|ಹರೀಶ್ ಬೇಲೂರುಬೆಂಗಳೂರು
ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮ (ಕೆಎಂಎಂಸಿಆರ್) 1994ಕ್ಕೆ ತಿದ್ದುಪಡಿಗೆ ಒತ್ತಾಯಿಸಿ, ಘಟಕಗಳನ್ನು ಸ್ಥಗಿತಗೊಳಿಸಿ ಜಲ್ಲಿ ಮಾಲೀಕರು ನಡೆಸುತ್ತಿರುವ ಮುಷ್ಕರ 11ನೇ ದಿನವೂ ಮುಂದುವರಿದಿದೆ. ಜಲ್ಲಿ ಕಲ್ಲು ಅಭಾವದಿಂದಾಗಿ ನಿರ್ಮಾಣ ಕಾಮಗಾರಿಗಳೆಲ್ಲ ಸ್ಥಗಿತಗೊಂಡ ಪರಿಣಾಮ ಅದನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ಲಕ್ಷಾಂತರ ಕಾರ್ವಿುಕ ಕುಟುಂಬಗಳು ಬೀದಿಗೆ ಬಿದ್ದಿವೆ. ಏತನ್ಮಧ್ಯೆ ಹೊರರಾಜ್ಯಗಳಿಂದ ರಾಜ್ಯ ಪ್ರವೇಶಿಸುತ್ತಿರುವ ಎಂ ಸ್ಯಾಂಡ್​ನ ಬೆಲೆ 400 ರೂ.ನಿಂದ 2 ಸಾವಿರ ರೂ.ಗೆ ಏರಿಕೆಯಾಗಿ ನಿರ್ಮಾಣ ಯೋಜನೆಗಳ ಮಾಲೀಕರ ಜೇಬಿಗೂ ಕತ್ತರಿ ಬೀಳುತ್ತಿದೆ.
ಪ್ರಸ್ತುತ ರಾಜ್ಯದ ಎಲ್ಲ ಕ್ವಾರಿ ಮತ್ತು ಕ್ರಷರ್​ಗಳು ಬಂದ್ ಆಗಿವೆ. ಸರ್ಕಾರಿ ಮತ್ತು ಖಾಸಗಿ ಕಟ್ಟಡ ನಿರ್ವಣ, ರಸ್ತೆ ಕಾಮಗಾರಿ ಸೇರಿ ವಿವಿಧ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದ ಕೂಲಿಕಾರ್ವಿುಕರು, ಗಣಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಷ್ಕರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಸಾವಿರಾರು ಕೋಟಿ ರೂ. ರಾಜಧನವೂ ನಿಂತಿದ್ದು, ಹೊರರಾಜ್ಯಗಳಿಂದ ಕಳ್ಳದಾರಿಯಲ್ಲಿ ಎಂ ಸ್ಯಾಂಡ್ ಕರ್ನಾಟಕ ಪ್ರವೇಶಿಸುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದಲ್ಲಿ 2,802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಟನ್​ಗೆ 70 ರೂ. ರಾಜಧನ, 21 ರೂ. ಜಿಲ್ಲಾ ನಿರ್ವಹಣೆ ನಿಧಿ ಸೇರಿ ಒಟ್ಟು 91 ರೂ. ಶುಲ್ಕ ಪಾವತಿಸಲಾಗುತ್ತಿದೆ. ಇದರಿಂದ ಪ್ರತಿವರ್ಷ ಸರ್ಕಾರಕ್ಕೆ 1,500 ಕೋಟಿ ರೂ. ರಾಜಸ್ವ ಬರುತ್ತಿದೆ. ರಾಜ್ಯದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿನ ಕಲ್ಲು ಗಣಿಗಾರಿಕೆಗಳಿಂದ ನಿತ್ಯ ಅಂದಾಜು 12 ಲಕ್ಷ ಟನ್ ಜಲ್ಲಿ ಕಲ್ಲು ಹಾಗೂ ಎಂ ಸ್ಟಾ್ಯಂಡ್ ಉತ್ಪಾದನೆಯಾಗುತ್ತಿದೆ.
