ಬೆಂಗಳೂರು: ಕರೊನಾ ಮಟ್ಟ ಹಾಕುತ್ತಲೇ ಆರ್ಥಿಕ ಸ್ಥಿತಿ ಹಳಿ ತಪ್ಪದಂತೆ ಕಾಪಾಡಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಗಲಿರುಳು ಶ್ರಮ ಹಾಕುತ್ತಿದ್ದರೆ, ಅವರ ಹೆಗಲಿಗೆ ಹೆಗಲು ಕೊಡಬೇಕಾದ ಬಹುತೇಕ ಸಚಿವರು ತಮ್ಮ ಮೇಲಿನ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳ ಹೆಗಲಿಗೇರಿಸಿ ನುಣುಚಿಕೊಳ್ಳುತ್ತಿದ್ದಾರೆ.
ಕರೊನಾ ಹಿಮ್ಮೆಟ್ಟಿಸು ವುದು ಕೇವಲ ಒಬ್ಬಿಬ್ಬರು ಮಾಡುವ ಕೆಲಸ ಅಲ್ಲ. ಎಲ್ಲ ಪ್ರಮುಖ ಇಲಾಖೆಗಳು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಲೇಬೇಕು. ಆದರೆ ಬೆರಳೆಣಿಕೆಯಷ್ಟು ಸಚಿವರನ್ನು ಬಿಟ್ಟರೆ ಬಹುತೇಕರು ಸ್ವತಂತ್ರವಾಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸುವ ಉತ್ಸಾಹವನ್ನೂ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಕರೊನಾ ಲಾಕ್​ಡೌನ್ ಬಳಿಕ ಸಚಿವರು ಪರಸ್ಪರ ಹೊಂದಾಣಿಕೆ ಮತ್ತು ಹೊಣೆಗಾರಿಕೆಯಿಂದ ಕೆಲಸ ಮಾಡುವುದರಲ್ಲಿ ಎಡವುತ್ತಿರುವುದು ಹೊಸದೇನಲ್ಲ. ಈ ಬಗ್ಗೆ ವಿರೋಧ ಪಕ್ಷಗಳಿರಲಿ, ಬಿಜೆಪಿಯೊಳಗೇ ಹೆಚ್ಚಿರುವ ಆಂತರಿಕ ಬೇಗುದಿ, ಪಕ್ಷದ ವರಿಷ್ಠರ ತನಕ ದೂರಿನ ಸ್ವರೂಪದಲ್ಲಿ ತಲುಪಿ ಎಚ್ಚರಿಕೆ ನೀಡಿದ್ದು ಹಳೆಯ ಸಂಗತಿ.
ಇಷ್ಟಾದರೂ, ಬಹುತೇಕ ಸಚಿವರು ಪಾಠ ಕಲಿಯುತ್ತಿಲ್ಲ. ಸಣ್ಣಪುಟ್ಟ ನಿರ್ಧಾರವನ್ನೂ ತೆಗೆದುಕೊಳ್ಳದೇ ಎಲ್ಲದಕ್ಕೂ ಸಿಎಂ ಮೇಲೆ ಅವಲಂಬಿತರಾಗುವ ಸಚಿವರ ನಡವಳಿಕೆ, ಜವಾಬ್ದಾರಿ ತಮಗೇಕೆ ಎಂಬ ಧೋರಣೆಯನ್ನು ಹೊಂದಿರುವಂತೆ ತೋರುತ್ತದೆ ಎಂಬ ಅಭಿಪ್ರಾಯ ಅಧಿಕಾರಿಗಳಲ್ಲೂ ಮೂಡತೊಡಗಿದೆ.
ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಸುರೇಶ್​ಕುಮಾರ್ ಸೇರಿ ಬೆರಳೆಣಿಕೆಯಷ್ಟು ಸಚಿವರನ್ನು ಬಿಟ್ಟರೆ, ಉಳಿದವರು ಇಲಾಖೆಯ ಸಭೆಗಳನ್ನೂ ನಡೆಸುತ್ತಿಲ್ಲ. ಸಚಿವರಿಗೆ ಎಲ್ಲ ರೀತಿಯ ಸ್ವಾತಂತ್ರ ಇದ್ದರೂ, ಅದನ್ನು ಸರಿಯಾಗಿ ಬಳಸಿಕೊಳ್ಳದೆ ಪ್ರತಿಯೊಂದಕ್ಕೂ ಮುಖ್ಯಮಂತ್ರಿಗಳತ್ತಲೇ ಮುಖ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ. ಮತ್ತೊಂದೆಡೆ ಕೆಲವರು ಕೆಲಸವನ್ನೂ ಮಾಡದೆ ಅನಗತ್ಯ ಮಾತುಗಳಿಂದ ವಿವಾದ ಸೃಷಿಸುತ್ತಿರುವುದೂ ಪಕ್ಷದ ಮಟ್ಟಿಗೆ ಆಕ್ರೋಶಕ್ಕೆ ಕಾರಣವಾಗಿದೆ.
ನೂತನ ಸಚಿವರಾದ ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್ ಜಿಲ್ಲೆಗಳನ್ನು ಸುತ್ತುತ್ತಿದ್ದಾರೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಬೆಂಗಳೂರಿನಲ್ಲಿ ಟಾಸ್ಕ್​ಫೋರ್ಸ್ ಸಭೆ, ಇಲಾಖೆಯ ಸಭೆ ಮಾಡಿದ್ದಕ್ಕಿಂತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇ ಹೆಚ್ಚು. ಸಚಿವರುಗಳಿಗೆ ಅವರ ಜವಾಬ್ದಾರಿಗಳೇನು ಎಂದು ಹೇಳುವ ಸ್ಥಿತಿಯಲ್ಲಿ ನಾವು ಇಲ್ಲ. ಅವರೇ ಪರಿಸ್ಥಿತಿ ಅರ್ಥ ಮಾಡಿಕೊಂಡು, ತಮ್ಮ ಜವಾಬ್ದಾರಿ ನಿಭಾಯಿಸಿದರೆ, ಮುಖ್ಯಮಂತ್ರಿಗಳಿಗೂ ಹೊರೆ ಕಡಿಮೆ ಆಗುತ್ತದೆ ಎನ್ನುವುದು ಸಿಎಂ ಸಚಿವಾಲಯದ ಹಿರಿಯ ಅಧಿಕಾರಿಗಳ ಅಭಿಮತ.
