ಬೆಂಗಳೂರು:ಕರೊನಾ ಕಾಲದಲ್ಲಿ ಸರ್ಕಾರಕ್ಕೆ ಶೈಕ್ಷಣಿಕ ಸವಾಲು ಕಾಡಿದೆ. ಶಾಲೆ ಆರಂಭ, ಶುಲ್ಕ, ಪರೀಕ್ಷೆ ಹೀಗೆ ವಿವಿಧ ಸವಾಲು ಎದುರುಗೊಂಡಿದ್ದು, ಯಾವುದೇ ತೀರ್ಮಾನ ಕೈಗೊಂಡರೂ ಹರಿತ ಟೀಕೆ ಟಿಪ್ಪಣಿ ಎದುರಿಸುವಂತಾಗಿದೆ. 2020-21ನೇ ಶೈಕ್ಷಣಿಕ ಸಾಲಿನ ಅರ್ಧ ವರ್ಷ ಕಳೆದಿದ್ದು, ಸರ್ಕಾರ ಇನ್ನಷ್ಟು ತೀವ್ರತಮ ಸಮಸ್ಯೆ- ಸವಾಲು ಎದುರಿಸಬೇಕಾಗುವ ಲಕ್ಷಣ ಗೋಚರಿಸಲಾರಂಭಿಸಿದೆ. ಕರೊನಾ ಎರಡನೇ ಅಲೆ ಭಯದಿಂದ ಶಾಲೆ ಆರಂಭಿಸಲು ಸರ್ಕಾರ ಸಿದ್ಧವಿಲ್ಲ ಎಂದು ಹೇಳುತ್ತಿದ್ದಂತೆ ಒಂದು ವರ್ಗದಿಂದ ಟೀಕೆಗಳು ಬಂದಿವೆ. ಈ ಶೈಕ್ಷಣಿಕ ವರ್ಷದಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಆಫ್​ಲೈನ್ ತರಗತಿ ನಡೆಯುವುದು ಅನುಮಾನ ಎಂದು ಸರ್ಕಾರದ ಕಡೆಯಿಂದಲೇ ಪರೋಕ್ಷವಾಗಿ ಮಾತುಗಳು ಬಂದಿವೆ. ಹೀಗಿರುವಾಗ ಮಕ್ಕಳನ್ನು ಮುಂದಿನ 6 ತಿಂಗಳು ಶೈಕ್ಷಣಿಕವಾಗಿ ತೊಡಗಿಸುವುದು ಇಲಾಖೆಗೆ ದೊಡ್ಡ ಸವಾಲಾಗಿದೆ.
ಸರ್ಕಾರಿ ಶಾಲೆ ಮಕ್ಕಳಿಗಾಗಿಯೇ ಜಾರಿ ಮಾಡಿದ್ದ ವಿದ್ಯಾಗಮ ಯೋಜನೆ ತಲೆಕೆಳಗಾಗಿದ್ದು, ಅದನ್ನು ಮಾರ್ಪಡಿಸಿ ಮತ್ತೆ ಆರಂಭಿಸುವುದು ಅಷ್ಟು ಸಲೀಸಲ್ಲ. ಕ್ರಿಯಾಶೀಲ ಶಿಕ್ಷಕ ವರ್ಗ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಿದ್ದರು, 1-2 ಟೀಕೆಗಳಿಗೆ ಸರ್ಕಾರ ಕಾರ್ಯಕ್ರಮ ನಿಲ್ಲಿಸುವಂತಾಯಿತು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಕೇವಲ ಆನ್​ಲೈನ್ ಅಥವಾ ಟಿವಿ ಮೂಲಕ ಪಾಠ ಮಾಡುವುದು ಮಕ್ಕಳ ಮೇಲೆ ಪರಿಣಾಮವೂ ಬೀರಲ್ಲ. ಹೀಗಾಗಿ ಎಲ್ಲರ ವಿಶ್ವಾಸ ಗಳಿಸಿ ತಕ್ಷಣದಿಂದಲೇ ವಿದ್ಯಾಗಮ ಪುನರಾರಂಭಿಸಲೇ ಬೇಕಾಗಿದೆ.