ಕಳೆದ 11 ದಿನಗಳಿಂದ ಎಲ್ಲವೂ ಬಂದ್ ಆಗಿದೆ. ಜಲ್ಲಿ ಕ್ರಷರ್ ಘಟಕಗಳು ಸ್ಥಗಿತಗೊಂಡಿರುವುದರಿಂದ ಏನೆಲ್ಲ ಪರಿಣಾಮಗಳಾಗಿವೆ? ಏನೆಲ್ಲ ಕಾಮಗಾರಿಗಳು ಬಂದ್ ಆಗಿವೆ? ಎಂಬುದರ ಕುರಿತು ಗುರುವಾರ ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ವಾಸ್ತವ ಸ್ಥಿತಿ ಬಯಲಾಗಿದೆ.
– ಕ್ವಾರಿಗಳ ಮೇಲೆ ವಿಧಿಸಿರುವ 5 ಪಟ್ಟು ದಂಡವನ್ನು ವಿಲೇವಾರಿ ಮಾಡಬೇಕು.
– ಪ್ರತಿ ಹೆಕ್ಟೇರಿಗೆ 5 ಲಕ್ಷ ರೂ.ನಂತೆ ದಂಡ ವಿಧಿಸಿ ಪ್ರಕರಣ ಇತ್ಯರ್ಥಪಡಿಸಬೇಕು.
– ರಾಜಧನ ಸಂಗ್ರಹಕ್ಕೆ ಎರಡೆರಡು ಕಡೆ ಬದಲು ಇಲಾಖೆಯಿಂದಲೇ ಸಂಗ್ರಹಿಸಲಿ.
– ಪಟ್ಟಾ ಸ್ಥಳದಲ್ಲಿ ಗಣಿಗುತ್ತಿಗೆ ಪಡೆಯುವುದಕ್ಕೆ ರಾಜಧನ, ಶುಲ್ಕದಲ್ಲಿ ರಿಯಾಯಿತಿ
– ಗಣಿ ಗುತ್ತಿಗೆಗೆ ಈಗಾಗಲೇ ಸಲ್ಲಿಸಿರುವ ಅರ್ಜಿಗಳಿಗೆ ಕೂಡಲೇ ಮಂಜೂರಾತಿ
– ಕ್ರಷರ್ ಘಟಕ ಇರುವವರಿಗೆ ಟೆಂಡರ್​ರಹಿತ ಗುತ್ತಿಗೆ ಮಂಜೂರಾತಿಗೆ 3 ತಿಂಗಳು ಅವಕಾಶ
– ಅರಣ್ಯ ಇಲಾಖೆಯಿಂದ ಎಫ್​ಸಿ ಮುಖೇನ ಟೆಂಡರ್​ರಹಿತ ಗುತ್ತಿಗೆ ಪಡೆಯುವ ಸೌಲಭ್ಯ
– ಕಲ್ಲು ಗಣಿಗುತ್ತಿಗೆ ಪರವಾನಗಿ 50 ವರ್ಷಗಳಿಗೆ ವಿಸ್ತರಣೆ
– ಗಣಿಗುತ್ತಿಗೆ ಪ್ರದೇಶದೊಳಗೆ ಹೆಚ್ಚುವರಿ ಖನಿಜ ತೆಗೆದಿದ್ದಲ್ಲಿ ಶೇ.1 ಪಟ್ಟು ರಾಜಧನದಷ್ಟು ದಂಡ
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು.
|ಡಾ.ರವೀಂದ್ರ ಶೆಟ್ಟಿ. ಅಧ್ಯಕ್ಷ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್
ಬೆಂಗಳೂರು ಗ್ರಾಮಾಂತರ:ದೊಡ್ಡಬಳ್ಳಾಪುರದಲ್ಲಿರುವ ಬಿಎಸ್​ಎಫ್ ಕ್ಯಾಂಪಸ್​ನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಅಡಚಣೆ.
ರಾಮನಗರ:ಜಿಲ್ಲೆಯಲ್ಲಿ 50 ಕ್ರಷರ್​ಗಳ ಬಂದ್. ಎಂ-ಸ್ಯಾಂಡ್ ಸೇರಿ ಇತರ ಕಟ್ಟಡ ನಿರ್ಮಾಣ ವಸ್ತುಗಳನ್ನು ಹೆಚ್ಚಾಗಿ ಸರ್ಕಾರಿ ಕೆಲಸಗಳಿಗೆ ಬಳಕೆ.
ತುಮಕೂರು:80 ಕ್ರಷರ್ ಹಾಗೂ 120 ಕ್ವಾರಿಗಳ ಸ್ಥಗಿತದಿಂದ 4 ಸಾವಿರಕ್ಕೂ ಹೆಚ್ಚು ಅವಲಂಬಿತರು ಅತಂತ್ರ.
