ಬೆಂಗಳೂರು: ಎರಡನೇ ಹಂತದ ಲಾಕ್​ಡೌನ್ ಮುಗಿಯುವ ವೇಳೆ (ಮೇ 3)ಗೆ ರಾಜ್ಯದಲ್ಲಿ ಕರೊನಾ ಪೀಡಿತರ ಸಂಖ್ಯೆ 700ರ ಗಡಿ ದಾಟಬಾರದೆಂಬ ಲೆಕ್ಕಾಚಾರದಲ್ಲಿರುವ ಆರೋಗ್ಯ ಇಲಾಖೆ, ಮುಂದಿನ 12 ದಿನಗಳ ನಿರ್ಣಾಯಕ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ. ಈ ನಡುವೆ, ಮಂಗಳವಾರ ರಾಜ್ಯದಲ್ಲಿ ಸೋಂಕಿಗೆ ಮತ್ತೊಂದು ಸಾವು ಸಂಭವಿಸಿದ್ದು, ಆ ಮೂಲಕ ಮೃತರ ಸಂಖ್ಯೆ17ಕ್ಕೆ ಏರಿದೆ. 10 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು ಸೋಂಕಿತರ ಸಂಖ್ಯೆ 418ಕ್ಕೆ ತಲುಪಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಮೇ 3ರ ವೇಳೆಗೆ ಸೋಂಕಿತರ ಸಂಖ್ಯೆ 700ರ ಗಡಿ ದಾಟಬಾರದು. ಒಂದು ವೇಳೆ ಈ ಸಂಖ್ಯೆಗಿಂತ ಹೆಚ್ಚಾದರೂ ಭಯಪಡುವ ಅಗತ್ಯವಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸೇಫ್ ಆಗಿದೆ. ಆರಂಭದಲ್ಲಿ ರಾಜ್ಯದಲ್ಲಿ ವಿದೇಶ ಪ್ರಯಾಣ ಮಾಡಿದವರಲ್ಲಿ ಹಾಗೂ ಅವರ ಸಂಪರ್ಕಕ್ಕೆ ಬಂದವರಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಲಾಕ್​ಡೌನ್​ನಿಂದಾಗಿ ಅವರಿಂದ ಸೋಂಕು ಹರಡುವುದು ನಿಯಂತ್ರಣಕ್ಕೆ ಬಂದಿತಾದರೂ ದೆಹಲಿಯ ತಬ್ಲಿಘಿ ಸಮಾವೇಶ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ಫಾರ್ವ ಕಂಪನಿ ಪ್ರಕರಣಗಳಿಂದ ಸೋಂಕಿತರ ಸಂಖ್ಯೆಏರುತ್ತಿದೆ. ಸದ್ಯ 26,233 ಜನರ ಸ್ವಾ್ಯಬ್ ಮತ್ತು ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 22,222 ಮಂದಿಯ ವರದಿ ನೆಗೆಟಿವ್ ಬಂದಿದೆ. 418 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನೂ 3,593 ಶಂಕಿತರ ವರದಿಗಾಗಿ ಕಾಯಲಾಗುತ್ತಿದೆ.
