| ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ನಡೆಯುವ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಯುವುದಕ್ಕೆ ಹೊಸ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.
ಪಿಎಸ್​ಐ ನೇಮಕಕ್ಕೆ ನಡೆದಿದ್ದ ಪರೀಕ್ಷಾ ಅಕ್ರಮಗಳಲ್ಲಿ ತಪ್ಪಿತಸ್ಥರಾಗಿದ್ದ ಕೆಲವರು ಕಾನೂನಿನ ಕುಣಿಕೆಯಿಂದ ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ. ಜಾರಿಯಲ್ಲಿರುವ ಬೇರೆ ಬೇರೆ ಕಾನೂನುಗಳನ್ನು ಬಳಸಿಕೊಂಡು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಆಗುತ್ತಿಲ್ಲ. ಆದ್ದರಿಂದಲೇ ಸರ್ಕಾರ ಕಾನೂನಿನ ಬಲ ತುಂಬಲು ಕಾರ್ಯೋನ್ಮುಖವಾಗಿದೆ. ಪಿಎಸ್​ಐ ಅಕ್ರಮ ಹೊರಬಂದಾಗ ಕಾಂಗ್ರೆಸ್ ಪಕ್ಷ ವಿಧಾನಮಂಡಲದ ಹೊರಗೆ ಹಾಗೂ ಒಳಗೆ ಸಾಕಷ್ಟು ಹೋರಾಟ ಮಾಡಿತ್ತು. ಆದರೆ ಈಗ ಅಧಿಕಾರಕ್ಕೆ ಬಂದಿರುವುದರಿಂದ ಪರೀಕ್ಷೆಗಳ ಅಕ್ರಮಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದೆ. ಯಾವುದೋ ಒಂದು ಹುದ್ದೆಗೆ ಮಾತ್ರವಲ್ಲದೇ ಬೇರೆ ಬೇರೆ ಏಜೆನ್ಸಿಗಳ ಮೂಲಕ ನಡೆಸುವ ಎಲ್ಲ ಪರೀಕ್ಷೆಗಳಿಗೂ ಅನ್ವಯವಾಗುವ ರೀತಿಯಲ್ಲಿ ಕಾನೂನು ಇರಲಿದೆ. ಮುಖ್ಯಮಂತ್ರಿ ಅವರ ಸೂಚನೆಯ ಮೇರೆಗೆ ಕಾನೂನು ಇಲಾಖೆ ಈ ನಿಟ್ಟಿನಲ್ಲಿ ತಜ್ಞರ ಜತೆಗೆ ಚರ್ಚೆ ನಡೆಸಿದೆ. ಬೇರೆ ಬೇರೆ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣವಾದವರು ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದರು. ಆದ್ದರಿಂದ ಸರ್ಕಾರ ಕಠಿಣವಾದ ನಿಲುವನ್ನೇ ತೆಗೆದುಕೊಂಡಿದೆ.
ಅಗತ್ಯಬಿದ್ದರೆ ಸುಗ್ರೀವಾಜ್ಞೆ:ಈ ಕಾನೂನನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಅಗತ್ಯ ಬಿದ್ದರೆ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದು ನಂತರ ಕಾಯ್ದೆಯನ್ನು ಮಂಡಿಸುವ ಬಗ್ಗೆಯೂ ಸರ್ಕಾರ ಸಿದ್ಧವಿದೆ ಎಂದು ಮೂಲಗಳು ಹೇಳುತ್ತವೆ.
ನಮ್ಮ ಸರ್ಕಾರ ಬಂದ ಒಂದೇ ವಾರದಲ್ಲಿ ಪರೀಕ್ಷಾ ಅಕ್ರಮಗಳ ತಡೆಗೆ ಕಾನೂನು ತರುವ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಯಿತು. ಕಾನೂನು ಇಲಾಖೆಗೆ ಈ ನಿಟ್ಟಿನಲ್ಲಿ ಕ್ರಮಕ್ಕೆ ಸೂಚನೆ ಹೋಗಿದೆ. ಆ ಇಲಾಖೆಯಲ್ಲಿ ಈ ಬಗ್ಗೆ ಕ್ರಮ ಆಗುತ್ತಿದೆ.
| ಪ್ರಿಯಾಂಕ್ ಖರ್ಗೆ, ಆರ್​ಡಿಪಿಆರ್ ಸಚಿವ
ಏನೇನು ಶಿಕ್ಷೆ?:ಪರೀಕ್ಷಾ ಅಕ್ರಮದಲ್ಲಿ ತೊಡಗಿದವರಿಗೆ ದೊಡ್ಡ ಮಟ್ಟದ ಶಿಕ್ಷೆಯನ್ನು ವಿಧಿಸುವ ಬಗ್ಗೆಯೂ ಕಾಯ್ದೆಯಲ್ಲಿ ವಿಶೇಷ ಒತ್ತು ನೀಡಲಾಗುತ್ತದೆ. ಜಾಮೀನು ರಹಿತ ಬಂಧನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಜೈಲು ಶಿಕ್ಷೆಯನ್ನು 5 ವರ್ಷ ಅಥವಾ 12 ವರ್ಷಕ್ಕೆ ನಿಗದಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. 10 ಲಕ್ಷ ರೂ.ಗಳಿಗೂ ಹೆಚ್ಚಿನ ದಂಡ ಸಹ ವಿಧಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಒಮ್ಮೆ ಪರೀಕ್ಷಾ ಅಕ್ರಮದಲ್ಲಿ ತೊಡಗುವ ವ್ಯಕ್ತಿಯನ್ನು ಮುಂದೆ ಯಾವುದೇ ಪರೀಕ್ಷಾ ಕಾರ್ಯಗಳಿಗೆ ನೇಮಕ ಮಾಡದೇ ಕಪು್ಪಪಟ್ಟಿಗೆ ಸೇರಿಸಲಾಗುತ್ತದೆ.
