ಬೆಂಗಳೂರು:ಸದಾ ಹಳೆಯ ಯೋಚನೆ ಮತ್ತು ಹಳೇ ಯೋಜನೆಗಳಲ್ಲೇ ಹೆಜ್ಜೆ ಇಡುತ್ತಿದ್ದ ಹಿಂದಿನ ಸರ್ಕಾರಗಳಿಗೆ ಹೊಸ ಆಲೋಚನೆಗಳೇ ಹೊಳೆಯುತ್ತಿರಲಿಲ್ಲ. ಆದರೆ, ತಮ್ಮ ಸರ್ಕಾರದ ಅವಧಿಯಲ್ಲಿ ಆಡಳಿತ ನಿರ್ವಹಣೆಯಲ್ಲಿ ಭೌತಿಕ ಮೂಲಭೂತ ಸೌಲಭ್ಯ ಹಾಗೂ ಡಿಜಿಟಲ್ ಪೇಮೆಂಟ್​ನಂತಹ ಯೋಜನೆ ಅನುಷ್ಠ್ಠಾನಗೊಂಡು ಅಭಿವೃದ್ಧಿಯ ವೇಗ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳದ ಹೂಡಿಕೆ ಕರ್ನಾಟಕದಲ್ಲಾಗಿದೆ. ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ಶೇ.70 ಕೊಡುಗೆ ಕರ್ನಾಟಕದ್ದೇ ಆಗಿದೆ. ಫಾರ್ಚೂನ್ 500 ಕಂಪನಿಗಳ ಪಟ್ಟಿಯಲ್ಲಿರುವ 400ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿವೆ. ವಿದ್ಯುತ್ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದೆ. ಇದು ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿರುವ ಡಬಲ್ ಎಂಜಿನ್ ಸರ್ಕಾರದ ತಾಕತ್ತಾಗಿದೆ ಎಂದು ಪ್ರತಿಪಾದಿಸಿದರು. ಬಹುಮಾದರಿ ಸಂಪರ್ಕಕ್ಕೆ ಪ್ರಗತಿಯ ವೇಗ ಭಾರತದ ಶಕ್ತಿ ಎಂಬ ಧ್ಯೇಯ ಹೊತ್ತ ಪ್ರಧಾನ ಯೋಜನೆ ಪ್ರಧಾನಮಂತ್ರಿ ರಾಷ್ಟ್ರೀಯ ಯೋಜನೆ ಹಾಗೂ ರಾಷ್ಟ್ರೀಯ ಸಾಗಣಾ ನೀತಿಯಲ್ಲಿನ ನವನವೀನ ಅಂಶಗಳು ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದೆ ಎಂದು ಪ್ರಧಾನಿ ವಿವರಿಸಿದರು.
ಕೋವಿಡ್-19ರ ಸಂದರ್ಭದಲ್ಲೂ ಕರ್ನಾಟಕದಲ್ಲಿ ನಾಲ್ಕು ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಜೈವಿಕ ತಂತ್ರಜ್ಞಾನ, ರಕ್ಷಣಾ ಉಪಕರಣಗಳ ತಯಾರಿಕೆ, ವೈಮಾನಿಕ ಹಾಗೂ ಅಂತರಿಕ್ಷ ಕೈಗಾರಿಕಾ ಕ್ಷೇತ್ರಗಳೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ಶೇ.25 ಕೊಡುಗೆ ಕರ್ನಾಟಕದ್ದಾಗಿದೆ. ವಾಣಿಜ್ಯ ಕ್ಷೇತ್ರದಲ್ಲಿ ಬೆಂಗಳೂರು ಎಷ್ಟು ಮುಂದಿದೆ ಎಂದರೆ ನವೋದ್ಯಮದ ತವರಾಗಿ ರೂಪಿತರಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ನವ ಭಾರತದ ಹೊಸ ಅಸ್ಮಿತೆಯೇ ಆಗಿದೆ ಎಂದರು.