26,233 ಜನರಲ್ಲಿ 418 ಜನರಿಗಷ್ಟೇ ಪಾಸಿಟಿವ್ ಬಂದಿದ್ದರಿಂದ ಹೆಚ್ಚಿನ ಜನರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ. ಅಲ್ಲದೇ ಪ್ರಾಥಮಿಕ ಸಂಪರ್ಕ ಹೊಂದಿದ 4059, ದ್ವಿತೀಯ ಸಂಪರ್ಕ ಹೊಂದಿದ 10,282 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಎಲ್ಲರ ವರದಿ ಹಾಗೂ ಲಾಕ್​ಡೌನ್ ತೆರವಿನ ನಂತರದ ಪರಿಸ್ಥಿತಿ ಆಧರಿಸಿ ಸೋಂಕಿತರ ಸಂಖ್ಯೆ ಎಷ್ಟಾಗಲಿದೆ ಎಂದು ಹೇಳಲು ಸಾಧ್ಯ. ಅಲ್ಲದೆ ಇದು ಒಬ್ಬರಿಂದ ಸುಮಾರು 14 ಮಂದಿಗೆ ಹರಡುವ ಸೋಂಕು. ಹೀಗಾಗಿ ಲಾಕ್​ಡೌನ್ ಅವಧಿ ಮುಗಿಯುವ ವೇಳೆಗೆ ಸೋಂಕು 700 ಗಡಿ ದಾಟದಂತೆ ನೋಡಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
7 ದಿನದಲ್ಲಿ 158 ಕೇಸ್
ಆರಂಭದ 23 ದಿನಗಳಲ್ಲಿ ರಾಜ್ಯದಲ್ಲಿ 101 ಸೋಂಕಿತ ಪ್ರಕರಣಗಳಷ್ಟೇ ವರದಿಯಾಗಿ, ಮೂವರು ಮೃತಪಟ್ಟರು. ನಂತರದ 15 ದಿನಗಳಲ್ಲಿ 159 ಪ್ರಕರಣ ದಾಖಲಾಗಿದ್ದು, 7 ಮಂದಿ ಸಾವನ್ನಪ್ಪಿದರು. ಇದೀಗ ಕೇವಲ 7 ದಿನಗಳಲ್ಲಿ 158 ಪ್ರಕರಣಗಳಲ್ಲಿ ಕರೊನಾ ದೃಢಪಟ್ಟು, 6 ಜನ ಬಲಿಯಾಗಿದ್ದಾರೆ. ತಬ್ಲಿಘಿ ಸಮಾವೇಶ ಹಾಗೂ ಜ್ಯುಬಿಲಿಯೆಂಟ್ ಫಾರ್ವ ನೌಕರರ ಸಂರ್ಪತರೇ ಹೆಚ್ಚು ಸೋಂಕಿತರಾಗುತ್ತಿದ್ದಾರೆ. ಹೀಗಾಗಿ ಈ ಎರಡೂ ಪ್ರದೇಶದ ಸೋಂಕಿತರಿಂದ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ.
ತಬ್ಲಿಘಿ ಸವಾಲು
ಮೊದಲ ಹಂತದ ಲಾಕ್​ಡೌನ್ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 200 ಗಡಿ ದಾಟದಂತೆ ತಡೆಯಲು ಆರೋಗ್ಯ ಇಲಾಖೆ ಎಲ್ಲ ಅಗತ್ಯ ಕ್ರಮಗಳೊಂದಿಗೆ ಇನ್ನಿಲ್ಲದ ಕಸರತ್ತು ನಡೆಸಿತ್ತು. ಆದರೆ, ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದವರಿಂದ ಸೋಂಕಿತರ ಸಂಖ್ಯೆ 260 ತಲುಪಿ ಆತಂಕ ಸೃಷ್ಟಿಸಿತ್ತು. ಇದೀಗ ಕೇವಲ 7 ದಿನಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ.
ಲಕ್ಷಣ ಇಲ್ಲದವರಿಗೂ ಸೋಂಕು
ವಿದೇಶ ಪ್ರಯಾಣ ಮಾಡಿದವರು, ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡವರು, ದೆಹಲಿ ಪ್ರಯಾಣ ಹೋಗಿ ಬಂದವರು, ನಂಜನಗೂಡು ಫಾರ್ವ ಕಂಪನಿ ನೌಕರರು ಹಾಗೂ ಇವರ ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗುಲಿದ್ದಕ್ಕೆ ಕಾರಣ ಇದೆ. ಆದರೆ ಉಸಿರಾಟದ ಸಮಸ್ಯೆ ಹಾಗೂ ಇನ್​ಫ್ಲೂಯೆಂಜಾ ಲೈಕ್ ಇಲ್ನೆಸ್ (ಐಎಲ್​ಐ) ಸಮಸ್ಯೆ ಹೊಂದಿದ್ದು, ಯಾವುದೇ ದೂರ ಪ್ರಯಾಣ ಮಾಡಿರದ ಹಾಗೂ ಅಂತಹವರ ಸಂಪರ್ಕಕ್ಕೆ ಬಾರದ 80ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ಭೀತಿ ಮೂಡಿಸಿದೆ. ಈ ಸಂಬಂಧ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ಧತೆ ಹೇಗಿದೆ?
