|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಸ್ವಂತ ಮನೆ ಕಟ್ಟುವ ಆಸೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಹಾನಗರಗಳ ಮಗ್ಗುಲಲ್ಲಿ ಸಾಲಸೋಲ ಮಾಡಿ ಕಂದಾಯ ಭೂಮಿಯ ನಿವೇಶನ ಖರೀದಿಸಿದ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ದ್ವಂದ್ವ ನಿಲುವಿನಿಂದಾಗಿ ಅತ್ತ ನಿವೇಶನವನ್ನು ನೋಂದಣಿ ಮಾಡಿಕೊಳ್ಳಲಾಗದೆ ಇತ್ತ ಮಾರಾಟ ಮಾಡುವುದಕ್ಕೂ ಸಾಧ್ಯವಾಗದೆ ಕಂಗಾಲಾಗಿದ್ದಾರೆ.
ನಗರ ಪ್ರದೇಶದಲ್ಲಿ ದುಬಾರಿ ಬೆಲೆ ಕೊಟ್ಟು ಸೈಟ್ ಖರೀದಿಸಿ ಮನೆಕಟ್ಟಿಕೊಳ್ಳಲಾರದ ಬಡ ಹಾಗೂ ಮಧ್ಯಮ ವರ್ಗದವರು ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಹಸಿರುವಲಯದಲ್ಲಿ ಕಂದಾಯ ನಿವೇಶನ ಖರೀದಿಸುತ್ತಾರೆ. ಆದರೆ ಸರಕಾರ ಕಂದಾಯ ಭೂಮಿಯ ನಿವೇಶನ ನೋಂದಣಿಗೆ ತಡೆ ಹಾಕಿರುವುದು ಸಮಸ್ಯೆ ತಂದೊಡ್ಡಿದೆ. ಹೀಗೆ ತಡೆ ಹಾಕಿದ ಬಳಿಕವೂ ಕೆಲವು ಕಡೆ ಯಾವುದೋ ಒತ್ತಡಕ್ಕೆ ನೋಂದಣಿ ಪ್ರಕ್ರಿಯೆ ನಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸರ್ಕಾರದ ಈ ದ್ವಂದ್ವ ನಿಲುವು ಅಧಿಕಾರಿಗಳ ವಲಯದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಕಂದಾಯ ನಿವೇಶನ ವಿಚಾರದಲ್ಲಿನ ಗೊಂದಲ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ನೋಂದಣಾಧಿಕಾರಿ ಕಚೇರಿಯನ್ನು ಎಟಿಎಂ ರೀತಿ ಕಾಣುತ್ತಿರುವ ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿರುವ ರಾಜಕೀಯ ವ್ಯಕ್ತಿಗಳು, ಈ ವಿಚಾರ ಮುಂದಿಟ್ಟುಕೊಂಡು ವ್ಯವಸ್ಥೆಯನ್ನು ಗೋಳು ಹೊಯ್ದುಕೊಳ್ಳುತ್ತಿರುವ ಬೆಳವಣಿಗೆ ಗಳೂ ನಡೆಯುತ್ತಿವೆ.
ಹಸ್ತಕ್ಷೇಪದ ಒಳಗುಟ್ಟು ರಟ್ಟು:ಬೆಂಗಳೂರು ಹೊರವಲಯದ ನೋಂದಣಿ ಪ್ರಕ್ರಿಯೆ ಭಾಗಿದಾರರನ್ನು ‘ವಿಜಯವಾಣಿ’ ಮಾತಿಗೆಳೆದಾಗ, ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ದುಡಿದ ಹಣವನ್ನು ಕಂದಾಯ ನಿವೇಶನದ ಮೇಲೆ ಹೂಡಿಕೆ ಮಾಡಿ ಕೈಸುಟ್ಟುಕೊಂಡು ಕಂಗಾಲಾದವರು, ಆತ್ಮಹತ್ಯೆಗೆ ಪ್ರಯತ್ನಿಸಿದವರು, ನಿವೇಶನ ಮಾರಾಟ ಮಾಡಲಾಗದೆ ತ್ರಿಶಂಕು ಸ್ಥಿತಿಗೆ ತಳ್ಳಲ್ಪಟ್ಟ ಉದಾಹರಣೆ ಸಿಗುತ್ತವೆ. ಕೆಲವು ಪ್ರಕರಣಗಳಲ್ಲಿ ನೋಂದಣಿ ಪ್ರಕ್ರಿಯೆ ಆಗಿದ್ದಿದೆ ಎಂದು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ‘ಅನ್ಯಕಾರಣ’ದ ರಾಜಕೀಯ ಹಸ್ತಕ್ಷೇಪ ಇಲ್ಲದೆ ಕಂದಾಯ ನಿವೇಶನ ನೋಂದಣಿ ಆಗುತ್ತದೆ. ಜನರು ಕಾಡಿಬೇಡಿ ಹೆಚ್ಚು ಹಣ ತೆತ್ತು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಸ್ಪಷ್ಟ ತೀರ್ಮಾನ ಮಾಡಿದರೆ ಗೊಂದಲ ಪರಿಹರಿಸಬಹುದೆನ್ನುವುದು ಅವರ ವಾದ.
