ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ತಮ್ಮದೇ ಆದ ರಣವ್ಯೂಹ ಹೆಣೆಯಲು ಆಲೋಚಿಸಿ, ಪೂರ್ವ ತಯಾರಿ ಸಭೆಗಳ ಕಡೆಗೆ ಗಮನಹರಿಸಿವೆ. ಶಾಸಕರು, ಪರಾಜಿತರು ಹಾಗೂ ಪಕ್ಷದ ಬ್ಲಾಕ್ ಅಧ್ಯಕ್ಷರ ಜತೆಗೆ ಜ.10ರಂದು ಸಿದ್ಧತಾ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಲು ಆಡಳಿತ ಕಾಂಗ್ರೆಸ್ ತೀರ್ಮಾನಿಸಿದೆ.  ಯಲಹಂಕ ಸಮೀಪದ ಹೋಟೆಲ್​ವೊಂದರಲ್ಲಿ ಪ್ರತಿಪಕ್ಷ ಬಿಜೆಪಿ ಪ್ರಮುಖರ ಸಭೆ ಸೋಮವಾರ ನಿಗದಿಯಾಗಿದ್ದು, ಲೋಕಸಮರದ ಮೊದಲ ತಾಲೀಮು ಇದಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಮಕ್ಷಮ ಶಾಸಕರು, ಮಾಜಿ ಶಾಸಕರು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಸಭೆಯು ಜೆ.ಪಿ. ಭವನದಲ್ಲಿ ಸೋಮವಾರ ನಡೆಯಲಿದೆ.
ಅವಲೋಕನದೊಂದಿಗೆ ಹೆಜ್ಜೆ; ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 25ರಲ್ಲಿ ಗೆದ್ದು ಕಳೆದ ಚುನಾವಣೆ ಮೆರೆದ ಪಾರಮ್ಯವನ್ನು ಕಾಯ್ದುಕೊಳ್ಳುವ ಸವಾಲು ಪ್ರತಿಪಕ್ಷ ಬಿಜೆಪಿ ಮುಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾದರೂ ಲೋಕಸಭೆ ಚುನಾವಣೆ ಎದುರಾಳಿಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಮೇಲುಗೈ ಸಾಧಿಸಿತು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹಿಂದಿಗಿಂತಲೂ ಕಳಪೆ ಸಾಧನೆ ಮಾಡಿದೆ. ಆದರೆ, ಲೋಕ ಸಮರದಲ್ಲಿ ಯಶೋಗಾಥೆ ಪುನರಾವರ್ತಿಸುವ ವಿಶ್ವಾಸ, ಉತ್ಸಾಹದಲ್ಲಿದೆ.
ಎರಡೂ ಚುನಾವಣೆಗಳ ವಿಷಯಗಳು ಬೇರೆ ಬೇರೆ. ಪ್ರಧಾನಿ ನರೇಂದ್ರ ಮೋದಿ ಬಲಿಷ್ಠ ನಾಯಕತ್ವ, ವರ್ಚಸ್ಸು ನೆರವಿಗೆ ಬರಲಿದೆ. ಕಾಂಗ್ರೆಸ್​ನ ಏಳು ತಿಂಗಳ ಆಡಳಿತದ ವೈಫಲ್ಯವು ಪಕ್ಷದ ಬಗ್ಗೆ ಜನರ ಸಹಾನುಭೂತಿ ಹೆಚ್ಚಿಸಿದೆ ಎನ್ನುವುದು ಕಮಲಪಡೆ ನಾಯಕರ ಇಂಗಿತ. ಅಲ್ಲದೆ, ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದ ಒಟ್ಟಾರೆ ಆಂಗಿಕ ಭಾಷೆ ಬದಲಾಗಿದ್ದು, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ, ಅಸಮಾಧಾನಿತರ ಮನವೊಲಿಕೆ ಕಸರತ್ತು ಮುಂದುವರಿದಿದೆ.
