ಆರ್ಥಿಕ ಸಬಲರು ಪಡೆದಿರುವ ಬಿಪಿಎಲ್ ಕಾರ್ಡ್​ಗಳನ್ನು ಪತ್ತೆ ಮಾಡಲು ಹಲವು ಕ್ರಮಕೈಗೊಂಡಿರುವ ಆಹಾರ ಇಲಾಖೆ, ಇದೀಗ ರಾಜ್ಯ ಸರ್ಕಾರಿ ನೌಕರರ ಮೇಲೆ ಕಣ್ಣಿಟ್ಟಿದ್ದು, ಅಂತಹ ನೌಕರರನ್ನು ಪತ್ತೆ ಹಚ್ಚಲು ಆಯಾ ಜಿಲ್ಲೆಯ ಜಂಟಿ ಮತ್ತು ಉಪ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದೆ.
ವಿವಿಧ ಇಲಾಖೆಯಲ್ಲಿ 5.4 ಲಕ್ಷ ಸರ್ಕಾರಿ ಹಾಗೂ 1.5 ಲಕ್ಷ ಅರೆ ಸರ್ಕಾರಿ ನೌಕರರಿದ್ದು, ಈ ಪೈಕಿ ಕೆಲವರು ಬಿಪಿಎಲ್ ಕಾರ್ಡ್ದಾರರಾಗಿರುವ ಬಗ್ಗೆ ಆಹಾರ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಖೊಟ್ಟಿ ದಾಖಲೆ ಮೂಲಕ ಪಡಿತರ ಪಡೆಯುತ್ತಿರುವ ವಿವಿಧ ಇಲಾಖೆಗಳ ನೌಕರರ ಪತ್ತೆ ಮಾಡುವ ಕಾರ್ಯ ಹೀಗೆ ನಡೆಯಲಿದೆ.
ಸಾರಿಗೆ ಇಲಾಖೆ: ಕಾರು, ಜೀಪು, ಟ್ರ್ಯಾಕ್ಟರ್ ಸೇರಿ 4 ಚಕ್ರದ ವಾಹನ ಹೊಂದಿರುವ ಪಡಿತರ ಚೀಟಿದಾರರ ಮಾಹಿತಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪಡೆಯಬೇಕು. ಆರ್​ಸಿ ಪುಸ್ತಕದಲ್ಲಿರುವ ವಿಳಾಸ ಮತ್ತು ಪಡಿತರ ಚೀಟಿಯ ವಿಳಾಸವನ್ನು ತಾಳೆ ಮಾಡುವುದು, ವಾಹನ ಮಾಲೀಕನ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್​ಗೆ, ವಾಹನ ಮಾಲೀಕನ ಮೊಬೈಲ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್ ಸಂಖ್ಯೆಯೊಂದಿಗೆ ತಾಳೆ ಮಾಡುವುದು.
ಎಚ್​ಆರ್​ಎಂಎಸ್ ಮಾಹಿತಿ:ಪ್ರತಿ ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್​ಆರ್​ಎಂಎಸ್) ಮಾಹಿತಿಯನ್ನು ಆಯಾ ಇಲಾಖೆ ಮುಖ್ಯಸ್ಥರಿಂದ ಪಡೆದು ನೌಕರರ ಆಧಾರ್ ಸಂಖ್ಯೆಯನ್ನು ಹಾಗೂ ವಿವಿಧ ನಿಗಮ- ಮಂಡಳಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಮಾಹಿತಿಯನ್ನು ಅವರ ಆಧಾರ್ ಸಂಖ್ಯೆಯೊಂದಿಗೆ ಪಡೆದು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್​ಗೆ ತಾಳೆ ಮಾಡುವುದು.
ನಗರಾಭಿವೃದ್ಧಿ ಇಲಾಖೆಯಲ್ಲಿ ಲಭ್ಯವಿರುವ 1 ಸಾವಿರ ಚದರ ಅಡಿಗಿಂತ ಕಡಿಮೆ ವಿಸ್ತೀರ್ಣವಿರುವ ವಾಸದ ಮನೆಗಳ ಮಾಹಿತಿ ಪಡೆದು ಪಡಿತರ ಚೀಟಿಯಲ್ಲಿರುವ ವಿಳಾಸದೊಂದಿಗೆ ತಾಳೆ ಮಾಡುವುದು. ಅಲ್ಲದೆ, ಪ್ರತಿ ನ್ಯಾಯಬೆಲೆ ಅಂಗಡಿ ವ್ಯಾಪಿಯಲ್ಲಿ ವಿನಾಯಿತಿ ಷರತ್ತು ಅಡಿ ಪಡಿತರ ಪಡೆಯುತ್ತಿರುವ, ಒಟಿಪಿ ಮೂಲಕ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ಮರು ಪರಿಶೀಲಿಸಿ ಕ್ರಮಕೈಗೊಳ್ಳುವುದು.