ಕೋರ್ಟ್ ಹೇಳಿರುವುದೇನು?:ಪ್ರಕರಣ ವೊಂದರಲ್ಲಿ ನ್ಯಾಯಾಲಯದ ಆದೇಶದ ಪ್ರಕಾರ, ಕೊಳ್ಳುವವರು – ಮಾರುವವರು ಹಾಗೂ ಇಬ್ಬರು ಸಾಕ್ಷಿಗಳು ಇದ್ದರೆ ನಿವೇಶನ ನೋಂದಣಿ ಮಾಡಿಕೊಡುವುದು ಉಪ ನೋಂದಣಾಧಿಕಾರಿಗಳ ಕರ್ತವ್ಯ. ನೈಜತೆ ಬಗ್ಗೆ ಪರಿಶೀಲಿಸುವ ಅಧಿಕಾರವನ್ನು ಉಪ ನೋಂದಣಾಧಿಕಾರಿಗಳಿಗೆ ಕೊಟ್ಟಿಲ್ಲ. ಒಂದು ವೇಳೆ ಕಂದಾಯ ಭೂಮಿ ನೋಂದಣಿಗೆ ಬಂದರೆ ಅದನ್ನು ಮಾಡಿಕೊಡಬೇಕಾಗುತ್ತದೆ, ಆದರೆ ಸರ್ಕಾರ ತನ್ನ ನೀತಿಯಲ್ಲಿ ಸ್ಪಷ್ಟತೆ ತಂದುಕೊಳ್ಳದೆ ನೋಂದಣಾಧಿಕಾರಿಗಳನ್ನು ಕತ್ತಲಲ್ಲಿ ಇಡುತ್ತಿರುವ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಅಸಮಾಧಾನ ಉಂಟಾಗಿದೆ.
ಇ- ಖಾತೆ ಕಡ್ಡಾಯ ಎಂದು ಸಬ್ ರಿಜಿಸ್ಟ್ರಾರ್ ನೋಂದಣಿ ಮಾಡುತ್ತಿಲ್ಲ. ಗ್ರಾ.ಪಂ.ಗಳಲ್ಲಿ ಇ- ಖಾತೆ ಕೊಡುತ್ತಿಲ್ಲ. ಹಸಿರು ವಲಯದ ನೆಪ ಹೇಳುತ್ತಿದ್ದಾರೆ. ಈಗಾಗಲೇ ಹಣ ಕೊಟ್ಟಿದ್ದೇನೆ. ಆತ್ಮಹತ್ಯೆ ಯೋಚನೆ ಬರುತ್ತಿದೆ. ನೂರಾರು ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಕಣ್ತೆರೆದು ವಾಸ್ತವ ಅರಿಯಲಿ. ಅಧಿಕಾರಿಗಳು ಎಸಿ ಕಚೇರಿ ಬಿಟ್ಟು ಹಳ್ಳಿಕಡೆ ಬಂದು ನೋಡಲಿ.
|ರಾಮಾಂಜಿನಪ್ಪನಿವೇಶನ ನೋಂದಣಿಗೆ ಕಾಯ್ದಿರುವವರು
ರೆವಿನ್ಯೂ ಸೈಟ್ ಹೆಸರಿನಲ್ಲಿ ಸಬ್ ರಿಜಿಸ್ಟ್ರಾರ್​ಗಳನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಕಂದಾಯ ನಿವೇಶನ ಮಾಡಿಕೊಟ್ಟಿದ್ದಕ್ಕಾಗಿ ಬೆಂಗಳೂರಿನ ಸರ್ಜಾಪುರ ಉಪ ನೋಂದಣಾಧಿಕಾರಿಯನ್ನು ಸರ್ಕಾರ ಈಗಾಗಲೇ ಅಮಾನತುಗೊಳಿಸಿದೆ. ಆದರೆ, ಈ ತೀರ್ವನದ ಹಿಂದೆ ರಾಜಕೀಯ ಛಾಯೆಯೂ ಕಾಣಿಸಿದೆ. ಬೊಕ್ಕಸಕ್ಕೆ ಆದಾಯ ತಂದುಕೊಡುವ ನಿವೇಶನ ನೊಂದಣಿ ಪ್ರಕ್ರಿಯೆ ಹೆಚ್ಚೆಚ್ಚು ನಡೆಯಬೇಕೆಂಬುದು ಸರ್ಕಾರದ ಆಶಯವಾದರೂ ರಾಜಕೀಯವಾಗಿ ಹಿಡಿತ ಸಾಧಿಸುವ ಕಾರಣಕ್ಕೆ ಹಾಗೂ ಬೇರೆ ಬೇರೆ ಉದ್ದೇಶಕ್ಕೆ ನೋಂದಣಿ ಪ್ರಕ್ರಿಯೆ ತಡೆ ಹಿಡಿಯಲಾಗುತ್ತಿದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರು ಹೊರ ವಲಯದಲ್ಲಿನ ಪ್ರತಿ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದಿನವೊಂದಕ್ಕೆ 25-30 ನಿವೇಶನ ನೋಂದಣಿಯಾದರೆ, ಇದರಲ್ಲಿ ಶೇ.70 ಕಂದಾಯ ನಿವೇಶನಗಳೇ ಆಗಿರುತ್ತವೆ. ಆಗಿಂದಾಗ್ಗೆ ಈ ನೋಂದಣಿಗೆ ಬ್ರೇಕ್ ಹಾಕಲಾಗುತ್ತಿದೆ. ಈ ಸಂದರ್ಭದಲ್ಲಿ ಜನರು ಸಮಸ್ಯೆ ಎದುರಿಸಿ ಅಂಗಲಾಚುತ್ತಾರೆ ಎಂಬುದು ಅಧಿಕಾರಿಗಳ ವಿವರಣೆ.
