ಬೆಂಗಳೂರು:ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದಲ್ಲಿ ತಕ್ಷಣವೇ ಶಾಲಾರಂಭ ಮಾಡಬೇಕೆಂದು ಶಿಕ್ಷಣ ಸಚಿವರ ಮೇಲೆ ಭಾರಿ ಒತ್ತಾಯ ಬಂದಿದೆ. ಸರ್ಕಾರದೊಂದಿಗೆ ನಾವಿದ್ದೇವೆ ಎಂದು ಕೂಡ ಇವರು ಅಭಯ ನೀಡಿದ್ದಾರೆ.
ಬುಧವಾರ ಸಮಗ್ರ ಶಿಕ್ಷಣ-ಕರ್ನಾಟಕ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳು ಸೇರಿ ವಿವಿಧ ವಿಷಯಗಳ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಇಂಥದ್ದೊಂದು ಆಗ್ರಹ ವ್ಯಕ್ತವಾಗಿದೆ.
ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಗ್ರಾಮೀಣ ಪ್ರದೇಶದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಯ ನಿರಂತರತೆ ತಪ್ಪಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೊದಲ ಹಂತದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್​ಎಸ್​ಎಲ್​ಸಿ ತರಗತಿಗಳನ್ನು ಆರಂಭಿಸಬೇಕು. ಶಾಲೆಗಳನ್ನು ಆರಂಭಿಸುವುದರಿಂದ ಪ್ರಸ್ತುತ ಶಿಕ್ಷಣ ಇಲಾಖೆಯ ಮುಂದಿರುವ ಖಾಸಗಿ  ಅನುದಾನರಹಿತ ಶಿಕ್ಷಕರ ಸಮಸ್ಯೆ ಸೇರಿ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ದೊರೆತಂತಾಗುತ್ತದೆ ಎಂದು ವಿಧಾನಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಶೇಷವಾಗಿ ಬಹುಕಾಲ ಮಕ್ಕಳು ಶಾಲೆಯಿಂದ ದೂರ ಉಳಿಯುವುದರಿಂದ ಮಕ್ಕಳ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳು ಉಂಟಾಗುವುದರಿಂದ ಶಾಲೆಗಳನ್ನು ತಕ್ಷಣವೇ ಪ್ರಾರಂಭಿಸುವುದು ಉತ್ತಮ ಎಂದು  ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ವಿಧಾನ ಪರಿಷತ್ ಸದಸ್ಯರು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
ಬಹುಕಾಲ ಶಾಲೆಯಿಂದ ದೂರ ಉಳಿದರೆ ಮಕ್ಕಳಲ್ಲಿ ನಿರಾಸಕ್ತಿ ಮೂಡುತ್ತದೆ, ಈಗಾಗಲೇ ಖಿನ್ನತೆ ಆರಂಭಿಸಿದೆ, ಮುಂದೆ ಇದರಿಂದ ಅವರ ಕಲಿಕೆಯ ಮೇಲೆ ಪರಿಣಾಮವಾಗಿ ಇನ್ನೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಈಗಾಗಲೇ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ, ಕೆಲವರು ಬಾಲ್ಯವಿವಾಹಕ್ಕೆ ಒಳಗಾಗಿದ್ದಾರೆ. ಇದು ಇನ್ನೂ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.
