ಬೆಳಗಾವಿ:ಗ್ರಾಮ ಸ್ವರಾಜ್ ಪರಿಕಲ್ಪನೆಯಲ್ಲಿ ಗ್ರಾಮಗಳ ಅಭಿವೃದ್ಧಿ, ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆ ಕಾನೂನು ಜಾರಿಗೆ ತರುವುದು. ಈ ಮೂರು ನಿರ್ಣಯಗಳನ್ನು ಬೆಳಗಾವಿಯ ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮಾಹಿತಿ ನೀಡಿದರು.
ಶನಿವಾರ ಸಂಜೆ ಮುಕ್ತಾಯಗೊಂಡ ಕಾರ್ಯಕಾರಿಣಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಳ್ಯದಲ್ಲಿ ಒಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇದು ತುಂಬಾ ಆತಂಕದ ವಿಷಯವಾಗಿದೆ. ಹೀಗಾಗಿ ಲವ್ ಜಿಹಾದ್​ಗೆ ತಡೆ ಕಾನೂನು ತರುವ ಬಗ್ಗೆ ನಿರ್ಣಯ ಮಾಡಿದ್ದೇವೆ. ಬಿಲ್ ಪಾಸ್ ಮಾಡುವ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ಪ್ರಭಾರಿಗಳ ನೇಮಕ: ಪ್ರತಿ ತಿಂಗಳು ವಿಶೇಷ ರಾಜ್ಯ ಕಾರ್ಯಕಾರಿಣಿ ನಡೆಸುತ್ತ ಬಂದಿದ್ದೇವೆ. ಈ ಮೊದಲಿನ ಸಭೆಯಲ್ಲಿ ಎರಡು ನಿರ್ಣಯ ಕೈಗೊಂಡಿದ್ದೇವೆ. ಗ್ರಾಪಂ ಚುನಾವಣೆ ನಮ್ಮ ಕಾರ್ಯಕರ್ತರ ಚುನಾವಣೆಯಾಗಬೇಕು. ಅಪೇಕ್ಷಿತ ಕಾರ್ಯಕರ್ತರಿಗೆ ನಾಯಕರು ಬೆಂಬಲ, ಸಹಕಾರ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಉಪಚುನಾವಣೆಗೆ ಈಗಾಗಲೆ ಪ್ರಭಾರಿ ಘೊಷಣೆ ಮಾಡಿದ್ದೇವೆ. ಉಪಚುನಾವಣೆ ಜವಾಬ್ದಾರಿಯನ್ನು ಚುನಾವಣಾ ನಿರ್ವಹಣಾ ಸಮಿತಿಗೆ ಕೊಡಲಾಗಿದೆ. ಮಸ್ಕಿ, ಬಸವಕಲ್ಯಾಣ ಕ್ಷೇತ್ರಕ್ಕೆ ಪ್ರಭಾರಿಗಳ ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.
ಕಷ್ಟದಲ್ಲೂ ರಾಜ್ಯದ ಸಮಗ್ರ ಅಭಿವೃದ್ಧಿ
ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಲಾಕ್​ಡೌನ್ ವೇಳೆ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಇಲ್ಲದಿದ್ದರೂ ನೌಕರರಿಗೆ ವೇತನ ನೀಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನೂ ಮುಂದುವರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ರಾಷ್ಟೀಯ ವಿಚಾರಧಾರೆ ವಿಚಾರದಲ್ಲಿ ಪಕ್ಷದ ಬದ್ಧತೆ ಅಖಂಡವಾದುದಾಗಿದೆ. ಪಕ್ಷದ ನಿರೀಕ್ಷೆಗಳನ್ನು ಈಡೇರಿಸಲು ಕಳೆದ 1 ವರ್ಷ 4 ತಿಂಗಳ ಅವಧಿಯಲ್ಲಿ ಶಕ್ತಿ ಮೀರಿ ಶ್ರಮಿಸಲಾಗಿದೆ. ಮೆಟ್ರೋ ರೈಲು ಜಾಲ ವಿಸ್ತರಣೆ, ದಕ್ಷಿಣ ರೈಲ್ವೆ ಯೋಜನೆ ವಿಸ್ತರಣೆ, ರಸ್ತೆ್ತಗಳ ಅಭಿವೃದ್ಧಿ ಮೂಲಕ ಬೆಂಗಳೂರನ್ನು ಮಾದರಿ ನಗರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು. ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಅಭಿವೃದ್ಧಿ ಕಾರ್ಯಗಳಿಗೆ 150 ಕೋಟಿ ರೂ. ಮಂಜೂರು ಮಾಡಿದ್ದು, 50 ಕೋಟಿ ರೂ. ಈಗಾಗಲೆ ಬಿಡುಗಡೆ ಮಾಡಲಾಗಿದೆ. ಎನ್​ಡಿಆರ್​ಎಫ್ ನಿಗದಿಗೊಳಿಸಿದ ಪರಿಹಾರ ಮೊತ್ತಕ್ಕಿಂತ ಹೆಚ್ಚು ಪರಿಹಾರವನ್ನು ನೆರೆ ಸಂತ್ರಸ್ತರಿಗೆ ಕೊಡಲಾಗಿದೆ ಎಂದರು.
