ಪ್ರಕಾಶ ಎಸ್. ಶೇಟ್ಹುಬ್ಬಳ್ಳಿ:ಹೊಸ ವರ್ಷದ ಹುರುಪು, ವಿಧಾನಸಭೆ ಚುನಾವಣೆಯ ಹೊಳಪಿನೊಂದಿಗೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಿಂದ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಚುನಾವಣಾ ರಥಯಾತ್ರೆ ಆರಂಭಿಸಿದಂತಾಗಿದೆ. ವಿವೇಕಾನಂದ ಜಯಂತಿಯನ್ನು ಹುಬ್ಬಳ್ಳಿ ಮಣ್ಣಿನಲ್ಲಿ ಆಚರಿಸಿದ ಮೋದಿ, 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಿದರು. ವಿಮಾನ ನಿಲ್ದಾಣದಿಂದ ರೇಲ್ವೇ ಮೈದಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದ ಜನಸಾಗರದ ನಡುವೆ ಭರ್ಜರಿ ರೋಡ್​ಷೋ ನಡೆಸಿದ ಮೋದಿ, ಬಳಿಕ ಯುವಶಕ್ತಿಯನ್ನು ಉದ್ದೀಪನಗೊಳಿಸುವ ಸ್ಪೂರ್ತಿ ನುಡಿಗಳನ್ನಾಡಿ ಮೋಡಿ ಮಾಡಿದರು.
ಗುಜರಾತ್ ಚುನಾವಣೆ ಯಶಸ್ಸಿನ ಬಳಿಕ ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಪಕ್ಷದ ವರ್ಚಸ್ಸು ಹೆಚ್ಚಿಸುವ ಕೆಲಸ ಆಗಬೇಕಿದೆ. ಅಪವಾದ, ಆರೋಪ ಕೊಡವಿ ಮೇಲೇಳಬೇಕಿದೆ. ಇದಕ್ಕೆ ಮೋದಿ ನಾಮಬಲ ಬೇಕೇ ಬೇಕು ಎನ್ನುವುದು ಸರ್ವವಿದಿತ. ಈ ಕಾರಣಕ್ಕಾಗಿಯೇ ಪ್ರಧಾನಿ ಇನ್ನೆರಡು ತಿಂಗಳು ರಾಜ್ಯದಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ರೀತಿ ಮೋದಿ ಮತಯಾತ್ರೆಗೆ ಯುವಜನೋತ್ಸವದ ಮೂಲಕ ನಾಂದಿ ಹಾಡಲಾಗಿದೆ. ಯುವಜನೋತ್ಸವ ಉದ್ಘಾಟಿಸಿದ ಬಳಿಕ ಮಾತನಾಡುವಾಗ ಮೋದಿ, ಭಾರತಕ್ಕೆ ಯುವಶಕ್ತಿಯೇ ದಿಕ್ಸೂಚಿ ಎಂದು ಕೊಂಡಾಡಿದರು. ಆರ್ಟಿಫಿಷಿಯಲ್ ಇಂಟಲಿಜೆನ್ಸ್- ಐಎ (ಕೃತಕ ಬುದ್ಧಿಮತ್ತೆ), ಐಒಟಿ, ಮಷಿನ್ ಲರ್ನಿಂಗ್, ಎಆರ್-ವಿಆರ್ ಭವಿಷ್ಯದ ಕೌಶಲಗಳಾಗಿವೆ. ಸೈಬರ್ ಸೆಕ್ಯುರಿಟಿ, ಡೇಟಾ ಸೈನ್ಸ್, ದೇಶದ ಸುರಕ್ಷತೆ ವಿಚಾರದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ದೇಶ ಗಮನಾರ್ಹ ಬದಲಾವಣೆ ಕಂಡುಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಯುವಶಕ್ತಿ ಎಂದು ಹುರಿದುಂಬಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಯುವಕರ ಭವಿಷ್ಯವನ್ನು ರೂಪಿಸಲಿದೆ ಎಂದು ಸಮರ್ಥಿಸಿಕೊಂಡರು. ವಿರೋಧ, ಅಪಹಾಸ್ಯಗಳಿಗೆ ಕಿವಿಗೊಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ, ಜನಧನ್ ಯೋಜನೆ ಹಾಗೂ ಸ್ವದೇಶಿ ನಿರ್ವಿುತ ಕೋವಿಡ್ ಲಸಿಕೆ ಬಗ್ಗೆ ಗೇಲಿ ಮಾಡಿದವರ ಕಥೆ ಏನಾಗಿದೆ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದ ಮೋದಿ, ಭಾರತ ಆರ್ಥಿಕವಾಗಿ ಬಲಿಷ್ಠವಾಗಿದೆ. 5ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದ್ದಾಗಿದೆ. ಇನ್ನಷ್ಟು ಪ್ರಗತಿಗೆ ಯುವಕರ ಸಾಥ್ ಬೇಕು ಎಂದು ಕರೆ ನೀಡಿದರು.