ನಾವು ಗ್ರಾಮಾಂತರ ಪ್ರದೇಶದಲ್ಲಿ ಪ್ರತಿದಿನವೂ ಎಲ್ಲ ಚಟುವಟಿಕೆಗಳು ಆರಂಭವಾಗಿರುವುದನ್ನು ನೋಡಿದ್ದೇವೆ. ಮಕ್ಕಳೂ ಗುಂಪುಗುಂಪಾಗಿ ಆಟವಾಡುತ್ತಿದ್ದಾರೆ. ಯಾವ ಸಮಸ್ಯೆಗಳೂ ಉದ್ಭವಿಸಿಲ್ಲ. ಅನ್​ಲಾಕ್ ಘೋಷಣೆಯಾಗಿ ಎಲ್ಲ ರೀತಿಯ ಚಟುವಟಿಕೆಗಳು ಆರಂಭವಾಗಿದ್ದು, ಶಾಲೆಗಳು ಮಾತ್ರವೇ ಆರಂಭವಾಗಿಲ್ಲ. ಶಾಲೆಗಳನ್ನು ಅದರಲ್ಲೂ 10ನೇ ಮತ್ತು ದ್ವಿತೀಯ ಪಿಯಸಿ ತರಗತಿಗಳನ್ನು ಆರಂಭಿಸಲು ಈ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಳಿ ಆಧಾರದಲ್ಲಿ ತರಗತಿಗಳನ್ನು ನಡೆಸಬೇಕು. ಮಕ್ಕಳ ಹಿತದೃಷ್ಟಿಯಿಂದ ನಾವು ಶಾಲೆಗಳನ್ನು ಆರಂಭಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. “ಎಸ್ಎಸ್​ಎಲ್​ಸಿ ಪರೀಕ್ಷೆ ನಡೆಸಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇನ್ನೂ ಕಾಲಹರಣ ಮಾಡದೆ ಶಾಲೆಗಳನ್ನು ಆರಂಭಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ. ತಮ್ಮೊಂದಿಗೆ ಮತ್ತು ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರದೊಂದಿಗೆ ನಾವೆಲ್ಲ ಇದ್ದೇವೆ. ನೀವು ಶಾಲೆ ಆರಂಭಿಸಿ” ಎಂದು ಎಲ್ಲ ಸದಸ್ಯರು ಶಿಕ್ಷಣ ಸಚಿವರಿಗೆ ಅಭಯ ನೀಡಿದರು.
10 ಮತ್ತು 12ನೇ ತರಗತಿಗಳನ್ನು ಶೀಘ್ರವೇ ಆರಂಭಿಸಬೇಕು. ವಿದ್ಯಾಗಮದಂಥ ಕಾರ್ಯಕ್ರಮ ನಿಲ್ಲಿಸಿದ್ದು ಸರ್ವಥಾ ಸರಿಯಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಿಜಕ್ಕೂ ತುಂಬಾ ತೊಂದರೆಯಾಗಿದೆ.  ಈ ವಿದ್ಯಾಗಮ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಬೇಕೆಂದು ಒತ್ತಾಯಿಸಿದ ಸದಸ್ಯರು ಶಾಲಾರಂಭದ ನಂತರ ಉಳಿಕೆಯ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಕಡಿತ ಮಾಡಬೇಕೆಂದು ಸಲಹೆ ನೀಡಿದರು.
ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸದಸ್ಯರ ಒಕ್ಕೊರಲಿನ ಅಭಿಪ್ರಾಯವನ್ನು ನಾನು ಗಮನಿಸಿದ್ದು, ಈ ಕುರಿತಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವ ಕುರಿತಂತೆ ನಿರ್ಣಯಕ್ಕೆ ಬರಲಾಗುವುದು ಎಂದು ಹೇಳಿದರು.
ಕೋವಿಡ್ ನಂತರ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಲಿಕಾ ನಿರಂತರತೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ ಸುರೇಶ್ ಕುಮಾರ್, ಶಾಲೆ ಆರಂಭಗೊಂಡ ನಂತರ ಪಿಯು ತರಗತಿಗಳ ಪಠ್ಯವನ್ನು ಎನ್.ಸಿ.ಇ.ಆರ್.ಟಿ ನಿಗದಿಪಡಿಸಿದ ಪಠ್ಯಕ್ರಮಗಳಂತೆ ಕಡಿತ ಮಾಡಲಾಗಿದೆ ಎಂದರು.
ಸಭೆಯಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಮಾಜಿ ಶಿಕ್ಷಣ ಸಚಿವ ಬಸವರಾಜ ಎಸ್. ಹೊರಟ್ಟಿ, ಡಾ. ವೈ.ಎಸ್.ನಾರಾಯಣಸ್ವಾಮಿ, ಶಶೀಲ್ ನಮೋಶಿ, ಸಂಕನೂರು, ಚಿದಾನಂದ ಎಸ್. ಗೌಡ, ಮರಿತಿಬ್ಬೇಗೌಡ, ಪುಟ್ಟಣ್ಣ , ಬೋಜೇಗೌಡ ಭಾಗವಹಿಸಿದ್ದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾಚೋಳನ್ ಸೇರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ನಿವೃತ್ತಿಯಾದರೂ ಬಿಡಲಿಲ್ವೇ ಚಾಳಿ?; ಇಬ್ಬರೂ ಸಿಕ್ಕಿಬಿದ್ದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 1 =
Remember me
