| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಬಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೆ ದೇಶಾದ್ಯಂತ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯನ್ನು ರಾಜ್ಯದಲ್ಲಿ ಬೇರು ಸಮೇತ ಕಿತ್ತುಹಾಕುವ ಉದ್ದೇಶದಿಂದ ಸಮಗ್ರ ನೀತಿ ತರಲು ಸರ್ಕಾರ ನಿರ್ಧರಿಸಿದೆ. ಉಡ್ತಾ ಪಂಜಾಬ್ ಕುಖ್ಯಾತಿಯನ್ನು ಮೀರಿ ಡ್ರಗ್ಸ್ ಮಾಫಿಯಾದ ಅಡ್ಡೆಯಾಗಿ ಬದಲಾಗುತ್ತಿರುವ ಬೆಂಗಳೂರಿನ ಜತೆಗೆ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ನಶೇಜಾಲ ವ್ಯಾಪಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ಚಿತ್ರನಟಿಯರು, ಗಣ್ಯರ ಮಕ್ಕಳು ಬಂಧನಕ್ಕೊಳಗಾಗಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಪೆಡ್ಲರ್​ಗಳ ಬಂಧನದಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಸಮಗ್ರ ನೀತಿ ರೂಪಿಸದಿದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಕೈ ಮೀರಲಿದೆ ಎಂಬ ಆತಂಕದಿಂದ ಸರ್ಕಾರ ಎಚ್ಚೆತ್ತಿದೆ. ಕೇಂದ್ರ ಗೃಹ ಸಚಿವಾಲಯ ಕೂಡ ಬೆಂಗಳೂರಿನಲ್ಲಿ ಡ್ರಗ್ಸ್ ವ್ಯಾಪಕವಾಗಿ ಮಕ್ಕಳು, ಯುವಕರು ಬಲಿಯಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳನ್ನು ಒಳಗೊಂಡ ಸಮಗ್ರ ನೀತಿ ತಂದು ಕಾನೂನು ಬಿಗಿಗೊಳಿಸುವ ಕಡೆ ಸರ್ಕಾರ ಗಮನ ಹರಿಸಿದೆ. ಈ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ರಾಷ್ಟ್ರೀಯ ಕಾನೂನು ಶಾಲೆಯ ಜತೆ ಚರ್ಚೆ ನಡೆಸಿದ್ದರು. ಪೊಲೀಸ್ ಇಲಾಖೆ ಜತೆಗೆ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮುಂತಾದ ಇಲಾಖೆಗಳು ಹಾಗೂ ನಿಮ್ಹಾನ್ಸ್ ನಂಥ ಸಂಸ್ಥೆಗಳನ್ನು ಬಳಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ಎಲ್ಲ ಇಲಾಖೆಗಳಿಗೂ ತನ್ನದೇ ಆದ ಜವಾಬ್ದಾರಿ ಇದೆ. ಪೊಲೀಸ್ ಇಲಾಖೆಗೆ ಗೊತ್ತಿಲ್ಲದೇ ಅಥವಾ ಬೆಂಬಲ ಇಲ್ಲದೆ ಡ್ರಗ್ಸ್ ದಂಧೆ ಇಷ್ಟೊಂದು ವ್ಯಾಪಕವಾಗಿ ಬೆಳೆಯಲು ಸಾಧ್ಯವಿತ್ತೇ ಎಂಬ ಪ್ರಶ್ನೆ ನಾಗರಿಕರಲ್ಲಿದೆ. ಹೀಗಾಗಿ ಪೊಲೀಸ್ ಇಲಾಖೆಯ ಮೇಲೆ ಮಾತ್ರ ಜವಾಬ್ದಾರಿ ಹಾಕದೆ ಬೇರೆ ಬೇರೆ ಇಲಾಖೆಯನ್ನೂ ಬಳಸಿಕೊಂಡು, ಗ್ರಾಹಕರು, ಕಿಂಗ್​ಪಿನ್​ಗಳು, ಅಂತಾರಾಷ್ಟ್ರೀಯ ಪೆಡ್ಲರ್​ಗಳು ಹೀಗೆ ಎಲ್ಲ ಹಂತದಲ್ಲಿಯೂ ಡ್ರಗ್ಸ್ ದಂಧೆಯನ್ನು ಬಗ್ಗು ಬಡಿಯುವ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.
ಬಿಗಿ ಆಗುತ್ತದೆ ಕಾನೂನು:ನೂತನ ನೀತಿಯ ಜತೆಗೆ, ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದವರಿಗೆ ಜೈಲುವಾಸ ಸೇರಿ ವಿವಿಧ ಶಿಕ್ಷೆಗಳನ್ನು ನೀಡುವ ನಿಟ್ಟಿನಲ್ಲಿ ಬಿಗಿ ಕಾನೂನು ರೂಪಿಸುವುದೂ ಸರ್ಕಾರದ ಉದ್ದೇಶವಾಗಿದೆ. ರಾಷ್ಟ್ರೀಯ ಕಾನೂನು ಶಾಲೆ ಕರಡು ಸಿದ್ಧಪಡಿಸಿಕೊಡಲಿದೆ.
