ದಾವಣಗೆರೆ:ವೈಜ್ಞಾನಿಕವಲ್ಲದ ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬಾರದು. ವೀರಶೈವ-ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಳಗೊಂಡು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವಿಕೆ ಆಧರಿಸಿ ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಲೇಬೇಕು ಎಂಬ ಪ್ರಮುಖ ನಿರ್ಣಯವನ್ನು ಕೈಗೊಳ್ಳುವ ಮೂಲಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಜಾತಿಗಣತಿಗೆ ವೀರಶೈವ- ಲಿಂಗಾಯತ ಸಮಾಜದ ವಿರೋಧವಿಲ್ಲ. ಅವೈಜ್ಞಾನಿಕವಾಗಿ ಸಿದ್ಧವಾಗಿರುವ ಕಾಂತರಾಜ ಆಯೋಗದ ವರದಿಗೆ ಮಾತ್ರ ನಮ್ಮ ವಿರೋಧ ಎಂಬ ಒಕ್ಕೊರಲ ಅಭಿಪ್ರಾಯ ಅಧಿವೇಶನದಲ್ಲಿ ವ್ಯಕ್ತವಾಯಿತು. ವೈಜ್ಞಾನಿಕವಾಗಿ ಮತ್ತೊಮ್ಮೆ ಗಣತಿ ಮಾಡಬೇಕು ಎಂಬುದೂ ಸೇರಿ ಒಟ್ಟು ಎಂಟು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ವಿವಾದದ ಕಿಡಿ ಹೊತ್ತಿಸಿರುವ ಕಾಂತರಾಜು ಆಯೋಗದ ಜಾತಿ ಗಣತಿ ವರದಿ ವಾಸ್ತವಾಂಶಗಳಿಂದ ಕೂಡಿಲ್ಲ. ಸರ್ಕಾರದ ಕೈ ಸೇರುವ ಮುನ್ನವೇ ವರದಿಯ ಅಂಶಗಳು ಸೋರಿಕೆಯಾಗಿವೆ ಎಂದು ಅಧಿವೇಶನದ ಮೊದಲ ದಿನವೇ ಹೋರಾಟದ ಕಹಳೆ ಮೊಳಗಿತ್ತು. ಭಾನುವಾರ ಈ ಬಗ್ಗೆ ನಿರ್ಣಯ ಅಂಗೀಕರಿಸಿ ಅಧಿಕೃತ ಮುದ್ರೆ ಒತ್ತಿತು. ಜತೆಗೆ ಒಳಪಂಗಡಗಳನ್ನು ಒಳಗೊಂಡಂತೆ ಸಮಸ್ತ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಹಕ್ಕೊತ್ತಾಯ ಮಂಡಿಸುವ ಮೂಲಕ ಸಮಾಜದಲ್ಲಿನ ಕಡುಬಡವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಸ್ಪಂದಿಸುವ ಕಾಳಜಿ ತೋರಿತು.
ಸಮಾರೋಪದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಮಂಡಿಸಿದ ಎಲ್ಲ ನಿರ್ಣಯಗಳಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪೂರ್ಣ ಬೆಂಬಲ ಘೊಷಿಸುವ ಮೂಲಕ ಅಧಿವೇಶನದ ಆಶಯಕ್ಕೆ ಬಲ ತಂದರು. ಕಾಂತರಾಜು ವರದಿಯನ್ನು ಒಪ್ಪಿಕೊಳ್ಳದೆ ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ನಡೆಸಿ ಜನರಿಗೆ ವಾಸ್ತವ ಸ್ಥಿತಿ ತಿಳಿಸಬೇಕು ಎಂದು ಯಡಿಯೂರಪ್ಪ ಅಭಿಪ್ರಾಯ ಪಟ್ಟರು. ಸಾನ್ನಿಧ್ಯ ವಹಿಸಿದ್ದ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಕೂಡ ಮಹಾಸಭಾದ ನಿರ್ಣಯಗಳಿಗೆ ಅಸ್ತು ಎಂದರು. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಂಸತ್ತು ಹಾಗೂ ಸಮ ಸಮಾಜದ ಪರಿಕಲ್ಪನೆ ಕೊಟ್ಟ ವಿಶ್ವಗುರು ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಿಸಲು ನಿರ್ಣಯಿಸಲಾಯಿತು. ಧಾರ್ವಿುಕ, ಸಾಮಾಜಿಕ ಕ್ಷೇತ್ರಗಳತ್ತ ಮಾತ್ರ ಗಮನ ನೀಡದೆ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವ ಮುಖೇನ ಕೃಷಿ ಪ್ರಧಾನ ಲಿಂಗಾಯತ ಸಮಾಜದ ನೆರವಿಗೆ ಬರುವಂತೆ ಕೋರಲಾಯಿತು. ಸಮುದಾಯದಿಂದ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ದಿ.ಎಸ್.ನಿಜಲಿಂಗಪ್ಪ ಅವರು ವಾಸವಿದ್ದ ಚಿತ್ರದುರ್ಗದ ಮನೆ ಖರೀದಿಸಿ ಅವರ ಪುಣ್ಯಸ್ಮರಣೆಯ ದಿನ ಆಗಸ್ಟ್ 8 ರೊಳಗೆ ಸ್ಮಾರಕ ನಿರ್ವಿುಸಲು ಒತ್ತಾಯಿಸಲಾಯಿತು.