ಸ್ವದೇಶಿ ನಿರ್ವಿುತ ಪರಿಕಲ್ಪನೆಯ ಅಭಿವೃದ್ಧಿ ಸೂತ್ರ ಆತ್ಮನಿರ್ಭರ ಭಾರತದ ಮೇಡ್ ಇನ್ ಇಂಡಿಯಾ ಬೆಂಗಳೂರಿನ ಯುವ ಜನತೆ ಹಾಗೂ ವೃತ್ತಿಪರರಿಗೆ ವಿಪುಲ ಉದ್ಯೋಗಾವಕಾಶಗಳನ್ನು ದೊರಕಿಸಿಕೊಟ್ಟಿದೆ ಎಂದ ಪ್ರಧಾನಿ, ನಾಡಪ್ರಭು ಕೆಂಪೇಗೌಡ ಅವರ ಅದ್ಭುತ ಹಾಗೂ ಅದ್ವಿತೀಯ ಕಲ್ಪನೆಯಂತೆಯೇ ಬೆಂಗಳೂರು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ವಾಣಿಜ್ಯ, ಸಂಸ್ಕೃತಿ ಹಾಗೂ ಸವಲತ್ತುಗಳ ಕ್ಷೇತ್ರಗಳಲ್ಲಿ ಕೆಂಪೇಗೌಡರ ದೂರದೃಷ್ಠಿಯ ಲಾಭವನ್ನು ಬೆಂಗಳೂರು ಪಡೆದಿದೆ ಎಂದು ವ್ಯಾಖ್ಯಾನಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರಧಾನಿ ಅವರ ಆಡಳಿತ ವೈಖರಿಯನ್ನು ಕೊಂಡಾಡಿದರು.
ಕೆಂಪೇಗೌಡರು ತೊಡುತ್ತಿದ್ದ ಶೈಲಿಯ ಪೇಟವನ್ನು ಪ್ರಧಾನಿಯವರಿಗೆ ಸಿಎಂ ಬಸವರಾಜ ಬೊಮ್ಮಾಯಿ ತೊಡಿಸಿದರು. ಜತೆಗೆ ಕೆಂಪೇಗೌಡವರ ಪ್ರತಿಕೃತಿಯ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಲ್ಹಾದ ಜೋಶಿ, ರಾಜ್ಯಪಾಲ ಥಾವರ್​ಚಂದ್ ಗೆಹಲೋತ್, ಸಚಿವರಾದ ಸುನೀಲ್​ಕುಮಾರ್, ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೆ.ಸುಧಾಕರ್, ಆರ್.ಅಶೋಕ್, ನಾರಾಯಣ ಗೌಡ, ಬೈರತಿ ಬಸವರಾಜ್, ಎಂ.ಟಿ.ಬಿ. ನಾಗರಾಜ್, ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹಾಜರಿದ್ದರು.
ಲಾಭದ ರಿಪೋರ್ಟ್ ಕಾರ್ಡ್ ಮಂಡನೆ
ಕನ್ನಡ ಬಳಕೆಗೆ ಹಷೋದ್ಘಾರ
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ಸಂದರ್ಭ ಸಾರ್ವಜನಿಕ ಸಭೆಯ ಆರಂಭದಲ್ಲಿ ಕನ್ನಡ ಬಳಸುವುದು ಸಾಮಾನ್ಯ. ಶುಕ್ರವಾರವೂ ಕರ್ನಾಟಕದ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದೇ ಭಾಷಣ ಆರಂಭಿಸಿದರು. ಈ ವೇಳೆ ಜನರಿಂದ ಹಷೋದ್ಘಾರ ವ್ಯಕ್ತವಾಯಿತು. ಅಷ್ಟೇ ಅಲ್ಲದೆ, ನಾಡಪ್ರಭು ಕೆಂಪೇಗೌಡರ ಕೊಡುಗೆ ದೊಡ್ಡದು. ಗವಿ ಗಂಗಾಧರೇಶ್ವರ ಮಂದಿರ, ಬಸವನಗುಡಿಯ ಮಂದಿರ ಎಂದು ಸ್ಥಳೀಯ ಪರಿಸರದ ಹೆಸರು ಪ್ರಸ್ತಾಪಿಸಿದಾಗಲೂ ಜನರಿಂದ ಪ್ರತಿಕ್ರಿಯೆ ಕೇಳಿಬಂತು.