ಈ ನಡುವೆ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಪ್ರಮುಖರ ಸಭೆ ಸೋಮವಾರ ನಡೆಯಲಿದೆ. ಎಲ್ಲ ಲೋಕಸಭೆ ಕ್ಷೇತ್ರಗಳ ವಸ್ತುಸ್ಥಿತಿ ಅವಲೋಕನ, ಹಾಲಿ ಸಂಸದರ ಬಗೆಗಿನ ಹಿಮ್ಮಾಹಿತಿ ಸಂಗ್ರಹ, ಮುಂದಿನ ನಡೆಗೆ ಪ್ರಾಥಮಿಕ ಹೆಜ್ಜೆಯಿಡುವುದು ಈ ಸಭೆ ಮುಖ್ಯ ಕಾರ್ಯಸೂಚಿ. ವಿವಿಧ ಕಾರಣಗಳಿಂದ ಒಂಭತ್ತು ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಬೇಕಾದ ಸವಾಲು ಎದುರಾಗಿದ್ದು, ಆ ಬಗ್ಗೆಯೂ ರ್ಚಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಕೋರ್ ಕಮಿಟಿ ರಚನೆ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಜಿಲ್ಲಾ ಘಟಕಗಳಿಗೆ ಹೊಸ ಪದಾಧಿಕಾರಿಗಳ ತ್ವರಿತ ನೇಮಕದ ಬಗ್ಗೆ ವಿಚಾರ ವಿನಿಮಯವಾಗಿದೆ. ವಿಕಸಿತ ಭಾರತ ಯಾತ್ರೆಗೆ ವೇಗ, ಕೇಂದ್ರ ಸರ್ಕಾರದ ಯೋಜನೆಗಳ ವ್ಯಾಪಕ ಪ್ರಚಾರ ನೀಡಿ ಮೋದಿಯವರ ವರ್ಚಸ್ಸಿಗೆ ಹೊಸ ಹೊಳಪು ತುಂಬುವ ಬಗ್ಗೆಯೂ ಸಭೆ ಚಿಂತನೆ ನಡೆಸಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆಸ್ ಚಿಂತನೆ
* ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆಗಳಿಗಾಗಿ ಶೋಧ
* ಗ್ಯಾರಂಟಿ ಆಧಾರಿತ ಜನಾಭಿಪ್ರಾಯಕ್ಕೆ ಮತ್ತಷ್ಟು ಒತ್ತು
* ಸಚಿವರಿಗೆ ಹೆಚ್ಚಿನ ಜವಾಬ್ದಾರಿ, ಸಮನ್ವಯದ ರಹದಾರಿ
ಬಿಜೆಪಿ ಬಲವರ್ಧನೆ
* ಹಾಲಿ ಸಂಸದರ ಕ್ಷೇತ್ರಗಳ ವಸ್ತುಸ್ಥಿತಿ ಸ್ಥೂಲ ಪರಾಮರ್ಶೆ
* 8-9 ಕ್ಷೇತ್ರಗಳಿಗೆ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ
* ಜೆಡಿಎಸ್ ಜತೆಗೆ ಹೊಂದಾಣಿಕೆಯಲ್ಲಿ ದೃಢತೆ ಸಾಧಿಸುವುದು
ಜೆಡಿಎಸ್ ಆಲೋಚನೆ
* ವಿಧಾನಸಭೆ ಚುನಾವಣೆ ಸೋಲಿನ ಕಹಿ ಮುಕ್ತ ಸಂಘಟನೆ
* ಹಂಚಿಕೆಯಾದ ಕ್ಷೇತ್ರಗಳಲ್ಲಿ ಒಗ್ಗಟ್ಟು ಮೂಡಿಸಲು ಆದ್ಯತೆ
* ಗುರಿ ಸಾಧಿಸುವ ಮೂಲಕ ಬಹುಆಯಾಮದ ಸಂದೇಶ
ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು, ಕಾಂಗ್ರೆಸ್​ನ ದುರಹಂಕಾರಕ್ಕೆ ತಕ್ಕ ಪಾಠ ಕಲಿಸುವುದು ನಮ್ಮ ಮುಂದಿರುವ ಗುರಿ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಿಲ್ಲ. ಜ.15ರ ನಂತರ ದೆಹಲಿಗೆ ಭೇಟಿ ನೀಡುವೆ.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ಲೋಕಸಭೆ ಚುನಾವಣೆ ತಯಾರಿಗೆ ಹಿರಿಯರ ಮಾರ್ಗದರ್ಶನ, ಸಲಹೆ-ಸೂಚನೆಗಳನ್ನು ಪಡೆದು ಮುಂದಿನ ಹೆಜ್ಜೆಯಿರಿಸುತ್ತೇವೆ. ಪಕ್ಷದ ಅಭ್ಯರ್ಥಿಗಳ ವಿಚಾರದಲ್ಲಿ ಮಾಹಿತಿ ಸಂಗ್ರಹಿಸಿ ಮುಂದಿನ ತೀರ್ವನಕ್ಕೆ ವರಿಷ್ಠರಿಗೆ ಕಳುಹಿಸುತ್ತೇವೆ.
| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಬೆಕ್ಕನ್ನು ಪತ್ತೆಹಚ್ಚಬಲ್ಲರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seven =
Remember me