ನಿರ್ಣಯಗಳು
1. ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ ಮಹಾಸಭಾ ಕಟಿಬದ್ಧವಾಗಿದೆ. ಯಾವುದೇ ಹೋರಾಟಗಳಿಗೆ ಮೊದಲಿನಂತೆ ಬೆಂಬಲ ಮುಂದುವರಿಯಲಿದೆ.
2. ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೊಷಿಸಬೇಕು.
3. ವೀರಶೈವ-ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಇದನ್ನು ಅಂಗೀಕರಿಸಬೇಕು.
4. ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳದೆ ವೀರಶೈವ-ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಳಗೊಂಡು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವಿಕೆ ಆಧರಿಸಿ ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು.
5. ಸಮುದಾಯದ ನಿಖರ ಜನಸಂಖ್ಯೆಯನ್ನು ಜಗತ್ತಿಗೆ ತಿಳಿಸಲು, ಸರ್ಕಾರ ನಡೆಸುವ ಜನಗಣತಿಯ ವೇಳೆ ಧರ್ಮದ ಕಾಲಂನಲ್ಲಿ ಹಿಂದು ಮತ್ತು ತಮ್ಮ ಉಪಜಾತಿ ಹೆಸರು ಬರೆಸದೆ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸಬೇಕು.
6. ಎಲ್ಲ ರೈತರಿಗೆ ಅನುಕೂಲ ಆಗುವಂತೆ ರಾಜ್ಯದ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು.
7. ಎಸ್. ನಿಜಲಿಂಗಪ್ಪನವರು ವಾಸವಿದ್ದ ಚಿತ್ರದುರ್ಗದ ಅವರ ನಿವಾಸವನ್ನು ಸರ್ಕಾರ ಖರೀದಿಸಿ, ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಶಾಶ್ವತ ಸ್ಮಾರಕ ನಿರ್ವಿುಸಬೇಕು.
8. 24ನೇ ಮಹಾ ಅಧಿವೇಶನಕ್ಕೆ ಮಾರ್ಗದರ್ಶನ ಮಾಡಿದ ಹರ-ಗುರು-ಚರಮೂರ್ತಿಗಳಿಗೆ ಒತ್ತಾಸೆಯಾಗಿ ನಿಂತ ರಾಜಕೀಯ ಮುಖಂಡರಿಗೆ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಘಟಕಗಳು ಹಾಗೂ ಎಲ್ಲ ಘಟಕ, ವಿಭಾಗಗಳಿಗೆ ಕೃತಜ್ಞತೆ
ಧರ್ಮದ ಕಾಲಂನಲ್ಲಿ ಉಪ ಪಂಗಡ ಬೇಡವೀರಶೈವರಲ್ಲಿ 89ಕ್ಕೂ ಹೆಚ್ಚು ಉಪ ಪಂಗಡಗಳಿವೆ. ಧರ್ಮದ ಕಾಲಂನಲ್ಲಿ ಉಪ ಪಂಗಡಗಳ ಹೆಸರು ಬರೆಸಿದರೆ ವೀರಶೈವ ಲಿಂಗಾಯತರ ಜನಸಂಖ್ಯೆ ಎಷ್ಟೆಂದು ತಿಳಿಯದೆ ಗೊಂದಲ ಆಗುವ ಅಪಾಯ ಇದೆ. ಹಾಗಾಗಿ ವೀರಶೈವ ಲಿಂಗಾಯತ ಸಮಾಜದ ನಿಖರ ಜನಸಂಖ್ಯೆ ತಿಳಿಯಲು ಗಣತಿ ವೇಳೆ ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದಷ್ಟೇ ಬರೆಯಿಸಲು ಕರೆ ನೀಡಲಾಯಿತು.
