|ಎನ್.ಡಿ. ಶಾಂತಕುಮಾರಶಿವಮೊಗ್ಗಸಕ್ಷಮ ಪ್ರಾಧಿಕಾರಗಳ ನಿರ್ಣಯ ಧಿಕ್ಕರಿಸಿ ಕುವೆಂಪು ವಿವಿ ದೂರ ಶಿಕ್ಷಣ ನಿರ್ದೇಶನಾಲಯ ಆಂತರಿಕ ಮೌಲ್ಯಮಾಪನ ಆಧಾರದ ಮೇಲೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿರುವುದರ ಹಿಂದೆ ಅಕ್ರಮ ನಡೆದಿರುವ ಶಂಕೆಯನ್ನು ದೃಢಪಡಿಸುವ ಪುರಾವೆಗಳು ಬಯಲಾಗಿವೆ. ಸಕ್ಷಮ ಪ್ರಾಧಿಕಾರಗಳ ಒತ್ತಡದ ಮೇಲೆ ಮತ್ತೆ ದೂರಶಿಕ್ಷಣ ಪದವಿಗಳ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಕೆಲವು ದೂರಶಿಕ್ಷಣ ಅಧ್ಯಯನ ಕೇಂದ್ರಗಳು ಕುಲಪತಿ ವಿರುದ್ಧ ತಿರುಗಿ ಬಿದ್ದಿವೆ.
ಎಲ್ಲ ಅಧ್ಯಯನ ಕೇಂದ್ರಗಳ ಸಂಯೋಜಕರು ಕುವೆಂಪು ವಿಶ್ವವಿದ್ಯಾಲಯಕ್ಕೆ ಮೊದಲನೇ ಆವೃತ್ತಿ ಪರೀಕ್ಷೆಗಳನ್ನು ಪ್ರಮೋಷನ್ ಮಾಡಬೇಕೆಂದು ಕೋರಿಕೊಂಡಿದ್ದೆವು. ಅದಕ್ಕಾಗಿ ಸಾಕಷ್ಟು ಹಣಕಾಸಿನ ವ್ಯವಹಾರವನ್ನೂ ಮಾಡಿದ್ದೇವೆ. ಈಗ ಮತ್ತೊಮ್ಮೆ ಹಠಕ್ಕೆ ಬಿದ್ದವರಂತೆ ತುರ್ತಾಗಿ ವೇಳಾಪಟ್ಟಿ ಸಿದ್ಧಪಡಿಸಿರುವುದರ ಹಿಂದಿನ ಮರ್ಮವೇನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅಧ್ಯಯನ ಕೇಂದ್ರಗಳ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಈ ಮೆಸೇಜ್ ಹರಿದಾಡುತ್ತಿದ್ದು, ಪರೀಕ್ಷಾ ವೇಳಾಪಟ್ಟಿ ಪ್ರಕಟ ಮಾಡಿರುವ ಕುಲಪತಿಯ ನಿರ್ಧಾರದ ಬಗ್ಗೆ ಕಿಡಿಕಾರಿದ್ದಾರೆ. ‘ಒಪ್ಪಂದ’ದ ಪ್ರಕಾರ ನಡೆದುಕೊಂಡ ಮೇಲೆ ಮಾತು ಉಳಿಸಿಕೊಳ್ಳುವ ಬದಲು ಪರೀಕ್ಷೆ ನಡೆಸುವ ಔಚಿತ್ಯವೇನು?’ ಎಂದು ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ.
