ಬೆಂಗಳೂರು:ಬಸವರಾಜ ಬೊಮ್ಮಾಯಿ ಮಂಡಿಸಿದ 2023-24ನೇ ಸಾಲಿನ ಆಯವ್ಯಯ ಸಾಲದ ಶೂಲಕ್ಕೆ ರಾಜ್ಯವನ್ನು ಸಿಲುಕಿಸಿರುವ ಬಜೆಟ್. ಬಡವರು, ದುರ್ಬಲ ವರ್ಗ, ಪರಿಶಿಷ್ಟರ ವಿರೋಧಿ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಅಂಕಿ-ಅಂಶಗಳ ಮೂಲಕ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಕರೊನಾ ಕಾಲದಲ್ಲಿ ಸುಮಾರು 15 ಸಾವಿರ ಕೋಟಿ ರೂ.ಖರ್ಚು ಮಾಡಲಾಗಿದೆ. ಕಾರ್ವಿುಕ ಕಲ್ಯಾಣ ಮಂಡಳಿ ಹಣ ವಿನಿಯೋಗಿಸಿದ್ದಾರೆ. ಅದರಲ್ಲೇ 2 ರಿಂದ 3 ಸಾವಿರ ಕೋಟಿ ರೂ. ಲಂಚ ಹೊಡೆಯಲಾಗಿದೆ ಎಂದು ನಾವೇ ದಾಖಲೆ ಸಮೇತ ಆರೋಪಿಸಿದ್ದೆವು. 9000 ಕೋಟಿ ರೂ. ಕೋವಿಡ್​ಗೆ 6000 ಕೋಟಿ ರೂ. ಮಾತ್ರ ಪ್ರವಾಹಕ್ಕೆ ಖರ್ಚಾಗಿದೆ ಎಂದು ಹೇಳಿದರು.
ವಿವಿಧ ಇಲಾಖೆಗಳಿಗೆ ಕೊಡುತ್ತಿದ್ದ ಅನುದಾನ ಕಡಿಮೆ ಆಗಿದೆ. ಸ್ಥಳೀಯ ಸಂಸ್ಥೆಗಳಿಗೆ ಕೊಡುವ ಅನುದಾನ 2018-19ರಲ್ಲಿ 31,072 ಕೋಟಿ ಇದ್ದರೆ ಅದು 2023-24ಕ್ಕೆ 20,920 ಕೋಟಿ ರೂ.ಗೆ ಕಡಿತವಾಗಿದೆ. ಜನ ಕಲ್ಯಾಣ ಯೋಜನೆಗಳಿಗೆ ಇದ್ದ 82,998 ಕೋಟಿ ರೂ. ಈಗ ಮಂಡನೆಯಾಗಿರುವ ಬಜೆಟ್​ನಲ್ಲಿ 71,570 ಕೋಟಿಗೆ ಇಳಿದಿದೆ. ಬೇರೆ ಬೇರೆ ಇಲಾಖೆಗಳಿಗೆ ಕೊಡುವ ಅನುದಾನ ಕೂಡ ಕಡಿಮೆಯಾಗಿದೆ. ವಸತಿ ಇಲಾಖೆಗಂತೂ 2017-18ರಲ್ಲಿ 3653 ಕೋಟಿಯಿಂದ 2023-24ಕ್ಕೆ 1,200 ಕೋಟಿಗೆ ಇಳಿದಿದೆ ಎಂದು ಗಮನ ಸೆಳೆದರು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಅನುದಾನ ಕಡಿಮೆ ಆಗಿದೆ
ಎಸ್​ಇಪಿ, ಟಿಎಸ್​ಪಿ ಅಡಿ ಕೊಡಬೇಕಾಗಿದ್ದ ಹಣ ಕಡಿಮೆ ಆಗಿದೆ. ಬಜೆಟ್ ಗಾತ್ರ ಹೆಚ್ಚಾಗುತ್ತಿದ್ದರೂ ಈ ವರ್ಗಗಳಿಗೆ ಹಣ ಕಡಿಮೆ ಆಗುತ್ತಾ ಬಂದಿದೆ. ಇದು ಪರಿಶಿಷ್ಟ ಜಾತಿ, ವರ್ಗದವರಿಗೆ ಮಾಡಿದ ದ್ರೋಹ ಎಂದು ಗರಂ ಆದರು. ನಾನು ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರಿಗೆ 3100 ಕೋಟಿ ರೂ. ಇಟ್ಟಿದ್ದೆ. ಅದು ಈ ವರ್ಷ 1400 ಕೋಟಿ ಆಗಿದೆ. ಏಕೆ ಕಡಿಮೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. 2023-24ಕ್ಕೆ 5.56 ಲಕ್ಷ ಕೋಟಿ ರೂ. ಸಾಲ ಆಗುತ್ತದೆ. 56 ಸಾವಿರ ಕೋಟಿ ರೂ. ಅಸಲು-ಬಡ್ಡಿ ಪಾವತಿಸಬೇಕಾಗುತ್ತದೆ. 40 ಪರ್ಸೆಂಟ್ ಕಮೀಷನ್​ನಿಂದ ಸಾಲ ಜಾಸ್ತಿ ಆಗುತ್ತಿದೆ. ಬೆಂಗಳೂರಿನಲ್ಲಿ 25 ಸಾವಿರ ಗುಂಡಿ ಮುಚ್ಚಲು 7200 ಕೋಟಿ ರೂ. ಖರ್ಚು ಮಾಡಿದ್ದಾರೆ. ಭ್ರಷ್ಟಾಚಾರ ಜಾಸ್ತಿ ಆಗಿ ಸಾಲದ ಕೂಪಕ್ಕೆ ಸಿಲುಕಬೇಕಿದೆ ಎಂದು ವಾಗ್ದಾಳಿ ನಡೆಸಿದರು.
