ಬೆಂಗಳೂರು:ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಪಾಕಿಸ್ತಾನ್ ಜಿಂದಾಬಾದ್’ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಎಫ್​ಎಸ್​ಎಲ್ ವರದಿ ಕೈಸೇರಿಲ್ಲ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ ಕೆಲವೇ ಸಮಯದಲ್ಲಿ ಅದೇ ಎಫ್​ಎಸ್​ಎಲ್ ವರದಿ, ಸಾಂರ್ದಭಿಕ ಸಾಕ್ಷ್ಯ, ಸಾಕ್ಷಿಗಳ ಹೇಳಿಕೆ ಪರಿಗಣಿಸಿ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮೂವರು ಆರೋಪಿಗಳನ್ನು ಬೆಂಗಳೂರು ಎಸಿಎಂಎಂ ಕೋರ್ಟ್ 2 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ದೆಹಲಿ ಮೂಲದ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿ ನಿವಾಸಿ ಮಹಮ್ಮದ್ ಶಫಿ ನಾಶಿಪುಡಿ ಹಾಗೂ ಬೆಂಗಳೂರಿನ ಆರ್.ಟಿ. ನಗರ ನಿವಾಸಿ ಮುನಾವರ್ ಬಂಧಿತರು. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಖಾಸಗಿ ವರದಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಾಕ್ರೋಶಕ್ಕೆ ಮಣಿದು ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಎಫ್​ಎಸ್​ಎಲ್ ಸಮರ:ಸೋಮವಾರ ಬೆಳಗ್ಗೆ ಖಾಸಗಿ ಎಫ್​ಎಸ್​ಎಲ್ ವರದಿ ಬಹಿರಂಗಗೊಂಡು ಸಂಚಲನ ಮೂಡಿಸಿತ್ತು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ದೃಢಪಟ್ಟಿದೆ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್, ಖಾಸಗಿ ಎಫ್​ಎಸ್​ಎಲ್ ವರದಿ ಪರಿಗಣಿಸಲ್ಲ. ವಿಡಿಯೋ ಪರಿಶೀಲಿಸಲು ಖಾಸಗಿ ಲ್ಯಾಬರೇಟರಿ ಇದೆಯೇ? ಪರಿಶೀಲಿಸಲು ಅನುಮತಿ ಕೊಟ್ಟಿದ್ಯಾರು ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ರಾತ್ರಿ ವೇಳೆಗೆ ಮೂವರು ಆರೋಪಿಗಳನ್ನು ಬಂಧಿಸಿರುವುದು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಖಚಿತಪಡಿಸಿದ್ದಾರೆ.
ಪೊಲೀಸರ ಪ್ರಕಾರ ಎಫ್​ಎಸ್​ಎಲ್ ವರದಿ ಬಂದಿದ್ದು, ಘೋಷಣೆ ಕೂಗಿರುವುದಕ್ಕೆ ಸಾಕ್ಷ್ಯ ಸಿಕ್ಕ ನಂತರವೇ ಬಂಧಿಸಲಾಗಿದೆ ಎನ್ನುವ ಅರ್ಥದಲ್ಲಿ ಪೊಲೀಸರು ಹೇಳಿದ್ದಾರೆ. ಆದರೆ, ಸರ್ಕಾರ ಮಾತ್ರ ಎಫ್​ಎಸ್​ಎಲ್ ವರದಿ ಇನ್ನೂ ಬಂದಿಲ್ಲ ಎಂದು ಹೇಳುತ್ತಿತ್ತು. ಇದರ ಬೆನ್ನಲ್ಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹೀಗಾಗಿ ಎಫ್​ಎಸ್​ಎಲ್ ವರದಿ ಬಂದಿದ್ದರೂ ಸರ್ಕಾರ ಬಹಿರಂಗಪಡಿಸದೆ ಮುಚ್ಚಿಡುವ ಪ್ರಯತ್ನವನ್ನು ಮಾಡಿತ್ತಾ ಎಂಬ ಅನುಮಾನ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಪೊಲೀಸರು ಹೇಳಿದ್ದೇನು?ಫೆ.27ರಂದು ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಎಫ್​ಎಸ್​ಎಲ್ ವರದಿ, ಸಾಂರ್ದಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯವಾದ ಸಾಕ್ಷ್ಯಾಧಾರಗಳ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ, ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.
ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹಎಫ್​ಎಸ್​ಎಲ್ ವರದಿಯಲ್ಲಿ ಘೊಷಣೆ ಕೂಗಿದ್ದು ಧೃಢಪಟ್ಟ ನಂತರವೇ ಈ ಮೂವರು ಆರೋಪಿಗಳ ಬಂಧನವಾಗಿರುವುದು ಸ್ಪಷ್ಟಾಗಿದ್ದರೂ, ಸರ್ಕಾರ ಇನ್ನೂ ಎಫ್​ಎಸ್​ಎಲ್ ವರದಿ ಬಹಿರಂಗ ಮಾಡದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ ಎನ್ನುವುದಾದರೆ ವರದಿ ಬಹಿರಂಗ ಮಾಡಲು ಹಿಂಜರಿಕೆ ಏಕೆ? ಸರ್ಕಾರ ಈ ಮೂವರು ಆರೋಪಿಗಳನ್ನು ಬಂಧಿಸಿದರೆ ಸಾಲದು, ಇವರ ಮೇಲೆ ಐಪಿಸಿ ಸೆಕ್ಷನ್ 124ಎ ಅನ್ವಯ ದೇಶದ್ರೋಹ ಪ್ರಕರಣ ದಾಖಲಿಸಬೇಕು. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನೂ ಸಹ ಈ ಪ್ರಕರಣದಲ್ಲಿ ಶಾಮೀಲು ಮಾಡಬೇಕು. ಇದರ ಜತೆಗೆ 25 ಜನರಿಗೆ ಪಾಸ್ ನೀಡಿ 100 ಜನ ಬೆಂಬಲಿಗರಿಗೆ ವಿಧಾನಸೌಧದ ಒಳಗೆ ಪ್ರವೇಶ ನೀಡಿ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ವಿಚಾರಣೆ ನಡೆಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ವರದಿ ಬಹಿರಂಗಕ್ಕೆ ಮನವಿವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದರ ಕುರಿತ ಎಫ್​ಎಸ್​ಎಲ್ ವರದಿ ಬಹಿರಂಗಪಡಿಸುವಂತೆ ಬಿಜೆಪಿ ನಿಯೋಗವು ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ಇಂದು ಮನವಿ ಸಲ್ಲಿಸಿತು.
ಏನಿದು ಪಾಕ್ ಘೋಷಣೆ ಕೇಸ್?ಫೆ.27ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವು ಸಾಧಿಸಿದ್ದರು. ಗೆದ್ದ ಖುಷಿಯಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿ, ಕೆಲ ಶಂಕಿತ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿತ್ತು. ಎಲ್ಲರ ವಾಯ್ಸ್ ಸ್ಯಾಂಪಲ್ಸ್ಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿತ್ತು. ಎಫ್​ಎಸ್​ಎಲ್ ವರದಿ ಇನ್ನೂ ಬಂದಿಲ್ಲ. ಘೋಷಣೆ ಕೂಗಿರುವುದು ದೃಢಪಟ್ಟಿಲ್ಲ ಎಂದೇ ಸರ್ಕಾರ ಹೇಳುತ್ತಿತ್ತು.
ಎಫ್​ಎಸ್​ಎಲ್ ಖಾಸಗಿ ವರದಿಯಲ್ಲಿ ಘೋಷಣೆ ಕೂಗಿದ್ದು ದೃಢಪಟ್ಟ ನಂತರವೇ ಮೂವರು ಆರೋಪಿಗಳ ಬಂಧನವಾಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಇನ್ನೂ ಎಫ್​ಎಸ್​ಎಲ್ ವರದಿ ಬಹಿರಂಗ ಮಾಡದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ ಎನ್ನುವುದಾದರೆ ವರದಿ ಬಹಿರಂಗ ಮಾಡಲು ಹಿಂಜರಿಕೆ ಏಕೆ ?
| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ
ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಖಾಸಗಿ ಎಫ್​ಎಸ್​ಎಲ್ ವರದಿಯಿಂದ ದೃಢಪಟ್ಟ ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮೂವರು ಆರೋಪಿಗಳನ್ನು ಬಂಧಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಒಪ್ಪಿಕೊಂಡಂತೆ ಆಗಿದೆ. ಬಂಧಿತ ಮೂವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗುವ ಧೈರ್ಯ ಮಾಡಿರುವ ಆರೋಪಿಗಳ ಹಿಂದಿರುವ ಶಕ್ತಿ ಯಾವುದು ಎಂಬುದನ್ನು ಸರ್ಕಾರ ಪತ್ತೆ ಹಚ್ಚಬೇಕಾಗಿದೆ.
| ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ
ಬಿಜೆಪಿಗೆ ಅಸ್ತ್ರವಾದ ವರದಿ
ಬೆಂಗಳೂರು: ವಿಧಾನಸೌಧದಲ್ಲಿ ಫೆ.27ರಂದು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿರುವುದು ಖಾಸಗಿ ಎಫ್​ಎಸ್​ಎಲ್ ತಜ್ಞ ಬಿ.ಎನ್.ಫಣೀಂದ್ರ ನೀಡಿರುವ ವರದಿಯಲ್ಲಿ ದೃಢಪಟ್ಟಿದೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಒಪ್ಪಿಸಿದ ವಿಡಿಯೋಗಳು ಅಸಲಿಯಾಗಿವೆ. ಅಷ್ಟೇ ಅಲ್ಲ, ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿರುವುದನ್ನು ಖಚಿತವಾಗಿದೆ ಎಂದು ಮಾ.2ರಂದು ನೀಡಿದ ವರದಿಯಲ್ಲಿ ಖಚಿತಪಡಿಸಿದ್ದಾರೆ. ಈ ವರದಿ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಹಂಚಿಕೊಂಡಿದ್ದು, ಖಾಸಗಿ ಎಫ್​ಎಸ್​ಎಲ್ ವರದಿ ದೃಢೀ ಕರಣ ನೀಡಿಯಾಗಿದೆ. ಸರ್ಕಾರಿ ವರದಿ ಕೂಡ ಸರ್ಕಾರದ ಕೈ ಸೇರಿದ್ದರೂ ಇನ್ನೂ ತಲುಪಿಲ್ಲವೆಂಬ ಹಸಿ ಸುಳ್ಳು ಹೇಳುತ್ತಿದ್ದು, ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ರಾಷ್ಟ್ರ ಬದ್ಧತೆ ಪ್ರಶ್ನಿಸುವಂತಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಎಫ್​ಎಸ್​ಎಲ್ ವರದಿಯಲ್ಲಿ ಏನಿದೆ?
* ಘಟನಾ ಸ್ಥಳದಲ್ಲಿ ಚಿತ್ರೀಕರಿಸಿದ್ದ ವಿಡಿಯೋ ಅಸಲಿ
* ವೈಜ್ಞಾನಿಕವಾಗಿ ವಿಡಿಯೋಗಳ ಪರೀಕ್ಷೆ ನಡೆಸಲಾಗಿದೆ
* ಯಾವುದೇ ವಿಡಿಯೋಗಳನ್ನ ತಿರುಚಲಾಗಿಲ್ಲ
* ಪಾಕಿಸ್ತಾನ ಜಿಂದಾಬಾದ್ ಘೊಷಣೆ ಕೂಗಿರುವುದು ದೃಢ
* ವಿಡಿಯೋ ಧ್ವನಿಗೂ ಆರೋಪಿಗಳ ಧ್ವನಿಗೂ ಸಾಮ್ಯತೆ ಇದೆ
ಬಿಜೆಪಿ ಟ್ವೀಟ್ ಏನಿತ್ತು?ಸೋಮವಾರ ಟ್ವೀಟ್ ಮಾಡಿದ್ದ ಬಿಜೆಪಿ, ವಿಧಾನಸೌಧದ ಒಳಗೆ ಪಾಕಿ ಸ್ತಾನ ಪರ ಘೊಷಣೆ ಕೂಗಿರುವುದು ಎಫ್​ಎಸ್​ಎಲ್ ವರದಿಯಲ್ಲಿ ಬಹಿರಂಗವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು ನಾಸೀರ್ ಸಾಬ್ ಜಿಂದಾಬಾದ್ ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ ವರದಿಯಲ್ಲಿ ಬಟಾ ಬಯಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿತ್ತು.
ಬೆಳಗ್ಗೆಯಿಂದಲೂ ಕೆಡಿಪಿ ಸಭೆಯಲ್ಲಿದ್ದ ಕಾರಣಕ್ಕೆ ವಿಷಯ ತಿಳಿದಿಲ್ಲ. ನಮ್ಮ ಇಲಾಖೆಯವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ತನಿಖೆ ನಡೆಯುತ್ತಿದ್ದು ಬಂಧನವಾಗಿರಬಹುದು. ಅಧಿಕಾರಿಗಳಿಂದ ತಿಳಿದುಕೊಂಡು ಮಾಹಿತಿ ನೀಡುತ್ತೇನೆ.
| ಪರಮೇಶ್ವರ್ ಗೃಹ ಸಚಿವ
ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
