|ದೇವರಾಜ್ ಎಲ್.ಬೆಂಗಳೂರು
ಕರೊನಾ ಹೊಡೆತಕ್ಕೆ ಸಿಲುಕಿ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿ ರುವ ನಡುವೆಯೇ ರಾಜ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ‘ಹೆಚ್ಚುವರಿ’ ಶುಲ್ಕದ ಹೆಸರಲ್ಲಿ ವಿದ್ಯಾರ್ಥಿಗಳಿಂದ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿದ್ದು, ಸಿಇಟಿ ಪ್ರವೇಶಕ್ಕಾಗಿ ತೆರಳಿದ ವಿದ್ಯಾರ್ಥಿಗಳು ಹಾಗೂ ಪಾಲಕರು ಕಂಗಾಲಾಗಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಇಟಿ-2020 ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಿದೆ. ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಡಿ.7 ಕೊನೇ ದಿನವಾಗಿದೆ. ಇಂಜಿನಿಯ ರಿಂಗ್, ವಾಸ್ತುಶಿಲ್ಪ, ಫಾರ್ವ, ಬಿ.ಎಸ್ಸಿ ಕೃಷಿ, ಪಶುಸಂಗೋಪನೆ ಯೋಗ ಕೋರ್ಸ್​ಗಳಿಗೆ ಸೀಟು ಪಡೆದುಕೊಂಡಿರುವ ವಿದ್ಯಾರ್ಥಿ ಗಳಿಂದ ಕಾಲೇಜುಗಳು ಮನಸೋಇಚ್ಛೆ ಹೆಚ್ಚುವರಿ ಶುಲ್ಕ ವಸೂಲಿಗೆ ಮುಂದಾಗಿವೆ. ಪ್ರತಿ ವರ್ಷ ಅಂದಾಜು 20 ಸಾವಿರ ಇಂಜಿನಿಯರಿಂಗ್ ಸೀಟುಗಳು ಉಳಿಕೆಯಾದರೂ, ವಿವಿಧ ಕೋರ್ಸ್​ಗಳ ಆಧಾರದ ಮೇಲೆ 30 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಶುಲ್ಕ ನಿಗದಿ ಮಾಡಿಕೊಂಡಿವೆ. ರಾಜ್ಯದಲ್ಲಿ 252 ಇಂಜಿನಿಯರಿಂಗ್ ಮತ್ತು 55 ಮೆಡಿಕಲ್ ಕಾಲೇಜುಗಳಿವೆ. ಸಿಇಟಿ-ನೀಟ್​ನಲ್ಲಿ ಬರುವ ಇತರೆ ಕೋರ್ಸ್​ಗಳು ಸೇರಿ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಕನಿಷ್ಠ 30 ಸಾವಿರ ರೂ. ಹೆಚ್ಚುವರಿ ಶುಲ್ಕ ಪಡೆದರೂ ಪ್ರತಿ ಕಾಲೇಜಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಟಾಪ್ ಇಂಜಿನಿಯರಿಂಗ್ ಕಾಲೇಜುಗಳೆಂಬ ಎಂಬ ಹಣೆಪಟ್ಟಿ ಹೊಂದಿರುವ ಬಹುತೇಕ ಕಾಲೇಜುಗಳು, ಹೆಚ್ಚುವರಿ ಶುಲ್ಕದ ಬಗ್ಗೆ ತಮ್ಮ ಕಾಲೇಜಿನ ವೆಬ್​ಸೈಟ್​ನಲ್ಲೇ ವಿವರವಾಗಿ ಪ್ರಕಟಿಸುವ ಮೂಲಕ ಹಗಲುದರೋಡೆಗೆ ಮುಂದಾಗಿವೆ.
ಇನ್ನು ಕೆಲವು ಕಾಲೇಜುಗಳು ಕಡ್ಡಾಯವಾಗಿ ಶುಲ್ಕ ಮಾಹಿತಿಯನ್ನು ಪ್ರಕಟಿಸಬೇಕೆಂಬ ನಿಯಮ ಇದ್ದರೂ ವಿವರ ಪ್ರಕಟಿಸಿಲ್ಲ. ಬದಲಾಗಿ ಪ್ರವೇಶ ಕೋರಿ ವಿದ್ಯಾರ್ಥಿಗಳು ಆಗಮಿಸಿದಾಗ ಶುಲ್ಕದ ಮಾಹಿತಿ ನೀಡುತ್ತವೆ. ಈ ಬಗ್ಗೆ ದೂರುಗಳು ಬಂದರೂ ಸರ್ಕಾರ ಶಿಸ್ತುಕ್ರಮ ಕೈಗೊಳ್ಳದೆ ಉದಾಸೀನ ತೋರುತ್ತಿದೆ.