ತೆರಿಗೆ ಹಂಚಿಕೆಯಲ್ಲಿ ಅನ್ಯಾಯ:ಕೇಂದ್ರದಿಂದ ರಾಜ್ಯಕ್ಕೆ 2017-18ರಲ್ಲಿ 31,752 ಕೋಟಿ ರೂ. ನಮ್ಮ ಪಾಲಿನ ತೆರಿಗೆ ಬಂದಿತ್ತು. ಅದು 2023-24ನೇ ಸಾಲಿಗೆ 37,252 ಕೋಟಿ ಆಗಿದೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೂ ಅನುದಾನವಿಲ್ಲ. ಕೇಂದ್ರದ ಬಜೆಟ್ 2018-19ರಲ್ಲಿ 24.42 ಲಕ್ಷ ಕೋಟಿ ರೂ. ಆಗಿತ್ತು. ಆಗ ಕೇಂದ್ರದಿಂದ 50,758 ಕೋಟಿ ರೂ. ಬಂದಿತ್ತು. ಈಗ 45.30 ಲಕ್ಷ ಕೋಟಿ ಬಜೆಟ್ ಮಂಡನೆಯಾಗಿದೆ. ರಾಜ್ಯಕ್ಕೆ ಹಂಚಿಕೆ ಮಾಡಿರುವುದು 50,257 ಕೋಟಿ ರೂ. ಮಾತ್ರ ಎಂದು ಸಿದ್ದು ಮಾಹಿತಿ ತೆರೆದಿಟ್ಟರು.
ಧಮ್ಮು, ತಾಕತ್ ಇದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಚಿವ ಅಶ್ವತ್ಥನಾರಾಯಣಗೆ ಸವಾಲು ಹಾಕಿದ್ದಾರೆ. ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ರೀತಿ ನನ್ನನ್ನು ಮೇಲಕ್ಕೆ ಕಳುಹಿಸಿ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ. ನಾನು ಅದಕ್ಕೆಲ್ಲ ಬಗ್ಗುವವನ್ನಲ್ಲ. ಬೆದರಿಕೆ ಹಾಕಿದ ಕಾರಣಕ್ಕೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದರು. ಅಬ್ಬಕ್ಕ ವರ್ಸಸ್ ಟಿಪ್ಪು ಸುಲ್ತಾನ್, ಗಾಂಧಿ ವರ್ಸಸ್ ಗೋಡ್ಸೆ ಇಂಥ ಭಾವನಾತ್ಮಕ ವಿಚಾರಗಳನ್ನು ಬಿಟ್ಟುಬಿಡಿ, ಅಭಿವೃದ್ಧಿ ವಿಚಾರಗಳ ಮೇಲೆ ಚರ್ಚೆ ಮಾಡೋಣ ಬನ್ನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಅವರು, ಸಾರ್ವಜನಿಕವಾಗಿ ಅಭಿವೃದ್ಧಿ ವಿಷಯ ಚರ್ಚೆಯಾಗಲಿ. ಸಚಿವರೊಬ್ಬರು ಟಿಪ್ಪು ಸುಲ್ತಾನ್​ನನ್ನು ಮೇಲೆ ಕಳಿಸಿದಂತೆ ಸಿದ್ದರಾಮಯ್ಯ ಅವರನ್ನು ಮೇಲೆ ಕಳಿಸಿ ಎಂದಿದ್ದಾರೆ. ಕೊಲೆ ಮಾಡು ಎಂದು ಯಾವುದಾದರೂ ಧರ್ಮ ಹೇಳುತ್ತದಾ? ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕುಟುಕಿದರು.