ದಾಖಲೆ ಪರಿಶೀಲಿಸಿ:ಫಲಾನುಭವಿಗಳು ಸ್ಥಳದಲ್ಲಿ ವಾಸ ಇಲ್ಲದಿರುವುದು ಮತ್ತು ಮರಣ ಹೊಂದಿರುವುದು ಸೇರಿ ಇತ್ಯಾದಿ ಕಾರಣಗಳಿಂದ ಪಡಿತರ ಎತ್ತುವಳಿ ಮಾಡದೆ ಇರುವ ದಾಖಲೆ ಪರಿಶೀಲಿಸಿ ಅಂಥ ಸದಸ್ಯರನ್ನು ರದ್ದುಪಡಿಸಬೇಕು. ಜಿಲ್ಲೆಯ ಜಂಟಿ ಮತ್ತು ಉಪ ನಿರ್ದೇಶಕರು ನಿಗದಿತ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ತಾಲೂಕು ಸಿಬ್ಬಂದಿಗೆ ಅನರ್ಹ ಚೀಟಿಗಳನ್ನು ಪತ್ತೆ ಮಾಡಿ ರದ್ದುಪಡಿಸಲು ಗುರಿ ನೀಡಬೇಕು. ಪ್ರತಿ ವಾರ ಮೇಲ್ವಿಚಾರಣೆ ನಡೆಸಿ 3 ತಿಂಗಳೊಳಗೆ ಅನರ್ಹ ಕಾರ್ಡ್ ರದ್ದು ಪಡಿಸಲು ವಿಶೇಷ ಅಭಿಯಾನ ಕೈಗೊಳ್ಳಬೇಕೆಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯ
ಆರ್ಥಿಕವಾಗಿ ಸದೃಢವಾಗಿರುವವರು ಕಾರ್ಡ್​ಗಾಗಿ ಅರ್ಜಿ ಹಾಕುವ ವೇಳೆ ಆಯಾ ವ್ಯಾಪ್ತಿಯ ಉಪ ನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರು ಸಮರ್ಪಕವಾಗಿ ಪರಿಶೀಲಿಸಿ ಅರ್ಜಿಗಳನ್ನು ಮಾನ್ಯ ಮಾಡಬೇಕಿತ್ತು. ಆದರೆ, ನಿರ್ಲಕ್ಷ್ಯ ಮತ್ತು ಕಮಿಷನ್ ಆಸೆಗಾಗಿ ಅಧಿಕಾರಿಗಳು ಯಾವುದನ್ನೂ ಪರಿಶೀಲಿಸದೆ ಕಾರ್ಡ್ ಮಾಡಿಕೊಟ್ಟಿದ್ದಾರೆ.
ವಾರ್ಷಿಕ 600 ಕೋಟಿ ರೂ.ನಷ್ಟ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಗ್ರಾಮೀಣ ಶೇ.76.04 ಹಾಗೂ ನಗರ ಶೇ.49.36 ಸೇರಿ ಒಟ್ಟು 3,71,78,287 ಕುಟುಂಬದ ಸದಸ್ಯರಿಗಷ್ಟೇ ಬಿಪಿಎಲ್ ಕಾರ್ಡ್ ನೀಡಬೇಕಿತ್ತು. ರಾಜ್ಯದಲ್ಲಿ ಇದೀಗ 3,93,92,150 ಬಿಪಿಎಲ್ ಸದಸ್ಯರಿದ್ದು, ಇದರಲ್ಲಿ 22,13,863 ಹೆಚ್ಚಿನ ಸದಸ್ಯರು ಅಂದರೆ 7.5ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್​ಗಳಿವೆ.
ಪ್ರತಿ ತಿಂಗಳು ಉಚಿತವಾಗಿ ನೀಡುವ ಅಕ್ಕಿಯ ಮೊತ್ತವನ್ನು ಲೆಕ್ಕ ಹಾಕಿದರೆ ಮಾಸಿಕ 50 ಕೋಟಿ ರೂ. ನಷ್ಟವಾಗುತ್ತಿದೆ. ವರ್ಷಕ್ಕೆ ಅಂದಾಜು 600 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಹೊರೆ ಆಗುತ್ತಿದೆ ಎಂದು ಇಲಾಖೆ ಅಧಿಕಾರಿಗಳೇ ಬಹಿರಂಗ ಪಡಿಸಿದ್ದಾರೆ.
ಸರ್ಕಾರಕ್ಕೆ ವಂಚನೆ
ಆದಾಯ, ಸೇವಾ, ವೃತ್ತಿ ತೆರಿಗೆ ಪಾವತಿಸುವವರು, ಗ್ರಾಮಿಣ ಪ್ರದೇಶದಲ್ಲಿ 7.5ಕ್ಕಿಂತ ಹೆಚ್ಚು ಎಕರೆ ಜಮೀನು ಉಳ್ಳವರು, ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು, ನಗರ ಪ್ರದೇಶದಲ್ಲಿ ಒಂದು ಸ್ವಂತ ಜಾಗ ಇರುವವರು, ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಉಳ್ಳವರು, ಸಹಕಾರ ಸಂಘ, ಸ್ವಾಯುತ್ತ ಸಂಸ್ಥೆ, ಮಂಡಳಿ, ಬ್ಯಾಂಕ್ ಸೇರಿ ಇನ್ನಿತರ ಸರ್ಕಾರಿ ಹುದ್ದೆಯಲ್ಲಿರುವ ನೌಕರರು, ವಕೀಲರು, ಹೋಟೆಲ್ ವರ್ತಕರು, ಗುತ್ತಿಗೆದಾರರು, ಕಮಿಷನ್ ಏಜೆಂಟ್​ದಾರರು, ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಗಳು ಹಾಗೂ ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ತಮ್ಮ ಕುಟುಂಬದ ಹೆಸರಿನಲ್ಲಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.
| ಬೇಲೂರು ಹರೀಶ್ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 2 =
Remember me