ಕಾಲೇಜು ಆಡಳಿತ ಮಂಡಳಿಗಳ ಹೆಚ್ಚುವರಿ ಶುಲ್ಕ ವಸೂಲಿ ನಿಯಂತ್ರಣಕ್ಕಾಗಿಯೇ ರಾಜ್ಯ ಸರ್ಕಾರ ‘ಕರ್ನಾಟಕ ರಾಜ್ಯ ವೃತ್ತಿಪರ ಮಹಾವಿದ್ಯಾಲಯಗಳ ಪ್ರವೇಶ ಮೇಲ್ವಿಚಾರಣಾ ಸಮಿತಿ’ ರಚನೆ ಮಾಡಿದೆ. ಇದು ಪ್ರತಿ ವರ್ಷ ವಿದ್ಯಾರ್ಥಿಗಳು ನೀಡುವ ದೂರಿನ ಅನ್ವಯ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡುತ್ತದೆ. ಕೆಲವು ಬಾರಿ ನೋಟಿಸ್​ಗೆ ಬಗ್ಗದ ಕಾಲೇಜುಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ನೀಡುತ್ತದೆ. ವಿದ್ಯಾರ್ಥಿಗಳು ದೂರು ಕೊಟ್ಟರಷ್ಟೇ ಸಮಿತಿ ಪರಿಶೀಲನೆ ನಡೆಸುತ್ತಿದೆ. ವಿದ್ಯಾರ್ಥಿಗಳು ದೂರು ನೀಡದ ಹೊರತು ಸಮಿತಿ ಕಾಲೇಜಿನ ಮೇಲೆ ಶಿಸ್ತು ಕ್ರಮ ಜರುಗಿಸಲು ಅವಕಾಶವಿರುವುದಿಲ್ಲ.
ಹೆಚ್ಚುವರಿ ಶುಲ್ಕ ಪಡೆಯಬಾರದು ಎಂಬ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟತೆ ನೀಡಿಲ್ಲ. ಸರ್ಕಾರಿ ಶುಲ್ಕದಿಂದ ಕಾಲೇಜು ನಡೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇತರೆ ಶುಲ್ಕದ ಹೆಸರಿನಲ್ಲಿ ಶುಲ್ಕ ಪಡೆಯುವುದು ಅನಿವಾರ್ಯವಾಗಿದೆ.
|ಎಂ.ಕೆ. ಪಾಂಡುರಂಗ ಶೆಟ್ಟಿಕಾರ್ಯದರ್ಶಿ, ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ
ಮೈಸೂರು ರಸ್ತೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜು ಒಂದಕ್ಕೆ ಭೇಟಿ ನೀಡಿದಾಗ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ 50 ಸಾವಿರ ರೂ. ಕೇಳಿದರು. ಸಾಧ್ಯವಿಲ್ಲದೇ ಇರುವುದರಿಂದ 2ನೇ ಸುತ್ತಿನ ಸೀಟು ಹಂಚಿಕೆಗಾಗಿ ಕಾಯುತ್ತಿದ್ದೇನೆ.
| ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿ
ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕಾಲೇಜುಗಳು ಶೇ.18 ಬಡ್ಡಿ ಸಮೇತ ಹಣವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕೆಂದು ಪ್ರವೇಶ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಸರ್ಕಾರಕ್ಕೆ 2017 ಸೆಪ್ಟಂಬರ್​ನಲ್ಲಿ ಶಿಫಾರಸು ಮಾಡಿದ್ದರು. ವರದಿ ಸರ್ಕಾರ ಹಂತದಲ್ಲೇ ಧೂಳು ಹಿಡಿಯುತ್ತಿದೆ. ಈವರೆಗೆ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸಿಲ್ಲ.
ರಾಜ್ಯದಲ್ಲಿರುವ ಬಹುತೇಕ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಪ್ರಭಾವಿ ರಾಜಕೀಯ ಮುಖಂಡರ ಒಡೆತನದಲ್ಲಿವೆ. ನೋಟಿಸ್ ಬಂದರೂ ಕೂಡ ಅದನ್ನು ಮುಚ್ಚಿಹಾಕಲು ಕಾಲೇಜುಗಳು ಸಾಕಷ್ಟು ಪ್ರಭಾವ ಬಳಸುತ್ತವೆ. ಇದರಿಂದ ರಾಜ್ಯ ಸರ್ಕಾರ ಸಹ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತದೆ ಎಂದು ಹೇಳಲಾಗುತ್ತಿದೆ.

ಸರ್ಕಾರ ನಿಗದಿ ಪಡಿಸಿದ ಶುಲ್ಕದ ಹೊರತಾಗಿ ಗ್ರಂಥಾಲಯ ಶುಲ್ಕ, ಸಾರಿಗೆ ಶುಲ್ಕ, ಕ್ರೀಡಾ ಶುಲ್ಕ, ಇಂಟರ್​ನೆಟ್ ಶುಲ್ಕ, ವಿವಿಧ ತರಬೇತಿ ಇತ್ಯಾದಿ ಪಟ್ಟಿ ಸಿದ್ಧಪಡಿಸಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತದೆ. ಈ ಹಿಂದೆ ಅಗತ್ಯ ಸೌಲಭ್ಯ ಹಾಗೂ ಹೆಚ್ಚುವರಿ ಸೌಕರ್ಯ ಎಂಬ ಎರಡು ರೀತಿಯಲ್ಲಿ ಶುಲ್ಕ ಪಡೆಯುತ್ತಿದ್ದವು. ಈ ವರ್ಷ ಅಗತ್ಯ ಸೌಲಭ್ಯಗಳನ್ನು ಹೆಚ್ಚುವರಿ ಸೌಕರ್ಯದೊಂದಿಗೆ ಸೇರಿಸಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ ಸೌಲಭ್ಯ ಪಡೆದುಕೊಳ್ಳುವ ಪರಿಸ್ಥಿತಿಯನ್ನು ಕಾಲೇಜುಗಳು ನಿರ್ಮಾಣ ಮಾಡಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 5 =
Remember me