ಭವಿಷ್ಯದಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳು ಹುಟ್ಟಿಕೊಳ್ಳಲಿವೆ. ಮುಂದಿನ 25 ವರ್ಷ ದೇಶ ನಿರ್ವಣದಲ್ಲಿ ಮಹತ್ವದ ಕಾಲ ಎಂದು ಹೇಳಿದ ಮೋದಿ, ಸುಭದ್ರ ರಾಷ್ಟ್ರ ನಿರ್ವಣದ ಜವಾಬ್ದಾರಿ ಯುವಕರ ಮೇಲಿದೆ ಎಂದರು. ಇಡೀ ವಿಶ್ವ ಭಾರತದತ್ತ ನೋಡುತ್ತಿರುವುದಕ್ಕೆ ಯುವಶಕ್ತಿಯೇ ಕಾರಣ ಎಂದಿದ್ದು ನೆರೆದಿದ್ದವರನ್ನು ಸೆಳೆಯಿತು.
ಅಷ್ಟೇ ಅಲ್ಲ, ಜನತೆಯ ಭಾವನಾಡಿಯನ್ನು ಮಿಡಿದ ಮೋದಿ, ತಮ್ಮ ಮಾತಿನುದ್ದಕ್ಕೂ ಕರುನಾಡಿನ ಸಾಹಿತ್ಯ, ಸಂಸ್ಕೃತಿ, ಜ್ಞಾನಪೀಠ ಪುರಸ್ಕೃತರನ್ನು, ಶರಣರು, ದಾರ್ಶನಿಕರು, ಸಂಗೀತ ದಿಗ್ಗಜರು, ಸ್ವಾತಂತ್ರ್ಯ ಹೋರಾಟಗಾರರನ್ನು, ಯೋಧರನ್ನು ಸ್ಮರಿಸಿದರು. ನಾಡಿನ ವೈಭವ, ಇತಿಹಾಸವನ್ನು ಬಿಡಿ ಬಿಡಿಯಾಗಿ ವಿಶ್ಲೇಷಿಸಿ ಮನಗೆದ್ದರು.
ಮೋದಿ ಹೇಳಿದ್ದೇನು?
ಫೆಬ್ರವರಿಯಲ್ಲಿ ಮತ್ತೆ ರಾಜ್ಯಕ್ಕೆ
ಇದೇ ತಿಂಗಳು ಕಲಬುರಗಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಫೆಬ್ರವರಿಯಲ್ಲಿ ತುಮಕೂರಿಗೆ ಆಗಮಿಸಲಿದ್ದಾರೆ. ಇದಲ್ಲದೆ ಧಾರವಾಡದಲ್ಲಿ ಐಐಟಿ ಕಟ್ಟಡ ಉದ್ಘಾಟನೆಗೆ ಮೋದಿ ಅವರನ್ನು ಕರೆತರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸುಳಿವು ನೀಡಿದ್ದಾರೆ.
ಮಹನೀಯರ ಸ್ಮರಣೆ
ಮೂರುಸಾವಿರ ಮಠ, ಸಿದ್ಧಾರೂಢಮಠ, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಪಂ. ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ್, ಪಂ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರನ್ನು ಮೊದಿ ಸ್ಮರಿಸಿದರು. ಸ್ವಾಮಿ ವಿವೇಕಾನಂದರು ರಾಜ್ಯದಲ್ಲಿ ಸಂಚರಿಸಿದ್ದನ್ನು, ಚಿಕಾಗೋ ಸಮ್ಮೇಳನಕ್ಕೆ ತೆರಳಲು ಮೈಸೂರು ಅರಸರು ನೆರವು ನೀಡಿದ್ದನ್ನು ಉಲ್ಲೇಖಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
