|ರಮೇಶ ದೊಡ್ಡಪುರಬೆಂಗಳೂರು
ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿ ಸೇವಾ ಸಿಂಧು ಯೋಜನೆಗೆ ಡಿಜಿಟಲ್ ಸಹಿ ಸಮಸ್ಯೆ ಎದುರಾಗಿದೆ. ಪರಿಣಾಮ ಲಕ್ಷಾಂತರ ಜನರು ಒಂದು ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿದ್ದು, ಕಚೇರಿಗೆ ಅಲೆದಾಡಿ ಹೈರಾಣಾಗಿದ್ದಾರೆ. ಡಿಜಿಟಲ್ ಸಹಿ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸುವ ಹೊತ್ತಿಗೆ ಜನರು ಹೈರಾಣಾಗುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಮೂರು ಇಲಾಖೆಗಳ ನಡುವಿನ ಸಂವಹನದಿಂದ ನಡೆಯುವ ಯೋಜನೆಗೆ ಎಲ್ಲಿ ಸಮಸ್ಯೆ ಉಂಟಾಗಿದೆ ಎಂಬುದನ್ನು ಪತ್ತೆಹಚ್ಚುವ ಕಾರ್ಯದಲ್ಲೇ ರಾಜ್ಯದ ಅಧಿಕಾರಿಗಳು ಸುಸ್ತಾಗಿದ್ದಾರೆ. ಇಷ್ಟಾದರೂ ಸಮಸ್ಯೆಗೆ ನಿರ್ದಿಷ್ಟ ಕಾರಣವೇನೆಂಬುದು ಗೊತ್ತಾಗಿಲ್ಲ. ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಕಾರಣ ಅರ್ಜಿದಾರರು ಹಸ್ತಾಕ್ಷರ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಆಧಾರ್ ಆಧರಿತ ಇ-ಸಹಿ ವ್ಯವಸ್ಥೆಯಿದೆ. ಆದರೆ ಕಳೆದೊಂದು ತಿಂಗಳಿಂದ ಇ-ಸಹಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಬಳಸದ ಸೇವೆಗಳೇ ಹೆಚ್ಚು:ಸೇವಾ ಸಿಂಧುವಿನಲ್ಲಿ 81 ಇಲಾಖೆಗಳ 489 ಸೇವೆ ಒದಗಿಸಲಾಗಿದೆ. ಆದರೆ ಆರಂಭವಾದಾಗಿನಿಂದಲೂ ಈವರೆಗೆ 118 ಸೇವೆಗಳನ್ನು ಯಾರೂ ಬಳಸಿಕೊಂಡಿಲ್ಲ. ಅದಕ್ಕೆ ತಾಂತ್ರಿಕ ತೊಂದರೆ, ಜಾಗೃತಿ ಕೊರತೆ ಸೇರಿ ಅನೇಕ ಕಾರಣಗಳಿವೆ. ಫ್ಯಾಕ್ಟರಿ ಮತ್ತು ಬಾಯ್ಕಲರ್, ಸಂಸ್ಕೃತ ವಿವಿ, ರೇಷ್ಮೆ, ಮೀನುಗಾರಿಕೆ, ನಗರಾಭಿವೃದ್ಧಿ, ಬೆಸ್ಕಾಂ ಈ ಪೈಕಿ ಪ್ರಮುಖವಾದವು. ಕಳೆದ ಎರಡು ತಿಂಗಳಲ್ಲಿ ಒಟ್ಟು 489 ಸೇವೆಗಳಲ್ಲಿ 270ನ್ನು ನಾಗರಿಕರು ಬಳಸಿಕೊಂಡಿದ್ದು, 219 ಬಳಕೆ ಆಗಿಲ್ಲ. ಆದರೆ ಇ- ಸಹಿಯ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಕಳೆದ ತಿಂಗಳು ಬಳಸದೆ ಉಳಿದ ಸೇವೆಗಳ ಸಂಖ್ಯೆ 252ಕ್ಕೆ ಏರಿಕೆ ಆಗಿದೆ. ಎಲ್ಲ ಇಲಾಖೆಗಳೂ ಸೇರಿ 2021ರ ಜನವರಿಯಲ್ಲಿ 3,68,472 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಫೆಬ್ರವರಿಯಲ್ಲಿ ಈವರೆಗೆ 2,48,747 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ ಫೆಬ್ರವರಿ ಕೊನೆಯಾಗಲು 10 ದಿನ ಬಾಕಿ ಇದೆಯಾದರೂ 2020ರ ಫೆಬ್ರವರಿಯಲ್ಲಿ ದಾಖಲಾಗಿದ್ದ 3,81,285 ಅರ್ಜಿಗಳಿಗೆ ಹೋಲಿಸಿದರೆ ಅರ್ಜಿಗಳ ಸಂಖ್ಯೆಯಲ್ಲಿ ಆಗಿರುವ ಕುಸಿತ ಕಾಣುತ್ತದೆ.