ಚಿಕ್ಕಬಳ್ಳಾಪುರ:173 ಗಣಿ ಗುತ್ತಿಗೆ ಕೇಂದ್ರ ಮತ್ತು 51 ಕಲ್ಲು ಪುಡಿ ಘಟಕಗಳಿವೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಜಲ್ಲಿ ಮಾರಾಟವಾಗುತ್ತಿವೆ.
ಚಾಮರಾಜನಗರ: ರಸ್ತೆ, ಚರಂಡಿ ಇತರ ಕಾಮಗಾರಿಗಳಿಗೆ ಜಲ್ಲಿಕಲ್ಲು, ಎಂ ಸ್ಯಾಂಡ್ ಅಭಾವ
ಮೈಸೂರು:25 ಕ್ವಾರಿಗಳು, 35 ಕ್ರಷರ್​ಗಳು ಕಾರ್ಯಚಟುವಟಿಕೆ ನಿಲ್ಲಿಸಿವೆ.
ಮಂಡ್ಯ:ಎಂ- ಸ್ಯಾಂಡ್, ಜಲ್ಲಿ, ಕಲ್ಲು ಪೂರೈಕೆ ಸ್ಥಗಿತವಾಗಿದೆ.
ಹಾಸನ:ರಸ್ತೆ, ಚರಂಡಿ ಇತರ ಕಾಮಗಾರಿಗಳಿಗೆ ಜಲ್ಲಿ, ಕಲ್ಲು, ಎಂ-ಸ್ಯಾಂಡ್ ಅಭಾವ
ಕೊಡಗು:23 ಕ್ವಾರಿ ಮತ್ತು 12 ಕ್ರಷರ್​ಗಳಿದ್ದು, ಕಟ್ಟಡ ಸಾಮಗ್ರಿಗಳ ಕೊರತೆ ಕಾಡುತ್ತಿದೆ. ಶೇ.60 ಜಿಲ್ಲೆಯಿಂದ ಪೂರೈಕೆಯಾದರೆ ಇನ್ನುಳಿದ್ದಕ್ಕೆ ನೆರೆ ಜಿಲ್ಲೆಗಳಿಂದ ಪೂರೈಕೆ
ರಾಯಚೂರು:ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಕೈಗೊಂಡಿರುವ ಕಾಮಗಾರಿಗಳಿಗಳೂ ಸ್ಥಗಿತ
ಬಳ್ಳಾರಿ:ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಸೇರಿ ಆಂಧ್ರ ಪ್ರದೇಶದ ಅನಂತಪುರ, ಕರ್ನಲ್, ಹೈದರಾಬಾದ್​ಗೆ ಜಿಲ್ಲೆಯಿಂದ ಹೆಚ್ಚು ಎಂ- ಸ್ಯಾಂಡ್, ಜಲ್ಲಿಕಲ್ಲು ಹಾಗೂ ಸೈಜುಗಲ್ಲು ಪೂರೈಸಲಾಗುತ್ತದೆ.
ವಿಜಯನಗರ:ಹೊಸ ಜಿಲ್ಲಾಡಳಿತ ಭವನ, 20ಕ್ಕೂ ಹೆಚ್ಚು ಅಂಗನವಾಡಿಗಳು, ನೂರಾರು ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಸ್ಥಗಿತ
ಕೊಪ್ಪಳ:ಕೆಲ ರಾಜಕೀಯ ನಾಯಕರಿಗೆ ಸೇರಿದ ಕ್ರಷರ್​ಗಳಿದ್ದು, ಆಯಾ ನಾಯಕರ ಬೆಂಬಲಿಗ ಗುತ್ತಿಗೆದಾರರಿಗೆ ಮಾತ್ರ ಪೂರೈಕೆ ಮಾಡುತ್ತಿದ್ದಾರೆ.