ಪ್ರತಿ ದಿನವೂ ಮುಖ್ಯಮಂತ್ರಿ ಹತ್ತು ಹಲವು ಸಭೆ ನಡೆಸುತ್ತಲೇ ಬಂದಿದ್ದಾರೆ. ಅತಿವೃಷ್ಟಿಯಿಂದ ಹಿಡಿದು ಕರೊನಾ ತನಕ ತಪ್ಪದೆ ಸಭೆ ನಡೆಸಿ, ಅಧಿಕಾರಿಗಳ ಸಲಹೆಗಳನ್ನು ಪಡೆದು ಅಲ್ಲಿಯೇ ಸೂಕ್ತ ನಿರ್ಣಯ ತೆಗೆದುಕೊಂಡು ನಿರ್ದೇಶನಗಳನ್ನು ನೀಡುವ ಮೂಲಕ ಸರ್ಕಾರ ಮುನ್ನಡೆಸುತ್ತಿದ್ದಾರೆ. ಈಗಲೂ, ಸಿಎಂ ಮೇಲೆ ಏಕೆ ಈ ಸಚಿವರು ಹೆಚ್ಚಿನ ಭಾರ ಹಾಕುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ವಿಜಯವಾಣಿ ಜತೆ ತಮ್ಮ ಅಸಮಾಧಾನ ತೋಡಿಕೊಂಡರು.
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಪ್ರತಿ ವಿಚಾರದ ಬಗ್ಗೆಯೂ ಗಂಭೀರವಾಗಿ ಚರ್ಚೆ ಮಾಡಿಯೇ ಸಿಎಂಗೆ ಸಲಹೆ, ಅಭಿಪ್ರಾಯಗಳನ್ನು ನೀಡಿರುತ್ತೇವೆ. ಆದರೆ, ಸಭೆಗೆ ಬಂದ ಕೆಲ ಸಚಿವರು, ತಮ್ಮ ಮೂಗಿನ ನೇರಕ್ಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಯಾವುದೇ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಆಗದಷ್ಟು ಗೊಂದಲ ಮಾಡಿಬಿಡುತ್ತಾರೆ. ಇದೆಲ್ಲವನ್ನು ಯಾರಿಗೆ ಹೇಳುವುದು ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಶಕ್ತಿಸೌಧಕ್ಕೆ ಬರಲಿಲ್ಲ
ಲಾಕ್​ಡೌನ್ ಬಳಿಕ ಬಹಳಷ್ಟು ಸಚಿವರು ವಿಧಾನಸೌಧದ ಕಡೆಗೆ ಮುಖ ಮಾಡಿದ್ದು ಕಡಿಮೆ. ಸಂಪುಟ ಸಭೆ ಇದ್ದಾಗ, ಆಗೊಮ್ಮೆ, ಈಗೊಮ್ಮೆ ಬಂದು ಹೋದವರು ಮತ್ತೆ ಪತ್ತೆ ಇಲ್ಲದಂತೆ ಕ್ಷೇತ್ರ ಸೇರಿಕೊಂಡಿದ್ದಾರೆ. ಉಸ್ತುವಾರಿ ಜಿಲ್ಲೆಗಳಿಗೂ ಹೋಗುತ್ತಿಲ್ಲವೆಂಬ ದೂರುಗಳಿವೆ.
ಹೊಸಬರದ್ದೇ ಆಸರೆ
ಸರಕಾರ ರಚನೆ ವೇಳೆ ಪ್ರಮುಖ ಪಾತ್ರ ವಹಿಸಿದ ಹೊಸ ಸಚಿವರೇ ಸಿಎಂ ಬೆನ್ನಿಗೆ ನಿಂತು ಆಡಳಿತ ಯಂತ್ರ ಸುಗಮವಾಗಲು ಶ್ರಮ ಹಾಕುತ್ತಿರುವುದು ವಿಶೇಷ. ಕೆಲ ಪ್ರಮುಖರು ಪ್ರಭಾವಿ ಖಾತೆ ಇದ್ದರೂ ಕೆಲಸ ಮಾಡದೆ ಸಮಯ ಕಳೆಯುತ್ತಿದ್ದಾರೆ. ಈ ಲಾಕ್​ಡೌನ್​ನಲ್ಲಿ ಬಾಕಿ ಕೆಲಸಗಳನ್ನು ಮಾಡಿ ಮುಗಿಸಬಹುದಾದರೂ ಬಹುತೇಕರು ತಲೆ ಕೆಡಿಸಿಕೊಳ್ಳದಿರುವುದು ಮುಖ್ಯಮಂತ್ರಿ ಅವರಿಗೂ ತಲೆ ನೋವಾಗಿ ಪರಿಣಮಿಸಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಇನ್ಫೊಸಿಸ್​ನ ನಿವ್ವಳ ಲಾಭದಲ್ಲಿ ಸ್ವಲ್ಪ ಇಳಿಕೆ, ಆದಾಯದಲ್ಲಿ ಸ್ವಲ್ಪ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 15 =
Remember me