ರಾಜಕೀಯ ಅಸ್ತ್ರವಾಗಿ ಬಳಕೆ ದುರಂತದೇಶದಲ್ಲಿ ಜಾತಿಗಣತಿ ವಿಚಾರ ಸದ್ಯ ರಾಜಕೀಯ ಅಸ್ತ್ರವಾಗುತ್ತಿರುವುದು ದೊಡ್ಡ ದುರಂತ. ಇತ್ತೀಚಿಗೆ ಜಾತಿ ಗಣತಿ ಹೆಸರಿನಲ್ಲಿ ಸಮಾಜ ಬೇರ್ಪಡಿಸುವ ಹುನ್ನಾರ ನಡೆಯುತ್ತಿದೆ. ಜಾತಿ ಗಣತಿ ಬಗ್ಗೆ ಸ್ಪಷ್ಟ ನೀತಿ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈ ಹಿಂದೆ ಕರ್ನಾಟಕದಲ್ಲಿ ಗಣತಿ ನಡೆದಿದ್ದರೂ ಅದು ಜಾತಿ ಗಣತಿಯಲ್ಲ. ಶಿಕ್ಷಣ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ತಯಾರಿಸಿದ ವರದಿ. ಈಗ ಅದನ್ನೇ ಜಾತಿ ಗಣತಿ ಎಂದು ಆದೇಶ ಹೊರಡಿಸಲು ಈ ಸರ್ಕಾರ ಮುಂದಾ ಗಿದೆ. ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶವಿದೆ ಎಂದು ಈ ಹಿಂದೆಯೇ ಸುಪ್ರೀಂ ಕೋರ್ಟ್ ಹಲವಾರು ಬಾರಿ ಪ್ರಸ್ತಾಪ ಮಾಡಿದೆ ಎಂದು ಬೊಮ್ಮಾಯಿ ಹೇಳಿದರು.
ಎಲ್ಲ ನಿರ್ಣಯಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಶಾಮನೂರು ಶಿವಶಂಕರಪ್ಪ ಸಮಾಜದ ಒಳಿತಿಗೆ ಅವಿರತ ಶ್ರಮಿಸುತ್ತಿದ್ದಾರೆ. ಒಳ ಪಂಗಡಗಳ ಗುದ್ದಾಟದಿಂದ ಹೊರ ಬಂದು ಮುಂದೆ ಸಾಗಿದರೆ ಸಮಾಜ ಪ್ರಬಲ ಶಕ್ತಿಯಾಗಿ ಬೆಳೆಯುತ್ತದೆ. ನಾವು ಪ್ರಬಲರಾಗುವ ಜತೆಗೆ ಎಲ್ಲ ವರ್ಗಗಳನ್ನು ಅಂದರೆ ಗುಡಿಸಲು ವಾಸಿಗಳನ್ನು, ಪರಿಶಿಷ್ಟರನ್ನು ಕೂಡ ಜತೆಗೆ ಕರೆದೊಯ್ಯಬೇಕು. ಆ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ. ವೀರಶೈವ ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಸ್ಥಾನ, ಮಾನ ದೊರೆಯುತ್ತಿಲ್ಲ ಎಂಬ ಕೂಗಿದೆ. ನಮ್ಮ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಅಂತಹವರಿಗೆ ಸೂಕ್ತ ಸ್ಥಾನ ಮಾನ ಕೊಡಲು ನಮ್ಮ ಸಚಿವರುಗಳು ಹಿಂದೇಟು ಹಾಕಬಾರದು.
| ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಒಳಪಂಗಡಗಳ ಆಧಾರದ ಮೇಲೆ ವೀರಶೈವ ಲಿಂಗಾಯತ ಸಮಾಜವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿಭಜಿಸುತ್ತಿವೆ. ದುರದೃಷ್ಟಕರ ಸಂಗತಿ ಎಂದರೆ ನಮ್ಮ ಸಮಾಜದ ಕೆಲವು ಮಠಾಧೀಶರು ಇದಕ್ಕೆ ಚಿತಾವಣೆ ನೀಡುತ್ತಿದ್ದಾರೆ. ನಾವು ಏಕತೆ ಪ್ರದರ್ಶಿಸಿ ಇಂಥಹ ಬಿಕ್ಕಟ್ಟುಗಳಿಂದ ಹೊರಬರಬೇಕು. ಮಹಾಸಭಾದಿಂದ ಜಿಲ್ಲೆಗೊಂದು ವೀರಶೈವ ಭವನ, ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವ ಗುರಿ ಇದೆ.
| ಡಾ. ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು
ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರುವ ನಾಯಿಯನ್ನು ಪತ್ತೆಹಚ್ಚಿದ್ರೆ ನಿಮಗೆ ನೀವೇ ಸಾಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