ಅಧಿವೇಶನದಲ್ಲಿ ಗೋಹತ್ಯೆ ತಡೆ ಮಸೂದೆ ಚರ್ಚೆ
ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಬಗ್ಗೆ ತೀರ್ಮಾನ ಮಾಡಿದ್ದೇವೆ. ಈ ಅಧಿವೇಶನದಲ್ಲಿ ಸಾಧ್ಯವಾದರೆ ಗೋಹತ್ಯೆ ತಡೆ ಮಸೂದೆ ಜಾರಿಗೆ ತರಬೇಕೆಂದು ರ್ಚಚಿಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಶೇ.80 ಗ್ರಾಮ ಪಂಚಾಯಿತಿ ಸ್ಥಾನ ಗೆಲ್ಲುವ ಗುರಿ ಹೊಂದಲಾಗಿದೆ. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಮಾನ ನಾಗರಿಕ ಕಾಯ್ದೆ ಜಾರಿಗೆ
ದೇಶದಲ್ಲಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆಯುವ ಕಾಯ್ದೆಯನ್ನು ನಾವೇ ಜಾರಿಗೆ ತರಬೇಕು. ನಮ್ಮನ್ನು ಬಿಟ್ಟಿರೆ ಯಾರು ಈ ಕಾಯ್ದೆಗಳನ್ನು ಜಾರಿಗೆ ತರಲು ಸಾಧ್ಯ? ಈ ಹಿಂದೆ ಬಿಜೆಪಿಯವರು ರಾಮಮಂದಿರ ಎಲ್ಲಿ ಕಟ್ಟುತ್ತಾರೆ ಎಂದಿದ್ದರು. ಆರ್ಟಿಕಲ್ 370 ಹೇಗೆ ರದ್ದು ಮಾಡುತ್ತಾರೆ ಎಂದಿದ್ದರು. ಇದೀಗ ಎರಡನ್ನೂ ಸಾಧಿಸಿದ್ದೇವೆ. ಅದೇ ರೀತಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ಕೂಡ ಜಾರಿಗೆ ತರುತ್ತೇವೆ. ಮುಂದೊಂದು ದಿನ ಜನ ಬಯಸಿದರೆ ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಮತ್ತು ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನೂ ಜಾರಿಗೊಳಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.
ಸಿದ್ದರಾಮಯ್ಯ ವಿಚಿತ್ರ ಜೀವಿ
ದೇಶದಲ್ಲಿ ಎಲ್ಲರೂ ಭಾವನೆಗಳ ಜತೆಗೆ ಜೀವಿಸುತ್ತಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರ ಕುಟುಂಬದವರೂ ಗೋಸೇವೆ ಮಾಡಿದವರು. ಸಿದ್ದರಾಮಯ್ಯ ಮಾತ್ರ ಗೋಹತ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ಇದೆಲ್ಲ ನೋಡಿದರೆ ಅವರ ವೈಚಾರಿಕತೆಯಲ್ಲಿ ಕ್ರಾಸ್ ಬೀಡ್ ಆಗಿದ್ದಾರೆ ಎಂದು ಸಿ.ಟಿ.ರವಿ ಟೀಕಿಸಿದರು.
ಬೆಂಗಳೂರಿನಲ್ಲಿ ಇಂದು ಅರುಣ್​ಸಿಂಗ್
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾನುವಾರ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಉಸ್ತುವಾರಿಯಾದ ನಂತರ ಮೊದಲ ಬಾರಿಗೆ ಬಂದಿರುವ ಅವರು, ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಶನಿವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರು. ಭಾನುವಾರ ಬೆಳಗ್ಗೆ 8.30ಕ್ಕೆ ಗೋವಿಂದರಾಜನಗರದಲ್ಲಿ ಶಾಸಕ ವಿ. ಸೋಮಣ್ಣ ಅವರ ಕಚೇರಿ ಉದ್ಘಾಟನೆಯಲ್ಲಿ ಭಾಗವಹಿಸುವರು. 10 ಗಂಟೆಗೆ ಪಕ್ಷದ ಮುಖಂಡರ ಜತೆ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1 ಗಂಟೆಗೆ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಭೋಜನ ಸವಿಯಲಿದ್ದಾರೆ.
ಅಧಿವೇಶನ ಬದಲು ಬಿಜೆಪಿ ಸಭೆ
ಬೆಳಗಾವಿ: ರಾಜ್ಯದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗದೆ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಮಾಡಲಾಗುವುದು ಎಂದು ಬಿಜೆಪಿ ಸರ್ಕಾರ ಹೇಳಿತ್ತು. ಇದೀಗ ಕರೊನಾ ನೆಪವೊಡ್ಡಿ ಬೆಳಗಾವಿಯಲ್ಲಿ ಅಧಿವೇಶನ ಕರೆಯುವ ಬದಲು ಬೆಂಗಳೂರಿಗೆ ಶಿಫ್ಟ್ ಮಾಡಿ, ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜನರ ಬಗ್ಗೆ ಸರ್ಕಾರಕ್ಕೆ ಕಳಕಳಿ ಇಲ್ಲ. ಯಾವುದೋ ಒಂದು ಸಮಾಜವನ್ನು ಗಮನದಲ್ಲಿಟ್ಟು ಕೊಂಡು ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಮಾಡಲು ಹೊರಟಿದೆ. ಕಾಯ್ದೆ ತರಲಿ, ಬಳಿಕ ನೋಡೋಣ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − twelve =
Remember me
