ನವದೆಹಲಿ:ಉದ್ಯೋಗ ಸೃಷ್ಟಿಗೆ ಹತ್ತಾರು ಉತ್ತೇಜಕ ಕ್ರಮಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಉದ್ಯೋಗಿಗಳು, ಉದ್ಯೋಗದಾತರು ಹಾಗೂ ಕಂಪನಿಗಳ ನೆರವಿಗೆ ಮುಂದಾಗಿದೆ. ಉದ್ಯೋಗಾಧಾರಿತ ಪ್ರೋತ್ಸಾಹಕಗಳನ್ನು ಪ್ರಕಟಿಸಿದ್ದು, ಇವುಗಳ ದುರುಪಯೋಗವಾಗದಂತೆ ಭವಿಷ್ಯ ನಿಧಿ ನೋಂದಣಿಯೊಂದಿಗೆ ಇವುಗಳನ್ನು ಜೋಡಿಸಿದೆ. ಇಂಟರ್ನ್​ಶಿಪ್​ಗಾಗಿ ವಿದ್ಯಾರ್ಥಿಗಳಿಗೆ ಮಾಸಿಕ ಪಾವತಿ ವ್ಯವಸ್ಥೆಯನ್ನು ರೂಪಿಸಿದೆ.
ಎಲ್ಲ ಉದ್ಯೋಗ ಕ್ಷೇತ್ರಗಳಲ್ಲಿ ಮೊದಲ ಬಾರಿ ಉದ್ಯೋಗಿ ಆದವರಿಗೆ ಒಂದು ತಿಂಗಳ ವೇತನ ನೀಡಲಿದ್ದು, ನೇರ ನಗದು ವಗಾವಣೆ ಮೂಲಕ ಮೂರು ಕಂತುಗಳಲ್ಲಿ 15 ಸಾವಿರ ರೂ. ವರೆಗೆ ಪಾವತಿಸಲಿದೆ. ಒಂದು ಲಕ್ಷ ರೂ. ವರೆಗೆ ಸಂಬಳ ಪಡೆಯುವ ಉದ್ಯೋಗಿಗಳಿಗೂ ಇದು ಅನ್ವಯವಾಗಲಿದೆ. ಪ್ರತಿ ವರ್ಷ ಒಂದು ಕೋಟಿ ಉದ್ಯೋಗಿಗಳಂತೆ ಒಟ್ಟಾರೆ ಎರಡು ವರ್ಷದಲ್ಲಿ ಇದರಿಂದ 2.10 ಕೋಟಿ ಕಾರ್ವಿುಕರು ಪ್ರಯೋಜನ ಪಡೆಯಲಿದ್ದಾರೆ.
ಉತ್ಪಾದನೆ ಕ್ಷೇತ್ರದಲ್ಲಿ ಹೆಚ್ಚುವರಿ ಉದ್ಯೋಗ ಸೃಜನೆಗಾಗಿ ಮೊದಲ ಬಾರಿ ಉದ್ಯೋಗಿಯಾಗಿ ಭವಿಷ್ಯ ನಿಧಿಯಲ್ಲಿ ನೋಂದಾಯಿಸಿಕೊಂಡವರಿಗೆ ನಾಲ್ಕು ವರ್ಷಗಳ ಅವಧಿಗೆ ಸರ್ಕಾರ ಭವಿಷ್ಯ ನಿಧಿ ವಂತಿಕೆ ಭರಿಸಲಿದ್ದು, ಇದು 30 ಲಕ್ಷ ಯುವಜನತೆಗೆ ನೆರವಾಗಲಿದೆ. ಕನಿಷ್ಠ 50ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಂಸ್ಥೆಗಳಿಗೆ ಇದು ಅನ್ವಯಿಸಲಿದೆ. ಒಂದು ಲಕ್ಷ ರೂ. ಒಳಗಿನ ವೇತನದಾರರು ಈ ಪ್ರಯೋಜನ ಪಡೆಯಬಹುದು. ಈ ಯೋಜನೆಯು ಎರಡು ವರ್ಷದವರೆಗೆ ಚಾಲ್ತಿಯಲ್ಲಿ ಇರಲಿದೆ.