ಮೇಲ್ನೋಟಕ್ಕೆ ಇದು ಆಂತರಿಕ ಮೌಲ್ಯಮಾಪನ ಆಧರಿಸಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕಂಡರೂ ಇದರ ಹಿಂದೆ ಇನ್ನೂ ಬೇರೆ ಬೇರೆಯದೇ ವ್ಯವಹಾರಗಳು ನಡೆದಿರುವುದು ಸ್ಪಷ್ಟವಾಗಿದೆ. ಪ್ರವೇಶದಲ್ಲಿಯೂ ಅಕ್ರಮಗಳು ನಡೆದಿರುವ ಶಂಕೆ ಇದೆ. ಅಡ್ಮಿಷನ್‌ಗೆ ನಿಗದಿಯಾದ ದಿನಾಂಕ ಮುಗಿದ ನಂತರವೂ ಕಾನೂನುಬಾಹಿರವಾಗಿ ಪ್ರವೇಶ ನೀಡಿರುವ ಶಂಕೆ ಇದ್ದು, ಈ ಹಂತದಿಂದಲೇ ಅವ್ಯವಹಾರ ಆರಂಭವಾಗಿದೆ. ಈ ಅವ್ಯವಹಾರ ದೂರ ಶಿಕ್ಷಣ ಅಧ್ಯಯನ ಕೇಂದ್ರದ ಅಧಿಕಾರಿಗಳು ಮತ್ತು ಕುವೆಂಪು ವಿವಿಯ ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿದ ವಿಷಯ. ಇಂತಹ ಅಕ್ರಮಗಳನ್ನೂ ಸಕ್ರಮ ಮಾಡಿ ಅವರನ್ನು ಪ್ರಮೋಟ್ ಮಾಡುವ ಹುನ್ನಾರವೂ ಇದರ ಹಿಂದೆ ಇದೆ. ಮೇಲ್ನೋಟಕ್ಕೆ ಅಂತಹ ದೊಡ್ಡ ಹಗರಣ ಎನ್ನಿಸದಿದ್ದರೂ ದೊಡ್ಡ ಮೊತ್ತದ ವ್ಯವಹಾರ ನಡೆದಿರುವುದನ್ನು ವ್ಯಾಟ್ಸ್‌ಆ್ಯಪ್‌ನಲ್ಲಿ ನಡೆದಿರುವ ಚರ್ಚೆಗಳು ದೃಢಪಡಿಸುತ್ತಿವೆ.
ಹಂತ ಹಂತವಾಗಿ ಫಲಿತಾಂಶ ಪ್ರಕಟ:ಲಕ್ಷಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ತೆಗೆದುಕೊಂಡಿದ್ದರೂ ಪಿಯು ಮಂಡಳಿ ಒಂದೇ ಹಂತದಲ್ಲಿ ಫಲಿತಾಂಶ ಪ್ರಕಟ ಮಾಡುತ್ತದೆ. ಯಾವುದೇ ಒಂದು ನಿರ್ದಿಷ್ಟ ಕಾಲೇಜಿನ ಫಲಿತಾಂಶವನ್ನು ತಡೆಹಿಡಿಯುವುದಿಲ್ಲ. ಆದರೆ ಕುವೆಂಪು ವಿವಿ ಅಧಿಕಾರಿಗಳು ದೂರ ಶಿಕ್ಷಣ ಪದವಿ ವಿದ್ಯಾರ್ಥಿಗಳ ಫಲಿತಾಂಶವನ್ನು ಏಕ ಕಾಲಕ್ಕೆ ಪ್ರಕಟ ಮಾಡಿಲ್ಲ. ಮೊದಲ ಹಂತದಲ್ಲಿ ಫೆಬ್ರವರಿಯಲ್ಲಿ ಕೆಲವು ಅಧ್ಯಯನ ಕೇಂದ್ರಗಳ ಫಲಿತಾಂಶ ಹೊರತುಪಡಿಸಿ ಇತರ ಕೇಂದ್ರಗಳ ಫಲಿತಾಂಶ ಪ್ರಕಟಿಸಿದೆ. ನಂತರ ಹಂತ-ಹಂತವಾಗಿ ಇತರ ಕೇಂದ್ರಗಳ ಫಲಿತಾಂಶ ಪ್ರಕಟ ಮಾಡಿದೆ. ಕಂತಿನ ರೂಪದಲ್ಲಿ ಫಲಿತಾಂಶ ಪ್ರಕಟ ಮಾಡಿರುವುದೇ ನಿಯಮಬಾಹಿರ ಮತ್ತು ಶಂಕಾಸ್ಪದ. ಯಾವುದೇ ವಿವಿಯಲ್ಲಿ ಪರೀಕ್ಷೆ ಫಲಿತಾಂಶಗಳನ್ನು ಈ ರೀತಿ ಕಂತಿನ ರೂಪದಲ್ಲಿ ಪ್ರಕಟ ಮಾಡಿರುವ ನಿದರ್ಶನಗಳು ಇಲ್ಲ.
ರಾಜ್ಯಪಾಲರಿಗೆ ಎಲ್ಲ ವರದಿ:ದೂರ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿಗಳಿಗೆ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿರುವುದರಲ್ಲಿ ನಡೆದಿದ ಎನ್ನಲಾದ ಅಕ್ರಮಕ್ಕೆ ಸಂಬಂಧಪಟ್ಟ ಪ್ರತಿಯೊಂದು ದಾಖಲೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ನಡೆದಿರುವ ಚರ್ಚೆಗಳು, ಕೆಲವರ ನಡುವೆ ನಡೆದಿರುವ ಸಂಭಾಷಣೆಯ ಧ್ವನಿಮುದ್ರಿಕೆಗಳು ದೂರಿನ ಪ್ರತಿಯೊಂದಿಗೆ ಹೋಗಿವೆ ಎಂದು ಗೊತ್ತಾಗಿದೆ.