ಮೂಲವೇ ತಿಳಿಯುತ್ತಿಲ್ಲ:ಅರ್ಜಿ ಸಲ್ಲಿಸುವವರು ಆಧಾರ್ ಸಂಖ್ಯೆ ನಮೂದಿಸಿದ ಕೂಡಲೆ ಆ ಸಂಖ್ಯೆಗೆ ಸಂರ್ಪತ ಮೊಬೈಲ್ ಸಂಖ್ಯೆಗೆ ಕ್ಷಣಾರ್ಧದಲ್ಲಿ ಒಟಿಪಿ ಬರಬೇಕು. ಒಟಿಪಿ ಒದಗಿಸಲು ದೇಶದಲ್ಲಿ ನಾಲ್ಕೈದು ಪ್ರಮುಖ ಸಂಸ್ಥೆಗಳಿವೆ. ಸೇವಾ ಸಿಂಧು ಯೋಜನೆಗೆ ಕೇಂದ್ರ ಸರ್ಕಾರದ ಸಿ-ಡಾಕ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸೇವಾ ಸಿಂಧುವಿನಲ್ಲಿ ನಮೂದಿಸಿದ ಆಧಾರ್ ಸಂಖ್ಯೆಯನ್ನು ಸಿ-ಡಾಕ್ ಸಂಸ್ಥೆ ಪಡೆದು ಅದನ್ನು ಆಧಾರ್ ಸಂಸ್ಥೆಗೆ(ಯುಐಡಿಎಐ) ಕಳಿಸುತ್ತದೆ. ಅಲ್ಲಿಂದ ಎನ್​ಐಸಿ ವೆಬ್ ಪೋರ್ಟಲ್​ಗೆ ರವಾನೆಯಾಗುತ್ತದೆ. ಎನ್​ಐಸಿಯಿಂದ ಮೊಬೈಲ್ ಸಂಖ್ಯೆಯನ್ನು ಗ್ರಾಹಕರು ಬಳಸುತ್ತಿರುವ ಟೆಲಿಕಾಂ ಕಂಪನಿ (ಬಿಎಸ್​ಎನ್​ಎಲ್, ಏರ್​ಟೆಲ್ ಇತ್ಯಾದಿ) ಮೂಲಕ ಗ್ರಾಹಕರ ಮೊಬೈಲ್​ಗೆ ರವಾನಿಸುತ್ತಾರೆ. ಮತ್ತೆ ಗ್ರಾಹಕರು ಈ ಒಟಿಪಿ ನಮೂದಿಸಿದ ನಂತರ ಇಷ್ಟೂ ಚಕ್ರ ಪುನರಾವರ್ತನೆಯಾಗಿ ಅರ್ಜಿ ಸಲ್ಲಿಕೆ ಖಚಿತವಾಗಬೇಕು. ಆದರೆ ಇಷ್ಟರಲ್ಲಿ ಯಾವ ಹಂತದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂಬುದನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆಗೆ ಸಾಧ್ಯವಾಗುತ್ತಿಲ್ಲ.
ಕೇಂದ್ರಕ್ಕೆ ಪತ್ರ:ಇ-ಸಹಿ ಸಮಸ್ಯೆ ಪರಿಹರಿಸುವ ಸಲುವಾಗಿ ಇ-ಆಡಳಿತ ಇಲಾಖೆಯಿಂದ ಈಗಾಗಲೇ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೂ ಸಮಸ್ಯೆ ಬಗೆಹರಿದಿಲ್ಲ. ಸಿ-ಡಾಕ್, ಆಧಾರ್, ಎನ್​ಐಸಿ ಸೇರಿ ಯಾವ ಹಂತದಲ್ಲಿ ಸಮಸ್ಯೆ ಆಗುತ್ತಿದೆ ಎಂಬುದನ್ನು ತಿಳಿಸಿದರೂ ಸಾಕು, ನಾವು ಸಂರ್ಪಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಮತ್ತೆ ಪತ್ರ ಬರೆಯಲಾಗಿದೆ.
ಸಮಸ್ಯೆಗಳು ಹೊಸತಲ್ಲ:ಸೇವಾ ಸಿಂಧುವಿನಲ್ಲಿ ಈ ಹಿಂದೆಯೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದವು. ಕರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ಕ್ಯಾಬ್, ಆಟೊ, ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಕಳೆದ ವರ್ಷ ತಲಾ 5 ಸಾವಿರ ರೂ. ಪ್ಯಾಕೇಜ್ ಘೋಷಿಸಿತು. ಇದರ ಅರ್ಜಿಯನ್ನು ಸೇವಾ ಸಿಂಧು ಮೂಲಕವೇ ಸಲ್ಲಿಸಬೇಕಿತ್ತು, ವಾಹನದ ವ್ಯಾಲಿಡಿಟಿ ಮುಗಿದಿದೆ ಎಂಬುದೂ ಸೇರಿ ಅನೇಕ ಸಮಸ್ಯೆಗಳಿಂದ ಚಾಲಕರು ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ನಂತರದಲ್ಲಿ ಸಮಸ್ಯೆ ಸರಿಪಡಿಸಲಾಯಿತು. ಮತ್ತೆ ಅಕ್ಟೋಬರ್ ವೇಳೆಗೆ, ಸೇವಾ ಸಿಂಧು ವ್ಯಾಲೆಟ್​ನಿಂದ ಹಣ ಪಾವತಿಸಲಾಗದೆ ಸಮಸ್ಯೆ ಎದುರಾಗಿತ್ತು. ಆಗಲೂ ಸರಿಪಡಿಸಲಾಯಿತು.