ಮಕ್ಕಳ ಭವಿಷ್ಯದ ಶಿಕ್ಷಣ, ಉದ್ಯೋಗದ ದೃಷ್ಟಿಯಿಂದ ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆ ನಡೆಸುವುದು ಅನಿವಾರ್ಯ. ಹೀಗೆ ಪರೀಕ್ಷೆ ನಡೆಸಬೇಕೆಂದರೆ, 2021-22ನೇ ಶೈಕ್ಷಣಿಕ ವರ್ಷ ಆರಂಭದೊಳಗೆ ಸಿಗುವ 6 ತಿಂಗಳ ಕಾಲಾವಧಿಯಲ್ಲಿ ಪರೀಕ್ಷೆ ಮುಗಿಸಬೇಕು. ಅದಕ್ಕೂ ಮುನ್ನ ಪಠ್ಯವನ್ನು ಶೇ.30-40 ಕಡಿತಗೊಳಿಸಿ ಅದನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕಿದೆ. ಪ್ರಸ್ತುತ ಚಂದನ ವಾಹಿನಿಯಲ್ಲಿ ತರಗತಿಗಳು ನಡೆಯುತ್ತಿದ್ದು, ಅದು ಮಕ್ಕಳಿಗೆ ಪೂರ್ಣ ಉಪಯೋಗವಾಗಿಲ್ಲ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಜನವರಿಯಿಂದ ತರಗತಿಯನ್ನೇ ನಡೆಸಬೇಕು, ಇಲ್ಲ ವಾದರೆ ವಿದ್ಯಾಗಮ ಯೋಜನೆಯನ್ನು ವಿಸ್ತರಿಸಬೇಕಾಗುತ್ತದೆ.
ಶಾಲೆ ನಡೆದಿಲ್ಲವೆಂದು ಬಹುಪಾಲು ಪೋಷಕರು ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಶುಲ್ಕ ಕಟ್ಟದಿದ್ದರೆ ಮಕ್ಕಳನ್ನು ಮುಂದಿನ ತರಗತಿಗೆ ಉತ್ತೀರ್ಣ ಮಾಡಲ್ಲ ಎಂದು ಬೆದರಿಕೆ ಹಾಕುವ ಕಾರ್ಯ ಕೆಲಸ ಖಾಸಗಿ ಶಾಲೆಗಳಿಂದ ನಡೆದಿದೆ. ಕೆಲವು ಕಡೆ ಆನ್​ಲೈನ್ ಪಾಠವನ್ನೂ ನಿರಾಕರಿಸಲಾಗಿದೆ. ಹೀಗಾಗಿ ಈ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಖಾಸಗಿ ಶಾಲೆ ಮತ್ತು ಪೋಷಕರಿಗೆ ಸಮಾನ ನ್ಯಾಯ ಕೊಡಿಸಬೇಕಾಗಿದೆ. ಪೋಷಕರು ಶುಲ್ಕ ಕೊಡಲಿಲ್ಲವೆಂದರೆ ಶಾಲೆಗಳು ಶಿಕ್ಷಕರಿಗೆ ಮಾಸಿಕ ವೇತನ ಕೊಡಲ್ಲ. ಇದು ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತದೆ. ಶುಲ್ಕ ಕಟ್ಟಿ ಎಂದು ಪೋಷಕರನ್ನೂ ಸರ್ಕಾರ ಒತ್ತಾಯಿಸುವ ವಾತಾವರಣ ಇಲ್ಲ. ಇದೊಂದು ವಿಚಿತ್ರ ಸವಾಲು ಸರ್ಕಾರದ ಮುಂದಿದೆ.