ಕಾನೂನಿನಲ್ಲಿ ಏನೇನು ಇರಲಿದೆ?:ಪರೀಕ್ಷೆ ನಡೆಸುವುದು, ಪ್ರಶ್ನೆ ಪತ್ರಿಕೆ ತಯಾರಿ, ಅದನ್ನು ಮುದ್ರಿಸುವುದರಿಂದ ಹಿಡಿದು ಅಭ್ಯರ್ಥಿಗಳಿಗೆ ತಲುಪುವ ತನಕ ಏನೇನು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು? ಎಲ್ಲಿಯೂ ಸೋರಿಕೆಯಾಗದಂತೆ ಹೇಗೆ ಎಚ್ಚರಿಕೆ ವಹಿಸಬೇಕು? ಪರೀಕ್ಷಾ ಕೊಠಡಿಗಳನ್ನು ಹೇಗೆ ಸಜ್ಜುಗೊಳಿಸಬೇಕು? ಪರೀಕ್ಷಾ ಕೊಠಡಿಗೆ ಯಾರಿಗೆ ಪ್ರವೇಶ, ಮೌಲ್ಯಮಾಪನ ಹೇಗೆ? ಓಎಂಆರ್ ಶೀಟ್​ಗಳನ್ನು ಹೇಗೆ ಕಾಪಾಡಬೇಕು? ಉಲ್ಲಂಘನೆ ಮಾಡಿದವರಿಗೆ ಏನೇನು ಶಿಕ್ಷೆ ನೀಡಬೇಕು? ಸಂದರ್ಶನಗಳನ್ನು ಯಾರು ನಡೆಸಬೇಕು ಎಂಬ ಎಲ್ಲ ಅಂಶಗಳನ್ನು ಈ ಕಾಯ್ದೆ ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಕಚೇರಿಯ ಉನ್ನತ ಮೂಲಗಳು ಖಚಿತಪಡಿಸಿವೆ. ಕೇವಲ ನೇಮಕಾತಿಗೆ ನಡೆಯುವ ಪರೀಕ್ಷೆಗಳಿಗೆ ಮಾತ್ರವಲ್ಲದೇ ಎಲ್ಲ ರೀತಿಯ ಪರೀಕ್ಷೆಗಳಿಗೂ ಈ ಬಿಗಿ ಕ್ರಮಗಳನ್ನು ಒಳಗೊಂಡ ಕಾನೂನು ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ನ್ಯಾಯಾಲಯ:ಪರೀಕ್ಷಾ ಅಕ್ರಮಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ತ್ವರಿತ ವಿಲೇವಾರಿ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದು ಮೂಲಗಳು ಹೇಳುತ್ತವೆ.
ಯಾವ ಯಾವ ಪರೀಕ್ಷೆಗಳಿಗೆ ಅನ್ವಯ?:ಕರ್ನಾಟಕ ಲೋಕಸೇವಾ ಆಯೋಗ, ಹೈಕೋರ್ಟ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪ್ರೌಢ ಶಿಕ್ಷಣ ಮಂಡಳಿ, ಪೊಲೀಸ್ ನೇಮಕಾತಿ ಮಂಡಳಿ, ವಿಶ್ವ ವಿದ್ಯಾಲಯಗಳು ಸೇರಿದಂತೆ ಸರ್ಕಾರದ ಅನುದಾನದಲ್ಲಿ ಆಗುವ ನೇಮಕಗಳ ಪರೀಕ್ಷೆಗಳಿಗೆ ಈ ಕಾನೂನು ಅನ್ವಯವಾಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಅಡ್ವೋಕೇಟ್ ಜನರಲ್ ಅಭಿಪ್ರಾಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಕಾನೂನು ತರುವ ಬಗ್ಗೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಕಾನೂನು ಇಲಾಖೆ ರಾಜ್ಯದ ಅಡ್ವೋಕೇಟ್ ಜನರಲ್ ಅವರಿಂದಲೂ ಸಲಹೆ ಪಡೆದುಕೊಂಡಿದೆ. ಅವರಿಂದಲೂ ಕಾನೂನು ರೂಪಿಸ ಬಹುದೆಂಬ ಅಭಿಪ್ರಾಯದೊಂದಿಗೆ ಕೆಲವೊಂದು ಸಲಹೆಗಳು ಬಂದಿವೆ ಎಂದು ಮೂಲಗಳು ಹೇಳುತ್ತವೆ.
ಮುನ್ನೆಲೆಗೆ ಬಂದಿದ್ದು ಹೇಗೆ?:ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್​ನ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆಯಲ್ಲಿ ಖಾಸಗಿ ಸದಸ್ಯರ ವಿಧೇಯಕ ಮಂಡಿಸಿದರು. ಆದರೆ ಅದು ಚರ್ಚೆಗೆ ಬರಲಿಲ್ಲ. ಆ ನಂತರ ಬೆಂಗಳೂರಿನ ಅಧಿವೇಶನಗಳಲ್ಲಿ ಮಂಡಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಗಮನಕ್ಕೆ ಈ ವಿಚಾರ ತಂದರು. ತಕ್ಷಣ ಸಿದ್ದರಾಮಯ್ಯ ಅವರು ಸಚಿವ ಎಚ್.ಕೆ. ಪಾಟೀಲ್ ಅವರೊಂದಿಗೆ ಚರ್ಚೆ ನಡೆಸಿ ಕಾನೂನು ರೂಪಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..

ಇನ್ನು ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ದಾಖಲೆ; ಸಂಸತ್ತಲ್ಲಿ ಮಹತ್ವದ ಮಸೂದೆ ಅಂಗೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