ಇದಲ್ಲದೆ, ಉದ್ಯೋಗದಾತರಿಗೆ ಬೆಂಬಲ ನೀಡಲಿದ್ದು, ಎಲ್ಲ ವಲಯದಲ್ಲಿ ಹೆಚ್ಚುವರಿ ಉದ್ಯೋಗ ಸೃಜನೆಗೆ ಸಹಾಯ ಹಸ್ತ ಚಾಚಿದೆ. ಒಂದು ಲಕ್ಷ ರೂ.ವರೆಗಿನ ಸಂಬಳ ಹೊಂದಿದ ಉದ್ಯೋಗಿಗಳ ಭವಿಷ್ಯ ನಿಧಿ ವಂತಿಕೆ ಮೇಲೆ 3 ಸಾವಿರ ರೂ. ವರೆಗೆ ಉದ್ಯೋಗದಾತರಿಗೆ ಮರುಪಾವತಿಸಲಿದೆ. ಎರಡು ವರ್ಷದ ಅವಧಿಗೆ ಇದು ಅನ್ವಯವಾಗಲಿದ್ದು, 50 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.
ಕೌಶಲಾಭಿವೃದ್ಧಿಗೆ ಸಾಲ ಯೋಜನೆ:ಮಾದರಿ ಕೌಶಲ ಸಾಲ ಯೋಜನೆ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಆರಂಭಿಸಿದ ನಿಧಿಯಿಂದ 7.5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಈ ಮೂಲಕ 25 ಸಾವಿರ ಜನರಿಗೆ ನೆರವಾಗುವ ನಿರೀಕ್ಷೆ ಹೊಂದಲಾಗಿದೆ.

ಶಿಕ್ಷಣ ಸಾಲಕ್ಕೆ ಶೇ.3 ಬಡ್ಡಿ ಸಹಾಯಧನ:ಯಾವುದೇ ಸರ್ಕಾರಿ ಯೋಜನೆಗಳಲ್ಲಿ ಫಲಾನುಭವಿ ಆಗದ ವಿದ್ಯಾರ್ಥಿಗಳು ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು 10 ಲಕ್ಷ ರೂ. ಗಳವರೆಗಿನ ಶಿಕ್ಷಣ ಸಾಲಕ್ಕೆ ಶೇ.3ರ ಬಡ್ಡಿದರವನ್ನು ಸಹಾಯಧನವಾಗಿ ನೀಡಲಾಗುತ್ತದೆ. ಪ್ರತಿವರ್ಷ ಒಂದು ಲಕ್ಷ ವಿದ್ಯಾರ್ಥಿಗಳು ಈ ಯೋಜನೆಗೆ ಪಾತ್ರರಾಗಲಿದ್ದಾರೆ.
1,000 ಐಟಿಐಗಳು ಮೇಲ್ದರ್ಜೆಗೆ:ಮುಖ್ಯ ಹಾಗೂ ಉಪ ಕೇಂದ್ರಗಳನ್ನು ಒಳಗೊಂಡ ಹಬ್ ಆಂಡ್ ಸ್ಪೋಕ್ ಮಾದರಿಯಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು ಒಂದು ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು. ರಾಜ್ಯಗಳು ಮತ್ತು ಉದ್ಯಮಗಳ ಸಹಭಾಗಿತ್ವದಲ್ಲಿ ಕೇಂದ್ರೀಯ ಪುರಸ್ಕೃತ ಯೋಜನೆ ಇದಾಗಿದೆ. ಐದು ವರ್ಷಗಳಲ್ಲಿ ಇದಕ್ಕಾಗಿ 60 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಇದರಲ್ಲಿ ಕೇಂದ್ರದ ಪಾಲು 30 ಸಾವಿರ ಕೋಟಿ ರೂಪಾಯಿಗಳಾದರೆ, ರಾಜ್ಯದಿಂದ 20 ಸಾವಿರ ಹಾಗೂ ಉದ್ಯಮಗಳಿಂದ 10 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ನಿರೀಕ್ಷಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕೋರ್ಸ್​ಗಳ ಮರು ವಿನ್ಯಾಸ ಹಾಗೂ ಮರುಪರಿಶೀಲನೆ, ಹೊಸ ಕೋರ್ಸ್​ಗಳ ಆರಂಭ, ಎಲ್ಲ 1000 ಐಟಿಐಗಳಲ್ಲಿ ಒಂದು ಹಾಗೂ ಎರಡು ವರ್ಷದ ಕೋರ್ಸ್​ಗಳನ್ನು ನಡೆಸುವುದು, ಕೇಂದ್ರೀಯ ಐಟಿಐಗಳಲ್ಲಿ ವಿಶೇಷ ಲಘು ಅವಧಿಯ ಕೋರ್ಸ್​ಗಳನ್ನು ಪರಿಚಯಿಸಲಾಗುತ್ತದೆ. ತರಬೇತಿದಾರರ ತರಬೇತಿಗೆಂದು ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳ ಸಾಮರ್ಥ್ಯ ವೃದ್ಧಿಸುವುದು ಸೇರಿದೆ.