ಶಿವಮೊಗ್ಗ:ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ತುಂಗಾ ನದಿಗೆ ಸೇತುವೆ ನಿರ್ವಣ, ಸಾಗರ ತಾಲೂಕಿನಲ್ಲಿ ಸಿಗಂದೂರು ಸೇತುವೆ, ತೀರ್ಥಹಳ್ಳಿ ಭಾರತೀಪುರ ಸಮೀಪ ರಸ್ತೆ ನಿರ್ವಣ, ತೀರ್ಥಹಳ್ಳಿ-ಕೊಪ್ಪ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಬಹುತೇಕ ಸ್ಥಗಿತ. ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಾಲ್ಕು ರೈಲ್ವೆ ಮೇಲ್ಸೇತುವೆ ಕಾಮಗಾರಿಗೂ ಹಿನ್ನಡೆ
ದಕ್ಷಿಣ ಕನ್ನಡ:ಮಂಗಳೂರು ನಗರದಲ್ಲಿ ಸ್ಮಾರ್ಟ್​ಸಿಟಿ ಯೋಜನೆಯಡಿ ನಡೆಯುತ್ತಿದ್ದ ಹಲವು ರಸ್ತೆ ಕಾಮಗಾರಿಗಳು ನಿಂತಿವೆ. ಹೊರ ರಾಜ್ಯಗಳಿಂದ ಕರಾವಳಿಗೆ ಆಗಮಿಸಿದ ಕಾರ್ವಿುಕರು ಕೆಲಸವಿಲ್ಲ
ಉಡುಪಿ:66 ಎಕರೆಯಲ್ಲಿ 41 ಕ್ರಷರ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ ಸರಾಸರಿ 20 ಸಾವಿರ ಟನ್ ಜಲ್ಲಿಗೆ ಬೇಡಿಕೆ ಇತ್ತು. ಎರಡು ತಿಂಗಳ ಹಿಂದೆ ಪ್ರಾರಂಭಗೊಂಡಿದ್ದ ಪರ್ಕಳ-ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೊಂದರೆ
ದಾವಣಗೆರೆ:ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದಿಂದ (ಕೆಆರ್​ಐಡಿಎಲ್) ಪ್ರಗತಿಯಲ್ಲಿರುವ 250 ರಸ್ತೆ ಕಾಮಗಾರಿಗಳು ಸ್ಥಗಿತವಾಗಿವೆ. ಸ್ಮಾರ್ಟ್​ಸಿಟಿ ಯೋಜನೆಯಡಿ 20 ದೊಡ್ಡ ಕಾಮಗಾರಿಗಳು ಸ್ಥಗಿತವಾಗಿವೆ.
ಚಿತ್ರದುರ್ಗ:ಮನೆ, ಕಾಂಪ್ಲೆಕ್ಸ್, ಸರ್ಕಾರಿ ಕಟ್ಟಡಗಳು, ಹೆದ್ದಾರಿ, ನಗರ, ಪಟ್ಟಣ ಪ್ರದೇಶದ ರಸ್ತೆ ಕಾಮಗಾರಿ ನಿಂತಿವೆ.
ಉತ್ತರ ಕನ್ನಡ:21 ಕ್ವಾರಿಗಳಿಗೆ ಅನುಮತಿ ನೀಡಲಾಗಿದೆ. ಅದರಲ್ಲಿ 12 ಕ್ವಾರಿಗಳಲ್ಲಿ ಎಂಸ್ಯಾಂಡ್ ತಯಾರಿಸಲಾಗುತ್ತದೆ. ಸೀಬರ್ಡ್ ನೌಕಾ ಯೋಜನೆಯ ಒಳಗೆ 7 ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 2 ತಾತ್ಕಾಲಿಕ ಕ್ವಾರಿಗೆ ಅನುಮತಿ ನೀಡಲಾಗಿದೆ.
ಧಾರವಾಡ:78 ಕ್ರಷರ್​ಗಳು, 115 ಕ್ವಾರಿಗಳು ಬಂದ್ ಆಗಿವೆ. ಇದರಿಂದ ಸರ್ಕಾರಿ, ಖಾಸಗಿ ಕಾಮಗಾರಿಗಳು ನಿಂತಿವೆ.
ಗದಗ:ಜಿಲ್ಲೆಯಲ್ಲಿ 40 ಕ್ರಷರ್​ಗಳು ಸ್ಥಗಿತಗೊಂಡಿವೆ. ಪ್ರಮುಖ ರಸ್ತೆ ಹಾಗೂ ನಗರಸಭೆ 14 ಮತ್ತು 15 ನೇ ಹಣಕಾಸು ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಗ್ರಹಣ
ಹಾವೇರಿ:ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿ ಮೇರೆಗೆ ಸಮ್ಮೇಳನದ ತಯಾರಿ ಕಾಮಗಾರಿಗಳಿಗೆ ಮಾತ್ರ ಸಂಘದಿಂದ ವಿನಾಯಿತಿ ನೀಡಲಾಗಿದೆ.