ಸಿಂಡಿಕೇಟ್ ನಿರ್ಣಯದ ಉದ್ದೇಶ:ಕರೊನಾ ಸಂದರ್ಭದಲ್ಲಿ (2019-20) ಸರ್ಕಾರ ಆಂತರಿಕ ಮೌಲ್ಯಮಾಪನ ಆಧರಿಸಿ ಪ್ರಮೋಟ್ ಮಾಡಬಹುದು ಎಂದು ವಿವಿಗಳಿಗೆ ನಿರ್ದೇಶನ ನೀಡಿತ್ತು. ಆದರೆ ಕುವೆಂಪು ವಿಶ್ವವಿದ್ಯಾಲಯ ಆ ಸಂದರ್ಭದಲ್ಲಿ ದೂರ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡದೆ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿತ್ತು. ಆದರೆ ಯಾವುದೋ ಕಾರಣಕ್ಕೆ ಪರೀಕ್ಷೆ ನಡೆಸದೆ 2022ರಲ್ಲಿ ಪ್ರಮೋಷನ್ ಮಾಡಲಾಯಿತು. ಪರೀಕ್ಷೆ ನಡೆಸಲು ಯಾವುದೇ ಅಡ್ಡಿ-ಆತಂಕ ಇಲ್ಲದ ಸಂದರ್ಭದಲ್ಲಿ ಪ್ರಮೋಟ್ ಮಾಡಿದರೆ ತಪ್ಪು ಸಂದೇಶ ಹೋಗಲಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಕುವೆಂಪು ವಿವಿಗೆ ಕಪ್ಪು ಚುಕ್ಕೆ ಬರಬಾರದು. ಪರೀಕ್ಷೆ ನಡೆಸುವುದು ಸೂಕ್ತ ಎಂದು ಸಿಂಡಿಕೇಟ್ ನಿರ್ಣಯ ಮಾಡಿತ್ತು.
ಪರೀಕ್ಷೆ ದಿನಾಂಕ ಪ್ರಕಟ ಮಾಡಿ ನಂತರ ಪ್ರಮೋಟ್:2021ರ ನವಂಬರ್ 30ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ದೂರ ಶಿಕ್ಷಣ ಪದವಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟ ಮಾಡಬೇಕು ಎಂದು ಸರ್ವಾನುಮತದ ನಿರ್ಣಯ ಮಾಡಲಾಗಿತ್ತು. ಕುಲಪತಿ, ರಿಜಿಸ್ಟ್ರಾರ್‌ಗಳೂ ಸೇರಿದಂತೆ ಈ ನಿರ್ಣಯಕ್ಕೆ ಒಬ್ಬರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಸಿಂಡಿಕೇಟ್ ನಿರ್ಣಯದಂತೆ ಜನವರಿ 3ರಂದು ಪರೀಕ್ಷೆ ನಿಗದಿಪಡಿಸಿ ವೇಳಾಪಟ್ಟಿ ಪ್ರಕಟ ಮಾಡಲಾಗಿತ್ತು. ದಿಢೀರ್ ಆಗಿ ವೇಳಾಪಟ್ಟಿ ಪ್ರಕಟ ಮಾಡಿರುವುದು ಸಮಸ್ಯೆಯಾಗಿದೆ. ಓದಲು ಕಾಲಾವಕಾಶ ಇಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರಿಂದ ಜನವರಿ 27ಕ್ಕೆ ಮುಂದೂಡಲಾಗಿತ್ತು. ಈ ನಡುವೆ ಅಧ್ಯಯನ ಕೇಂದ್ರಗಳು ಮತ್ತು ದೂರ ಶಿಕ್ಷಣ ನಿರ್ದೇಶನಾಲಯದ ನಡುವೆ ಏನು ನಡೆಯಿತೋ? ಸಿಂಡಿಕೇಟ್ ನಿರ್ಣಯ ಉಲ್ಲಂಘಿಸಿ ಫೆಬ್ರವರಿಯಲ್ಲಿ ಪರೀಕ್ಷೆ ಇಲ್ಲದೆ ಆಂತರಿಕ ಮೌಲ್ಯಮಾಪನ ಆಧರಿಸಿ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿರುವ ಅಧಿಸೂಚನೆ ಹೊರಡಿಸಲಾಯಿತು. ಆಗ ಸಿಂಡಿಕೇಟ್ ಸದಸ್ಯರು ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರ ಏಕಪಕ್ಷೀಯ ನಿರ್ಧಾರದ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಸಿಂಡಿಕೇಟ್ ನಿರ್ಣಯ ಉಲ್ಲಂಘಿಸಿ ದೂರ ಶಿಕ್ಷಣ ಪದವಿ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿರುವುದರ ಹಿಂದೆ ಅಕ್ರಮದ ಶಂಕೆ ಇದೆ ಎಂಬುದಕ್ಕೆ ಪುರಾವೆಯಾಗಿ ಕೆಲವು ದಾಖಲೆಗಳನ್ನು ಒದಗಿಸಿದ್ದರು.