ಲಾಕ್​ಡೌನ್ ವೇಳೆಗೆ ನಿಗಾದಲ್ಲಿರುವ ಎಲ್ಲರ ಸ್ವಾ್ಯಬ್ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಲ್ಲಿ ಸೋಂಕು ಹರಡುವಿಕೆ ಬಗ್ಗೆ ಪ್ರಮಾಣ ಕುರಿತು ಒಂದು ಸ್ಪಷ್ಟತೆ ಸಿಗುತ್ತದೆ. ಇದಕ್ಕಾಗಿ ಪರೀಕ್ಷೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು. ಈ ನಿಟ್ಟಿನಲ್ಲಿ ಒಂದೂವರೆ ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್​ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೆ 11 ಸಾವಿರ ಕಿಟ್​ಗಳು ಬಂದಿದ್ದು, ಅವುಗಳನ್ನು ಜಿಲ್ಲೆಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಪರೀಕ್ಷಿಸಿದ 15 ನಿಮಿಷಗಳಲ್ಲಿ ಫಲಿತಾಂಶ ತಿಳಿಯಲಿದೆ.
ಓರ್ವ ಸಾವು, 10 ಹೊಸ ಪ್ರಕರಣ ಬೆಳಕಿಗೆ
ಕಲಬುರಗಿಯ 80 ವರ್ಷದ ವೃದ್ಧ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಈತ 4 ವರ್ಷದಿಂದ ರ್ಪಾನ್​ಸನ್ ಕಾಯಿಲೆಯಿಂದ ಬಳಲುತ್ತಿದ್ದು, 3 ವರ್ಷದಿಂದ ಹಾಸಿಗೆ ಹಿಡಿದಿದ್ದ. ಏ.19ರಂದು ವಿಪರೀತ ಜ್ವರ ಬಂದಿದ್ದರಿಂದ ಇಎಸ್​ಐ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ತಕ್ಷಣವೇ ಮೃತನ ರಕ್ತವನ್ನು ಪರೀಕ್ಷಿಸಿದಾಗ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದಂತೆ ಮಂಗಳವಾರ ವಿಜಯಪುರ 3, ಕಲಬುರಗಿ 3, ದಕ್ಷಿಣ ಕನ್ನಡ 1, ಬೆಳಗಾವಿ 1 ಮತ್ತು ಮೈಸೂರಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.
ಶೇ.50 ಯುವಕರು!
(ರಾಜ್ಯದ ಕರೊನಾ ಸೋಂಕಿತರು)
209 ಜನ 18-40 ವರ್ಷದವರು
38 ಮಕ್ಕಳು 18 ವರ್ಷದೊಳಗಿನವರು
99 ಜನ 40-60 ವರ್ಷದೊಳಗಿನವರು
69-60 ವರ್ಷ ಮೇಲ್ಪಟ್ಟವರು(16 ಜನ ಮೃತರು)
ಓರ್ವ ಮೃತ 42 ವರ್ಷದವರು
ಪಂಕಜ ಕೆ.ಎಂ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರಿ ನಿವಾಸದ ಬಳಿ ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಪೊಲೀಸ್​ ಸಿಬ್ಬಂದಿಗೆ ಕರೊನಾ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