ಯಾವ್ಯಾವ ಸೇವೆ ಲಭ್ಯ?:ಸೇವಾ ಸಿಂಧುವಿನಲ್ಲಿ ಪ್ರಮುಖವಾಗಿ ಆದಾಯ, ಜಾತಿ, ಜನ್ಮ, ಮರಣ ಪ್ರಮಾಣಪತ್ರಗಳ ಸೃಷ್ಟಿ ಮತ್ತು ವಿತರಣೆ, ಶಸ್ತ್ರಾಸ್ತ್ರ ಪರವಾನಗಿ, ಪಡಿತರ ಚೀಟಿ ವಿತರಣೆ, ಸಾಮಾಜಿಕ ಕಲ್ಯಾಣ ಪಿಂಚಣಿ ಯೋಜನೆಗಳು, ಅನುಪಸ್ಥಿತ ಶಿಕ್ಷಕರು, ವೈದ್ಯರು ದೊರಕದಿರುವುದರ ದೂರು, ಮಾಹಿತಿ ಹಕ್ಕು ಅರ್ಜಿ, ಭೂ ದಾಖಲೆ, ಚಾಲಕ ಪರವಾನಗಿ ಸೇವೆ ಲಭ್ಯ.
ಸಮಸ್ಯೆ ಏನು?:ಆನ್​ಲೈನ್​ನಲ್ಲಿ ಯಾವುದೇ ಇಲಾಖೆಯ ಅರ್ಜಿ ಭರ್ತಿ ಮಾಡಿದ ನಂತರ ಅಂತಿಮ ಸಲ್ಲಿಕೆ ವೇಳೆ ಇ-ಸಹಿ ಮಾಡಿ ಸಲ್ಲಿಸಿ ಎಂಬ ಆಯ್ಕೆ ಬರುತ್ತಿದೆ. ಅದನ್ನು ಒತ್ತಿದರೆ ಆಧಾರ್ ಸಂಖ್ಯೆ ನಮೂದಿಸಲು ಕೇಳುತ್ತದೆ. ಆಧಾರ್ ಸಂಖ್ಯೆ ನಮೂದಿಸಿದ ನಂತರ ಆಧಾರ್ ಸಂಖ್ಯೆಗೆ ಸಂರ್ಪಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಬೇಕು. ಆದರೆ ಅನೇಕ ಬಾರಿ ಪ್ರಯತ್ನದ ನಂತರ ಒಟಿಪಿ ಬರುತ್ತಿದೆ. ಇಷ್ಟು ಪರಿಶ್ರಮದ ನಂತರ ಬಂದ ಒಟಿಪಿಯನ್ನು ನಮೂದಿಸಿದ ಕೂಡಲೆ ಅರ್ಜಿ ಸ್ವೀಕಾರ ಆಗಬೇಕು. ಆದರೆ ಈ ಹಂತದಲ್ಲಿ, ‘ಕೆಲವು ತಾಂತ್ರಿಕ ಸಮಸ್ಯೆಯಿಂದ ದಾಖಲೆಗೆ ಸರಿಯಾಗಿ ಸಹಿ ಮಾಡಲಾಗಿಲ್ಲ, ದಯವಿಟ್ಟು ಮತ್ತೆ ಪ್ರಯತ್ನಿಸಿ’ (Due to Some Technical error document is not signed properly, Please re-try) ಎಂದು ಸಂದೇಶ ಬರುತ್ತಿದೆ. ಸತತ ಪ್ರಯತ್ನದ ನಂತರವೂ ಪ್ರಯೋಜನ ಆಗುತ್ತಿಲ್ಲ.
ಎಲ್ಲೆಲ್ಲಿ ಸಮಸ್ಯೆ?:ಬೆಂಗಳೂರು ಒನ್ ಸೇರಿದಂತೆ ರಾಜ್ಯಾದ್ಯಂತ ಸಿಎಸ್​ಸಿ ಸೇವಾ ಕೇಂದ್ರ, ಕರ್ನಾಟಕ ಒನ್, ಅಟಲ್​ಜೀ ಜನಸ್ನೇಹಿ ಕೇಂದ್ರ, ಬಾಪೂಜಿ ಕೇಂದ್ರ, ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಸೆಂಟರ್​ಗಳಲ್ಲೂ ಡಿಜಿಟಲ್ ಸಹಿ ಸಮಸ್ಯೆ ಇದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − one =
Remember me