ಬೆಂಗಳೂರು:ಬೆಳಗಾವಿ ಅಧಿವೇಶನ ಹಾಗೂ 2023ರ ಜಂಟಿ ಅಧಿವೇಶನದಲ್ಲಿ ಕೋರಂ ಕೊರತೆ ಕಾರಣ ಎರಡು ಬಾರಿ ಮಂಡನೆಗೊಂಡು ಅಂಗೀಕಾರಗೊಳ್ಳದೆ ಉಳಿದಿದ್ದ ಆರು ಖಾಸಗಿ ವಿಶ್ವವಿದ್ಯಾಲಯ ವಿಧೇಯಗಳು ಮಂಗಳವಾರ ವಿಧಾನಸಭೆಯಲ್ಲಿ ಚರ್ಚೆ ಇಲ್ಲದೇ ಅಂಗೀಕಾರಗೊಂಡವು. 2022ರ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಸರ್ಕಾರ ಮಂಡಿಸಿತ್ತು. ಆಗ ಬೇರೆ ಬೇರೆ ವಿಷಯಗಳ ಚರ್ಚೆಗೆ ಆದ್ಯತೆ ನೀಡಬೇಕಾದ ಹಿನ್ನೆಲೆಯಲ್ಲಿ ಅಂಗೀಕಾರಗೊಂಡಿರಲಿಲ್ಲ. ಬಳಿಕ 2023ರ ಜಂಟಿ ಅಧಿವೇಶನದ ಚರ್ಚೆ ವೇಳೆ ಈ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಕಲಾಗಿತ್ತು. ಕೋರಂ ಕೊರತೆಯಿಂದ ಗುರುವಾರ ವಿಧೇಯಕಗಳನ್ನು ಅಂಗೀಕರಿಸಿರಲಿಲ್ಲ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಿಲ್ ಮಂಡಿಸಿ ಧ್ವನಿ ಮತದ ಮೂಲಕ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು. ಜಿ.ಎಂ.ವಿವಿ ವಿಧೇಯಕ, ಕಿಷ್ಕಿಂದ ವಿವಿ ವಿಧೇಯಕ, ಆಚಾರ್ಯ ವಿವಿ ವಿಧೇಯಕ, ಸಪ್ತಗಿರಿ ಎನ್​ಪಿಎಸ್ ವಿವಿ ವಿಧೇಯಕ, ರಾಜ್ಯ ಒಕ್ಕಲಿಗರ ಸಂಘದ ವಿವಿವಿಧೇಯಕ ಹಾಗೂ ಟಿ.ಜಾನ್ ವಿವಿ ವಿಧೇಯಕಗಳಿಗೆ ವಿಧಾನಸಭೆ ಧ್ವನಿ ಮತದ ಅಂಗೀಕಾರ ನೀಡಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತು ಆರಂಭಿಸುವ ಮುನ್ನ ಆಡಳಿತ ಪಕ್ಷದ ಶಾಸಕರು, ಸಚಿವರ ಹಾಜರಾತಿಯ ತೀವ್ರ ಕೊರತೆ ಗಮನಿಸಿದ ಸಿದ್ದರಾಮಯ್ಯ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಬೆಳಗಿನ ಕಲಾಪದ ಕೊನೆಯಲ್ಲಿ ಅವರು ಮಾತನಾಡಲು ಎದ್ದು ನಿಂತಾಗ ಗೃಹ ಸಚಿವ ಆರಗ ಜ್ಞಾನೇಂದ್ರ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಮುಜರಾಯಿ ಸಚಿವರು ಮಾತ್ರ ಇದ್ದರು. ಉಳಿದವರು ಎಲ್ಲಿ ಹೋದರು ಎಂಬುದು ಸಿದ್ದರಾಮಯ್ಯ ಪ್ರಶ್ನೆಯಾಗಿತ್ತು.