ಇಂಟರ್ನಿಗಳಿಗೆ ಮಾಸಿಕ 11 ಸಾವಿರ ರೂ.:ಒಂದು ಕೋಟಿ ಜನರಿಗೆ ಮುಂದಿನ ಐದು ವರ್ಷಗಳಲ್ಲಿ ದೇಶದ 500 ಟಾಪ್ ಕಂಪನಿಗಳಲ್ಲಿ ಇಂಟರ್ನ್​ಶಿಪ್​ಗೆ ಅವಕಾಶ ಕಲ್ಪಿಸಲಿದೆ. ವಿವಿಧ ವೃತ್ತಿಪರ ಹಾಗೂ ಉದ್ಯೋಗಾವಕಾಶಗಳಿಗಾಗಿ ಒಂದು ವರ್ಷದ ಅವಧಿಗೆ ವಿದ್ಯಾರ್ಥಿಗಳು ವಾಸ್ತವ ವಹಿವಾಟಿನ ಅನುಭವ ಪಡೆಯಲಿದ್ದಾರೆ. ಪ್ರತಿ ತಿಂಗಳಿಗೆ ಐದು ಸಾವಿರ ರೂ. ಹಾಗೂ ಒಂದು ಬಾರಿಯ ನೆರವಾಗಿ 6 ಸಾವಿರ ರೂ. ಪಡೆಯಲಿದ್ದಾರೆ. ಕಂಪನಿಗಳು ಸಿಎಸ್​ಆರ್ ನಿಧಿಯನ್ವಯ ತರಬೇತಿ ವೆಚ್ಚ ಹಾಗೂ ಇಂಟರ್ನ್​ಶಿಪ್​ನ ಶೇ.10 ವೆಚ್ಚ ಭರಿಸಬೇಕಾಗಲಿದೆ.
ಯಾರು ಅರ್ಹರು?:21-24 ವಯಸ್ಸಿನ ಪೂರ್ಣ ಪ್ರಮಾಣದ ವ್ಯಾಸಂಗ ಅಥವಾ ಉದ್ಯೋಗದಲ್ಲಿ ತೊಡಗದೆ ಇರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಾಗಿರಲಿದ್ದಾರೆ. ಸರ್ಕಾರ ಮಾಸಿಕ 5 ಸಾವಿರ ರೂ. ನೀಡಲಿದ್ದು, ಇದರೊಂದಿಗೆ ಕಂಪನಿಗಳು 6 ರೂ. ಪಾವತಿಸಲಿವೆ. ಈ ಮೂಲಕ ಇಂಟರ್ನಿಗಳು ಪ್ರತಿ ತಿಂಗಳು ಕನಿಷ್ಠ 11 ಸಾವಿರ ರೂ. ಗಳಿಸಲಿದ್ದಾರೆ. ಆಡಳಿತಾತ್ಮಕ ವೆಚ್ಚವನ್ನು ಕಂಪನಿಗಳು ಭರಿಸಬೇಕಿದೆ. ಆದರೆ, ಕಂಪನಿಗಳು ಇದರಲ್ಲಿ ಪಾಲ್ಗೊಳ್ಳುವುದು ಐಚ್ಛಿಕವಾಗಿದೆ.
ಐಐಟಿ, ಐಐಎಂ, ಸಿಎ, ಸಿಎಂಎ ಅಭ್ಯರ್ಥಿಗಳು, ಆದಾಯ ತೆರಿಗೆ ಪಾವತಿಸುವ ಕುಟುಂಬದ ಸದಸ್ಯರು ಹಾಗೂ ಸರ್ಕಾರಿ ಉದ್ಯೋಗಿಗಳ ಮಕ್ಕಳನ್ನು ಇದರಿಂದ ಹೊರಗಿಡಲಾಗಿದೆ. ಆರಂಭದಲ್ಲಿ ಎರಡು ವರ್ಷದ ಯೋಜನೆ ಇದಾಗಿದ್ದು, ಎರಡನೇ ಹಂತದಲ್ಲಿ 3 ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗುತ್ತದೆ. ಇದಲ್ಲದೆ, ರಾಜ್ಯ ಸರ್ಕಾರ ಹಾಗೂ ಖಾಸಗಿ ನೆರವಿನಲ್ಲಿ ನೂರು ನಗರಗಳಲ್ಲಿ ಕೈಗಾರಿಕಾ ಪಾರ್ಕ್​ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಲ್ಲದೆ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿಯಲ್ಲಿ 12 ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಕೈಗಾರಿಕಾ ಕಾರ್ವಿುಕರಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಬಾಡಿಗೆ ವಸತಿ ಯೋಜನೆ ರೂಪಿಸಲಾಗಿದೆ.