ಕುಲ ಕುಲವೆಂದು ಹೊಡೆದಾಡದಿರಿ
ಕನಕದಾಸರ ಕುಲ ಕುಲ ಕುಲವೆಂದು ಹೊಡೆದಾಡದಿರಿ… ಸಾಲನ್ನು ಸ್ಮರಿಸಿದ ನರೇಂದ್ರ ಮೋದಿ, ಮನಷ್ಯ- ಮನುಷ್ಯರನ್ನು ಒಂದುಗೂಡಿಸುವ ಭಗವತ್ ಹಾಗೂ ಸಾಮಾಜಿಕ ಶಕ್ತಿಗೆ ಕನಕದಾಸರು ಪ್ರೇರಣೆಯಾಗಿದ್ದರು ಎಂದು ಬಣ್ಣಿಸಿದರು. ಹದಿನೈದನೇ ಶತಮಾನದಲ್ಲಿಯೇ ತಮ್ಮ ರಾಮಧಾನ್ಯ ಚರಿತೆಯಲ್ಲಿ ಕನಕದಾಸರು ಸಿರಿಧಾನ್ಯದ ಮಹತ್ವ ಉಲ್ಲೇಖಿಸಿದ್ದನ್ನು ನೆನಪಿಸಿಕೊಂಡರು.
ಪೇಟದ ವಿಶೇಷತೆ ವಿವರಿಸಿದ ಚುಂಚಶ್ರೀ
ಸಾರ್ವಜನಿಕ ಸಮಾರಂಭದ ವೇದಿಕೆ ಮೇಲೆ ಪ್ರಧಾನಿ ಮೋದಿ ಅವರಿಗೆ ಸನ್ಮಾನಿಸುವ ವೇಳೆ ಕೆಂಪೇಗೌಡರ ಪೇಟ ತೊಡಿಸಿದ ಆದಿಚುಂಚನಗಿರಿ ಶ್ರೀಗಳು, ಪೇಟದ ವಿಶೇಷತೆ ವಿವರಿಸಿದರು. ಮೈಸೂರಿನಲ್ಲಿ ಕಲಾವಿದ ನಂದನ್ ಅವರು ಈ ಪೇಟ ಸಿದ್ಧಪಡಿಸಿದ್ದಾರೆ. ಬನಾರಸ್ ರೇಷ್ಮೆ ಸೀರೆ, ಮುತ್ತು-ಗರಿ, ಸೂಕ್ಷ್ಮ ಕುಸುರಿಯೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಪ್ರಧಾನಿ ಮೋದಿ ಹಾಸ್ಯ ಚಟಾಕಿ
ಓಹ್ ಟ್ವಿನ್ 90 ಯಂಗ್​ಸ್ಟರ್ಸ್!
ಖ್ಯಾತ ಶಿಲ್ಪಿ ರಾಮ್ ಸುತರ್ ಬಳಿಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಕರೆದು ನಿಲ್ಲಿಸಿ, ‘ಓಹ್ ಟ್ವಿನ್ 90 ಯಂಗಸ್ಟರ್ಸ್’ (ಓಹ್ ಅವಳಿ ಹದಿಹರೆಯದವರು) ಎಂದಾಗ ಅಲ್ಲಿದ್ದವರು ನಗೆಬುಗ್ಗೆ ಹರಿಸಿದರೆ. ವಯಸ್ಸಾದರೇನು, ನವಯುವಕರಂತೆ ಸದಾ ಕ್ರಿಯಾಶೀಲರು ಎಂದೂ ಮೋದಿ ಮೆಚ್ಚುಗೆ ಸೂಚಿಸಿದರು.