ಯಾದಗಿರಿ:ಜಿಲ್ಲೆಯಲ್ಲಿ 21 ಕ್ವಾರಿ, 3 ಎಂ-ಸ್ಯಾಂಡ್ ಹಾಗೂ 28 ಕ್ರಷರ್ ಘಟಕಗಳು ಸ್ಥಗಿತಗೊಂಡಿವೆ.
ಕಲಬುರಗಿ:80ಕ್ಕೂ ಹೆಚ್ಚಿನ ಸ್ಟೋನ್ ಕ್ರಷರ್​ಗಳು ಬಂದ್, ಕಾರ್ವಿುಕರು ಹೈರಾಣಾಗುತ್ತಿದ್ದಾರೆ.
ಬೆಳಗಾವಿ:80 ಎಂ-ಸ್ಯಾಂಡ್ ಘಟಕ ಹಾಗೂ 114 ಸ್ಟೋನ್ ಕ್ರಷರ್ ಘಟಕಗಳು ಬಂದ್,  ತುರ್ತು ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಮಹಾರಾಷ್ಟ್ರದಿಂದ ಆಮದು
ತ.ನಾಡಿನಿಂದ ಬೆಂಗ್ಳೂರಿಗೆ ಎಂಸ್ಯಾಂಡ್:ಬೆಂಗಳೂರಿಗೆ ತಮಿಳುನಾಡಿನಿಂದ ಎಂ- ಸ್ಯಾಂಡ್ ಬರುತ್ತಿದ್ದು, ಇದರಿಂದ ರಾಜಧನ ಪಾವತಿಯಾಗುತ್ತಿಲ್ಲ. ಹೊರರಾಜ್ಯದವರ 400ಕ್ಕೂ ಹೆಚ್ಚು ಸ್ಟಾಕ್ ಪ್ಯಾಡ್​ಗಳು ನಗರದಲ್ಲಿವೆ. ಇವುಗಳನ್ನು ಮುಚ್ಚಿಸಿ ರಾಜ್ಯದ ಬೊಕ್ಕಸಕ್ಕೆ ಆಗುತ್ತಿರುವ ಸೋರಿಕೆ ಸರಿಪಡಿಸಬೇಕಿದೆ. ಒಂದು ಟನ್ ಎಂ-ಸ್ಯಾಂಡ್ ಬೆಲೆ 400 ರೂ.ನಿಂದ 2 ಸಾವಿರ ರೂ.ಗೆ ಏರಿಕೆಯಾಗಿದೆ. ಕೆಲವೆಡೆ ಪೊಲೀಸರ ರಕ್ಷಣೆಯೊಂದಿಗೆ ನೆರೆ ರಾಜ್ಯಗಳಿಂದ ಎರಡು ಪಟ್ಟು ಹಣ ನೀಡಿ ಎಂ-ಸ್ಯಾಂಡ್ ತರಿಸಲಾಗುತ್ತಿದೆ.
ಯಾರ್ಯಾರಿಗೆ ತೊಂದರೆ?:ಮನೆ ಕಟ್ಟುವವರಿಗೆ, ಖಾಸಗಿ ಕಟ್ಟಡ ನಿರ್ಮಾಣ ಮಾಡುವವರಿಗೆ, ಸರ್ಕಾರಿ ಕಾಮಗಾರಿ ಗುತ್ತಿಗೆದಾರರಿಗೆ, ಕೂಲಿ ಕಾರ್ವಿುಕರಿಗೆ, ಜಲ್ಲಿ ಕಲ್ಲು ಮತ್ತು ಎಂ-ಸ್ಯಾಂಡ್ ಸಾಗಣೆ ಮಾಡುವ ಲಾರಿ ಮಾಲೀಕರಿಗೆ, ಚಾಲಕರಿಗೆ, ರಿಯಲ್ ಎಸ್ಟೇಟ್ ಡೆವಲಪರ್​ಗಳಿಗೆ, ರೆಡಿ ಮಿಕ್ಸ್ ಕಾಂಕ್ರೀಟ್ ಘಟಕಗಳ ಹೊಂದಿರುವವರಿಗೆ, ಬಿಲ್ಡರ್​ಗಳಿಗೆ ತೊಂದರೆಯಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + seven =
Remember me