ಮುಖ್ಯಮಂತ್ರಿ ಅನುಮತಿ ಪಡೆದು ಅವರ ಪಕ್ಷದ ಅಧ್ಯಕ್ಷರ ಕಾರ್ಯಕ್ರಮಕ್ಕೆ ಹೋಗಿದ್ದಾರೆಂಬ ಸ್ಪೀಕರ್ ಮಾತಿಗೆ, ಪ್ರತಿ ಪಕ್ಷದ ಸದಸ್ಯರು ಅವರಿಗೆ ಪಕ್ಷ ಮುಖ್ಯವಾದರೆ ಸರ್ಕಾರ ಏಕೆ ಬೇಕೆಂದು ಕಾಲೆಳೆದರು. ಈ ವೇಳೆ ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಎಲ್ಲವನ್ನೂ ಗಮನಿಸುತ್ತಾ ಕುಳಿತಿದ್ದ ಯಡಿಯೂರಪ್ಪರನ್ನು ಉದ್ದೇಶಿಸಿ, ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿ ಸಚಿವರು ಕಲಿಯಬೇಕಲ್ಲವೇ? ನೀವಾದರೂ ಸಚಿವರಿಗೆ ಕಿವಿ ಹಿಂಡಿ ಹೇಳಬೇಕಲ್ಲವೇ? ಎಂದು ಸಿದ್ದರಾಮಯ್ಯ ಕಿಚಾಯಿಸಿದರು. ಜತೆಗೆ ನಿಮ್ಮ ಕಾಲದಲ್ಲಿ ಹೀಗೇ ಇರುತ್ತಿತ್ತಾ, ಯಾವ ಕಾಲದಲ್ಲೂ ಹೀಗೆ ಇರಲಿಲ್ಲ ಎಂದರು. ಬಿಎಸ್​ವೈ ನಗುತ್ತಾ ಕೈಸನ್ನೆಯಲ್ಲಿ ಹೀಗೆ ಇರಲಿಲ್ಲ ಎಂದರು.
ಬೆಂಗಳೂರು:ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ನಿಗದಿಯಲ್ಲಿ ವಿಳಂಬಕ್ಕೆ ಆಕ್ಷೇಪಿಸಿ, ವಿಧಾನ ಪರಿಷತ್​ನಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮಂಗಳವಾರ ಸಭಾತ್ಯಾಗ ಮಾಡಿತು. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಎಸ್.ರವಿ ಕೇಳಿದ ಪ್ರಶ್ನೆಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನ್ಯಾಯಾಲಯಗಳಲ್ಲಿನ ವ್ಯಾಜ್ಯ ಇತ್ಯರ್ಥಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಸಂವಿಧಾನ ಪಾಲನೆ, ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕೆಂದು ಗೊತ್ತಿದೆ ಎಂದು ಉತ್ತರಿಸಿದರು.
ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತೀವ್ರ ಅತೃಪ್ತಿ ವ್ಯಕ್ತಪಡಿಸಿ, ಕೋರ್ಟ್-ಕಚೇರಿ ನಮಗೂ ಗೊತ್ತಿದೆ. ಬೇರೆ ಕೆಲವು ರಾಜ್ಯಗಳಲ್ಲಿ ಈ ಸಮಸ್ಯೆ ಇತ್ಯರ್ಥವಾಗಿದೆ. ಸಂವಿಧಾನದ 73, 74ನೇ ತಿದ್ದುಪಡಿ ಪ್ರಕಾರ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕೆಂದಿದೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಇತರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ಸಂಬಂಧ ಅಂಕಿ-ಅಂಶಗಳ ಸಹಿತ ಪ್ರಮಾಣ ಪತ್ರ ಸಲ್ಲಿಸಿ, ಅನುಮತಿ ಕೇಳಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ನ್ಯಾ.ಭಕ್ತವತ್ಸಲ ಸಮಿತಿಯಿಂದ ವರದಿಯನ್ನು ಪಡೆದುಕೊಂಡಿದೆ. ಆದರೆ ಈ ವರದಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ವರದಿ ಸಲ್ಲಿಸುವ ಹೊಣೆ ಸಮಿತಿಗೆ ಒಪ್ಪಿಸಿದ್ದು, ವರದಿ ಸಲ್ಲಿಕೆಯಾದ ತಕ್ಷಣವೇ ಕೋರ್ಟ್​ಗೆ ಸಲ್ಲಿಸಲಾಗುವುದು ಎಂದರು. ಪ್ರತಿಪಕ್ಷ ಕಾಂಗ್ರೆಸ್ ಈ ಉತ್ತರವನ್ನು ಒಪ್ಪದೆ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸುತ್ತಾ ಸಭಾತ್ಯಾಗ ಮಾಡಿದರೆ, ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಗಿಮಿಕ್ ಮಾಡುತ್ತಿದ್ದೀರಿ ಎಂದು ಆಡಳಿತ ಪಕ್ಷದವರು ಕುಟುಕಿದರು.