ಮೈನೆ ಹೀ ಕಾಯಿನ್ ಕಿಯಾ
ಆಪ್ ಕೋ ಪತಾ ಹೈ ನೈಂಟಿ ನಾಟೌಟ್ ಮೈನೆ ಹೀ ಕಾಯಿನ್ ಕಿಯಾ (ನಿಮಗೆ ಗೊತ್ತಾ, 90 ನಾಟೌಟ್ ಪದ ಕಟ್ಟಿದ್ದೇ ನಾನು). ಅದು, ತುರ್ತು ಪರಿಸ್ಥಿತಿಯ ಕಾಲ ಮದ್ರಾಸ್ ಜೈಲಿನಲ್ಲಿದ್ದವರಿಗೆ ಕಾಫಿ, ಚಹಾ ಪೂರೈಸುವ ಜವಾಬ್ದಾರಿ ನನ್ನದಾಗಿತ್ತು. ಈ ವೇಳೆ ಹಿರಿಯರ ಜತೆ ಹರಟೆ ಕೊಚ್ಚುತ್ತಿರುವಾಗ 90 ನಾಟೌಟ್ ಎಂದು ನಗೆ ಚಟಾಕಿ ಹಾರಿಸಿದ್ದನ್ನು ಮೋದಿ ಮೆಲುಕು ಹಾಕಿದರು.
400 ಹೊಸ ವಂದೇ ಭಾರತ್, ವಿಸ್ಟಾಡೋಮ್
ರಾಷ್ಟ್ರದಲ್ಲಿ ವಾಯು ಯಾನ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ವಿಶ್ವದ ಹಲವು ದೇಶಗಳ ಪೈಕಿ ಭಾರತದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಅತ್ಯಧಿಕ ಏರಿಕೆಯಾಗಿದೆ, ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿನ ಗಣನೀಯ ಏರಿಕೆ ಹಾಗೂ ಪ್ರಯಾಣ ಮಾರುಕಟ್ಟೆ ವಿಸ್ತಾರಗೊಂಡಿರುವುದನ್ನು ಗಮನಿಸಿ, ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. 2014ರಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಇದೀಗ ದೇಶದಲ್ಲಿ ದುಪ್ಪಟ್ಟು ಅಂದರೆ, 140 ವಿಮಾನ ನಿಲ್ದಾಣಗಳಿವೆ. ಹೊಸ ಟರ್ವಿುನಲ್​ಗಳು ಹೊಸ ಸೌಲಭ್ಯಗಳು… ಹೀಗೆ ಹಳೆಯ ವಿಮಾನ ನಿಲ್ದಾಣಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು. ರೈಲು ಸಂಪರ್ಕ ಕ್ಷೇತ್ರದಲ್ಲೂ ಕ್ರಾಂತಿಕಾರಿ ಬೆಳವಣಿಗಳಾಗಿವೆ. ಎಲ್ಲ ನಿಲ್ದಾಣಗಳಲ್ಲೂ ನಿಲುಗಡೆ ಮಾಡಿ ತೆರಳುತ್ತಿದ್ದ ರೈಲುಗಳ ವೇಗ ಹೆಚ್ಚಿಸಲಾಗಿದೆ. ದೇಶಾದ್ಯಂತ ವಂದೇ ಭಾರತ್ ಮತ್ತು ವಿಸ್ಟೋಡೋಮ್ 400ಕ್ಕೂ ಹೆಚ್ಚು ರೈಲುಗಳು ಸದ್ಯದಲ್ಲಿಯೇ ಸಂಚರಿಸಲಿವೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