ಅಧ್ಯಯನ ಕೇಂದ್ರಗಳು ತಿರುಗಿಬಿದ್ದದ್ದು ಏಕೆ?:ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಆಧರಿಸಿ ಪ್ರಮೋಟ್ ಮಾಡಬೇಕು ಎಂದು ಅಧ್ಯಯನ ಕೇಂದ್ರಗಳು ಮತ್ತು ಕುವೆಂಪು ವಿವಿಯ ಕೆಲ ಅಧಿಕಾರಿಗಳ ನಡುವೆ ‘ಒಪ್ಪಂದ’ ಆಗಿತ್ತು. ಈ ಒಪ್ಪಂದದ ಪ್ರಕಾರ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ನಡೆದ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಕುಲಪತಿಯ ವಿರುದ್ಧ ತಿರುಗಿಬಿದ್ದರು. ಪರೀಕ್ಷೆ ನಡೆಸಬೇಕು ಎಂದು ಸಿಂಡಿಕೇಟ್ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಆಗಿದೆ. ಈ ನಿರ್ಣಯ ಉಲ್ಲಂಘಿಸಿ ಹೇಗೆ ಪ್ರಮೋಟ್ ಮಾಡಿದಿರಿ ಎಂದು ಪ್ರಶ್ನೆ ಮಾಡಿದ್ದರು. ತೀವ್ರ ಚರ್ಚೆ ನಡೆದ ನಂತರ ಪ್ರಮೋಟ್ ಮಾಡಿರುವ ಆದೇಶ ಹಿಂತೆಗೆದುಕೊಂಡು ಪರೀಕ್ಷೆ ನಡೆಸಬೇಕು ಎಂದು ನಿರ್ಣಯ ಮಾಡಲಾಗಿತ್ತು. ಸಿಂಡಿಕೇಟ್ ನಿರ್ಣಯದಂತೆ ಪ್ರಮೋಟ್ ಆದೇಶ ಹಿಂತೆಗೆದುಕೊಂಡು ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡುತ್ತಿದ್ದಂತೆ ಅಧ್ಯಯನ ಕೇಂದ್ರಗಳು ತಿರುಗಿಬಿದ್ದಿವೆ.
ಕಾನೂನು ಸಮರಕ್ಕೆ ಬೆಂಬಲ?:ಆಂತರಿಕ ಮೌಲ್ಯಮಾಪನ ಆಧರಿಸಿ ಪ್ರಮೋಟ್ ಮಾಡಿರುವ ಆದೇಶ ಹಿಂತೆಗೆದುಕೊಂಡು ಪರೀಕ್ಷೆ ನಡೆಸುವ ಕುವೆಂಪು ವಿವಿ ನಿರ್ಧಾರವನ್ನು ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದು, ಇದಕ್ಕೆ ಕುವೆಂಪು ವಿವಿಯಲ್ಲೇ ಕೆಲವರ ಬೆಂಬಲ ಇದೆ ಎಂಬ ಮಾತುಗಳು ಕೇಳಿಬಂದಿವೆ. ಸಿಂಡಿಕೇಟ್ ಸಭೆಯ ನಿರ್ಣಯಕ್ಕೆ ಕಟ್ಟುಬಿದ್ದು ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದರೂ ಕಾನೂನು ಹೋರಾಟದ ಮೂಲಕ ಈ ಹಿಂದೆ ಪ್ರಮೋಟ್ ಮಾಡಿ ಹೊರಡಿಸಿದ ಅಧಿಸೂಚನೆಯನ್ನೇ ಎತ್ತಿಹಿಡಿಯುವಂತೆ ಮಾಡುವ ತಂತ್ರ ನಡೆದಿದೆ ಎಂದು ಹೇಳಲಾಗುತ್ತಿದೆ.
ಮಂಗಳೂರು ರೌಡಿಶೀಟರ್ ಕಕ್ಕೆ ರಾಹುಲ್ ಬರ್ಬರ ಹತ್ಯೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 3 =
Remember me