ವರದಿ ಸಲ್ಲಿಕೆ ನಂತರ ಕ್ರಮ:ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ವರದಿ ಸಲ್ಲಿಸಿದ ನಂತರ ಕ್ರಮವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ವಿಧಾನ ಪರಿಷತ್​ನ ಶೂನ್ಯವೇಳೆಯಡಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲು ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದರು.
‘ಆರಗ ಜ್ಞಾನೇಂದ್ರ ಅವರೇ ನಿಮ್ಮ ಇಲಾಖೆ ಸತ್ತು ಹೋಗಿದೆ’ ಎಂಬ ಸಿದ್ದರಾಮಯ್ಯ ಟೀಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾರುತ್ತರ ನೀಡಿ, ನಿಮ್ಮ ಸರ್ಕಾರದಲ್ಲಿನ ಗೃಹ ಸಚಿವರಿಗಿಂತ ನಾನು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಈ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಬಜೆಟ್ ಮೇಲಿನ ಚರ್ಚೆಯಲ್ಲಿ ಅಶ್ವತ್ಥನಾರಾಯಣ ಹೇಳಿಕೆ ಕುರಿತು ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ, ಬಜೆಟ್ ಮೇಲೆ ಮಾತನಾಡಿ ಸಾರ್ ಎಂದು ಗೃಹ ಸಚಿವರು ಸಲಹೆ ನೀಡಿದರು. ಇದರಿಂದ ಕೆರಳಿದ ಸಿದ್ದರಾಮಯ್ಯ, ಗೃಹ ಸಚಿವರ ವಿರುದ್ಧವೇ ತಿರುಗಿ ಬಿದ್ದರು.
ಪ್ರಚೋದನಾಕಾರಿ ಭಾಷಣ ಮಾಡಿದ ಅಶ್ವತ್ಥನಾರಾಯಣ ವಿರುದ್ಧ ಏಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಿಮ್ಮ ಬಳಿ ಮಾತನಾಡುವುದಕ್ಕೆ ಯಾವುದೇ ಸರಕಿಲ್ಲ. ಹೀಗಾಗಿ ಇಂಥ ವಿಚಾರಗಳನ್ನು ಪದೇಪದೆ ಪ್ರಸ್ತಾಪ ಮಾಡುತ್ತಿದ್ದೀರಿ. ಅಶ್ವತ್ಥನಾರಾಯಣ ಅವರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬಳಿಕವೂ ಮತ್ತೆ ಚರ್ಚೆ ಏಕೆ. ನಿಮ್ಮ ಎದುರೇ ವಿಷಾದ ವ್ಯಕ್ತಪಡಿಸಿದ್ದಾರಲ್ಲ? ಎಂದರು.
ತಿರುಗೇಟು ನೀಡಿದ ಸಿದ್ದರಾಮಯ್ಯ, ಆರಗ ಜ್ಞಾನೇಂದ್ರ ಅವರೇ ನೀವು ಒಳ್ಳೆಯ ಮನುಷ್ಯ. ಆದರೆ, ಗೃಹ ಇಲಾಖೆ ನಡೆಸಲು ಅಸಮರ್ಥ ಎಂದು ಕುಟುಕಿದರು. ಆರಗ ಕೂಡ ಪ್ರತಿರೋಧ ತೋರಿ, ನಿಮ್ಮ ಕಾಲದಲ್ಲಿ ಇದ್ದ ಗೃಹ ಸಚಿವರಿಗಿಂತ ನಾನು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ. 2017ರಲ್ಲಿ ಕರ್ನಾಟಕ ರೌಡಿ ರಾಜ್ಯವಾಗಿತ್ತು. 30 ಸಾವಿರ ರೌಡಿ ಶೀಟರ್​ಗಳಿದ್ದರು, ನಿಮ್ಮದೆಲ್ಲ ಗೊತ್ತಿದೆ ಎಂದು ಹೇಳಿದರು. ಈ ಕೌಂಟರ್ ನಿರೀಕ್ಷಿಸದ ಸಿದ್ದರಾಮಯ್ಯ, ಅದೆಲ್ಲ ದಾಖಲೆ ಕೊಡಿ ಆ ಮೇಲೆ ನನ್ನ ಮೇಲೆ ಆರೋಪ ಮಾಡಿ ಎಂದು ವಿಷಯಾಂತರಿಸಿದರು.
ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