ಒಂದು ಶೈಕ್ಷಣಿಕ ವರ್ಷವಿಡೀ ಶಾಲೆಗೆ ಹೋಗಿಲ್ಲ ಎಂದರೆ ಸಹಜವಾಗಿ ಆ ಮಗುವಿನ ಕಲಿಕೆಯಲ್ಲಿ ಕುಂಠಿತ ವಾಗಿರುತ್ತದೆ, ಇದರ ಪರಿಣಾಮ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಕರು ಎದುರಿಸಬೇಕಾಗುತ್ತದೆ. ದೂರದೃಷ್ಟಿಯಿಂದ ಈ ಸಮಸ್ಯೆಗೆ ಸಾರ್ವತ್ರಿಕ ಪರಿಹಾರವನ್ನೂ ಸರ್ಕಾರವೇ ರೂಪಿಸಬೇಕಿದೆ. ಬ್ರಿಡ್ಜ್ ಕೋರ್ಸ್ ಅಥವಾ ಕ್ಯಾಪ್ಸುಲ್ ಮಾದರಿ ಹಿಂದಿನ ತರಗತಿಯ ಪಠ್ಯ ಬೋಧನೆ, ಶೈಕ್ಷಣಿಕ ವರ್ಷದ ಅಥವಾ ಅವಧಿಯ ವಿಸ್ತರಣೆಯಂತ ತೀರ್ಮಾನ ಮಾಡಲು ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.
ಬೆಂಗಳೂರು:ಕರೊನಾ ಹಿನ್ನೆಲೆಯಲ್ಲಿ ಡಿಸೆಂಬರ್​ನಲ್ಲೂ ಶಾಲೆ ತೆರೆಯುವುದು ಸೂಕ್ತವಲ್ಲ ಎಂದು ಆರೋಗ್ಯ ಇಲಾಖೆ ರಚಿಸಿರುವ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಸೋಮವಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಪ್ರತಿ ದಿನ ಸರಾಸರಿ 1,700 ಕರೊನಾ ಪ್ರಕರಣ ಪತ್ತೆಯಾಗುತ್ತಿವೆ. ಕಳೆದ 8 ತಿಂಗಳಲ್ಲಿ ಕೈಗೊಂಡ ನಾನಾ ಕ್ರಮಗಳ ಪರಿಣಾಮವಾಗಿ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಆದರೆ ದೆಹಲಿ, ಹರಿಯಾಣ ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ವೇಗ ಪಡೆದಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಚಳಿಗಾಲವೂ ಇರುವುದರಿಂದ ಕರೊನಾ ಸೋಂಕು ಹರಡುವಿಕೆ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ತೀವ್ರವಾಗಿ ಬಾಧಿಸುತ್ತದೆ. ಸೆಪ್ಟೆಂಬರ್​ನಲ್ಲಿ ನಡೆದ ಸರ್ವೆ ಪ್ರಕಾರ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ, ಡಿಸೆಂಬರ್​ನಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಡಿಸೆಂಬರ್​ನಲ್ಲಿ ಚಳಿಗಾಲ ಹೆಚ್ಚಿರುತ್ತದೆ, ಸೋಂಕು ಹರಡಲು ಅನುಕೂಲ ಮಾಡಿಕೊಡಬಹುದು. ಕರೊನಾದ ಎರಡನೇ ಅಲೆಯೂ ಬರಲಿದೆ ಎಂಬ ಸುದ್ದಿಯೂ ಇರುವುದರಿಂದ ಮುಂದಾಲೋಚನೆ ಮಾಡಬೇಕಿದೆ. ತಜ್ಞರು ಶಾಲೆ ಆರಂಭ ಸೂಕ್ತವಲ್ಲ ಎಂದಿದ್ದಾರೆ.
|ಡಾ.ಕೆ.ಸುಧಾಕರ್ಆರೋಗ್ಯ ಸಚಿವ
ಕರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ಬೆಚ್ಚಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳ ಆರಂಭಕ್ಕೆ ಯಾವುದೇ ತರಾತುರಿ ಮಾಡದೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಯೋಚನೆ ಮಾಡಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ.
|ಅರುಣ ಶಹಾಪುರವಿಧಾನ ಪರಿಷತ್ ಸದಸ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eighteen =
Remember me