ಡ್ರಗ್ಸ್ ನಿಯಂತ್ರಣಕ್ಕೆ ಸದ್ಯ ಇರುವುದು ನಾರ್ಕೆಟಿಕ್ಸ್ ಡ್ರಗ್ಸ್ ಸೈಕಿಯಾಟ್ರಿಕ್ಸ್ ಸಬ್​ಸ್ಟೆನ್ಸ್ ಆಕ್ಟ್. ಇದು 1985ರಲ್ಲಿ ರಚನೆಯಾದ ಕಾನೂನು. ಕೇಂದ್ರದ ಈ ಕಾಯ್ದೆಯ ಮೇಲೆ ರಾಜ್ಯ ನಿಯಮಗಳನ್ನು ರೂಪಿಸಿಕೊಂಡಿದೆ. ಆದರೆ ಈಗ ಡ್ರಗ್ಸ್ ದಂಧೆಯ ವ್ಯಾಪ್ತಿ ವಿಸ್ತಾರವಾಗಿದೆ. ಆದ್ದರಿಂದ ಇಂದಿನ ಅಗತ್ಯಕ್ಕೆ ತಕ್ಕಂತೆ ಹೊಸ ಕಾನೂನು ರೂಪಿಸಲು ಸರ್ಕಾರ ತೀರ್ಮಾನಿಸಿತ್ತು. ಈಗ ಒಂದು ಹೆಜ್ಜೆ ಮುಂದೆಹೋಗಿ ಡ್ರಗ್ಸ್ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಆಫ್ರಿಕಾ ಮತ್ತು ಬಾಂಗ್ಲಾದೇಶದ ಅಕ್ರಮವಾಸಿಗಳು ಹೆಚ್ಚಾಗಿದ್ದು ಅವರು ಡ್ರಗ್ಸ್ ಮಾರಾಟದ ಕಿಂಗ್ ಪಿನ್​ಗಳಾಗಿದ್ದಾರೆ ಎಂಬ ಮಾಹಿತಿ ಕೇಂದ್ರ ಗೃಹ ಸಚಿವಾಲಯದಿಂದಲೇ ರಾಜ್ಯಕ್ಕೆ ಲಭ್ಯವಾಗಿದೆ. ಈವರೆಗೆ ಬಂಧನಕ್ಕೆ ಒಳಗಾಗಿರುವ ಪೆಡ್ಲರ್​ಗಳು ನೀಡಿರುವ ಮಾಹಿತಿಯೂ ಅದೇ ಆಗಿದೆ. ಕೆಲ ಪೆಡ್ಲರ್​ಗಳು ಹೇಗೆ ಡ್ರಗ್ಸ್ ದಂಧೆ ವ್ಯಾಪಿಸಿದೆ ಎಂಬ ಸಂಪೂರ್ಣ ವಿವರವನ್ನು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಹೊಸ ನೀತಿಯಲ್ಲಿ ಪಾಲಕರ ಪಾತ್ರದ ಬಗ್ಗೆಯೂ ಸ್ಪಷ್ಟತೆ ಇರುತ್ತದೆ. ಶ್ರೀಮಂತರ ಮಕ್ಕಳೇ ಹೆಚ್ಚಾಗಿ ಡ್ರಗ್ಸ್ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಶಾಲಾ-ಕಾಲೇಜು ದಿನಗಳಿಂದಲೇ ಹೆತ್ತವರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಅವರಿಂದಲೂ ಮಾಹಿತಿ ಪಡೆಯಲಾಗುತ್ತದೆ.
ಡ್ರಗ್ಸ್ ದಂಧೆ ಸಂಪೂರ್ಣ ನಿಲ್ಲುವಂತೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಬಿಗಿಯಾದ ಕಾನೂನಿನ ಜತೆಗೆ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಸಮಗ್ರ ನೀತಿ ರೂಪಿಸುತ್ತಿದ್ದು, ಆದಷ್ಟು ಬೇಗ ಪ್ರಕಟವಾಗಲಿದೆ. ಈಗಲೂ ಪೊಲೀಸರು ಸಾಕಷ್ಟು ಕ್ರಮ ಕೈಗೊಂಡಿದ್ದಾರೆ.
| ಬಸವರಾಜ ಬೊಮ್ಮಾಯಿಗೃಹ ಸಚಿವ
ಫೋನ್​ಗಳಲ್ಲಿ ಬಳಸುವ ಅಂಡ್ರಾಯ್ಡ್​ ಸಿಸ್ಟಂ ವಿವಾದ: ಅಮೆರಿಕದ ‘ಸುಪ್ರೀಂ’ ಬಾಗಿಲಿದೆ ಗೂಗಲ್​, ಒರಾಕಲ್​ ಕಿತ್ತಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twenty =
Remember me