ಈ ನೋಂದಣಿ ಸಮಸ್ಯೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಮಂಗಳೂರು ಸೇರಿ ಹಲವೆಡೆ ಇದೆ. ಆದರೆ, ವ್ಯಾಪಕವಾಗಿ ವೃದ್ಧಿಸುತ್ತಿರುವ ಬೆಂಗಳೂರು ಹೊರವಲಯದಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸಿದೆ. ಸರ್ಕಾರದ ಸೂಚನೆ ಪ್ರಕಾರ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ದಸ್ತಾವೇಜುಗಳ ನೋಂದಣಿ ಸಮಯದಲ್ಲಿ ಗಣಕೀಕೃತ ನಮೂನೆ 9 ಮತ್ತು 11ಎ ಅಥವಾ 11ಬಿಯನ್ನು ಪಡೆಯದೇ, ‘ಕಾವೇರಿ’- ‘ಇ ಸ್ವತ್ತು’ ತಂತ್ರಾಂಶದ ಮೂಲಕ ಸ್ವತ್ತಿನ ವಿವರಗಳನ್ನು ಆನ್​ಲೈನ್ ಮೂಲಕ ಪಡೆಯದೆ, ತಂತ್ರಾಂಶಗಳ ಸಂಯೋಜನೆಯನ್ನು ಉಲ್ಲಂಘಿಸಿ ಸ್ವತ್ತುಗಳ ದಸ್ತಾವೇಜು ನೋಂದಾಯಿಸುವಂತಿಲ್ಲ.
ಒಟ್ಟಾರೆ ಈ ವಿಚಾರದಲ್ಲಿ ಸಿಎಂ ಮಧ್ಯಪ್ರವೇಶ ಅನಿವಾರ್ಯ ಎಂಬ ಸ್ಥಿತಿ ಇದೆ. ಕಂದಾಯ ನಿವೇಶನ ಮಾರಾಟ ಸಂದರ್ಭದಲ್ಲಿ ಮಾಲೀಕರು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮೂಲಕ ವ್ಯವಹಾರ ಮಾಡುತ್ತಾರೆ. ನೋಂದಣಿ ಬಾಕಿ ಉಳಿದು ಒಂದಷ್ಟು ವರ್ಷಗಳು ಉರುಳಿದರೆ ಭೂಮಾಲೀಕರು ನೊಂದಣಿಗೆ ಬಾರದೆ ಇನ್ನಷ್ಟು ಹಣಕ್ಕಾಗಿ ಪೀಡಿಸುತ್ತಾರೆ. ಇತ್ತ ನಿವೇಶನವೂ ಸಿಗದೆ ಹಣವೂ ಹೋಗಿ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆಂಬುದಕ್ಕೆ ದಾಖಲೆಗಳೂ ಇವೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ನೀತಿ, ನಿರೂಪಣೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಸಂದರ್ಭ ಎದುರಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳು ಗುರುತಿಸಿರುವ ಹಸಿರು ವಲಯಗಳ ಪುನರ್ ವಿಮರ್ಶೆ ಮಾಡಿದರೆ ಜನರಿಗೂ ಅನುಕೂಲ, ಸರ್ಕಾರಕ್ಕೂ ಗೊಂದಲ ಬಗೆಹರಿಯಲಿದೆ. ಜತೆಗೆ ಬೊಕ್ಕಸವೂ ತುಂಬಲಿದೆ. ಇಲ್ಲವಾದರೆ ಎಗ್ಗಿಲ್ಲದ ನಗರೀಕರಣ ತಡೆಯಲಾಗದೆ ಸರ್ಕಾರ ಕಗ್ಗಂಟು ಬಿಡಿಸಲು ಪರದಾಡಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

ಕೈಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬೇಡಿ; ಸಿ.ಎಂ. ಇಬ್ರಾಹಿಂ ಮನವಿ

ಕೋಳಿಗಳಿಗೂ ಹುಟ್ಟುಹಬ್ಬದ ಸಂಭ್ರಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