ಆಧ್ಯಾತ್ಮಿಕ ಹಾಗೂ ಧಾರ್ವಿುಕ ಪ್ರವಾಸೋದ್ಯಮಕ್ಕೆ ಕೇಂದ್ರ ಬಜೆಟ್​ನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, ಬಿಹಾರ ಮತ್ತು ಒಡಿಶಾದ ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿಯತ್ತ ವಿಶೇಷ ಗಮನ ಹರಿಸಲಾಗಿದೆ. ಗಯಾದ ವಿಷ್ಣುಪಾದ ದೇವಸ್ಥಾನ ಮತ್ತು ಬೋಧಗಯಾದ ಮಹಾಬೋಧಿ ದೇವಸ್ಥಾನವನ್ನು ವಿಶ್ವದರ್ಜೆಯ ಯಾತ್ರಿಕರ ಮತ್ತು ಪ್ರವಾಸಿಗರ ತಾಣವನ್ನಾಗಿಸಲಾಗುತ್ತಿದೆ. ಗಯಾದಲ್ಲಿನ ವಿಷ್ಣುಪಾದ ದೇವಸ್ಥಾನವು ಫಾಲ್ಗು ನದಿ ಪಕ್ಕದಲ್ಲಿರುವ ಅತ್ಯಂತ ಪುರಾತನ ಹಿಂದು ದೇವಸ್ಥಾನಗಳಲ್ಲಿ ಒಂದಾಗಿದೆ. ಮಹಾಬೋಧಿ ದೇವಾಲಯ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಆದರಿಂದ ಕಾಶಿ ವಿಶ್ವನಾಥ ದೇವಾಲಯದ ಮಾದರಿಯಲ್ಲೇ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಬಿಹಾರದ ರಾಜಗೀರ್ ಹಿಂದುಗಳು, ಬೌದ್ಧರು ಮತ್ತು ಜೈನರಿಗೆ ಧಾರ್ವಿುಕ ಪ್ರಾಮುಖ್ಯತೆಯ ಕೇಂದ್ರವಾಗಿದೆ.
ಜೈನ ದೇವಾಲಯದ ಸಂಕೀರ್ಣದಲ್ಲಿ ಇರುವ 20ನೇ ತೀರ್ಥಂಕರ ಮುನಿಸುವ್ರತ ದೇವಸ್ಥಾನ ಪುರಾತನವಾಗಿದೆ. ಬ್ರಹ್ಮಕುಂಡದಿಂದ ಹೊರಹೊಮ್ಮುವ ಸಪ್ತಋಷಿಗಳ ಅಥವಾ ಏಳು ಬಿಸಿನೀರಿನ ಬುಗ್ಗೆಗಳು ಪವಿತ್ರವಾಗಿದ್ದು, ಅವುಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಹಾಗೆಯೇ ಒಡಿಶಾ ರಾಜ್ಯ ರಮಣೀಯ ಸೌಂದರ್ಯ, ದೇವಾಲಯ, ಸ್ಮಾರಕ, ಕರಕುಶಲತೆ, ವನ್ಯಜೀವಿ, ಅಭಯಾರಣ್ಯ, ನೈಸರ್ಗಿಕ ಭೂದೃಶ್ಯ ಮತ್ತು ಪ್ರಾಚೀನ ಕಡಲತೀರಗಳನ್ನು ಹೊಂದಿದೆ. ಇವುಗಳನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ತಾಣಗಳಾಗಿ ಮಾಡಲು ಕೇಂದ್ರ ಸರ್ಕಾರ ನೆರವು ನೀಡಲಿದೆ.

ಪ್ರವಾಸಿ ತಾಣವಾಗಿ ನಳಂದ ವಿಶ್ವವಿದ್ಯಾಲಯ:ಬಿಹಾರದಲ್ಲಿನ ಪ್ರಾಚೀನಕಾಲದ ನಳಂದ ವಿಶ್ವವಿದ್ಯಾಲಯವನ್ನು ಪುನರುಜ್ಜೀವನ ಮಾಡಲಾಗಿದೆ. ಇದೀಗ ಇದನ್ನು ಕೇವಲ ಅಧ್ಯಯನ ಕೇಂದ್ರಕ್ಕೆ ಸೀಮಿತ ಮಾಡದೆ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ವೈಭವೋಪೇತ ನಳಂದ ವಿಶ್ವವಿದ್ಯಾನಿಲಯವವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಿ ಸೆಳೆಯಲು ಬೇಕಾದ ಮೂಲ ಸೌಕರ್ಯ ಒದಗಿಸಲು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eleven =
Remember me
